ನವ ದೆಹಲಿ: ವಿರೂಪಗೊಳಿಸಿದ ಭಾರತದ ಭೂಪಟವನ್ನು ಪ್ರಕಟಿಸಿದ್ದಕ್ಕಾಗಿ ವಾಟ್ಸ್ ಆ್ಯಪ್ (WhatsApp error) ಕ್ಷಮೆ ಯಾಚಿಸಿದೆ.
ವಿರೂಪಗೊಳಿಸಿದ ಭೂಪಟವನ್ನು ಪ್ರಕಟಿಸಿದ್ದನ್ನು ಗಮನಿಸಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ತಕ್ಷಣ ಸರಿಪಡಿಸುವಂತೆ ವಾಟ್ಸ್ ಆ್ಯಪ್‌ಗೆ ಸೂಚಿಸಿದ್ದರು. ಭಾರತದಲ್ಲಿ ಕಾರ್ಯ ನಿರ್ವಹಿಸುವ ಯಾವುದೇ ಕಂಪನಿ ಸರಿಯಾದ ಭೂಪಟವನ್ನು ಬಳಸಬೇಕು ಎಂದು ಟ್ವೀಟ್ ಮಾಡಿದ್ದರು.
ಪ್ರಮಾದವಶಾತ್ ಇಂಥ ತಪ್ಪಾಗಿದ್ದು, ಕೂಡಲೇ ಸರಿಪಡಿಸುವುದಾಗಿ ವಾಟ್ಸ್ ಆ್ಯಪ್, ಕೇಂದ್ರ ಸಚಿವರಿಗೆ ತಿಳಿಸಿದ್ದು, ಕ್ಷಮೆ ಯಾಚಿಸಿದೆ. ಇಂಥ ತಪ್ಪುಗಳು ಭವಿಷ್ಯದಲ್ಲಿ ಮರುಕಳಿಸದಂತೆ ಎಚ್ಚರ ವಹಿಸುವುದಾಗಿಯೂ ತಿಳಿಸಿದೆ.
ಹೊಸ ವರ್ಷದ ಆಚರಣೆಗೆ ಮುನ್ನ ವಾಟ್ಸ್ ಆ್ಯಪ್ ತನ್ನ ಟ್ವಿಟರ್ ಖಾತೆಯಲ್ಲಿ ಭಾರತದ ಭೂಪಟದ ಚಿತ್ರ ಇರುವ ಪೋಸ್ಟ್ ಅನ್ನು ಟ್ವೀಟ್ ಮಾಡಿತ್ತು. ಆದರೆ ಅದರಲ್ಲಿ ಭಾರತದ ಭಾಗವಾಗಿರುವ ಪಾಕ್ ಆಕ್ರಮಿತ ಕಾಶ್ಮೀರವನ್ನು ಬೇರ್ಪಡಿಸಲಾಗಿತ್ತು. ಇದು ಕಾನೂನುಬಾಹಿರವಾಗಿದ್ದರಿಂದ ಸಚಿವರು ವಾಟ್ಸ್ ಆ್ಯಪ್‌ಗೆ ಎಚ್ಚರಿಸಿದ್ದರು.
ಇತ್ತೀಚೆಗೆ ಜೂಮ್ ಸಿಇಒ ಎರಿಕ್ ಯುವಾನ್ ಕೂಡ ಭಾರತದ ವಿರೂಪಗೊಂಡ ಭೂಪಟವನ್ನು ಹಂಚಿದ್ದರು. ಆಗಲೂ ಚಂದ್ರಶೇಖರ್ ಪತ್ತೆ ಹಚ್ಚಿ ಖಂಡಿಸಿದ್ದರು. ಬಳಿಕ ಯುವಾನ್ ಆ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದರು,