Site icon Vistara News

Gyanvapi Case: ಏನಿದು ಜ್ಞಾನವಾಪಿ ಮಸೀದಿ ವಿವಾದ?

Vistara Editorial, Gyanvapi mosque case must be end shortly

ಕಾಶಿ ವಿಶ್ವನಾಥ ದೇಗುಲದ ಸನಿಹ ಇರುವ ಜ್ಞಾನವಾಪಿ ಮಸೀದಿ (gyanvapi Case) ಆವರಣದಲ್ಲಿ ಹಿಂದೂಗಳು ಕೂಡ ಪೂಜೆ ಮಾಡಬಹುದು ಎಂದು ವಾರಾಣಸಿ ಜಿಲ್ಲಾ ಕೋರ್ಟ್​ ಆದೇಶ ನೀಡಿದೆ. ಈ ಪ್ರಕರಣವು ಮಸೀದಿ ಆವರಣದಲ್ಲಿರುವ ಸೋಮನಾಥ ವ್ಯಾಸ್ ನೆಲಮಾಳಿಗೆಗೆ ಸಂಬಂಧಿಸಿದ್ದಾಗಿದೆ. ಸೋಮನಾಥ್​ ಅವರ ಕುಟುಂಬವು 1993ರವರೆಗೆ ಇಲ್ಲಿ ಪೂಜೆ ಸಲ್ಲಿಸುತ್ತಿತ್ತು. ರಾಜ್ಯ ಸರ್ಕಾರದ ಆದೇಶದ ನಂತರ ನೆಲಮಾಳಿಗೆಯಲ್ಲಿ ಪೂಜೆ ನಿಲ್ಲಿಸಲಾಗಿತ್ತು.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಮಸೀದಿ ಆವರಣದಲ್ಲಿ ನಡೆಸಿದ ವೈಜ್ಞಾನಿಕ ಸಮೀಕ್ಷೆಯ ಸಮಯದಲ್ಲಿ ನೆಲಮಾಳಿಗೆಯನ್ನು ಸ್ವಚ್ಛಗೊಳಿಸಲಾಗಿದೆ. ಜನವರಿ 17 ರಂದು ವ್ಯಾಸ್ ಅವರ ನೆಲಮಾಳಿಗೆಯನ್ನು ಜಿಲ್ಲಾಡಳಿತ ಸ್ವಾಧೀನಪಡಿಸಿಕೊಂಡಿತ್ತು. ಇದೀಗ ಕೋರ್ಟ್​ ಆದೇಶ ಹಿಂದೂಗಳ ಪರ ಬಂದಿದೆ. ಇದಕ್ಕೂ ಮೊದಲು ಮಸೀದಿ ಪಶ್ಚಿಯ ಭಾಗದ ಗೋಡೆಯಲ್ಲಿರುವ ಶೃಂಗಾರ ಗೌರಿ ಮೂರ್ತಿಯಿದ್ದು, ಪೂಜೆಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಐವರು ಮಹಿಳೆಯರು ಕೋರ್ಟ್ ಮೊರೆ ಹೋಗಿದ್ದರು. ಆ ಪ್ರಕರಣವು ಇನ್ನೂ ಚಾಲ್ತಿಯಲ್ಲಿದೆ. ಅದರ ಭಾಗವಾಗಿಯೇ ಸಮೀಕ್ಷೆಯನ್ನು ಕೈಗೊಳ್ಳಲಾಗಿತ್ತು. ಇಡೀ ಪ್ರಕರಣವು ವಿವಿಧ ಹಂತದಲ್ಲಿ ಜಿಲ್ಲಾ ನ್ಯಾಯಾಲಯ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿದೆ. ಒಟ್ಟಾರೆ ಜ್ಞಾನವಾಪಿ ಮಸೀದಿಯ ವಿವಾದ ಕುರಿತು ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಏನಿದು ಜ್ಞಾನವಾಪಿ ಮಸೀದಿ?

ಇದೊಂದು ಬಾವಿ. ವಾಪಿ ಎಂದರೆ ಸಂಸ್ಕೃತದಲ್ಲಿ ಬಾವಿ. ಜ್ಞಾನದ ಬಾವಿ ಎಂಬುದು ಇದರ ಅಕ್ಷರಾರ್ಥ. ಸಾಮಾನ್ಯವಾಗಿ ಶಿವ ದೇವಾಲಯಗಳಲ್ಲಿ ಒಂದು ಬಾವಿ ಕಡ್ಡಾಯವಾಗಿ ಇರುತ್ತದೆ. ಶಿವಲಿಂಗಕ್ಕೆ ನಿತ್ಯ ಅಭಿಷೇಕ ಮಾಡಲು ಈ ಬಾವಿಯ ನೀರನ್ನು ಬಳಸಲಾಗುತ್ತದೆ. ಸದ್ಯ ಈ ಬಾವಿಯನ್ನು ಮಂದಿರ ಹಾಗೂ ಮಸೀದಿಗಳು ಹಂಚಿಕೊಂಡಿವೆ. ಹಿಂದೆ ಮುಸ್ಲಿಂ ರಾಜರ ದಾಳಿಯಾದಾಗ ಕಾಶಿ ವಿಶ್ವನಾಥ ದೇವಾಲಯದ ಅರ್ಚಕರೊಬ್ಬರು ಶಿವಲಿಂಗ ಅಪವಿತ್ರವಾಗದಂತೆ ಅದನ್ನು ತೆಗೆದುಕೊಂಡು ಬಂದು ಈ ಬಾವಿಗೆ ಎಸೆದು ರಕ್ಷಿಸಿದರು ಎಂದು ಕತೆಯಿದೆ.

