Site icon Vistara News

Logistics Policy | ಜನ್ಮದಿನದಂದೇ ಲಾಜಿಸ್ಟಿಕ್ಸ್‌ ನೀತಿಗೆ ಮೋದಿ ಚಾಲನೆ, ಏನಿದು ನೀತಿ? ಏನಿದೆ ಉಪಯೋಗ?

Logistics

ನವದೆಹಲಿ: ಜನ್ಮದಿನದಂದೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸರಕು ಸಾಗಣೆ ವ್ಯವಸ್ಥೆ(ಲಾಜಿಸ್ಟಿಕ್ಸ್‌)ಯಲ್ಲಿ ಮಹತ್ವದ ಬದಲಾವಣೆ ತರುವ ರಾಷ್ಟ್ರೀಯ ಲಾಜಿಸ್ಟಿಕ್ಸ್‌ ನೀತಿ (Logistics Policy)ಗೆ ಚಾಲನೆ ನೀಡಿದ್ದಾರೆ. ಇದರಿಂದ ದೇಶದಲ್ಲಿ ಸುಲಭವಾಗಿ ಸರಕು ಸಾಗಣೆ ಮಾಡಲು ಸಾಧ್ಯವಾಗಲಿದೆ. ಸುಲಭವಾಗಿ ರಫ್ತು ಮಾಡಲೂ ಸಾಧ್ಯವಾಗಲಿದೆ.

ನೀತಿಗೆ ಚಾಲನೆ ನೀಡಿದ ಬಳಿ ಮಾತನಾಡಿದ ಮೋದಿ, “ದೇಶದಲ್ಲಿ ಒಂದೇ ದಿನ ಚೀತಾಗಳನ್ನು ಕಾಡಿಗೆ ಬಿಡುವುದು ಹಾಗೂ ಸರಕು ಸಾಗಣೆ ನೀತಿ ಜಾರಿಗೆ ತರುವುದರ ಹಿಂದೆ ಸಮಾನ ಉದ್ದೇಶವಿದೆ. ಇಂದು ದೇಶದ ಸರಕು ಸಾಗಣೆ ವ್ಯವಸ್ಥೆಗೆ “ಚೀತಾ”ಗಳ ವೇಗ ನೀಡಬೇಕಿದೆ. ಸರಕು ಸಾಗಣೆಯಲ್ಲಿ ಸಮಯ ಹಾಗೂ ಹಣ ಉಳಿಸುವ ಮೂಲಕ ಏಳಿಗೆಯತ್ತ ಸಾಗುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ” ಎಂದು ತಿಳಿಸಿದ್ದಾರೆ.

ಏನಿದು ಲಾಜಿಸ್ಟಿಕ್ಸ್‌ ನೀತಿ?

ಸರಕು ಸಾಗಣೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರುವ ದಿಸೆಯಲ್ಲಿ ರಾಷ್ಟ್ರೀಯ ಲಾಜಿಸ್ಟಿಕ್ಸ್‌ ನೀತಿ ಜಾರಿಗೆ ತರಲಾಗಿದೆ. ನೂತನ ನೀತಿ ಅಡಿಯಲ್ಲಿ ಕೇಂದ್ರ ಸರ್ಕಾರದ ವಿವಿಧ ಸಚಿವಾಯಲಯಗಳ ೩೦ ಇಲಾಖೆಗಳನ್ನು ಸಂಯೋಜಿತ ಡಿಜಿಟಲ್‌ ವ್ಯವಸ್ಥೆ (Integrated Digital System) ವ್ಯಾಪ್ತಿಗೆ ತರಲಾಗುತ್ತಿದೆ. ಇದರಿಂದ ಸುಲಭವಾಗಿ ಸರಕು ಸಾಗಣೆ ಮಾಡಬಹುದಾಗಿದೆ. ಹಣ ಹಾಗೂ ಸಮಯದ ಉಳಿತಾಯವಾಗಲಿದೆ.

ಯಾರಿಗೆ ಅನುಕೂಲ?

ದೇಶದ ಲಾಜಿಸ್ಟಿಕ್ಸ್‌ ವಲಯವನ್ನು ಸುಮಾರು ೨.೨ ಕೋಟಿ ಜನ ಆಶ್ರಯಿಸಿದ್ದಾರೆ. ದೇಶೀಯವಾಗಿ ಸರಕು ಸಾಗಣೆ ಜತೆಗೆ, ವಿದೇಶಕ್ಕೆ ರಫ್ತು ಸಹ ಮಾಡಲಾಗುತ್ತದೆ. ಇದರಲ್ಲಿ ಏಕರೂಪದ ವ್ಯವಸ್ಥೆ ಜಾರಿಗೆ ತರುವುದರಿಂದ ಇಷ್ಟೂ ಜನರಿಗೆ ಅನುಕೂಲವಾಗಲಿದೆ. ಕ್ಷಿಪ್ರವಾಗಿ ಸರಕು ಸಾಗಣೆ ಮಾಡುವುದು ಹಾಗೂ ಇದರಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಿಂದ ಸಮಯ ಹಾಗೂ ಶ್ರಮದ ಉಳಿತಾಯವಾಗಲಿದೆ.

ಜಾರಿಯ ಅವಶ್ಯಕತೆ ಏನಿತ್ತು?

ಭಾರತದ ಲಾಜಿಸ್ಟಿಕ್ಸ್‌ ಕ್ಷೇತ್ರದ ಮಾರುಕಟ್ಟೆಯು ೨೦೦ ಶತಕೋಟಿ ಡಾಲರ್‌ (ಸುಮಾರು ೧೫ ಲಕ್ಷ ಕೋಟಿ ರೂ.) ಇದೆ. ಹೀಗಿದ್ದಾಗ್ಯೂ, ಸರಕು ಸಾಗಣೆಗಾಗಿಯೇ ದೇಶದ ಜಿಡಿಪಿಯ ಶೇ.೧೩-೧೪ರಷ್ಟು ಹಣವು ವ್ಯಯವಾಗುತ್ತಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಸರಕು ಸಾಗಣೆಗೆ ವ್ಯಯಿಸುವ ಹಣ ಹೆಚ್ಚಿದೆ. ಅಮೆರಿಕದಲ್ಲಿ ಅಮೆರಿಕದಲ್ಲಿ ಲಾಜಿಸ್ಟಿಕ್ಸ್‌ಗೆ ಜಿಡಿಪಿಯ ಶೇ.೯-೧೦ರಷ್ಟು ವ್ಯಯಿಸಲಾಗುತ್ತಿದ್ದರೆ, ಜಪಾನ್‌ ಹಾಗೂ ಯುರೋಪ್‌ನಲ್ಲಿ ಶೇ.೧೧ರಷ್ಟು ಹಣವನ್ನು ವೆಚ್ಚ ಮಾಡಲಾಗುತ್ತದೆ. ಭಾರತದಲ್ಲೂ ವೆಚ್ಚದ ಹಣವನ್ನು ತಗ್ಗಿಸಲು ಇದನ್ನು ಜಾರಿಗೊಳಿಸಲಾಗಿದೆ.

ಇದನ್ನೂ ಓದಿ | Modi Birthday | ಒಂದು ದಿನವಾದರೂ ರಜೆ ತೆಗೆದುಕೊಳ್ಳಿ ಎಂಬ ಸಲಹೆ ಜತೆ ಮೋದಿಗೆ ಶುಭ ಕೋರಿದ ಶಾರುಖ್‌ ಖಾನ್‌

Exit mobile version