Site icon Vistara News

ಕಾಂಗ್ರೆಸ್‌ ಕೈ ಬಿಟ್ಟ ಹಾರ್ದಿಕ್ ಪಟೇಲ್‌ ಗೆ ಬಿಜೆಪಿ, ಆಪ್‌ ಗಾಳ

ಹಾರ್ದಿಕ್‌ ಪಟೇಲ್‌

ಅಹಮದಾಬಾದ್:2015ರ ಆಗಸ್ಟ್ ನಲ್ಲಿ ಅಪರಿಚಿತನಾಗಿದ್ದ 22 ವರ್ಷದ ಪಟೇಲ್ ಸಮುದಾಯದ ಯುವಕನೊಬ್ಬ ಅಹಮದಾಬಾದ್‌ನ ಜನನಿಬಿಢ ಗಾಂಧಿನಗರದ ಜಿಎಂಡಿಸಿ ಮೈದಾನದ ವೇದಿಕೆಯಿಂದ ತನ್ನ ಸಮುದಾಯಕ್ಕೆ ಓಬಿಸಿ ಮೀಸಲಾತಿ ನೀಡಬೇಕೆಂದು ಗಟ್ಟಿದನಿಯಿಂದ ಬೇಡಿಕೆಯಿಟ್ಟಾಗ ಗುಜರಾತ್‌ನ ರಾಜಕೀಯ ರಂಗದಲ್ಲಿ ಗಮನ ಸೆಳೆದರು. ಆತನೇ ಈ ಹಾರ್ದಿಕ್ ಪಟೇಲ್.

75 ಕೋಟಿಗೂ ಹೆಚ್ಚು ಪ್ರಬಲವಾದ ಪಾಟೀದಾರ್ ಸಮುದಾಯವು ಲೆಯುವಾ, ಕಡ್ವಾ ಮತ್ತು ಇತರರು ಸೇರಿದಂತೆ ಕೋಟಾಕ್ಕಾಗಿ ಆಂದೋಲನ ಆರಂಭಿಸುವವರೆಗೂ, ಸಾಂಪ್ರದಾಯಿಕವಾಗಿ ಆಡಳಿತಾರೂಢ ಬಿಜೆಪಿಯ ಪ್ರಬಲ ಬೆಂಬಲಿಗರಾಗಿದ್ದರು. ಮೀಸಲಾತಿಗಾಗಿ ಹಾರ್ದಿಕ್‌ ಪಟೇಲ್‌ ನೇತೃತ್ವ ವಹಿಸಿದ ಈ ಆಂದೋಲನವು 2015ರ ಡಿಸೆಂಬರ್ ನಲ್ಲಿ ನಡೆದ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಗೆ ಆಘಾತಕಾರಿ ಹಿನ್ನಡೆ ಉಂಟುಮಾಡಿತು.‌

ಇದನ್ನೂ ಓದಿ |ಕಾಂಗ್ರೆಸ್‌ಗೆ ಹಾರ್ದಿಕ್‌ ಪಟೇಲ್‌ ಗುಡ್‌ಬೈ, ಮುಂದಿನ ನಿಲ್ದಾಣ ಬಿಜೆಪಿ?

ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲು ಗುಜರಾತ್ ತನ್ನ ಎಲ್ಲಾ 26 ಲೋಕಸಭಾ ಸ್ಥಾನಗಳಿಂದಲೂ ಬಿಜೆಪಿ ಅಭ್ಯರ್ಥಿಗಳನ್ನೇ ಗೆಲ್ಲಿಸಿ ಕಳುಹಿಸಿದ ಕೇವಲ ಒಂದು ವರ್ಷದ ನಂತರ, ಅದೇ ಸಮುದಾಯದಿಂದ ಬಂದಿದ್ದ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರು 2016ರಲ್ಲಿ ಅಧಿಕಾರದಿಂದ ಕೆಳಗಿಳಿಯಲು ಪಾಟೀದಾರ್‌ಗಳ ಸಿಟ್ಟೇ ಪ್ರಮುಖ ಕಾರಣವಾಗಿತ್ತು.

