Site icon Vistara News

Arvind Kejriwal: 3ನೇ ಬಾರಿಯೂ ಇ.ಡಿ ವಿಚಾರಣೆಗೆ ಕೇಜ್ರಿವಾಲ್‌ ಗೈರು, ಮುಂದೇನಾಗುತ್ತದೆ?

Arvind Kejriwal

What Next After Arvind Kejriwal Skips 3rd Probe Agency Summons? Here Is Explained

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ (Delhi Excise Policy Case) ಜಾರಿ ನಿರ್ದೇಶನಾಲಯದ (E.D) ಅಧಿಕಾರಿಗಳು ನೀಡಿದ ಸಮನ್ಸ್‌ಅನ್ನು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರು ಕಡೆಗಣಿಸಿದ್ದಾರೆ. ಸತತ ಮೂರನೇ ಬಾರಿಗೆ ಸಮನ್ಸ್‌ ನೀಡಿದರೂ ಅವರು ಇ.ಡಿ ವಿಚಾರಣೆಗೆ ಗೈರಾಗಿದ್ದಾರೆ. ಹಾಗಾದರೆ, ಪ್ರಕರಣದಲ್ಲಿ ಮುಂದೇನಾಗಲಿದೆ? ಅರವಿಂದ್‌ ಕೇಜ್ರಿವಾಲ್‌ ಅವರನ್ನು ಬಂಧಿಸಲಾಗುತ್ತದೆಯೇ? ಇ.ಡಿ ಮುಂದಿರುವ ಕ್ರಮಗಳೇನು? ಅರವಿಂದ್‌ ಕೇಜ್ರಿವಾಲ್‌ ಅವರ ಮುಂದಿರುವ ಆಯ್ಕೆಗಳೇನು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಇ.ಡಿ ಮುಂದಿರುವ ಕ್ರಮಗಳೇನು?

ಯಾವುದೇ ವ್ಯಕ್ತಿಯು ಇ.ಡಿ ನೀಡುವ ಗರಿಷ್ಠ ಮೂರು ಸಮನ್ಸ್‌ಗಳನ್ನು ನಿರ್ಲಕ್ಷಿಸಿ, ವಿಚಾರಣೆಗೆ ಗೈರಾಗಬಹುದು. ಈಗ ಅರವಿಂದ್ ಕೇಜ್ರಿವಾಲ್‌ ಅವರು ಮೂರನೇ ಸಮನ್ಸ್‌ಅನ್ನೂ ನಿರ್ಲಕ್ಷಿಸಿದ ಕಾರಣ, ಅವರ ವಿರುದ್ಧ ಜಾಮೀನು ರಹಿತ ವಾರೆಂಟ್‌ ಹೊರಡಿಸಲು ಮನವಿ ಸಲ್ಲಿಸಬಹುದು. ಹಾಗೊಂದು ವೇಳೆ ಜಾಮೀನು ರಹಿತ ವಾರೆಂಟ್‌ ಜಾರಿಯಾದರೆ ಅರವಿಂದ್‌ ಕೇಜ್ರಿವಾಲ್‌ ಅವರು ನ್ಯಾಯಾಲಯದ ಎದುರು ಹಾಜರಾಗಬೇಕು. ಜಾಮೀನು ರಹಿತ ವಾರೆಂಟ್‌ಗೂ ದೆಹಲಿ ಮುಖ್ಯಮಂತ್ರಿ ಸಹಕರಿಸದಿದ್ದರೆ ಅವರನ್ನು ಬಂಧಿಸಲಾಗುತ್ತದೆ. ಕೋರ್ಟ್‌ ಪ್ರಕ್ರಿಯೆಗಳೂ ಮುಂದುವರಿಯುತ್ತವೆ.

ಕೇಜ್ರಿವಾಲ್ ಮುಂದಿನ ಆಯ್ಕೆಗಳೇನು?

