Site icon Vistara News

What is Lateral Entry?: ಏನಿದು ಲ್ಯಾಟರಲ್ ಎಂಟ್ರಿ ವಿವಾದ? ಕಾಂಗ್ರೆಸ್‌ ಆರೋಪವೇನು? ಬಿಜೆಪಿಯ ವಾದವೇನು?

What is Lateral Entry?

ಜಂಟಿ ಕಾರ್ಯದರ್ಶಿ, ನಿರ್ದೇಶಕರು ಮತ್ತು ಉಪ ಕಾರ್ಯದರ್ಶಿ ಹುದ್ದೆಗಳಿಗೆ ಲ್ಯಾಟರಲ್ ಎಂಟ್ರಿ (What is Lateral Entry?) ವಿಧಾನದ ಮೂಲಕ ನೇಮಕಾತಿ ನಡೆಸುವುದಾಗಿ ಭಾರತದ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (Union Public Service Commission) ಇತ್ತೀಚೆಗೆ ಪ್ರಕಟಿಸಿದ್ದು, ಇದು ಭಾರೀ ಟೀಕೆಗೆ ಗುರಿಯಾಗಿದೆ. ಇದರಿಂದ ಮೀಸಲಾತಿ ಹಕ್ಕು (reservation rights) ದುರ್ಬಲವಾಗುತ್ತದೆ ಎಂಬುದು ವಿರೋಧ ಪಕ್ಷಗಳ ವಾದವಾಗಿದೆ. ಇದೀಗ ಈ ಕುರಿತ ಜಾಹೀರಾತನ್ನು ಕೇಂದ್ರ ಸರ್ಕಾರ ಹಿಂಪಡೆದುಕೊಂಡಿದೆ.

ಯಾವಾಗ ಮೊದಲ ಪ್ರಸ್ತಾಪ?

1966ರಲ್ಲಿ ಸ್ಥಾಪನೆಯಾದ ಮೊದಲ ಆಡಳಿತ ಸುಧಾರಣಾ ಆಯೋಗವು ಆರಂಭದಲ್ಲಿ ಮೊರಾರ್ಜಿ ದೇಸಾಯಿ ಮತ್ತು ಅನಂತರ ಕೆ. ಹನುಮಂತಯ್ಯ ಅವರ ಅಧ್ಯಕ್ಷತೆಯಲ್ಲಿ ನಾಗರಿಕ ಸೇವೆಗಳಲ್ಲಿ ವಿಶೇಷ ಕೌಶಲಗಳ ಅಗತ್ಯತೆಯ ಚರ್ಚೆಗಳಿಗೆ ಅಡಿಪಾಯ ಹಾಕಿತು. ಇದು ನೇಮಕಾತಿ ಬಗ್ಗೆ ನಿರ್ದಿಷ್ಟವಾಗಿ ಪ್ರತಿಪಾದಿಸದಿದ್ದರೂ ಬದಲಾಗುತ್ತಿರುವ ರಾಷ್ಟ್ರದ ಬೇಡಿಕೆಗಳನ್ನು ಪೂರೈಸಲು ವೃತ್ತಿಪರತೆ, ತರಬೇತಿ ಮತ್ತು ಸುಧಾರಣೆಗಳ ಪ್ರಾಮುಖ್ಯತೆಯನ್ನು ತಿಳಿಸಿತ್ತು.

ಲ್ಯಾಟರಲ್ ಎಂಟ್ರಿ ಪರಿಕಲ್ಪನೆಯನ್ನು ಮೊದಲು ಪರಿಚಯಿಸಿದ್ದು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವೇ ಆಗಿದೆ. ವೀರಪ್ಪ ಮೊಯ್ಲಿ ಅವರ ಅಧ್ಯಕ್ಷತೆಯಲ್ಲಿ 2005ರಲ್ಲಿ ಸ್ಥಾಪಿಸಲಾದ ಎರಡನೇ ಆಡಳಿತ ಸುಧಾರಣಾ ಆಯೋಗದಿಂದ (ARC) ಇದು ಬೆಂಬಲವನ್ನೂ ಪಡೆದಿತ್ತು.

