Site icon Vistara News

WhatsApp: ಭಾರತ ತೊರೆಯುವುದಾಗಿ ವಾಟ್ಸ್‌ಆ್ಯಪ್‌ ಎಚ್ಚರಿಕೆ; ಶೀಘ್ರದಲ್ಲೇ ಆ್ಯಪ್‌ ಅಲಭ್ಯ?

Whatsapp

WhatsApp tells High Court 'it will exit India if made to break encryption'

ನವದೆಹಲಿ: ಭಾರತದಲ್ಲಿ ಕೋಟ್ಯಂತರ ಜನ ವಾಟ್ಸ್‌ಆ್ಯಪ್‌ ಬಳಸುತ್ತಾರೆ. ಟೆಲಿಗ್ರಾಮ್ ಸೇರಿ ಹಲವು ಮೆಸೇಜಿಂಗ್‌ ಆ್ಯಪ್‌ಗಳು ಇದ್ದರೂ ವಾಟ್ಸ್‌ಆ್ಯಪ್‌‌ (WhatsApp) ಹೆಚ್ಚು ಜನಪ್ರಿಯವಾಗಿದೆ. ಮೆಸೇಜ್‌, ಫೋಟೊ, ವಿಡಿಯೊಗಳನ್ನು ಕಳುಹಿಸುವ ಜತೆಗೆ ವಾಟ್ಸ್‌ಆ್ಯಪ್‌ ಸ್ಟೇಟಸ್‌ ಕೂಡ ಜನರ ಮನಸೆಳೆದಿದೆ. ಆದರೆ, ಇಷ್ಟೊಂದು ಖ್ಯಾತಿ, ಜನಪ್ರಿಯತೆ ಗಳಿಸಿರುವ ವಾಟ್ಸ್‌ಆ್ಯಪ್‌, “ನಾವು ಭಾರತದಿಂದ ಹೊರಹೋಗುತ್ತೇವೆ” ಎಂದು ದೆಹಲಿ ಹೈಕೋರ್ಟ್‌ಗೆ (Delhi High Court) ತಿಳಿಸಿದೆ. ಇದು, ಕೇಂದ್ರ ಸರ್ಕಾರ ಹಾಗೂ ವಾಟ್ಸ್‌ಆ್ಯಪ್‌ ನಡುವಿನ ಬಿಕ್ಕಟ್ಟಿನಿಂದಾಗಿ ನೀಡಿದ ಎಚ್ಚರಿಕೆಯಾಗಿದೆ.

“ಮೆಟಾ ಒಡೆತನದ ವಾಟ್ಸ್‌ಆ್ಯಪ್‌ನ ಎನ್‌ಕ್ರಿಪ್ಶನ್‌ (ಎಂಡ್-ಟು-ಎಂಡ್‌ ಎನ್‌ಕ್ರಿಪ್ಶನ್‌- ಯಾವುದೇ ವ್ಯಕ್ತಿ ಇನ್ನೊಬ್ಬನಿಗೆ ಕಳುಹಿಸುವ ಮೆಸೇಜ್‌ಅನ್ನು ಬೇರೆಯವರು ನೋಡಲು ಆಗದಿರುವ ಸುರಕ್ಷತಾ ವ್ಯವಸ್ಥೆ) ವ್ಯವಸ್ಥೆಗೆ ಧಕ್ಕೆಯಾದರೆ ನಾವು ಭಾರತದಿಂದಲೇ ಹೊರಹೋಗುತ್ತೇವೆ. ಜನರು ತಾವು ಕಳುಹಿಸಿದ ಮೆಸೇಜ್‌ಅನ್ನು ಬೇರೆಯವರು ಓದುವುದಿಲ್ಲ, ಖಾಸಗಿತನಕ್ಕೆ ಧಕ್ಕೆಯಾಗುವುದಿಲ್ಲ ಎಂಬ ಕಾರಣಕ್ಕಾಗಿಯೇ ವಾಟ್ಸ್‌ಆ್ಯಪ್‌ ಬಳಸುತ್ತಾರೆ. ಹಾಗಾಗಿ, ಎನ್‌ಕ್ರಿಪ್ಶನ್‌ಗೆ ಧಕ್ಕೆಯಾದರೆ ನಾವು ಭಾರತದಲ್ಲಿ ಮುಂದುವರಿಯುವುದಿಲ್ಲ” ಎಂಬುದಾಗಿ ವಾಟ್ಸ್‌ಆ್ಯಪ್‌ ಪರ ವಕೀಲರು ದೆಹಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೇಲೆ ನಿಯಂತ್ರಣ ಸಾಧಿಸುವ, ಅದರಲ್ಲೂ ವಾಟ್ಸ್‌ಆ್ಯಪ್‌ ಚಾಟ್‌ಗಳ ಮೇಲೆ ನಿಗಾ ಇರಿಸುವ ಕುರಿತು ಕೇಂದ್ರ ಸರ್ಕಾರ 2021ರಲ್ಲಿ ಜಾರಿಗೆ ತಂದ ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳನ್ನು ಪ್ರಶ್ನಿಸಿ ವಾಟ್ಸ್‌ಆ್ಯಪ್‌ ದೆಹಲಿ ಹೈಕೋರ್ಟ್‌ ಮೊರೆ ಹೋಗಿದೆ. ಅರ್ಜಿಯ ವಿಚಾರಣೆ ವೇಳೆ ವಾಟ್ಸ್‌ಆ್ಯಪ್‌ ಪರ ವಕೀಲ ತೇಜಸ್‌ ಕಾರಿಯಾ ವಾದ ಮಂಡಿಸಿದರು.

