ಲಾಸ್ ಏಂಜಲೀಸ್, ಅಮೆರಿಕ: ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರವು (RRR Movie) ಬೆಸ್ಟ್ ಒರಿಜಿನಲ್ ಸಾಂಗ್ ಕೆಟಗರಿಯಲ್ಲಿ ನಾಟು ನಾಟು…. ಹಾಡಿಗೆ ಆಸ್ಕರ್ ಪ್ರಶಸ್ತಿಯನ್ನು (Oscars 2023) ಗೆದ್ದುಕೊಂಡಿದೆ. ಆ ಮೂಲಕ ಆಸ್ಕರ್ ಗೆದ್ದ ಸಂಪೂರ್ಣ ಭಾರತೀಯ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಈ ನಾಟು ನಾಟು ಹಾಡಿಗೆ ಎಂ ಎಂ ಕೀರವಾಣಿ (MM Keeravani) ಸಂಗೀತ ನಿರ್ದೇಶನ ಮಾಡಿದ್ದರೆ, ಹಾಡಿಗೆ ಚಂದ್ರಬೋಸ್ ಗೀತ ಸಾಹಿತ್ಯ ಒದಗಿಸಿದ್ದರು. ಜೂ. ಎನ್‌ಟಿಆರ್, ರಾಮ್ ಚರಣ್ ಅವರು ಅದ್ಭುತ ಡ್ಯಾನ್ಸ್ ಮಾಡಿದ್ದಾರೆ.
ಆಸ್ಕರ್ ಗೆದ್ದ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಹೇಳಿದ್ದೇನು?
ಧನ್ಯವಾದಗಳು ಅಕಾಡೆಮಿ. ನಾನು ಕಾರ್ಪೆಂಟರ್ ಕೆಲಸ ಮಾಡುವಾಗ ಕೇಳಿಸುವ ಶಬ್ದಗಳನ್ನು ಕೇಳುತ್ತಾ ಬೆಳೆದಿದ್ದೇನೆ ಮತ್ತು ಈಗ ನಾನು ಆಸ್ಕರ್‌ನೊಂದಿಗೆ ಇದ್ದೇನೆ ಎಂದು RRR ಚಿತ್ರದ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಆಸ್ಕರ್ ಸ್ವೀಕರಿಸಿ ಹೇಳಿದರು. ನಂತರ ಅವರು, ನನ್ನ ಮನಸ್ಸಿನಲ್ಲಿ ಒಂದೇ ಒಂದು ಆಸೆ ಇತ್ತು, ಹಾಗೆಯೇ ರಾಜಮೌಳಿ ಮತ್ತು ನನ್ನ ಕುಟುಂಬದ ಮನಸ್ಸಿನಲ್ಲೂ. ಆರ್‌ಆರ್‌ಆರ್ ಗೆಲ್ಲಬೇಕು, ಇದು ಪ್ರತಿಯೊಬ್ಬ ಭಾರತೀಯನ ಹೆಮ್ಮೆ. ಇದು ನನ್ನನ್ನು ವಿಶ್ವದ ಅಗ್ರಸ್ಥಾನದಲ್ಲಿ ಇರಿಸಿದೆ ಎಂದು ರಾಗವಾಗಿ ಕೀರವಾಣಿ ಅವರು ಹೇಳಿದರು.
ನಾಟು ನಾಟು ಹಾಡಿಗೆ ಧ್ವನಿಯಾದವರು ಕಾಲ ಭೈರವ್, ರಾಹುಲ್ ಸಿಪ್ಲಿಗಂಜ್
ನಾಟು ನಾಟು ಹಾಡನ್ನು ಹಾಡಿದ ಕಾಲ ಭೈರವ್ ಮತ್ತು ರಾಹುಲ್ ಸಿಪ್ಲಿ ಗಂಜ್ ಅವರು ನಾಟು ನಾಟು ಹಾಡನ್ನು 95ನೇ ಅಕಾಡೆಮಿ ಅವಾರ್ಡ್ಸ್ ವೇದಿಕೆಯಲ್ಲಿ ಪ್ರದರ್ಶನ ಮಾಡಿದರು. ನಟಿ ದೀಪಿಕಾ ಪಡುಕೋಣೆ ಅವರು ವೀಕ್ಷಕರಿಗೆ ನಾಟು ನಾಟು ಹಾಡನ್ನು ಪರಿಚಯಿಸಿದರು. ಆಗ ಸಮಾರಂಭದಲ್ಲಿ ನೆರೆದಿದ್ದ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿದರು.
