ನವದೆಹಲಿ: ಕರ್ನಾಟಕದ (Karnataka) ಶಾಲೆಗಳ ಪಠ್ಯ ಪುಸ್ತಕಗಳಲ್ಲಿ (Syllabus) ಆರೆಸ್ಸೆಸ್ ನಾಯಕ ಹೆಡ್ಗೆವಾರ್ (Hedgewar) ಮತ್ತು ಹಿಂದೂ ಮಹಾಸಭಾ ನಾಯಕ ಸಾವರ್ಕರ್ (Savarkar) ಪಠ್ಯವನ್ನು ಕಾಂಗ್ರೆಸ್ ಸರ್ಕಾರ (Congress Government) ಕೈಬಿಟ್ಟಿದೆ. ಈ ವಿಷಯವೇ ಪಕ್ಕದ ಮಹಾರಾಷ್ಟ್ರದಲ್ಲಿ (Maharashtra) ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್, ಎನ್‌ಸಿಪಿ ಮತ್ತು ಶಿವಸೇನೆ ಉದ್ದವ್ ಬಣ ಮೈತ್ರಿ ಮಾಡಿಕೊಂಡಿವೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಡಿಸಿಎಂ ಹಾಗೂ ಬಿಜೆಪಿಯ ನಾಯಕ ದೇವೇಂದ್ರ ಫಡ್ನವಿಸ್ (Devendra Fadnavis) ಅವರು, ಉದ್ದವ್ ಠಾಕ್ರೆ (Uddhav Thackeray) ಅವರನ್ನು ಕೆಣಕಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಸಾವರ್ಕರ್ ಪಠ್ಯವನ್ನು ಕೈ ಬಿಟ್ಟಿದೆ. ಈಗ ಎಲ್ಲಿ ಹೋಗಿದೆ ನಿಮ್ಮ ಸಿದ್ಧಾಂತ ಎಂದು ವ್ಯಂಗ್ಯ ಮಾಡಿದ್ದಾರೆ. ಕೇವಲ ಅಧಿಕಾರಕ್ಕಾಗಿ ಉದ್ಧವ್ ಠಾಕ್ರೆ ಅವರು ತಮ್ಮ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಂಡಿದ್ದಾರೆಂದು ಆರೋಪಿಸಿದ್ದಾರೆ.
ನೀವು ಪುಸ್ತಕದಿಂದ ಹೆಸರನ್ನು ಅಳಿಸಬಹುದು, ಆದರೆ ಅದನ್ನು ಹೃದಯದಿಂದ ಅಳಿಸಲು ಸಾಧ್ಯವಿಲ್ಲ ಎಂದು ನಾನು ಹೇಳಲು ಬಯಸುತ್ತೇನೆ. ನೀವು ದೇಶದ ಸ್ವಾತಂತ್ರ್ಯಕ್ಕೆ ಕೊಡುಗೆ ನೀಡಿದವರ ಹೆಸರನ್ನು ಅಳಿಸಲು ಸಾಧ್ಯವಿಲ್ಲ. ಆದರೆ ನಾನು ಉದ್ಧವ್ ಠಾಕ್ರೆ ಅವರನ್ನು ಕೇಳುತ್ತೇನೆ. ಮಹಾವಿಕಾಸ ಅಘಾಡಿಯಲ್ಲಿ ಕಾಂಗ್ರೆಸ್‌ಗೆ ಹೆಗಲಿಗೆ ಹೆಗಲು ಕೊಟ್ಟು ಕೂತಿರುವವರೇ, ಈಗ ನಿಮ್ಮ ಪ್ರತಿಕ್ರಿಯೆ ಏನು? ಅಧಿಕಾರಕ್ಕಾಗಿ ಮಾತ್ರ ಅಲ್ಪಸಂಖ್ಯಾತ ಸಮುದಾಯಗಳ ಓಲೈಕೆ ಮಾಡುವುದನ್ನು ನೀವು ಒಪ್ಪಿಕೊಳ್ಳುತ್ತೀರಾ, ವೀರ ಸಾವರ್ಕರ್ ಅವರ ಈ ಅವಮಾನವನ್ನು ಒಪ್ಪಿಕೊಳ್ಳುತ್ತೀರಾ? ಅಥವಾ ಕುರ್ಚಿಗಾಗಿ ಸುಮ್ಮನೆ ಇದ್ದು ಬಿಡುತ್ತಿರಾ ಎಂದು ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಪ್ರಶ್ನಿಸಿದ್ದಾರೆ.
