Site icon Vistara News

Amarinder Singh | ವಿಲೀನ ಅಮರಿಂದರ್‌ ಸಿಂಗ್‌ಗೆ ಅಸ್ತ್ರ, ಬಿಜೆಪಿಗೆ ಬ್ರಹ್ಮಾಸ್ತ್ರ?

ಚಂಡೀಗಢ: ಪಂಜಾಬ್‌ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿದರೂ ರಾಜಕೀಯ ಮೇಲಾಟದಲ್ಲಿ ಕಾಂಗ್ರೆಸ್‌ನಿಂದ ಹೊರಬಂದ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ (Amarinder Singh) ಈಗ ಬಿಜೆಪಿ ಜತೆ ತಮ್ಮ ಪಂಜಾಬ್‌ ಲೋಕ ಕಾಂಗ್ರೆಸ್‌ ಪಕ್ಷವನ್ನು ವಿಲೀನಗೊಳಿಸಿದ್ದಾರೆ ಇದು ಕ್ಯಾಪ್ಟನ್‌ ಅವರ ಹಳೆಯ ರೂಢಿಯಾದರೂ, ಇದರಿಂದ ಅನುಕೂಲವಾಗುವುದು ಬಿಜೆಪಿಗೆ ಮಾತ್ರ ಎಂದೇ ವಿಶ್ಲೇಷಿಸಲಾಗುತ್ತಿದೆ.

ಕಳೆದ ವಿಧಾನಸಭೆ ಚುನಾವಣೆ ವೇಳೆ ಪಂಜಾಬ್‌ ಲೋಕ ಕಾಂಗ್ರೆಸ್‌ ಸ್ಥಾಪಿಸಿ, ಬಿಜೆಪಿ ಜತೆಗೂಡಿ ಚುನಾವಣೆ ಎದುರಿಸಿದರೂ ಕ್ಯಾಪ್ಟನ್‌ಗೆ ಭಾರಿ ಹಿನ್ನಡೆಯಾಯಿತು. ಈಗ ಪಕ್ಷವನ್ನು ಸಂಘಟಿಸಲೂ ಆಗದೆ, ಯಾವ ಭರವಸೆಯೂ ಕಾಣದೆ ಅವರು ಬಿಜೆಪಿ ಜತೆ ಪಕ್ಷವನ್ನು ವಿಲೀನಗೊಳಿಸಿದ್ದಾರೆ. ಲೋಕಸಭೆ ಚುನಾವಣೆ ದೃಷ್ಟಿಯಿಂದ ಬಿಜೆಪಿಗೆ ಲಾಭ ಎನಿಸಿದರೆ, ರಾಷ್ಟ್ರಪಕ್ಷವೊಂದರ ಬೆಂಬಲ ಪಡೆದ ತೃಪ್ತಿ ಮಾತ್ರ ಕ್ಯಾಪ್ಟನ್‌ ಅವರದ್ದಾಗಲಿದೆ ಎನ್ನಲಾಗುತ್ತಿದೆ.

ವಿಲೀನ ಇದೇ ಮೊದಲೇನಲ್ಲ

ಹೀಗೆ, ಒಂದು ಪಕ್ಷದಿಂದ ಹೊರಬಂದು, ಮತ್ತೊಂದು ಪಕ್ಷದ ಜತೆ ವಿಲೀನಗೊಳಿಸುವುದು ಇದೇ ಮೊದಲೇನಲ್ಲ. ೧೯೯೨ರಲ್ಲಿ ಅಕಾಲಿ ದಳದಿಂದ ಹೊರಬಂದ ಅಮರಿಂದರ್‌ ಸಿಂಗ್‌, ಶಿರೋಮಣಿ ಅಕಾಲಿ ದಳ (ಪ್ಯಾಂಥಿಕ್‌) ಪಕ್ಷವನ್ನು ಸ್ಥಾಪಿಸಿದರು. ಆದರೆ, ಯಾವುದೇ ಸಾಫಲ್ಯ ಕಾಣದ ಸಿಂಗ್‌, ೧೯೯೮ರಲ್ಲಿ ಕಾಂಗ್ರೆಸ್‌ ಜತೆ ಪಕ್ಷವನ್ನು ವಿಲೀನ ಮಾಡಿದರು. ಈ ನಡೆಯಿಂದ ಕ್ಯಾಪ್ಟನ್‌ ಒಂದು ರೀತಿಯಲ್ಲಿ ಯಶಸ್ವಿಯಾದರು. ಕಾಂಗ್ರೆಸ್‌ ನಾಯಕರಾಗಿ ಹೊರಹೊಮ್ಮಿ, ಮುಖ್ಯಮಂತ್ರಿಯೂ ಆದರು.