ಶೃಂಗಾರ ಗೌರಿ ಪೂಜೆಗೆ ಮನವಿ

ಮಸೀದಿಯ ಪಶ್ಚಿಮ ಭಾಗದ ಗೋಡೆಯಲ್ಲಿ ಶೃಂಗಾರ ಗೌರಿಯ ಮೂರ್ತಿಯಿದೆ. ಇಲ್ಲಿ ಈಗ ವರ್ಷಕ್ಕೊಮ್ಮೆ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅವಕಾಶವಿದೆ. ಈ ಮೊದಲು ಪ್ರತಿನಿತ್ಯ ಪೂಜೆಗೆ ಅವಕಾಶವಿತ್ತು. ಮತ್ತೆ ನಿತ್ಯಪೂಜೆಗೆ ಅವಕಾಶ ನೀಡಬೇಕು ಎಂದು ಕೋರಿ ನಾಲ್ವರು ಹಿಂದೂ ಮಹಿಳೆಯರು ಕೋರ್ಟ್‌ಗೆ ಹೋಗಿದ್ದು, ಅದಕ್ಕೆ ಸಂಬಂಧಿಸಿದ ಕೇಸ್‌ ಈಗ ನಡೆಯುತ್ತಿರುವುದು.
ಶೈವ ದೇವಾಲಯಗಳು ಇರುವಲ್ಲಿ ಪ್ರತ್ಯೇಕವಾಗಿ ಆತನ ಪತ್ನಿ ಗೌರಿಯ ಪೂಜೆಗಾಗಿ ಒಂದು ಗುಡಿ ಇರುವುದು ವಾಡಿಕೆ. 8ನೇ ಶತಮಾನದಲ್ಲಿ ಶ್ರೀ ಶಂಕರಾಚಾರ್ಯರು ತಂದ ಪಂಚಾಯತನ ಪೂಜಾ ಪದ್ಧತಿಯ ಪ್ರಕಾರ ಶಿವ, ಗೌರಿ, ಗಣಪತಿ, ಸೂರ್ಯ ಹಾಗೂ ವಿಷ್ಣುವಿನ ಪೂಜೆಗಳು ಒಂದು ದೇವಾಲಯ ಪ್ರಾಕಾರದಲ್ಲಿ ನಡೆದುಕೊಂಡು ಬರುತ್ತವೆ. ಹೀಗೆ ನಿರ್ಮಾಣವಾದ ಗೌರಿಯ ಗುಡಿಯಿರಬೇಕು ಇದು. ಇಂದು ಈ ವಿಗ್ರಹ ಮಸೀದಿ ಇರುವ ಭಾಗದಲ್ಲಿದೆ.

ನಂದಿ ವಿಗ್ರಹ

ಗರ್ಭಗುಡಿಯಲ್ಲಿ ಇರುವ ಶಿವಲಿಂಗಕ್ಕೆ ಮುಖಾಮುಖಿಯಾಗಿ ನಂದಿಯ ವಿಗ್ರಹ ಇರುವುದು ಪುರಾತನ ರೂಢಿ. ಇಲ್ಲಿ ಸ್ಥಾಪಿಸಲಾಗಿರುವ ನಂದಿಯ ವಿಗ್ರಹ, ಮಸೀದಿಯತ್ತ ಮುಖ ಮಾಡಿದೆ. ಆದ್ದರಿಂದ ಅಲ್ಲಿ ವಿಶ್ವನಾಥನ ಗರ್ಭಗುಡಿ ಇದ್ದಿರಬಹುದು ಎಂಬುದು ಒಂದು ತರ್ಕ.