ಲ್ಯಾಟರಲ್ ಎಂಟ್ರಿ ಬಗ್ಗೆ ಎಆರ್‌ಸಿ ಹೇಳಿದ್ದೇನು?


ವೀರಪ್ಪ ಮೊಯ್ಲಿ ಪ್ರಸ್ತಾಪಿಸಿರುವ ಲ್ಯಾಟರಲ್ ಎಂಟ್ರಿ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ಪ್ರಮುಖ ಸಂಗತಿಗಳಿವೆ.
ನಾಗರಿಕ ಸೇವೆಗಳಲ್ಲಿ ಲಭ್ಯವಿಲ್ಲದ ಕೆಲವು ಸರ್ಕಾರಿ ಹುದ್ದೆಗಳಿಗೆ ವಿಶೇಷ ಜ್ಞಾನದ ಅಗತ್ಯವಿದೆ. ಇದನ್ನು ಪರಿಹರಿಸಲು ಖಾಸಗಿ ಉದ್ಯಮ, ಶೈಕ್ಷಣಿಕ ಮತ್ತು ಸಾರ್ವಜನಿಕ ಉದ್ಯಮಗಳ ವಲಯಗಳಿಂದ ವೃತ್ತಿಪರರನ್ನು ನೇಮಿಸಿಕೊಳ್ಳಲು ಎಆರ್‌ಸಿ ಶಿಫಾರಸು ಮಾಡಿದೆ.

ಸರ್ಕಾರದ ಸಾಮರ್ಥ್ಯಗಳನ್ನು ಹೆಚ್ಚಿಸಲು ಅಲ್ಪಾವಧಿ ಅಥವಾ ಒಪ್ಪಂದದ ಆಧಾರದ ಮೇಲೆ ಸರ್ಕಾರಿ ಹುದ್ದೆಗಳನ್ನು ತುಂಬಲು ತಜ್ಞರ ಪ್ರತಿಭಾ ಸಮುದಾಯ ಸ್ಥಾಪಿಸಲು ಎಆರ್‌ಸಿ ಪ್ರಸ್ತಾಪಿಸಿದೆ. ಇದು ಅರ್ಥಶಾಸ್ತ್ರ, ಹಣಕಾಸು, ತಂತ್ರಜ್ಞಾನ ಮತ್ತು ಸಾರ್ವಜನಿಕ ನೀತಿಯಂತಹ ಕ್ಷೇತ್ರಗಳಲ್ಲಿ ಹೊಸ ದೃಷ್ಟಿಕೋನಗಳು ಮತ್ತು ಪರಿಣತಿಯನ್ನು ತುಂಬುತ್ತದೆ ಎಂಬುದು ಅದರ ವಾದವಾಗಿದೆ.

ಲ್ಯಾಟರಲ್ ಪ್ರವೇಶಿಸುವವರಿಗೆ ಪಾರದರ್ಶಕ ಮತ್ತು ಅರ್ಹತೆ ಆಧಾರಿತ ಆಯ್ಕೆ ಪ್ರಕ್ರಿಯೆಯ ಅಗತ್ಯವನ್ನು ಆಯೋಗವು ಒತ್ತಿ ಹೇಳಿದ್ದು, ಈ ವೃತ್ತಿಪರರ ನೇಮಕಾತಿ ಮತ್ತು ಮೇಲ್ವಿಚಾರಣೆಯನ್ನು ನಿರ್ವಹಿಸಲು ಮೀಸಲಾದ ಏಜೆನ್ಸಿಯನ್ನು ರಚಿಸುವಂತೆ ಅದು ಸಲಹೆ ನೀಡಿದೆ.

ಲ್ಯಾಟರಲ್‌ಗೆ ಪ್ರವೇಶಿಸುವವರು ತಮ್ಮ ಕೊಡುಗೆಗಳಿಗೆ ಜವಾಬ್ದಾರರಾಗಿರುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಅವರ ಕಾರ್ಯಕ್ಷಮತೆಯನ್ನು ನಿಯಮಿತವಾಗಿ ಮೌಲ್ಯಮಾಪನ ಮಾಡಲು ದೃಢವಾದ ಕಾರ್ಯಕ್ಷಮತೆ ನಿರ್ವಹಣಾ ವ್ಯವಸ್ಥೆಯನ್ನು ಅಳವಡಿಸಲು ಎಆರ್‌ಸಿ ಶಿಫಾರಸು ಮಾಡಿದೆ.

ವಿಶೇಷ ಕೌಶಲಗಳನ್ನು ಬಳಸಿಕೊಂಡು ನಾಗರಿಕ ಸೇವೆಯ ಸಮಗ್ರತೆ ಮತ್ತು ಮೌಲ್ಯಗಳನ್ನು ಕಾಯ್ದುಕೊಳ್ಳಲು ನಾಗರಿಕ ಸೇವಾ ಚೌಕಟ್ಟಿನೊಳಗೆ ಲ್ಯಾಟರಲ್ ಎಂಟ್ರಿಗಳನ್ನು ಸಂಯೋಜಿಸುವ ಪ್ರಾಮುಖ್ಯತೆಯನ್ನು ಕೂಡ ಎಆರ್‌ಸಿ ತಿಳಿಸಿದೆ.

ಲ್ಯಾಟರಲ್ ಎಂಟ್ರಿ ಎಂದರೇನು?

ಮಧ್ಯಮ ಮತ್ತು ಹಿರಿಯ ಹಂತದ ಸ್ಥಾನಗಳನ್ನು ತುಂಬಲು ಸಾಂಪ್ರದಾಯಿಕ ನೇಮಕಾತಿ ಪ್ರಕ್ರಿಯೆಯನ್ನು ಕೈಬಿಟ್ಟು ಹೊರಗಿನ ವ್ಯಕ್ತಿಗಳ ನೇಮಕ ಮಾಡುವುದಾಗಿದೆ.

Lateral Entry


ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪರಿಚಯಿಸಿದ್ದಾರೆ. ಮೊದಲ ಬಾರಿಗೆ ಈ ನೇಮಕಾತಿ ಅಡಿಯಲ್ಲಿ ಖಾಲಿ ಹುದ್ದೆಗಳನ್ನು 2018ರಲ್ಲಿ ಘೋಷಿಸಲಾಯಿತು. ಇದಕ್ಕೆ ಅಭ್ಯರ್ಥಿಗಳನ್ನು ಸಾಮಾನ್ಯವಾಗಿ ಮೂರರಿಂದ ಐದು ವರ್ಷಗಳವರೆಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗುತ್ತದೆ. ಕಾರ್ಯಕ್ಷಮತೆಯ ಆಧಾರದ ಮೇಲೆ ಅಧಿಕಾರ ವಿಸ್ತರಣೆಯಾಗುವ ಸಾಧ್ಯತೆ ಇರುತ್ತದೆ.

ಇದರ ಉದ್ದೇಶವೇನು?

ವಿವಿಧ ಕ್ಷೇತ್ರಗಳ ತಜ್ಞರನ್ನು ನೇಮಿಸಿಕೊಂಡು ಆಡಳಿತ ಮತ್ತು ನೀತಿ ಅನುಷ್ಠಾನದ ಎದುರಾಗುವ ಸವಾಲುಗಳನ್ನು ಎದುರಿಸುವುದು ಇದರ ಮುಖ್ಯ ಗುರಿಯಾಗಿದೆ.

