ಸ್ಯಾನ್ ಫ್ರಾನ್ಸಿಸ್ಕೋ: ಅಮೆರಿಕ ನೆಲದಲ್ಲಿ ನಿಂತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಮತ್ತೆ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ. “1980ರ ದಶಕದಲ್ಲಿ ಹೇಗೆ ದಲಿತರ ಮೇಲೆ ದೌರ್ಜನ್ಯ ನಡೆಯಿತೋ, ಈಗ ದೇಶದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿದೆ” ಎಂದು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ‘ಮೊಹಬ್ಬತ್ ಕಿ ದುಕಾನ್’ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಟೀಕಿಸಿದ್ದಾರೆ.
“1980ರ ದಶಕದಲ್ಲಿ ಉತ್ತರ ಪ್ರದೇಶ ಸೇರಿ ಹಲವೆಡೆ ದಲಿತರ ಮೇಲೆ ದೌರ್ಜನ್ಯ ನಡೆಯಿತು. ಈಗ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಬರೀ ಮುಸ್ಲಿಮರು ಮಾತ್ರವಲ್ಲ, ಸಿಖ್ಖರು, ಕ್ರೈಸ್ತರು, ದಲಿತರು ಹಾಗೂ ಬುಡಕಟ್ಟು ಸಮುದಾಯದವರು ಕೂಡ ಭಾರತದಲ್ಲಿ ಇಂತಹದ್ದೇ ದೌರ್ಜನ್ಯಕ್ಕೆ ಬಲಿಯಾಗುತ್ತಿದ್ದಾರೆ. ಆದರೆ, ಯಾವಾಗಲೂ ದ್ವೇಷದಿಂದ ದ್ವೇಷವನ್ನು ತೊಲಗಿಸಲು ಸಾಧ್ಯವಿಲ್ಲ. ಪ್ರೀತಿಯಿಂದ ಮಾತ್ರ ದ್ವೇಷವನ್ನು ನಿರ್ಮೂಲನೆ ಮಾಡಲು ಸಾಧ್ಯ” ಎಂದು ಹೇಳಿದರು.
“ಮುಸ್ಲಿಮರು ಸೇರಿ ಎಲ್ಲ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ನಾವು ಹೋರಾಡಬೇಕಿದೆ. ಆದರೆ, ದ್ವೇಷದಿಂದ ಹೋರಾಟ ಮಾಡುವುದು ಕೂಡದು. ಪ್ರೀತಿಯಿಂದಲೇ ದ್ವೇಷವನ್ನು ಸೋಲಿಸೋಣ. ಇದಕ್ಕೆ ಕಾಂಗ್ರೆಸ್ ಕೂಡ ಬದ್ಧವಾಗಿದೆ. ಭಾರತದಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ಗಟ್ಟಿಗೊಳಿಸುವುದು ಕಾಂಗ್ರೆಸ್‌ನ ಪ್ರಮುಖ ಧ್ಯೇಯೋದ್ದೇಶವಾಗಿದೆ” ಎಂದು ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡುವಾಗ ತಿಳಿಸಿದರು.
ಇದಕ್ಕೂ ಮೊದಲು ರಾಹುಲ್ ಗಾಂಧಿ ಅವರು ಮೋದಿ ಅವರಿಗೆ ಕುಟುಕಿದ್ದರು ʼʼತಾವು ಎಲ್ಲವನ್ನೂ ತಿಳಿದವರು ಎಂದು ತಿಳಿದುಕೊಂಡ ಕೆಲವರಿಂದ ಇಂದು ಭಾರತ ಆಳಲ್ಪಡುತ್ತಿದೆ. ಪ್ರಧಾನಿ ಮೋದಿ ಅಂಥ ಒಂದು ಮಾದರಿ. ಒಂದು ವೇಳೆ ಮೋದಿ ದೇವರ ಪಕ್ಕ ಕುಳಿತರೆ, ವಿಶ್ವ ಹೇಗೆ ಕೆಲಸ ಮಾಡುತ್ತದೆ ಎಂದು ಅವರು ದೇವರಿಗೇ ವಿವರಿಸಲು ಆರಂಭಿಸುತ್ತಾರೆ. ದೇವರಿಗೇ ತಾನು ಸೃಷ್ಟಿಸಿದ್ದೇನು ಎಂದು ಗೊಂದಲವಾಗುತ್ತದೆ. ಇದೆಲ್ಲ ತಮಾಷೆ, ಆದರೆ ನಿಜ. ಅಲ್ಲಿರುವ ಹಲವರು ವಿಜ್ಞಾನಿಗಳಿಗೆ ವಿಜ್ಞಾನವನ್ನು, ಇತಿಹಾಸಕಾರರಿಗೆ ಇತಿಹಾಸವನ್ನು, ಸೈನಿಕರಿಗೆ ಯುದ್ಧಕಲೆಯನ್ನು ಬೋಧಿಸುತ್ತಾರೆ. ಆದರೆ ಇದೆಲ್ಲದರ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲʼʼ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: Rahul Gandhi: ʼʼಮೋದಿ ದೇವರ ಪಕ್ಕ ಕುಳಿತರೆ…ʼʼ ಅಮೆರಿಕದಲ್ಲಿ ಮತ್ತೆ ಮೋದಿಗೆ ಚುಚ್ಚಿದ ರಾಹುಲ್ ಗಾಂಧಿ
ರಾಹುಲ್ 10 ದಿನಗಳ ಪ್ರವಾಸಕ್ಕಾಗಿ ಅಮೆರಿಕದಲ್ಲಿದ್ದಾರೆ. ಮೊದಲ ತಾಣ ಸ್ಯಾನ್‌ಫ್ರಾನ್ಸಿಸ್ಕೊ. ನಂತರ ವಾಷಿಂಗ್ಟನ್ ಡಿಸಿ, ನ್ಯೂಯಾರ್ಕ್‌ಗೆ ತೆರಳಲಿದ್ದಾರೆ. ಹಿಂದಿನ ಬ್ರಿಟನ್ ಪ್ರವಾಸದಲ್ಲಿ ಅವರು ಮಾಡಿದ ಭಾಷಣಗಳಿಂದಾಗಿ, ಭಾರತೀಯ ಪ್ರಜಾಪ್ರಭುತ್ವವನ್ನು ಲೇವಡಿ ಮಾಡಿದ್ದಾರೆ ಎಂಬ ಆರೋಪಕ್ಕೆ ತುತ್ತಾಗಿದ್ದರು.