ಗಾಂಧಿನಗರ/ಶಿಮ್ಲಾ: ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶದ ಸ್ಪಷ್ಟ ಚಿತ್ರಣ (Election Result 2022) ದೊರೆತಿದೆ. ಗುಜರಾತ್‌ನಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದರೆ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಚುನಾವಣೋತ್ತರ ಸಮೀಕ್ಷೆಗೆ ಹೋಲಿಸಿದರೆ ಎರಡೂ ರಾಜ್ಯಗಳ ಫಲಿತಾಂಶವು ಅಚ್ಚರಿ ಮೂಡಿಸಿದೆ. ಹಾಗಾದರೆ, ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಫಲಿತಾಂಶದ ಕುರಿತು ಮತಗಟ್ಟೆ ಸಮೀಕ್ಷೆಗಳು ಏನು ಹೇಳಿದ್ದವು? ಫಲಿತಾಂಶಕ್ಕೂ, ಮತಗಟ್ಟೆ ಸಮೀಕ್ಷೆಗೆ ಇರುವ ಸಾಮ್ಯತೆ, ವ್ಯತ್ಯಾಸವೇನು ಎಂಬುದರ ಸಂಕ್ಷಿಪ್ತ ಅವಲೋಕನ ಇಲ್ಲಿದೆ.
ಗುಜರಾತ್‌ನಲ್ಲಿ ಸಮೀಕ್ಷೆ ನಿಜವಾಯಿತೇ?
ಸಮೀಕ್ಷೆಗಳನ್ನೇ ಮೀರಿಸಿದ ಬಿಜೆಪಿ
ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಹುತೇಕ ಸಮೀಕ್ಷೆಗಳು ಬಿಜೆಪಿಯೇ ಗೆಲುವು ಸಾಧಿಸುತ್ತದೆ ಎಂದು ಹೇಳಿದ್ದರೂ ಬಿಜೆಪಿಗೆ ಪ್ರಚಂಡ ಬಹುಮತ ಲಭಿಸಲಿದೆ ಎಂಬುದನ್ನು ಬಹುತೇಕ ಸಮೀಕ್ಷೆಗಳು ಬಹಿರಂಗಪಡಿಸಿರಲಿಲ್ಲ. ರಿಪಬ್ಲಿಕ್-ಪಿಮಾರ್ಕ್, ಟಿವಿ೯, ಜೀ ನ್ಯೂಸ್ ಸಮೀಕ್ಷೆಗಳು ಬಿಜೆಪಿಯು ೧೨೦-೧೩೦ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿಸಿದ್ದವು. ಆಜ್ ತಕ್ ಹಾಗೂ ಆ್ಯಕ್ಸಿಸ್ ಮೈ ಇಂಡಿಯಾ, ನ್ಯೂಸ್ ೨೪ ಸಮೀಕ್ಷೆಗಳು ಮಾತ್ರ ಬಿಜೆಪಿಯು ೧೫೦-೧೫೧ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿಸಿದ್ದವು. ಆದರೆ, ಸಮೀಕ್ಷೆಯನ್ನೂ ಮೀರಿ ಬಿಜೆಪಿಯು ೧೫೬ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ.
ಕಾಂಗ್ರೆಸ್ ಪಾಲಿಗೆ ಸಿಹಿ ತರದ ಸಮೀಕ್ಷೆ
ಚುನಾವಣೋತ್ತರ ಸಮೀಕ್ಷೆಗಳಿಗೆ ಹೋಲಿಸಿದರೆ ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ಸಮೀಕ್ಷೆಗಳು ಸಿಹಿ ತಂದಿಲ್ಲ. ರಿಪಬ್ಲಿಕ್-ಪಿ ಮಾರ್ಕ್, ಟೈಮ್ಸ್ ನೌ-ಇಟಿಜಿ, ಎಬಿಪಿ-ಸಿ ವೋಟರ್, ನ್ಯೂಸ್ ಎಕ್ಸ್-ಜನ್ ಕೀ ಬಾತ್ ಸೇರಿ ಹಲವು ಸಮೀಕ್ಷೆಗಳು ಗುಜರಾತ್‌ನಲ್ಲಿ ಕಾಂಗ್ರೆಸ್ ೩೦-೪೦ ಸ್ಥಾನ ಪಡೆಯಲಿದೆ ಎಂದು ಹೇಳಿದ್ದವು. ಆದರೆ, ಕಾಂಗ್ರೆಸ್ ಕೇವಲ ೧೭ ಕ್ಷೇತ್ರಗಳಲ್ಲಿ ಜಯಿಸಲಷ್ಟೇ ಶಕ್ತವಾಗಿದೆ.