ವಿವಾದ ಪ್ರಾರಂಭ

ಕೇಂದ್ರ ಸರ್ಕಾರದ 24 ಸಚಿವಾಲಯಗಳ ಜಂಟಿ ಕಾರ್ಯದರ್ಶಿ, ನಿರ್ದೇಶಕ ಮತ್ತು ಉಪ ಕಾರ್ಯದರ್ಶಿ ಸೇರಿದಂತೆ ಒಟ್ಟು 45 ಹಿರಿಯ ಹುದ್ದೆಗಳಿಗೆ ಲ್ಯಾಟರಲ್ ನೇಮಕಾತಿಗಾಗಿ ಅರ್ಜಿಗಳನ್ನು ಕೋರಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಜಾಹೀರಾತನ್ನು ಬಿಡುಗಡೆ ಮಾಡಿದೆ.

ಈ ಹುದ್ದೆಗಳಿಗೆ ವಿವಿಧ ಇಲಾಖೆಗಳ ನಿರ್ದೇಶಕರು, ಆಡಳಿತಾತ್ಮಕ ಮುಖ್ಯಸ್ಥರು, ರಾಜ್ಯ ಮತ್ತು ಕೇಂದ್ರ ಸರ್ಕಾರ, ಸಾರ್ವಜನಿಕ ವಲಯದ ಉದ್ಯಮಗಳು, ಶಾಸನಬದ್ಧ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ವಿಶ್ವವಿದ್ಯಾಲಯ ಮತ್ತು ಖಾಸಗಿ ವಲಯದ ಸೂಕ್ತ ವಿದ್ಯಾರ್ಹತೆ ಮತ್ತು ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಸಾರ್ವಜನಿಕ ಉದ್ಯೋಗ ಮತ್ತು ವಿಶ್ವವಿದ್ಯಾಲಯಗಳಲ್ಲಿ ಮೀಸಲಾತಿಯನ್ನು 13 ಪಾಯಿಂಟ್ ರೋಸ್ಟರ್ ನೀತಿಯ ಮೂಲಕ ಜಾರಿಗೊಳಿಸಲಾಗಿದೆ. ಇದರಲ್ಲಿ ಒಂದು ಇಲಾಖೆಯಲ್ಲಿ ಮೊದಲ, ದ್ವಿತೀಯ, ತೃತೀಯ, ಐದು ಮತ್ತು ಆರನೇ ಹುದ್ದೆಗಳಿಗೆ ಯಾವುದೇ ಕಡ್ಡಾಯ ಮೀಸಲಾತಿಗಳಿಲ್ಲ ಎಂಬುದು ಸ್ಪಷ್ಟವಾಗಿದೆ.

ವಿಪಕ್ಷಗಳಿಂದ ವಿರೋಧ ಯಾಕೆ?

ಪ್ರತಿಪಕ್ಷದ ನಾಯಕರು ಇದನ್ನು ಸ್ಪಷ್ಟವಾಗಿ ವಿರೋಧಿಸುತ್ತಿದ್ದಾರೆ. ಯಾಕೆಂದರೆ ಇದು ಅನುಷ್ಠಾನವಾದರೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಮೀಸಲಾತಿ ಕೊರತೆಯಾಗುವುದಾಗಿ ವಾದಿಸುತ್ತಿದ್ದಾರೆ. ಆದರೆ ಸರ್ಕಾರವು ವಿಶೇಷ ಪ್ರತಿಭೆ ಮತ್ತು ಪರಿಣತಿಯನ್ನು ತರುವ ಸಾಧನವನ್ನು ಸಮರ್ಥಿಸುತ್ತದೆ.


ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ, ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನಿಷ್ಠರಾಗಿರುವ ಅಧಿಕಾರಿಗಳನ್ನು ನೇಮಿಸಿಕೊಳ್ಳಲು ಮೋದಿ ಸರ್ಕಾರವು ಹಿಂಬಾಗಿಲನ್ನು ಬಳಸುತ್ತಿದೆ. ಲ್ಯಾಟರಲ್ ಎಂಟ್ರಿಯು ದಲಿತರು, ಒಬಿಸಿಗಳು ಮತ್ತು ಆದಿವಾಸಿಗಳ ಮೇಲಿನ ದಾಳಿಯಾಗಿದೆ. ಬಿಜೆಪಿಯ ರಾಮರಾಜ್ಯದ ತಿರುಚಿದ ಆವೃತ್ತಿಯು ಸಂವಿಧಾನವನ್ನು ನಾಶಮಾಡಲು ಮತ್ತು ಬಹುಜನರಿಂದ ಮೀಸಲಾತಿಯನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.


ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಲ್ಯಾಟರಲ್ ಎಂಟ್ರಿಯು ಸರ್ಕಾರಿ ಉದ್ಯೋಗಗಳಿಂದ ಕೆಳವರ್ಗದ ಸಮುದಾಯಗಳನ್ನು ಹೊರಗಿಡುವ ‘ಉತ್ತಮ ಯೋಜಿತ ಪಿತೂರಿಯ ಭಾಗವಾಗಿದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಜನತಾ ದಳದ ತೇಜಸ್ವಿ ಯಾದವ್ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಕೂಡ ಇದನ್ನು ಖಂಡಿಸಿದ್ದು, ಇದು ಹಿಂದುಳಿದ ಅಭ್ಯರ್ಥಿಗಳಿಗೆ ಸರ್ಕಾರದೊಳಗೆ ಮುನ್ನಡೆಯುವ ಅವಕಾಶಗಳಿಂದ ವಂಚಿತಗೊಳಿಸುತ್ತದೆ ಎಂದು ದೂರಿದ್ದಾರೆ.


ಬಿಜೆಪಿಯ ವಾದವೇನು?

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಲ್ಯಾಟರಲ್ ಎಂಟ್ರಿ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸೂಚಿಸುವ ಮೂಲಕ ಬಿಜೆಪಿ ಈ ಟೀಕೆಗಳನ್ನು ಎದುರಿಸಿದೆ.

ಇದನ್ನೂ ಓದಿ: Lateral Entry : ಪ್ರಧಾನಿ ಮೋದಿ ಮಧ್ಯಪ್ರವೇಶ; ಲ್ಯಾಟರಲ್ ಎಂಟ್ರಿ ಮೂಲಕ ನೇಮಕಕ್ಕೆ ತಡೆ

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಪ್ರತಿಕ್ರಿಯಿಸಿ ಲ್ಯಾಟರಲ್ ಎಂಟ್ರಿ ವಿಷಯದಲ್ಲಿ ಕಾಂಗ್ರೆಸ್‌ನ ಬೂಟಾಟಿಕೆ ಸ್ಪಷ್ಟವಾಗಿದೆ. ಇದು ಯುಪಿಎ ಸರ್ಕಾರವು ಲ್ಯಾಟರಲ್ ಎಂಟ್ರಿ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿತು. ಎರಡನೇ ಆಡಳಿತ ಸುಧಾರಣಾ ಆಯೋಗವನ್ನು 2005 ರಲ್ಲಿ ಯುಪಿಎ ಸರ್ಕಾರದ ಅಡಿಯಲ್ಲಿ ಸ್ಥಾಪಿಸಲಾಯಿತು. ವೀರಪ್ಪ ಮೊಯ್ಲಿ ಅವರು ಇದರ ಅಧ್ಯಕ್ಷತೆ ವಹಿಸಿದ್ದರು ಎಂದು ಹೇಳಿದ್ದಾರೆ.


ಕಳೆದ ಐದು ವರ್ಷಗಳಲ್ಲಿ 63 ನೇಮಕಾತಿಗಳನ್ನು ಲ್ಯಾಟರಲ್ ಎಂಟ್ರಿ ಮೂಲಕ ಮಾಡಲಾಗಿದೆ. ಪ್ರಸ್ತುತ 57 ಲ್ಯಾಟರಲ್ ಎಂಟ್ರಿಗಳು ವಿವಿಧ ಸಚಿವಾಲಯ, ಇಲಾಖೆಗಳಲ್ಲಿ ಸ್ಥಾನಗಳನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಡಿಒಪಿಟಿ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

Exit mobile version