ಡಾಕ್ಯುಮೆಂಟರಿ ಶಾರ್ಟ್ ಫಿಲ್ಮ್ ಕೆಟಗರಿಯಲ್ಲಿ ಆಸ್ಕರ್ ಗೆದ್ದ ದಿ ಎಲಿಫೆಂಟ್ ವಿಸ್ಪರರ್ಸ್
ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನದ ‘ದಿ ಎಲಿಫೆಂಟ್ ವಿಸ್ಪರರ್ಸ್’ ಚಿತ್ರ, 2023ರ ಆಸ್ಕರ್‌ನ ʼಅತ್ಯುತ್ತಮ ಕಿರು ಸಾಕ್ಷ್ಯಚಿತ್ರʼ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಒಂದು ಅನಾಥ ಆನೆ ಮರಿಯ ಆರೈಕೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ದಕ್ಷಿಣ ಭಾರತೀಯ ದಂಪತಿಯ ಕಥೆಯನ್ನು ಈ ಸಾಕ್ಷ್ಯಚಿತ್ರ ಹೊಂದಿದೆ. ಹೌಲ್‌ಔಟ್, ಹೌ ಡು ಯು ಮೆಶರ್ ಎ ಇಯರ್, ದಿ ಮಾರ್ಥಾ ಮಿಶೆಲ್ ಎಫೆಕ್ಟ್, ಸ್ಟ್ರೇಂಜರ್ ಎಟ್ ದಿ ಗೇಟ್ ಮುಂತಾದ ಚಿತ್ರಗಳು ಸ್ಪರ್ಧೆಯಲ್ಲಿದ್ದವು. ನಿರ್ದೇಶಕಿ ಕಾರ್ತಿಕಿ ಹಾಗೂ ನಿರ್ಮಾಪಕಿ ಗುನೀತ್ ಮೋಂಗಾ ಸಮಾರಭದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡರು.
ಇದನ್ನೂ ಓದಿ: Oscars 2023: ಇತಿಹಾಸ ಸೃಷ್ಟಿಸಿದ RRR ಸಿನಿಮಾ, ನಾಟು ನಾಟು… ಹಾಡಿಗೆ ಆಸ್ಕರ್ ಪ್ರಶಸ್ತಿ!
‘ದಿ ಎಲಿಫೆಂಟ್ ವಿಸ್ಪರರ್ಸ್’ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಲಭ್ಯವಿದೆ. ತಮಗೆ ಸಿಕ್ಕಿದ ಈ ಪ್ರಶಸ್ತಿ ʼನನ್ನ ತಾಯ್ನೆಲ ಭಾರತಕ್ಕೆ ಅರ್ಪಿತʼ ಎಂದಿದ್ದಾರೆ ಇದರ ನಿರ್ದೇಶಕ ಕಾರ್ತಿಕಿ. ಅಚಿನ್ ಜೈನ್ ಮತ್ತು ಗುನೀತ್ ಮೋಂಗಾ ಇದನ್ನು ನಿರ್ಮಿಸಿದ್ದಾರೆ. ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಇರುವ ಒಂದು ಕುಟುಂಬ, ಅದು ಸಾಕುವ ಆನೆಮರಿಗಳ ಕತೆಯನ್ನು ಇದು ಒಳಗೊಂಡಿದೆ. ಕಾರ್ತಿಕಿ ಅವರಿಗೆ ಇದು ಮೊದಲ ನಿರ್ದೇಶನ.