ಕಳೆದ ಮೂರು ದಶಕಗಳಲ್ಲಿ ಗುಜರಾತ್‌ನಲ್ಲಿ ರಾಜಕೀಯ ಆಡಳಿತಗಾರರನ್ನು ಗೆಲ್ಲಿಸಲು ಮತ್ತು ಸೋಲಿಸಲು ಹಣಬಲ, ಬಾಹುಬಲ, ಸಂಘಟನಾ ಬಲ- ಹೀಗೆ ಎಲ್ಲ ಬಲವನ್ನೂ ಬಳಸಿದ ಸಮುದಾಯ, ಬಿಜೆಪಿಯ ಪ್ರಾಬಲ್ಯಕ್ಕೆ ಧಾರೆಯೆರೆಯಿತು. ಹೀಗೆ ತನ್ನ ಸಾಮಾಜಿಕ ಮತ್ತು ಆರ್ಥಿಕ ಬಲವನ್ನು ಬಳಸಿ ಪಕ್ಷದ ಬೆಳವಣಿಗೆಗೆ ಕಾರಣರಾದ ಪಟೇಲ್ ಸಮುದಾಯಕ್ಕೆ ಬಿಜೆಪಿ ವಿಶೇಷವಾಗಿ ಋಣಿಯಾಗಿದೆ.

2017 ರಲ್ಲಿ ಗುಜರಾತ್‌ನ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಪಕ್ಷ ವಿರೋಧಿ ಭಾವನೆಯು ಮೂರು ದಶಕಗಳಲ್ಲಿ ಅಧಿಕವೆಂಬಂತೆ ತೋರಿಬಂದಾಗ ಬಿಜೆಪಿಯು ಪಾಟೀದಾರರ ಕೋಪದ ಬಿಸಿಯನ್ನೂ ಅನುಭವಿಸಿತು. ಅಚ್ಚರಿಯೆಂಬಂತೆ ಕಾಂಗ್ರೆಸ್ 77 ಸ್ಥಾನಗಳನ್ನು ಗೆದ್ದುಕೊಂಡಿತು, ಮಾಧವ ಸಿಂಹ ಸೋಲಂಕಿ ನೇತೃತ್ವದಲ್ಲಿ 1985 ರಲ್ಲಿ 149 ಸ್ಥಾನ ಗೆದ್ದು ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್‌ ಮೂರು ದಶಕಗಳ ಬಳಿಕ ಮತ್ತೊಮ್ಮೆ ಉತ್ತಮ ಪ್ರದರ್ಶನ ತೋರಲು ಈ ಎಲ್ಲ ಅಂಶಗಳು ಕಾರಣವಾದವು. ಬಿಜೆಪಿ 100ರ ಗಡಿ ದಾಟಲಾಗದೆ ಕೇವಲ 99 ಸ್ಥಾನಗಳಿಗೆ ಕುಗ್ಗಿತು.‌

ಇದನ್ನೂ ಓದಿ| Road Rage Case: ಕಾಂಗ್ರೆಸ್‌ ನಾಯಕ ನವಜೋತ್‌ ಸಿಂಗ್‌ಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ

ಐದು ವರ್ಷಗಳು ಸರಿದು ಹೋದ ಬಳಿಕ ಇದೀಗ, ಮತ್ತೊಂದು ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ, ಹಾರ್ದಿಕ್ ಪಟೇಲ್ ತಮ್ಮ ರಾಜಕೀಯ ಜೀವನದಲ್ಲಿ ಮತ್ತೊಂದು ಮಹತ್ವದ ತಿರುವಿನಲ್ಲಿ ನಿಂತಿದ್ದಾರೆ.

ಹಾರ್ದಿಕ್ 2019 ರಲ್ಲಿ ಕಾಂಗ್ರೆಸ್ ಸೇರಿದರು. 15 ತಿಂಗಳೊಳಗೆ, 26 ನೇ ವಯಸ್ಸಿನಲ್ಲಿ, ಅವರು ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಯ (ಜಿಪಿಸಿಸಿ) ಕಾರ್ಯಾಧ್ಯಕ್ಷರಾಗಿ ನೇಮಕಗೊಂಡರು ಮತ್ತು 135-ವರ್ಷ-ಹಳೆಯ ಪಕ್ಷದ ರಾಜ್ಯ ಘಟಕಕ್ಕೆ ಹೊಸ ಉಸಿರು ನೀಡುವ ನಿರೀಕ್ಷೆ ಮೂಡಿಸಿದ್ದರು.