ಆಮ್ ಆದ್ಮಿ ಪಕ್ಷಕ್ಕೆ ಸಮಾಧಾನ
ಸಮೀಕ್ಷೆಗಳು ತಿಳಿಸಿದಂತೆ ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ನಿರೀಕ್ಷಿತ ಗೆಲುವು ಸಾಧಿಸದಿದ್ದರೂ, ಭದ್ರವಾಗಿ ನೆಲೆಯೂರಿದ ಸಂತಸವಿದೆ. ಇಂಡಿಯಾ ಟುಡೆ, ಎಬಿಪಿ ಸಿ-ವೋಟರ್, ಇಂಡಿಯಾ ನ್ಯೂಸ್-ಜನ್ ಕೀ ಬಾತ್ ಸೇರಿ ಹಲವು ಸಮೀಕ್ಷೆಗಳು ಆಫ್ ೧೦-೧೫ ಕ್ಷೇತ್ರಗಳಲ್ಲಿ ಜಯಿಸಲಿದೆ ಎಂದಿದ್ದವು. ಆದರೆ, ಆಮ್ ಆದ್ಮಿ ಪಕ್ಷವು ಐದು ಸ್ಥಾನ ಗೆದ್ದಿದೆ. ಹೀಗಿದ್ದರೂ, ಶೇ.೧೩ರಷ್ಟು ಮತ ಗಳಿಸಿರುವುದು ಆಪ್‌ಗೆ ವರದಾನವಾಗಿದೆ.
ಹಿಮಾಚಲ ಪ್ರದೇಶದಲ್ಲಿ ಮತಗಟ್ಟೆ ಸಮೀಕ್ಷೆಗಳು ವರ್ಸಸ್ ಫಲಿತಾಂಶ
ನಿರೀಕ್ಷೆಗೂ ಮೀರಿ ಕಾಂಗ್ರೆಸ್‌ಗೆ ಲಾಭ
ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಮರಳುತ್ತದೆ. ಕಾಂಗ್ರೆಸ್ ತೀವ್ರ ಸ್ಪರ್ಧೆ ಒಡ್ಡುತ್ತದೆ ಎಂದಷ್ಟೇ ಹೆಚ್ಚಿನ ಸಮೀಕ್ಷೆಗಳು ತಿಳಿಸಿದ್ದವು. ಆದರೆ, ತೀವ್ರ ಸ್ಪರ್ಧೆ ಅಲ್ಲ, ಹಿಮಾಚಲ ಪ್ರದೇಶದಲ್ಲಿ ಸುಲಭವಾಗಿ ಸರ್ಕಾರ ರಚಿಸುವಷ್ಟು (40) ಕ್ಷೇತ್ರಗಳನ್ನು ಜನ ಕೊಟ್ಟಿದ್ದಾರೆ. ಎಬಿಪಿ ಸಿ-ವೋಟರ್, ರಿಪಬ್ಲಿಕ್ ಪಿ-ಮಾರ್ಕ್, ನ್ಯೂಸ್ ೨೪-ಟುಡೇಸ್ ಚಾಣಕ್ಯ ಸೇರಿ ವಿವಿಧ ಸಂಸ್ಥೆಗಳ ಸಮೀಕ್ಷೆಗಳು, ಕಾಂಗ್ರೆಸ್ ೨೫-೩೩ ಕ್ಷೇತ್ರಗಳಲ್ಲಿ ಜಯಿಸುತ್ತದೆ ಎಂದಿದ್ದವು. ಆದರೆ, ಇಂಡಿಯಾ ಟುಡೇ ಸಮೀಕ್ಷೆಯು, ಕಾಂಗ್ರೆಸ್ ಸರ್ಕಾರ ರಚಿಸುತ್ತದೆ ಎಂದಿತ್ತು. ಇದೊಂದು ಸಮೀಕ್ಷೆ ನಿಜವಾಗಿದ್ದು, ಕಾಂಗ್ರೆಸ್ ೪೦ ಸ್ಥಾನ ಪಡೆದಿದೆ.
ಬಿಜೆಪಿ ಪಾಲಿಗೆ ಸಮೀಕ್ಷೆ ಕಹಿ
ಕಾಂಗ್ರೆಸ್ ಸ್ಪರ್ಧೆಯೊಡ್ಡಿದರೂ ಹಿಮಾಚಲದಲ್ಲಿ ಬಿಜೆಪಿಯೇ ಸರ್ಕಾರ ರಚಿಸುತ್ತವೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿದ್ದವು. ಹಾಗಾಗಿಯೇ, ಬಿಜೆಪಿ ಅತಿಯಾದ ಆತ್ಮವಿಶ್ವಾಸದಲ್ಲಿತ್ತು. ಆದರೆ, ಫಲಿತಾಂಶ ಮಾತ್ರ ಉಲ್ಟಾ ಆಗಿದೆ. ರಿಪಬ್ಲಿಕ್, ಟೈಮ್ಸ್ ನೌ- ಇಟಿಜಿ, ಎಬಿಪಿ-ಸಿ ವೋಟರ್, ನ್ಯೂಸ್ ಎಕ್ಸ್- ಜನ್ ಕೀ ಬಾತ್ ಸಮೀಕ್ಷೆಗಳು, ಬಿಜೆಪಿಯು ೩೨-೪೦ ಸ್ಥಾನ ಗೆದ್ದು ಮತ್ತೆ ಸರ್ಕಾರ ರಚಿಸಲಿದೆ ಎಂದು ಹೇಳಿದ್ದವು. ಆದರೆ, ಬಿಜೆಪಿಯು ೨೫ ಕ್ಷೇತ್ರಗಳಲ್ಲಷ್ಟೇ ಜಯಿಸಲು ಶಕ್ತವಾಗಿದೆ.
ಆಪ್‌ಗೆ ಸಿಹಿಯೂ ಇಲ್ಲ, ಕಹಿಯೂ ಇಲ್ಲ
ಸಮೀಕ್ಷೆ ಹಾಗೂ ಫಲಿತಾಂಶಕ್ಕೆ ಹೋಲಿಸಿದರೆ, ಹಿಮಾಚಲ ಪ್ರದೇಶದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಕಹಿಯೂ ಇಲ್ಲ, ಸಿಹಿಯೂ ಇಲ್ಲ ಎಂಬಂತಾಗಿದೆ. ಇಂಡಿಯಾ ಟುಡೇ, ಟೈಮ್ಸ್ ನೌ-ಇಟಿಜಿ, ಎಬಿಪಿ ಸಿ-ವೋಟರ್ ಸೇರಿ ಬಹುತೇಕ ಸಮೀಕ್ಷೆಗಳು, ಆಪ್ ಒಂದೂ ಕ್ಷೇತ್ರದಲ್ಲಿ ಕೂಡ ಗೆಲ್ಲುವುದಿಲ್ಲ ಎಂದಿದ್ದವು. ರಿಪಬ್ಲಿಕ್-ಪಿ ಮಾರ್ಕ್ ಮಾತ್ರ ಒಂದು ಸ್ಥಾನದಲ್ಲಿ ಆಪ್ ಗೆದ್ದರೂ ಗೆಲ್ಲಬಹುದು ಎಂದಿತ್ತು. ಆದರೆ, ಹಿಮಾಚಲದಲ್ಲಿ ಖಾತೆ ತೆರೆಯುವಲ್ಲಿ ಆಪ್ ವಿಫಲವಾಗಿದೆ.
ಇದನ್ನೂ ಓದಿ | Delhi MCD Election| ಬಿಜೆಪಿ ‘ಎಕ್ಸಿಟ್’ ಗೆ ಮುನ್ಸೂಚನೆ ನೀಡಿದ್ದ ಎಕ್ಸಿಟ್ ಪೋಲ್ಸ್