Site icon Vistara News

BBC Documentary On Modi | ಮೋದಿ ಕುರಿತು ಬಿಬಿಸಿ ಆಕ್ಷೇಪಾರ್ಹ ಡಾಕ್ಯುಮೆಂಟರಿ, ಅಷ್ಟಕ್ಕೂ ಏನಿದೆ ಇದರಲ್ಲಿ? ಯಾಕಿಷ್ಟು ವಿವಾದ?

BBC Documentary On PM Modi

ನವದೆಹಲಿ: 2002ರಲ್ಲಿ ಗೋದ್ರಾ ಹತ್ಯಾಕಾಂಡದ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುಪ್ರೀಂ ಕೋರ್ಟ್‌ ಕ್ಲೀನ್‌ ಚಿಟ್‌ ನೀಡಿದೆ. ಹಲವು ವರ್ಷಗಳರೆಗೆ ತನಿಖೆ ನಡೆದು, ವಿಶೇಷ ತನಿಖಾ ಸಂಸ್ಥೆ (SIT) ತನಿಖೆ ನಡೆಸಿ, ವರದಿ ನೀಡಿದ ಬಳಿಕ ಕ್ಲೀನ್‌ ಚಿಟ್‌ ನೀಡಲಾಗಿದೆ. ಆದರೂ, ಗೋದ್ರಾ ಹತ್ಯಾಕಾಂಡವನ್ನು ಇಟ್ಟುಕೊಂಡು ಬ್ರಿಟನ್‌ನ ಬ್ರಿಟಿಷ್‌ ಬ್ರಾಡ್‌ಕಾಸ್ಟಿಂಗ್‌ ಕಾರ್ಪೊರೇಷನ್‌ (BBC) India: The Modi Question ಎಂಬ ಡಾಕ್ಯುಮೆಂಟರಿ (BBC Documentary On Modi) ನಿರ್ಮಿಸಿದೆ. ಹಾಗೆಯೇ, ಇದು ವಿವಾದಕ್ಕೆ ಕಾರಣವಾಗಿದೆ.

ಬಿಬಿಸಿ ಡಾಕ್ಯುಮೆಂಟರಿ ಕುರಿತು ಕೇಂದ್ರ ಸರ್ಕಾರ ಆಕ್ರೋಶ ವ್ಯಕ್ತಪಡಿಸಿದೆ. ಇದು ದುರುದ್ದೇಶಪೂರಿತ ಸಾಕ್ಷ್ಯಚಿತ್ರ ಎಂದು ತಿರುಗೇಟು ನೀಡಿದೆ. ಮತ್ತೊಂದೆಡೆ, ಯುಟ್ಯೂಬ್‌ನಿಂದ ಡಾಕ್ಯುಮೆಂಟರಿಯ ಎಪಿಸೋಡ್‌ಅನ್ನು ಡಿಲೀಟ್‌ ಮಾಡಲಾಗಿದೆ. ಬ್ರಿಟನ್‌ನ ಕೆಲವರು ಕೂಡ ಇದನ್ನು ಖಂಡಿಸಿದ್ದಾರೆ. ಹಾಗಾದರೆ, ಡಾಕ್ಯುಮೆಂಟರಿಯಲ್ಲಿ ಏನಿದೆ? ಯಾಕಿಷ್ಟು ವಿವಾದ ಸೃಷ್ಟಿಯಾಗಿದೆ ಎಂಬುದರ ಮಾಹಿತಿ ಇಲ್ಲಿದೆ.

