Site icon Vistara News

Bihar Politics | ಜೆಡಿಯು ಬಿಟ್ಟು ಹೋದ ಮೇಲೆ ರಾಜ್ಯಸಭೆಯಲ್ಲಿ ಬಿಜೆಪಿ ಸ್ಥಿತಿಯೇನು?

What Impact on BJP in Rajya Sabha After JDU Quit

ನವ ದೆಹಲಿ: ಬಿಹಾರದಲ್ಲಿ ಜೆಡಿಯು(JDU) ಬಿಜೆಪಿ ಮೈತ್ರಿಯನ್ನು ಕಳಚಿಕೊಂಡು, ಆರ್​ಜೆಡಿ ಮತ್ತು ಕಾಂಗ್ರೆಸ್​ ಜತೆ ಸೇರಿ ಮಹಾ ಘಟ್​ ಬಂಧನ್​ ಸರ್ಕಾರವನ್ನು ರಚನೆ ಮಾಡಿ, ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಮತ್ತು ತೇಜಸ್ವಿ ಯಾದವ್​ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನವನ್ನೂ ಸ್ವೀಕಾರ ಮಾಡಿಯಾಗಿದೆ. ಜೆಡಿಯು ಮತ್ತು ಬಿಜೆಪಿ ಬೇರೆಯಾಗಿದ್ದರಿಂದ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಎನ್​ಡಿಎ ಒಕ್ಕೂಟದ ಸಂಸದರ ಸಂಖ್ಯೆ ಸಹಜವಾಗಿಯೇ ಕಡಿಮೆಯಾಗಲಿದೆ. ಇದು ಲೋಕಸಭೆಯಲ್ಲಿ ಯಾವುದೇ ಪರಿಣಾಮ ಬೀರಲಿಕ್ಕಿಲ್ಲ. ಆದರೆ ರಾಜ್ಯಸಭೆಯಲ್ಲಿ ಸ್ವಲ್ಪ ಮಟ್ಟಿಗೆ ಗೊಂದಲ ಸೃಷ್ಟಿಸಿದೆ. ರಾಜ್ಯಸಭೆ ಉಪಾಧ್ಯಕ್ಷ ಹರಿವಂಶ ನಾರಾಯಣ್​ ಸಿಂಗ್​ ಅವರು ಜೆಡಿಯು ಸದಸ್ಯ. ಬಿಜೆಪಿ ಬೆಂಬಲದಿಂದಲೇ ಅವರು ಡೆಪ್ಯೂಟಿ ಚೇರ್​ಮನ್​ ಆಗಿದ್ದು. ಇದೀಗ ಮೈತ್ರಿ ಒಡೆದಿದ್ದರಿಂದ ಅವರು ಅದೇ ಹುದ್ದೆಯಲ್ಲಿ ಮುಂದುವರಿಯುತ್ತಾರೋ ಅಥವಾ ರಾಜೀನಾಮೆ ಕೊಡುತ್ತಾರೋ, ಇನ್ನೂ ಸ್ಪಷ್ಟವಾಗಿಲ್ಲ.

ಸರ್ಕಾರ ಯಾವುದೇ ಹೊಸ ಮಸೂದೆ ಮಂಡಿಸಿ, ಕಾನೂನು ರಚನೆ ಮಾಡಬೇಕು ಎಂದರೂ ಲೋಕಸಭೆಯಲ್ಲಿ ಮತ್ತು ರಾಜ್ಯಸಭೆಯಲ್ಲಿ ಅದನ್ನು ಮಂಡಿಸಿ ಬಹುಮತ ಪಡೆಯಬೇಕು. ಈ ವಿಚಾರಕ್ಕೆ ಬಂದರೆ ಲೋಕಸಭೆಯಲ್ಲಿ ಬಿಜೆಪಿ ಎಂಪಿಗಳ ಸಂಖ್ಯಾಬಲವೇ 272 ಇರುವುದರಿಂದ ಯಾವುದೇ ಬಿಲ್​ ಪಾಸ್​ ಆಗಲು ತೊಂದರೆಯಾಗುವುದಿಲ್ಲ. ವಿಪಕ್ಷಗಳು ಎಷ್ಟೇ ವಿರೋಧಿಸಿದರು, ಅದು ಲೆಕ್ಕಕ್ಕೆ ಬರುವುದಿಲ್ಲ. ಅಂದರೆ ಲೋಕಸಭೆಯಲ್ಲಿ ಬಿಜೆಪಿ, ತನ್ನ ಒಕ್ಕೂಟದಲ್ಲಿರುವ ಯಾವುದೇ ಪಕ್ಷವನ್ನೂ, ಯಾವುದಕ್ಕೂ ಅವಲಂಬಿಸಿಲ್ಲ. ಹೀಗಾಗಿ ಜೆಡಿಯುದ 16 ಸಂಸದರು ಬಿಟ್ಟು ಹೋದರೂ ವ್ಯತ್ಯಾಸ ಆಗುವುದಿಲ್ಲ.