ನಾನು ಉದ್ಧವ್ ಠಾಕ್ರೆ ಅವರಿಗೆ ಕೇಳಲು ಬಯಸುತ್ತೇನೆ. ಈಗ ನಿಮ್ಮ ಪ್ರತಿಕ್ರಿಯೆ ಏನು, ನಿಖರವಾಗಿ ಹೇಳಿ. ನೀವು ಯಾರ ಮಡಿಲಲ್ಲಿ ಕುಳಿತಿದ್ದೀರೋ ಅವರು ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಹೆಸರನ್ನು ಅಳಿಸಲು ಹೊರಟರೆ, ಮತಾಂತರವನ್ನು ಸಂಪೂರ್ಣವಾಗಿ ಬೆಂಬಲಿಸಲು ಹೊರಟಿದ್ದರೆ.. ನೀವು ಏನು ಹೇಳಬೇಕಾಗಿತ್ತು? ಈಗ ಇದರ ಬಗ್ಗೆ ನಿಮ್ಮ ನಿಖರವಾದ ಅಭಿಪ್ರಾಯವಿದೆಯೇ? ಅಧಿಕಾರಕ್ಕಾಗಿ ಈ ರಾಜಿ ಮಾಡಿಕೊಳ್ಳಲಾಗಿದೆಯೇ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಅವರು ಕೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: ವಿಸ್ತಾರ ಅಂಕಣ: ಪಠ್ಯ ಪುಸ್ತಕ ಪರಿಷ್ಕರಣೆ ಎಂದರೆ ಮಕ್ಕಳ ಆಟ ಎಂದುಕೊಂಡಿದೆಯೇ ಸರ್ಕಾರ?
ಚುನಾವಣೆ ಪ್ರಣಾಳಿಕೆಯಲ್ಲಿ ವಾಗ್ದಾನ ನೀಡಿದಂತೆ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಏರುತ್ತಿದ್ದಂತೆ ಪಠ್ಯ ಪರಿಷ್ಕರಣೆ ಮಾಡಿದೆ. ಈ ಹಿಂದಿನ ಬಿಜೆಪಿ ಸರ್ಕಾರವು ನೆಹರು ಸೇರಿದಂತೆ ಹಲವರ ಪಠ್ಯವನ್ನು ಕೈ ಬಿಟ್ಟು ಹೆಡ್ಗೆವಾರ್, ಸಾವರ್ಕರ್ ಸೇರಿ ಇನ್ನಿತರ ಪಠ್ಯಗಳನ್ನು ಸೇರ್ಪಡೆ ಮಾಡಿತ್ತು. ಈಗ ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಹೆಡ್ಗೆವಾರ್, ಸಾವರ್ಕರ್ ಅವರಿಗೆ ಸೇರಿದ ಪಠ್ಯ ಕಿತ್ತು ಹಾಕಿ, ನೆಹರು, ಅಂಬೇಡ್ಕರ್ ಅವರ ಪಠ್ಯವನ್ನು ಸೇರ್ಪಡೆ ಮಾಡಿದೆ. ಈ ಪಠ್ಯ ಪರಿಷ್ಕರಣೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ.
ದೇಶದ ಇನ್ನಷ್ಟು ಕುತೂಹಲಕಾರಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.