ನವದೆಹಲಿ: ನೂತನ ಸಂಸತ್ ಭವನದಲ್ಲಿ ಸೆಪ್ಟೆಂಬರ್ 19ರಂದು ಮೊದಲ ಅಧಿವೇಶನ ನಡೆಯಲಿದೆ. ಅದ್ಧೂರಿಯಾಗಿ ನಿರ್ಮಿಸಿರುವ ಅಧಿವೇಶನಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಇದರ ಬೆನ್ನಲ್ಲೇ, ಸಂಸತ್ ಭವನದ ಸಿಬ್ಬಂದಿಗೆ ನೂತನ ಸಮವಸ್ತ್ರ (Parliament Dress Code:) ನೀಡುತ್ತಿರುವ ಕುರಿತು ಈಗ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ಸಮವಸ್ತ್ರ ವಿಷಯ ಈಗ ವಿವಾದಕ್ಕೆ ಕಾರಣವಾಗಿದೆ. ಹಾಗಾದರೆ ಏನಿದು ವಿವಾದ? ಪ್ರತಿಪಕ್ಷಗಳು ಏಕೆ ಆಕ್ರೋಶ ವ್ಯಕ್ತಪಡಿಸುತ್ತಿವೆ? ಯಾವ ಸಿಬ್ಬಂದಿಗೆ ಯಾವ ಉಡುಪು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ವಿವಾದ ಏಕೆ?
ಸಂಸತ್ ಭವನದ ಪರಿಚಾರಕರು, ಪರಿಚಾರಕಿಯರು, ಸೆಕ್ಯುರಿಟಿ ಸಿಬ್ಬಂದಿ, ವಾಹನಗಳ ಚಾಲಕರು, ಮಾರ್ಷಲ್‌ಗಳು ಸೇರಿ ಹಲವು ಸಿಬ್ಬಂದಿಗೆ ಕೇಂದ್ರ ಸರ್ಕಾರವು ಕೆಂಪು, ಕಂದು, ಖಾಕಿ ಸೇರಿ ಹಲವು ಬಣ್ಣದ, ವಿಧವಿಧದ ಸಮವಸ್ತ್ರಗಳನ್ನು ನೀಡಲು ಮುಂದಾಗಿದೆ. ಆದರೆ, ಸಿಬ್ಬಂದಿಯ ಸಮವಸ್ತ್ರದ ಮೇಲೆ ಬಿಜೆಪಿಯ ಪಕ್ಷದ ಚಿಹ್ನೆಯಾದ ‘ಕಮಲ’ ಇರುವುದು ಈಗ ವಿವಾದಕ್ಕೆ ಕಾರಣವಾಗಿದೆ.
“ಸಂಸತ್ ಸಿಬ್ಬಂದಿ ಸಮವಸ್ತ್ರದ ಮೇಲೆ ಕಮಲದ ಚಿಹ್ನೆ ಏಕೆ ಮುದ್ರಿಸಲಾಗಿದೆ? ರಾಷ್ಟ್ರೀಯ ಪ್ರಾಣಿ ಹುಲಿ ಅಥವಾ ರಾಷ್ಟ್ರೀಯ ಪಕ್ಷ ನವಿಲಿನ ಚಿಹ್ನೆ ಏಕಿಲ್ಲ” ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಸಚೇತಕ ಮಾಣಿಕಂ ಟ್ಯಾಗೋರ್ ಪ್ರಶ್ನಿಸಿದ್ದಾರೆ. ಕಾಂಗ್ರೆಸ್‌ನ ಹಲವು ನಾಯಕರು ಸ್ಪೀಕರ್ ಓಂ ಬಿರ್ಲಾ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈವಿಧ್ಯಮಯ ಸಮವಸ್ತ್ರ
ಸಂಸತ್ ಸಿಬ್ಬಂದಿಗೆ ಕೇಂದ್ರ ಸರ್ಕಾರವು ವೈವಿಧ್ಯಮಯ ಸಮವಸ್ತ್ರಗಳನ್ನು ನೀಡಲು ಮುಂದಾಗಿದೆ. ಖಾಕಿ ಪೈಜಾಮ, ಕ್ರೀಮ್ ಬಣ್ಣದ ಜಾಕೆಟ್‌ಗಳು, ಕ್ರೀಮ್ ಟಿಶರ್ಟ್‌ಗಳು (ಇವುಗಳ ಮೇಲೆ ಗುಲಾಬಿ ಬಣ್ಣದ ಕಮಲದ ಚಿತ್ರಗಳಿವೆ) ಪುರುಷರಿಗಾಗಿ ನೀಡಲಾಗುತ್ತಿದೆ. ಇನ್ನು ಮಹಿಳಾ ಸಿಬ್ಬಂದಿಯು ಬ್ರೈಟ್ ಕಲರ್ ಸೀರೆ, ಜಾಕೆಟ್‌ಗಳನ್ನು ನೀಡಲಾಗುತ್ತಿದೆ. ಹಾಗೆಯೇ, ಮಾರ್ಷಲ್‌ಗಳಿಗೆ ರುಮಾಲು ನೀಡಲಾಗುತ್ತದೆ. ಅಷ್ಟೇ ಅಲ್ಲ, ಅಧಿಕಾರಿಗಳು ಕೆನ್ನೇರಳೆ ಅಥವಾ ಗಾಢ ಗುಲಾಬಿಯ ನೆಹರು ಜಾಕೆಟ್ ಧರಿಸಲಿದ್ದಾರೆ.