ಆದರೆ ಈಗ, ಆ ಮೂರು ವರ್ಷಗಳ ನಂತರ, ಫೈರ್‌ಬ್ರಾಂಡ್ ನಾಯಕ ಶತಮಾನ ಹಳೆಯ ಪಕ್ಷವನ್ನು ತ್ಯಜಿಸಿದ್ದಾರೆ. ಅವರು ಬುಧವಾರ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದು, ಬಿಜೆಪಿ ಸೇರಿ ಡಿಸೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಕಮಲದ ಚಿಹ್ನೆಯಲ್ಲೇ ಸ್ಪರ್ಧಿಸುವ ಸಾಧ್ಯತೆ ಇದೀಗ ದಟ್ಟವಾಗಿದೆ.

ವಾಸ್ತವವಾಗಿ, “ಹಾರ್ದಿಕ್ ಪಟೇಲ್ ಮುಂದಿನ ವಾರದಲ್ಲಿ ಕೆಲವು ರಾಷ್ಟ್ರೀಯ ಮಟ್ಟದ ನಾಯಕರ ಸಮ್ಮುಖದಲ್ಲಿ ಬಿಜೆಪಿಗೆ ಸೇರುವ ಸಾಧ್ಯತೆಯಿದೆ” ಎಂದು ರಾಜ್ಯದ ಉನ್ನತ ನಾಯಕರು ಬುಧವಾರ ತಿಳಿಸಿದ್ದಾರೆ.

ಈ ಮಧ್ಯೆ, ಹಾರ್ದಿಕ್ ಪಟೇಲ್ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಸೇರಬಹುದು ಎಂಬ ಊಹಾಪೋಹಗಳು ಕೂಡ ಹರಡಿವೆ. ಜನಪ್ರಿಯ ಪಾಟೀದಾರ್ ನಾಯಕ ನರೇಶ್ ಪಟೇಲ್ ಅವರನ್ನು ಸೆಳೆದುಕೊಳ್ಳಲು ಎಎಪಿ ಗಾಳ ಹಾಕುತ್ತಿದೆ. ಅವರೊಂದಿಗೆ ತಾನು ಇರುತ್ತೇನೆ ಎಂದು ಹಾರ್ದಿಕ್ ಪಟೇಲ್ ಹೇಳಿಕೆಯ ಹಿನ್ನೆಲೆಯಲ್ಲಿ ಈ ವದಂತಿಗಳು ಹರಡುತ್ತಿವೆ.

ಕಳೆದೆರಡು ತಿಂಗಳಿಂದ ಹಾರ್ದಿಕ್ ಕಾಂಗ್ರೆಸ್ ನಾಯಕತ್ವ ಮತ್ತು ಅದರ ಕಾರ್ಯವೈಖರಿಯ ವಿರುದ್ಧ ಬಹಿರಂಗವಾಗಿಯೇ ಮಾತನಾಡಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಹೋರಾದ ಕೆಚ್ಚೇ ಇಲ್ಲ; ತನಗೂ ಸರಿಯಾಗಿ ಕಾರ್ಯನಿರ್ವಹಿಸಲು “ಅನುಮತಿ ನೀಡಲಿಲ್ಲ” ಎಂದು ಟೀಕಿಸಿದ್ದರು.

ತಲೆಮಾರಿನ ಅಂತರ ಮತ್ತು ಕಾಂಗ್ರೆಸ್‌ನ ಕಾರ್ಯವೈಖರಿಯು ಹಾರ್ದಿಕ್ ಪಟೇಲ್‌ಗೆ ಆ ಪಕ್ಷದೊಂದಿಗಿನ ಸಂಬಂಧ ಮುರಿಯಲು ಕಾರಣವಾಗಿರಬಹುದು. ತಾನು ಸೇರುವ ಹೊಸ ರಾಜಕೀಯ ಪಕ್ಷಕ್ಕೆ ಅವರು ಎಷ್ಟು ಚೆನ್ನಾಗಿ ಹೊಂದಿಕೊಳ್ಳುತ್ತಾರೆ ಎಂಬುದು ಕಾಲವೇ ಉತ್ತರಿಸಬೇಕಷ್ಟೆ. ಅವರಿಗಿನ್ನೂ 28 ವರ್ಷ ವಯಸ್ಸು. ಹಾಗಾಗಿ ಸಾಕಷ್ಟು ಸಮಯವಿದೆ.

Exit mobile version