ನವದೆಹಲಿ: ದೇಶದಲ್ಲಿ ರಸಗೊಬ್ಬರ ಬ್ರ್ಯಾಂಡ್‌ಗಳಲ್ಲಿ ಏಕರೂಪತೆ ತರಲು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಒಂದು ರಾಷ್ಟ್ರ, ಒಂದು ರಸಗೊಬ್ಬರ (One Nation One Fertiliser) ಯೋಜನೆಗೆ ಚಾಲನೆ ನೀಡಿದ್ದಾರೆ. ‘ಪ್ರಧಾನ ಮಂತ್ರಿ ಭಾರತೀಯ ಜನ ಉರ್ವರಕ್ ಪರಿಯೋಜನೆ’ (PMBJP) ಎಂಬುದು ಯೋಜನೆಯ ಹೆಸರಾಗಿದೆ. ಹಾಗಾದರೆ, ಏನಿದು ಯೋಜನೆ? ಯಾಕಾಗಿ ಯೋಜನೆ ಜಾರಿಗೊಳಿಸಲಾಗಿದೆ? ಇದರಿಂದ ರೈತರಿಗೆ ಏನು ಲಾಭ ಎಂಬುದರ ಕಿರು ಮಾಹಿತಿ (ವಿಸ್ತಾರ Explainer) ಹೀಗಿದೆ.
ಏನಿದು ಯೋಜನೆ?
ದೇಶದಲ್ಲಿರುವ ರಸಗೊಬ್ಬರ ಕಂಪನಿಗಳು ಉತ್ಪಾದಿಸುವ ಸಬ್ಸಿಡಿಸಹಿತ ರಸಗೊಬ್ಬರದ ಬ್ರ್ಯಾಂಡ್‌ಗಳಲ್ಲಿ ಏಕರೂಪತೆ ತರುವ ದಿಸೆಯಲ್ಲಿ ಕೇಂದ್ರ ಸರ್ಕಾರ ಪಿಎಂಬಿಜೆಪಿ ಜಾರಿಗೆ ತಂದಿದೆ. ಯೋಜನೆ ಅನ್ವಯ ‘ಭಾರತ್’ ಎಂಬ ಒಂದೇ ಬ್ರ್ಯಾಂಡ್‌ನಲ್ಲಿ ರಸಗೊಬ್ಬರಗಳ ಮಾರಾಟ ಮಾಡಬೇಕಾಗುತ್ತದೆ. ಸಬ್ಸಿಡಿ ಸಹಿತ ಸರ್ಕಾರಿ ಸ್ವಾಮ್ಯದ ಹಾಗೂ ಖಾಸಗಿ ಕಂಪನಿಗಳು ಇನ್ನು ಮುಂದೆ ತಮ್ಮ ರಸಗೊಬ್ಬರ ಬ್ರ್ಯಾಂಡ್‌ನ ಪ್ಯಾಕೆಟ್ ಮೇಲೆ ಭಾರತ್ ಎಂದು ಮುದ್ರಿಸುವ ಜತೆಗೆ ಯೋಜನೆಯ ಒಂದು ಲೋಗೊವನ್ನು ಮುದ್ರಿಸುವುದು ಕಡ್ಡಾಯವಾಗಿದೆ.
ಹೀಗಿರಲಿದೆ ಭಾರತ್ ಬ್ರ್ಯಾಂಡ್
ಪಿಎಂಬಿಜೆಪಿ ಯೋಜನೆ ಅಡಿಯಲ್ಲಿ ಎಲ್ಲ ಸಬ್ಸಿಡಿರಹಿತ ರಸಗೊಬ್ಬರಗಳ ಪ್ಯಾಕೆಟ್ ಮೇಲೆ ‘ಭಾರತ್’ ಎಂದು ಮುದ್ರಿಸಬೇಕು. ಉದಾಹರಣೆಗೆ, ಯೂರಿಯಾ ಗೊಬ್ಬರದ ಪ್ಯಾಕೆಟ್ ಮೇಲೆ ಭಾರತ್ ಯೂರಿಯಾ ಎಂದು ಮುದ್ರಿಸಬೇಕು. ಡಿಎಪಿ ಇದ್ದರೆ ಭಾರತ್ ಡಿಎಪಿ, ಎಂಒಪಿ ಇದ್ದರೆ ಭಾರತ್ ಎಂಒಪಿ ಸೇರಿ ಎಲ್ಲ ರಸಗೊಬ್ಬರ ಕಂಪನಿಗಳ ಬ್ರ್ಯಾಂಡ್ ಹಿಂದೆ ಭಾರತ್ ಎಂಬುದಾಗಿ ಮುದ್ರಿಸುವುದು ಕಡ್ಡಾಯವಾಗಿದೆ. ಯೋಜನೆಯ ಲೋಗೊವನ್ನು ದೊಡ್ಡದಾಗಿ ಮುದ್ರಿಸಬೇಕು. ಕಂಪನಿ, ಕಂಪನಿಯ ಬ್ರ್ಯಾಂಡ್ ಸೇರಿ ವಿವಿಧ ಮಾಹಿತಿಯನ್ನು ರಸಗೊಬ್ಬರ ಬ್ಯಾಗ್‌ನ ಮೂರನೇ ಒಂದು ಭಾಗದಲ್ಲಿ, ಚಿಕ್ಕದಾಗಿ ಮುದ್ರಿಸಬೇಕು ಎಂಬ ನಿಯಮ ರೂಪಿಸಲಾಗಿದೆ.