ಶೇಷನಾಗ

ಮಸೀದಿಗೆ ಅಂಟಿಕೊಂಡಿರುವ, ಸಂಪೂರ್ಣ ಶಿಥಿಲವಾಗಿರುವ ಪಶ್ಚಿಮ ಭಾಗದ ಗೋಡೆಯು ಸಂಪೂರ್ಣವಾಗಿ ದೇವಾಲಯ ವಾಸ್ತುಶಿಲ್ಪವನ್ನು ಹೊಂದಿದೆ. ಇದಲ್ಲದೆ ಈ ಗೋಡೆಯಲ್ಲಿ ಶೇಷನಾಗನ ಚಿತ್ರಣವಿದೆ. ಈ ಶೇಷನಾಗ ಹಿಂದೂ ಪುರಾಣ ಪರಿಕಲ್ಪನೆಯಲ್ಲಿ ಶಿವ ಹಾಗೂ ವಿಷ್ಣುವಿನೊಂದಿಗೆ ತಳುಕು ಹಾಕಿಕೊಂಡ ಸರ್ಪದೇವತೆ. ಆದಿಶೇಷ ಭೂಮಿಯನ್ನು ಹೊತ್ತುಕೊಂಡವನು, ಅವನು ಶಿವ ಕೊರಳಲ್ಲಿಯೂ ಆಭರಣವಾಗಿ ಇರುವವನು, ಮಹಾವಿಷ್ಣುವಿನ ಹಾಸಿಗೆಯಾಗಿ ಇರುವವನು ಎಂಬುದು ಪುರಾಣ.

ದೇವಾಲಯ ಸಂಕೀರ್ಣ

ವಾರಾಣಸಿಯ ಕಾಶಿ ಶ್ರೀ ವಿಶ್ವನಾಥ ದೇವಾಲಯ ಇರುವ ಪ್ರದೇಶ, ಪುರಾತನ ಕಾಲದಲ್ಲಿ ಹತ್ತು ಹಲವಾರು ದೇವಾಲಯಗಳು ಇದ್ದ ದೊಡ್ಡದಾದ ಸಂಕೀರ್ಣ. ಇದರಲ್ಲಿ ಹೆಚ್ಚಿನ ದೇವಾಲಯಗಳನ್ನು, ಮುಖ್ಯವಾಗಿ ಅಪಾರ ಸಂಪತ್ತು ಸಂಗ್ರಹವಾಗುತ್ತಿದ್ದ ವಿಶ್ವನಾಥ ದೇವಾಲಯವನ್ನು 17ನೇ ಶತಮಾನದಲ್ಲಿ ಮೊಗಲ್‌ ದೊರೆ ಔರಂಗಜೇಬ ಒಡೆಸಿ ಹಾಕಿದ.

ಕಾಶಿ ವಿಶ್ವನಾಥ ದೇವಾಲಯವನ್ನು ಮಹಾರಾಜ ವಿಕ್ರಮಾದಿತ್ಯ ಸುಮಾರು 2,050 ವರ್ಷಗಳ ಹಿಂದೆ ನಿರ್ಮಿಸಿದ ಎಂದು ನಂಬಲಾಗುತ್ತದೆ. ವಿಶ್ವನಾಥ ದೇವಾಲಯ ಇತಿಹಾಸದಲ್ಲಿ ಹಲವಾರು ಬಾರಿ ಕೆಡವಲ್ಪಟ್ಟಿದೆ ಮತ್ತು ಪುನರ್ನಿರ್ಮಾಣಗೊಂಡಿದೆ. ಇತಿಹಾಸಕಾರರ ಪ್ರಕಾರ, 1669ರಲ್ಲಿ ಔರಂಗಜೇಬ್ ಈ ಸ್ಥಳದಲ್ಲಿ ಜ್ಞಾನವಾಪಿ ಮಸೀದಿಯನ್ನು ನಿರ್ಮಿಸಿದ. ಈಗ ಇರುವ ವಿಶ್ವನಾಥ ದೇವಾಲಯವನ್ನು 18ನೇ ಶತಮಾನದಲ್ಲಿ ಮಾಳವ ಸಾಮ್ರಾಜ್ಯದ ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರು ಮರುನಿರ್ಮಾಣ ಮಾಡಿದರು. ಆಗ ಮಸೀದಿ ಪಕ್ಕದಲ್ಲೇ ಇತ್ತು. ಮಸೀದಿಯನ್ನು ಕೆಡವರು ಅವರು ಮುಂದಾಗಲಿಲ್ಲ. ಹೀಗಾಗಿ ಜ್ಞಾನವಾಪಿ ಮಸೀದಿಯು ಕಾಶಿ ವಿಶ್ವನಾಥ ದೇವಸ್ಥಾನದೊಂದಿಗೆ ಗಡಿ ಗೋಡೆಯನ್ನು ಹಂಚಿಕೊಂಡಿದೆ. ಆದರೆ ಅವುಗಳ ಪ್ರವೇಶ ಹಾಗೂ ನಿರ್ಗಮನ ದ್ವಾರಗಳು ವಿವಿಧ ದಿಕ್ಕುಗಳಲ್ಲಿವೆ.

ಈ ಸುದ್ದಿಯನ್ನೂ ಓದಿ: Gyanvapi Mosque : ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳಿಗೂ ಪೂಜೆಗೆ ಅವಕಾಶ ನೀಡಿದ ಕೋರ್ಟ್!

Exit mobile version