ಅಧಿಕಾರಿಗಳ ಪ್ರಕಾರ ಸಿಬ್ಬಂದಿಯ ಸಮವಸ್ತ್ರಗಳಿಗೆ ಹೊಸ ವಿನ್ಯಾಸಗಳನ್ನು ಸೂಚಿಸಲು ಎಲ್ಲಾ 18 ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿಗಳ (ಎನ್‌ಐಎಫ್‌ಟಿ) ಬಳಿ ಕೇಳಲಾಯಿತು. ತಜ್ಞರ ಸಮಿತಿಯು ಆ ಪ್ರಸ್ತಾವನೆಗಳಿಂದ ಹೊಸ ಸಮವಸ್ತ್ರವನ್ನು ಅಂತಿಮಗೊಳಿಸಿತು. ಸಂಸತ್ತಿನ ಸೆಕ್ರೆಟರಿಯೇಟ್‌ನ ಎಲ್ಲಾ ಐದು ಪ್ರಮುಖ ಶಾಖೆಗಳಾದ ವರದಿಗಾರಿಕೆ, ಟೇಬಲ್ ಆಫೀಸ್, ನೋಟಿಸ್ ಆಫೀಸ್, ಶಾಸಕಾಂಗ ಶಾಖೆ ಮತ್ತು ಭದ್ರತೆಯ ಅಧಿಕಾರಿಗಳು ಈ ಅಧಿವೇಶನದಲ್ಲಿ ಮಾರ್ಷಲ್‌ಗಳಂತೆ ಹೊಸ ಸಮವಸ್ತ್ರಗಳನ್ನು ಧರಿಸುತ್ತಾರೆ. ಈ ಶಾಖೆಗಳು ಸಂಸದರು ಮತ್ತು ಇತರ ಸಂದರ್ಶಕರೊಂದಿಗೆ ವ್ಯವಹರಿಸುತ್ತವೆ. ಅವರ ಸಮವಸ್ತ್ರಗಳು ಭಾರತೀಯ ಸಂಸತ್ತಿನ ಘನತೆ ಮತ್ತು ಗ್ಲಾಮರ್ ಅನ್ನು ಹೆಚ್ಚಿಸಲಿವೆ ಎನ್ನಲಾಗಿದೆ.
ಇದನ್ನೂ ಓದಿ: Special Parliament session: ಹೊಸ ಸಂಸತ್ತಿನಲ್ಲಿ ಸಿಬ್ಬಂದಿಗೆ ಹೊಸ ʼಭಾರತೀಯʼ ಸಮವಸ್ತ್ರ; ಏನೇನು ಬದಲಾವಣೆ?
ಸೆಪ್ಟೆಂಬರ್ 18ರಿಂದ 22ರವರೆಗೆ ನಿಗದಿಯಾಗಿರುವ ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನವು ಬಹುತೇಕ ಹೊಸ ಸಂಸತ್ ಕಟ್ಟಡದಲ್ಲಿ ನಡೆಯಲಿದೆ. ಅಧಿವೇಶನದ ಮೊದಲ ದಿನ ಹಳೆ ಕಟ್ಟಡದಲ್ಲಿ ನಡೆದರೆ, ಉಳಿದ ಭಾಗ ಮೇ 28ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ನೂತನ ಕಟ್ಟಡದಲ್ಲಿ ನಡೆಯಲಿದೆ. ಕಲಾಪಕ್ಕೆ ಹೊಸ ಕಟ್ಟಡ ಪೂರ್ತಿ ಸಜ್ಜಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.