ರೈತರಿಗೇನು ಲಾಭ?
ಭಾರತ್ ಬ್ರ್ಯಾಂಡ್ ಅಡಿಯಲ್ಲಿ ದೇಶಾದ್ಯಂತ ಏಕರೂಪತೆ ತರುವುದಷ್ಟೇ ಪಿಎಂಬಿಜೆಪಿ ಉದ್ದೇಶವಲ್ಲ. ರೈತರಿಗೆ ಅನುಕೂಲವಾಗುವ ದಿಸೆಯಲ್ಲಿಯೂ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಂಡಿದೆ. ರೈತರಿಗೆ ಕ್ಷಿಪ್ರವಾಗಿ ರಸಗೊಬ್ಬರ ತಲುಪಿಸುವ ಹಾಗೂ ಸಾಗಣೆ ವೆಚ್ಚ ಮತ್ತು ಸಮಯವನ್ನು ತಗ್ಗಿಸುವ ದಿಸೆಯಲ್ಲೂ ಕ್ರಮ ತೆಗೆದುಕೊಳ್ಳಲಾಗಿದೆ. ರಸಗೊಬ್ಬರ ಉತ್ಪಾದನೆ ಘಟಕಗಳಿಂದ ರಸಗೊಬ್ಬರ ಮಾರಾಟ ಮಳಿಗೆಗಳಿಗೆ ಇದುವರೆಗೆ ೭೦೦ರಿಂದ ೭೫೦ ಕಿ.ಮೀ ಇರುವುದನ್ನು ಇನ್ನು ಮುಂದೆ ೫೦೦ ಕಿ.ಮೀ.ಗೆ ಇಳಿಸಲು ತೀರ್ಮಾನಿಸಲಾಗಿದೆ. ಇದರಿಂದ ರೈತರಿಗೆ ಕ್ಷಿಪ್ರವಾಗಿ ರಸಗೊಬ್ಬರ ಸಿಗುವಂತೆ ಮಾಡುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಸದ್ಯ, ರಸಗೊಬ್ಬರದ ಸಾಗಣೆಗಾಗಿಯೇ ಕೇಂದ್ರ ಸರ್ಕಾರವು ೬-೯ ಸಾವಿರ ಕೋಟಿ ರೂ. ವ್ಯಯಿಸುತ್ತಿದೆ. ನೂತನ ಯೋಜನೆ ಅಡಿ ಈ ವೆಚ್ಚವನ್ನು ತಗ್ಗಿಸಲು ಕ್ರಮ ಸಾಗಣೆ ಅಂತರ ಕಡಿಮೆ ಮಾಡಲಾಗುತ್ತಿದೆ.
೬೦೦ ಕಿಸಾನ್ ಸಮೃದ್ಧಿ ಕೇಂದ್ರಗಳಿಗೆ ಚಾಲನೆ
ನವ ದೆಹಲಿಯಲ್ಲಿ ನಡೆದ ‘ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನ-೨೦೨೨’ ಕಾರ್ಯಕ್ರಮದಲ್ಲಿ ಪಿಎಂಬಿಜೆಪಿ ಜತೆಗೆ ೬೦೦ ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳಿಗೂ (PM-KSK) ಮೋದಿ ಚಾಲನೆ ನೀಡಿದ್ದಾರೆ. ರೈತರು ಸುಲಭವಾಗಿ ಕೃಷಿ ಚಟುವಟಿಕೆಗಳಿಗೆ ಬೇಕಾಗುವ ಸಲಕರಣೆ, ಬೀಜ, ರಸಗೊಬ್ಬರ ಸೇರಿ ಹಲವು ಉತ್ಪನ್ನಗಳು ಕಿಸಾನ್ ಸಮೃದ್ಧಿ ಕೇಂದ್ರಗಳಲ್ಲಿ ಲಭ್ಯವಿರಲಿವೆ. ಪಿಎಂಕೆಎಸ್‌ಕೆ ಅಡಿಯಲ್ಲಿ ದೇಶಾದ್ಯಂತ ಇರುವ ೩.೩ ಲಕ್ಷ ರಸಗೊಬ್ಬರ ಅಂಗಡಿಗಳನ್ನು ಹಂತ ಹಂತವಾಗಿ ಕಿಸಾನ್ ಸಮೃದ್ಧಿ ಕೇಂದ್ರಗಳನ್ನಾಗಿ ಮಾರ್ಪಡಿಸುವುದು ಕೂಡ ಕೇಂದ್ರ ಸರ್ಕಾರದ ಉದ್ದೇಶವಾಗಿದೆ.
ಇದನ್ನೂ ಓದಿ | PM-KISAN | ಪ್ರಧಾನಿ ಮೋದಿಯಿಂದ ಪಿಎಂ-ಕಿಸಾನ್ 12ನೇ ಕಂತು 16,000 ಕೋಟಿ ರೂ. ಬಿಡುಗಡೆ