ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೀಗ ವಿಶ್ವದಲ್ಲೇ ಅಗ್ರ ಜನಪ್ರಿಯ ನಾಯಕ. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಭಾರತದಾದ್ಯಂತ ಖ್ಯಾತಿ ಗಳಿಸಿದ್ದ ಅವರು ಪ್ರಧಾನಿಯಾದ ಬಳಿಕ ವಿಶ್ವಾದ್ಯಂತ ಖ್ಯಾತಿ ಗಳಿಸಿದ್ದಾರೆ. ಜಾಗತಿಕ ಸಮೀಕ್ಷೆಗಳ ಪ್ರಕಾರ ಹಲವು ವರ್ಷಗಳಿಂದ ಮೋದಿ ಅವರೇ ಜಗತ್ತಿನ ಜನಪ್ರಿಯ ನಾಯಕರಾಗಿದ್ದಾರೆ. ಸಿಎಂ, ಪಿಎಂ ಆಗಿದ್ದಾಗ ಮಾತ್ರವಲ್ಲ, ಅವರು 22 ವರ್ಷಗಳ ಹಿಂದೆ ಮೊದಲ ಬಾರಿ ಶಾಸಕರಾಗಿದ್ದಾಗಲೂ ಅವರಿಗೆ ಅಪಾರ ಜನಬೆಂಬಲ ಇತ್ತು, ಖ್ಯಾತಿ ಇತ್ತು ಎಂಬುದು ಹಳೆಯ ವಿಡಿಯೊದಿಂದ (Viral Video) ತಿಳಿದುಬಂದಿದೆ.
ಹೌದು, ಮೋದಿ ಆರ್ಕೈವ್ ಎಂಬ ಎಕ್ಸ್ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಮೋದಿ ಅವರ 22 ವರ್ಷಗಳ ಹಿಂದಿನ ವಿಡಿಯೊವನ್ನು ಹಂಚಿಕೊಳ್ಳಲಾಗಿದ್ದು, ಇದೀಗ ವೈರಲ್ ಆಗಿದೆ. 2002ರ ಫೆಬ್ರವರಿ 24ರಂದು ನರೇಂದ್ರ ಮೋದಿ ಅವರು ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದರು. ರಾಜ್‌ಕೋಟ್-2 ಕ್ಷೇತ್ರದ ಉಪಚುನಾವಣೆಯಲ್ಲಿ ಅವರು ಗೆಲುವು ಸಾಧಿಸಿದ್ದರು. ಅವರ ಮೊದಲ ಚುನಾವಣೆ ಗೆಲುವಿಗೆ 22 ವರ್ಷ ತುಂಬಿದ ಹಿನ್ನೆಲೆಯಲ್ಲಿ ವಿಡಿಯೊವನ್ನು ಶೇರ್ ಮಾಡಲಾಗಿದೆ.
'Dekho Dekho Kaun Aaya..Gujarat Ka Sher Aaya!'
— Modi Archive (@modiarchive) February 24, 2024
On February 24 2002, exactly 22 years ago today, @narendramodi stepped into the Gujarat Legislature as an MLA for the first time.
This victory marked the dawn of a promising new era not only for Gujarat but also for India and the… pic.twitter.com/NCHqczPjLS
ರಾಜ್‌ಕೋಟ್-2 ವಿಧಾನಸಭೆ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾದಾಗ ಮೋದಿ ಅವರು ಮೊದಲ ಬಾರಿ ಸ್ಪರ್ಧಿಸಿದ್ದರು. ಅವರು 14,728 ಮತಗಳಿಂದ ಮೊದಲ ಚುನಾವಣೆಯಲ್ಲಿಯೇ ಗೆಲುವು ಸಾಧಿಸಿದ್ದರು. ಚುನಾವಣೆ ಗೆಲುವಿನ ಬಳಿಕ ಅವರು ಕ್ಷೇತ್ರದಲ್ಲಿ ರೋಡ್ ಶೋ ನಡೆಸಿದ್ದರು. ಆಗಲೂ, ಜನ ಮೋದಿ ಅವರೆಂದರೆ ಮುಗಿಬೀಳುತ್ತಿದ್ದರು. ಹಿರಿಯ ಮಹಿಳೆಯರು ಕೂಡ ಬಂದು ಅವರಿಗೆ ಹಾರ ಹಾಕಿ ಹೋಗುತ್ತಿದ್ದರು. “ಗುಜರಾತ್‌ನ ಸಿಂಹ ಬಂತು” ಎಂಬುದಾಗಿ ಘೋಷಣೆ ಮಾಡಿದ್ದರು. ಇದೆಲ್ಲ ಅಂಶಗಳು ವೈರಲ್ ಆಗಿರುವ ವಿಡಿಯೊದಲ್ಲಿವೆ.
ಇದನ್ನೂ ಓದಿ: PM Narendra Modi: ಮೋದಿ ಚಿಂತೆ ಮಾಡುವವರಲ್ಲ, ಚಿಂತನೆ ಮಾಡುವ ಪ್ರಧಾನಿ: ಪ್ರಲ್ಹಾದ್ ಜೋಶಿ
ಮೊದಲ ಭಾಷಣದಲ್ಲಿ ಹೇಳಿದ್ದೇನು?
ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದ ನಂತರ ಆಯೋಜಿಸಿದ್ದ ಬೃಹತ್ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದರು. “ಕೊನೆಗೂ ರಾಜ್‌ಕೋಟ್ ಜನ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ರಾಜ್‌ಕೋಟ್ ಜನ ನನಗೆ ಹಲವು ಅಗ್ನಿಪರೀಕ್ಷೆ ಒಡ್ಡಿದ್ದರು. ಇದೆಲ್ಲವನ್ನೂ ಮೀರಿ ಈಗ ನನ್ನನ್ನು ಗೆಲ್ಲಿಸಿದ್ದಾರೆ. ಚುನಾವಣೆಯಲ್ಲಿ ಪ್ರತಿಸ್ಪರ್ಧಿಯು ಜಾತಿ, ಹಣಬಲದ ಮೂಲಕ ಪ್ರಚಾರ ನಡೆಸಿದರು. ಆದರೂ ಜನ ನನ್ನನ್ನು ಗೆಲ್ಲಿಸಿದ್ದಾರೆ” ಎಂದು ಹೇಳಿದ್ದರು. ಇದಕ್ಕೂ ನಾಲ್ಕು ತಿಂಗಳ ಮೊದಲು ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ್ದರು. ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದ ಮೋದಿ ಮುಂದೆ ಇತಿಹಾಸ ಸೃಷ್ಟಿಸಿದರು. ಸಿಎಂ ಆಗಿ, ಪ್ರಧಾನಿಯಾಗಿ ಅವರು ಜಗತ್ತಿನಾದ್ಯಂತ ಖ್ಯಾತಿ ಗಳಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