“ಸಾಮಾಜಿಕ ಜಾಲತಾಣವಾಗಿ ನಾವು ಹೇಳುತ್ತಿದ್ದೇವೆ. ಎನ್‌ಕ್ರಿಪ್ಶನ್‌ ಬೇಡ ಎಂದು ಹೇಳಿದರೆ, ಭಾರತದಲ್ಲಿ ವಾಟ್ಸ್‌ಆ್ಯಪ್‌ ಇರುವುದಿಲ್ಲ. ನಾವು ಒಂದು ಪ್ರಕ್ರಿಯೆಯನ್ನು ಪಾಲಿಸಬೇಕಾಗುತ್ತದೆ. ಯಾವ ಸಂದೇಶವನ್ನು ಬಹಿರಂಗಪಡಿಸಬೇಕು ಎಂದು ಹೇಳುತ್ತಾರೋ ಗೊತ್ತಾಗುವುದಿಲ್ಲ. ಇದಕ್ಕಾಗಿ ನಾವು ವರ್ಷಗಳವರೆಗೆ ಕೋಟ್ಯಂತರ ಮೆಸೇಜ್‌ಗಳನ್ನು ಸ್ಟೋರ್‌ ಮಾಡಿ ಇಡಬೇಕಾಗುತ್ತದೆ” ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್‌ ಹಾಗೂ ನ್ಯಾ.ಮನ್‌ಮೀತ್‌ ಪ್ರೀತಂ ಸಿಂಗ್‌ ಅರೋರಾ ಅವರಿದ್ದ ನ್ಯಾಯಪೀಠಕ್ಕೆ ತೇಜಸ್‌ ಕಾರಿಯಾ ತಿಳಿಸಿದರು.

ಮಾಹಿತಿ ತಂತ್ರಜ್ಞಾನ ನಿಯಮಗಳನ್ನು (2021) ಕೇಂದ್ರ ಸರ್ಕಾರವು 2021ರ ಫೆಬ್ರವರಿ 25ರಂದು ಜಾರಿಗೆ ತಂದಿದೆ. ಎಕ್ಸ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಹಾಗೂ ವಾಟ್ಸ್‌ಆ್ಯಪ್‌ನಂತಹ ಸಾಮಾಜಿಕ ಜಾಲತಾಣಗಳು ಹೊಸ ನಿಯಮಗಳನ್ನು ಪಾಲಿಸಬೇಕು ಎಂದು ಆದೇಶಿಸಲಾಗಿದೆ. ಇದೇ ಕಾರಣಕ್ಕಾಗಿ, ಸಾಮಾಜಿಕ ಜಾಲತಾಣಗಳು ಪ್ರತಿ ತಿಂಗಳು, ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ಖಾತೆಗಳನ್ನು ರದ್ದುಗೊಳಿಸುತ್ತಿದೆ.

ಇದನ್ನೂ ಓದಿ: WhatsApp Update: ವಾಟ್ಸ್ ಆಪ್ ನಲ್ಲಿ ಮತ್ತೊಂದು ಹೊಸ ಫೀಚರ್! ಫೋಟೊ, ವಿಡಿಯೊ ಶೇರಿಂಗ್ ಇನ್ನೂ ಸುಲಭ

Exit mobile version