“ನಾನು ಜಾರಿ ನಿರ್ದೇಶನಾಲಯದ ತನಿಖೆಗೆ ಸಹಕರಿಸಲು ಸಿದ್ಧನಿದ್ದೇನೆ. ಆದರೆ, ಇ.ಡಿ ನೀಡಿದ ಸಮನ್ಸ್‌ ಕಾನೂನುಬಾಹಿರ” ಎಂದು ಆರೋಪಿಸಿರುವ ಅರವಿಂದ್‌ ಕೇಜ್ರಿವಾಲ್‌ ಅವರು ಈಗಾಗಲೇ ಮೂರು ಬಾರಿ ಸಮನ್ಸ್‌ ನೀಡಿದಾಗಲೂ ಅವರು ವಿಚಾರಣೆಗೆ ಗೈರಾಗಿದ್ದಾರೆ. ಇಷ್ಟಾದರೂ ಅವರಿಂದ್‌ ಕೇಜ್ರಿವಾಲ್‌ ಅವರು ಸಮನ್ಸ್‌ ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಬಹುದು. ನ್ಯಾಯಾಲಯದಿಂದ ಸಮನ್ಸ್‌ಗೆ ತಡೆಯಾಜ್ಞೆ ತರಬಹುದು. ಇಲ್ಲವೇ, ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಬಹುದಾಗಿದೆ. ಅರವಿಂದ್‌ ಕೇಜ್ರಿವಾಲ್‌ ಎದುರು ಇವೆರಡೇ ಕಾನೂನು ಆಯ್ಕೆಗಳಿವೆ ಎಂದು ಹೇಳಲಾಗುತ್ತಿದೆ.

ದೆಹಲಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ ಹಗರಣ ನಡೆದಿದೆ ಎಂಬ ಆರೋಪದಲ್ಲಿ ಈಗಾಗಲೇ ಮಾಜಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಸೇರಿ ಹಲವರನ್ನು ಬಂಧಿಸಲಾಗಿದೆ. ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಸಮನ್ಸ್‌ ಜಾರಿಗೊಳಿಸಲಾಗಿದೆ. ನವೆಂಬರ್‌ 2 ಹಾಗೂ ನವೆಂಬರ್‌ 21ರಂದು ವಿಚಾರಣೆಗೆ ಹಾಜರಾಗುವಂತೆ ಇ.ಡಿ ನೋಟಿಸ್‌ ಜಾರಿಗೊಳಿಸಿತ್ತು. ಎರಡು ಬಾರಿಯೂ ಕೇಜ್ರಿವಾಲ್‌ ಅವರು ವಿಚಾರಣೆಗೆ ಗೈರಾದ ಕಾರಣ ಜನವರಿ 3ರಂದು ಹಾಜರಾಗುವಂತೆ ಮೂರನೇ ಸಮನ್ಸ್‌ ಜಾರಿಗೊಳಿಸಲಾಗಿತ್ತು. ಈಗ ಅವರು ಮೂರನೇ ಬಾರಿಯೂ ವಿಚಾರಣೆಗೆ ಗೈರಾಗಿದ್ದಾರೆ.

ಬಿಜೆಪಿ-ಆಪ್‌ ನಾಯಕರ ವಾಗ್ದಾಳಿ

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಇ.ಡಿ ಸಮನ್ಸ್‌ ನೀಡಿರುವ ಪ್ರಕರಣವೀಗ ಬಿಜೆಪಿ ಹಾಗೂ ಆಪ್‌ ಮಧ್ಯೆ ವಾಗ್ವಾದಕ್ಕೆ ಕಾರಣವಾಗಿದೆ. “ಅರವಿಂದ್‌ ಕೇಜ್ರಿವಾಲ್‌ ಅವರು ಮುಂಬರುವ ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗದಂತೆ ತಡೆಯುವುದು ಬಿಜೆಪಿ ಉದ್ದೇಶವಾಗಿದೆ. ಹಾಗಾಗಿಯೇ, ಚುನಾವಣೆ ಹೊತ್ತಿನಲ್ಲಿಯೇ ಸಮನ್ಸ್‌ ನೀಡಲಾಗಿದೆ” ಎಂದು ಆಮ್‌ ಆದ್ಮಿ ಪಕ್ಷ ಆರೋಪಿಸಿದೆ.

ಅತ್ತ ಬಿಜೆಪಿ ಕೂಡ ಆಮ್‌ ಆದ್ಮಿ ಪಕ್ಷದ ವಿರುದ್ಧ ಬಿಜೆಪಿ ಕೂಡ ಆಕ್ರೋಶ ವ್ಯಕ್ತಪಡಿಸಿದೆ. “ಅರವಿಂದ್‌ ಕೇಜ್ರಿವಾಲ್‌ ಅವರು ಮಾಡಿದ ತಪ್ಪನ್ನು ಮುಚ್ಚಿಕೊಳ್ಳಲು ವಿಚಾರಣೆಗೆ ಹಾಜರಾಗುತ್ತಿಲ್ಲ. ಅವರು ತಪ್ಪೇ ಮಾಡಿಲ್ಲ ಎಂದಾದರೆ ವಿಚಾರಣೆಗೆ ಹಾಜರಾಗಲು ಏಕೆ ಭಯ” ಎಂದು ಬಿಜೆಪಿ ಪ್ರಶ್ನಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version