ವಿಲೀನದಿಂದ ಕ್ಯಾಪ್ಟನ್‌ಗೆ ಲಾಭವೇ?

ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳದ್ದೇ ಹೆಚ್ಚಿನ ಪ್ರಾಬಲ್ಯ ಇರುವುದರಿಂದ ಸದ್ಯ ಅಮರಿಂದರ್‌ ಸಿಂಗ್‌ ಅವರು ಬಿಜೆಪಿ ಜತೆ ವಿಲೀನ ಮಾಡಿಕೊಂಡಿರುವುದು ಅನುಕೂಲವೇ ಎನ್ನಲಾಗುತ್ತಿದೆ. ಪಂಜಾಬ್‌ನಲ್ಲಿ ಆಪ್‌ ಹೊರತಾಗಿ ಯಾವ ಪಕ್ಷವೂ ಪ್ರಬಲವಾಗಿ ಉಳಿದಿಲ್ಲ. ಬಿಜೆಪಿಯೂ ಇದೇ ಸ್ಥಾನದಲ್ಲಿದೆ. ಆದಾಗ್ಯೂ, ಪಂಜಾಬ್‌ನಲ್ಲಿ ಬಿಜೆಪಿಯ ನಾಯಕರು ಹೇಳಿಕೊಳ್ಳುವಂತೆ ಇಲ್ಲ.

ಹಾಗಾಗಿ, ಅಮರಿಂದರ್‌ ಸಿಂಗ್‌ ಅವರು ಬಿಜೆಪಿ ಸೇರಿದ್ದು ಬಿಜೆಪಿಗೂ ಪಂಜಾಬ್‌ನಲ್ಲಿ ಒಬ್ಬ ದೊಡ್ಡ ನಾಯಕ ಸಿಕ್ಕಂತಾಗುತ್ತದೆ. ಕ್ಯಾಪ್ಟನ್‌ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವುದರಿಂದ ೨೦೨೪ರಲ್ಲಿ ಚುನಾವಣೆಯಲ್ಲಿ ಗೆದ್ದು ಸಂಸದರಾಗುವ ಇರಾದೆಯೂ ಇದೆ. ಅದಕ್ಕಾಗಿ ಬಿಜೆಪಿಯ ಬೆಂಬಲ ಬೇಕಾಗಿದೆ. ಆದರೆ, ಕ್ಯಾಪ್ಟನ್‌ ಅವರ ಈ ನಿರ್ಧಾರವು ಎಷ್ಟರಮಟ್ಟಿಗೆ ಸಮಂಜಸ ಎನಿಸಲಿದೆ ಎಂಬುದನ್ನು ತಿಳಿಯಲು ಮುಂದಿನ ಚುನಾವಣೆವರೆಗೆ ಕಾಯಬೇಕಾಗಿದೆ.

ಇದನ್ನೂ ಓದಿ | Amarinder Singh | ಬಿಜೆಪಿ ಜತೆ ಪಂಜಾಬ್‌ ಲೋಕ ಕಾಂಗ್ರೆಸ್‌ ವಿಲೀನಗೊಳಿಸಿದ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌

Exit mobile version