ಆದರೆ ರಾಜ್ಯಸಭೆಯಲ್ಲಿ ಈ ಸ್ಥಿತಿಯಿಲ್ಲ. ಜೆಡಿಯು ಪಕ್ಷದ ಐವರು ಎಂಪಿಗಳು ಇನ್ನು ಪ್ರತಿಪಕ್ಷಗಳ ಸಾಲಿಗೆ ಸೇರುತ್ತಾರೆ. ರಾಜ್ಯಸಭೆಯಲ್ಲಿ ಒಟ್ಟಾರೆ ಸೀಟ್​ಗಳ ಸಂಖ್ಯೆ 245. ಈಗ ಸುಮಾರು 8 ಸದಸ್ಯ ಸ್ಥಾನ ಖಾಲಿ ಇದ್ದು ಒಟ್ಟಾರೆ 237 ಸೀಟ್​ಗಳಿವೆ. ಅದರಲ್ಲಿ ಬಿಜೆಪಿ ಸಂಸದರೇ 91 ಮಂದಿ ಇದ್ದು, ಅತಿ ಹೆಚ್ಚು ಎಂಪಿಗಳು ಇರುವ ಏಕೈಕ ದೊಡ್ಡ ಪಕ್ಷ ಇದು. ಆದರೂ ಒಟ್ಟಾರೆ ರಾಜ್ಯಸಭಾ ಸ್ಥಾನದ ಅರ್ಧಕ್ಕಿಂತಲೂ ಒಂದು ಸ್ಥಾನ ಹೆಚ್ಚಿದ್ದಾಗ ಮಾತ್ರ ಬಿಜೆಪಿ ಇಲ್ಲಿಯೂ ಕೂಡ ಯಾವುದೇ ಮಸೂದೆಯನ್ನು ಆರಾಮಾಗಿ ಅಂಗೀಕರಿಸಬಹುದಿತ್ತು. ಆದರೆ ರಾಜ್ಯ ಸಭೆಯಲ್ಲಿ ಕೇವಲ 91 ಸದಸ್ಯರನ್ನು ಹೊಂದಿರುವ ಬಿಜೆಪಿಗೆ ಇಲ್ಲಿ ತನ್ನ ಒಕ್ಕೂಟದಲ್ಲಿರುವ ಪಕ್ಷಗಳ ಬೆಂಬಲ ಬೇಕೇಬೇಕು. ಎನ್​ಡಿಎ ಒಕ್ಕೂಟದ ಪಕ್ಷಗಳಾದ ಎಐಎಡಿಎಂಕೆಯ ನಾಲ್ಕು ಸಂಸದರು ಮತ್ತು ಇನ್ನೆರಡು ಸ್ನೇಹಿತ ಪಕ್ಷಗಳಾದ ಬಿಜು ಜನತಾ ದಳ್​ ಮತ್ತು ವೈಎಸ್​ಆರ್​ ಕಾಂಗ್ರೆಸ್​​ನಿಂದ 18 ಎಂಪಿಗಳು ಇದ್ದಾರೆ. ಹೀಗಾಗಿ ಇಲ್ಲಿ ಬಿಜೆಪಿಗೆ ತುಸು ನಷ್ಟವಾಗಿದೆ ಎಂದೇ ಹೇಳಬಹುದು.

ಬಿಜೆಪಿ ರಾಜ್ಯಸಭೆಯಲ್ಲಿ ಅತಿದೊಡ್ಡ ಪಕ್ಷವಾಗಿದ್ದರೂ ಕೂಡ ಅಲ್ಲಿ ಬಿಲ್​ ಪಾಸ್​ ಮಾಡುವುದು ಕಬ್ಬಿಣದ ಕಡಲೆಯೇ ಆಗಿದೆ. ಅಧಿಕಾರಕ್ಕೆ ಬಂದ ಇಷ್ಟು ವರ್ಷಗಳಲ್ಲಿ ಹಲವು ಪ್ರಮುಖ ಬಿಲ್​ಗಳೆಲ್ಲ ಲೋಕಸಭೆಯಲ್ಲಿ ಪಾಸ್​ ಆಗಿ, ರಾಜ್ಯಸಭೆಯಲ್ಲಿ ಅದಕ್ಕೆ ತಡೆಯಾದ ಸನ್ನಿವೇಶಗಳೂ ಹಲವು ಬಾರಿ ಎದುರಾಗಿವೆ. 2019ರಲ್ಲಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದುಹಾಕುವ ಸಂಬಂಧಿತ ಮಸೂದೆಯನ್ನು ರಾಜ್ಯಸಭೆಯಲ್ಲಿ ಪಾಸ್ ಮಾಡುವಾಗ ಬಿಜೆಪಿಗೆ ಬಿಎಸ್​ಪಿ, ಆಪ್​ ಪಕ್ಷಗಳು ಬೆಂಬಲ ಕೊಟ್ಟಿದ್ದವು. 2019ರಲ್ಲಿ ತ್ರಿವಳಿ ತಲಾಕ್​ ಜಾರಿಗೆ ತರುವಾಗ ಜೆಡಿಯು ಪಕ್ಷವೇ ಇದನ್ನು ವಿರೋಧಿಸಿತ್ತು. ಇನ್ನು ಮುಂದೆ ಕೂಡ ರಾಜ್ಯಸಭೆಯಲ್ಲಿ ಈ ಸಮಸ್ಯೆ ಮುಂದುವರಿಯಲಿದೆ.

ಇದನ್ನೂ ಓದಿ: Bihar Politics | 8ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ನಿತೀಶ್ ಕುಮಾರ್​

Exit mobile version