ಡಾಕ್ಯುಮೆಂಟರಿಯಲ್ಲಿ ಏನಿದೆ?
ಭಾರತದಲ್ಲಿ ಡಾಕ್ಯುಮೆಂಟರಿ ಪ್ರಸಾರ ಆಗಿಲ್ಲ. ಬಿಬಿಸಿ ವೆಬ್‌ಸೈಟ್‌ಗೆ ಹೋದರೂ ಭಾರತದಲ್ಲಿ ಎಪಿಸೋಡ್‌ ಪ್ಲೇ ಆಗುವುದಿಲ್ಲ. ಹಾಗೆಯೇ, ಯುಟ್ಯೂಬ್‌ನಲ್ಲಿ ಎಪಿಸೋಡ್‌ಅನ್ನು ಡಿಲೀಟ್‌ ಮಾಡಲಾಗಿದೆ. ಹಾಗಾಗಿ, ಎಪಿಸೋಡ್‌ನಲ್ಲಿ ಏನಿದೆ ಎಂಬುದು ನಿಖರವಾಗಿ ಗೊತ್ತಾಗುವುದಿಲ್ಲ. ಆದರೆ, ಬಿಬಿಸಿ ವೆಬ್‌ಸೈಟ್‌ ಪ್ರಕಾರ, 2002ರ ಗೋದ್ರಾ ಹತ್ಯಾಕಾಂಡಕ್ಕೆ ಆಗ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಮೋದಿ ಅವರೇ ಕಾರಣ ಎಂದು ಒಕ್ಕಣೆ (Description) ನೀಡಲಾಗಿದೆ. ಹಾಗಾಗಿ ಇದು ವಿವಾದಕ್ಕೆ ಕಾರಣವಾಗಿದೆ.

“ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಭಾರತದಲ್ಲಿ ಹಿಂದುಗಳ ಹಾಗೂ ಮುಸ್ಲಿಮರ ಮಧ್ಯೆ ಸಂಘರ್ಷ ಏರ್ಪಟ್ಟಿದೆ. ಮೋದಿ ಪ್ರಧಾನಿಯಾದ ಬಳಿಕ ಮುಸ್ಲಿಮರನ್ನು ಭಿನ್ನವಾಗಿ ಕಾಣಲಾಗುತ್ತಿದೆ. ಈ ಡಾಕ್ಯುಮೆಂಟರಿಯು ಭಾರತದಲ್ಲಿ ನಡೆದ ಹಿಂದು-ಮುಸ್ಲಿಂ ತಾರತಮ್ಯ, ಸಂಘರ್ಷದ ತನಿಖೆಯಾಗಿದೆ. ನರೇಂದ್ರ ಮೋದಿ ಅವರು ರಾಜಕೀಯಕ್ಕೆ ಕಾಲಿಟ್ಟ ಮೊದಲ ಹೆಜ್ಜೆಯ ಕುರಿತು ಕೂಡ ಉಲ್ಲೇಖಿಸಲಾಗಿದೆ” ಎಂದು ಬಿಬಿಸಿ ವೆಬ್‌ಸೈಟ್‌ ತಿಳಿಸಿದೆ.

“ನರೇಂದ್ರ ಮೋದಿ ಅವರು ಹಿಂದು ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರಿದ್ದು, ಇವರ ಏಳಿಗೆ ಬಿಜೆಪಿಯಲ್ಲಾಗಿದೆ. ಆದರೆ, ಇವರು ಗುಜರಾತ್‌ ಮುಖ್ಯಮಂತ್ರಿಯಾಗಿ ಆಯ್ಕೆಯಾಗುತ್ತಲೇ 2002ರ ಹತ್ಯಾಕಾಂಡ ನಡೆಯಿತು. ಇದಕ್ಕೆ ಮೋದಿ ಅವರೇ ಕಾರಣ ಎಂಬುದು ಈಗಲೂ ವಿವಾದಕ್ಕೀಡು ಮಾಡಿದೆ” ಎಂದು ಡಾಕ್ಯುಮೆಂಟರಿಯಲ್ಲಿ ಏನಿದೆ ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ.

ಇದನ್ನೂ ಓದಿ | BBC Documentary On Modi | ಮೋದಿ ಕುರಿತು ಬಿಬಿಸಿ ಆಕ್ಷೇಪಾರ್ಹ ಸಾಕ್ಷ್ಯಚಿತ್ರ, ಕೇಂದ್ರದ ಆಕ್ರೋಶ, ಯುಟ್ಯೂಬ್‌ನಿಂದ ಡಿಲೀಟ್‌

Exit mobile version