ಒಡಿಶಾದ ಸಂತಾಲ್ ಬುಡಕಟ್ಟು ಸಮುದಾಯದಿಂದ ಬಂದವರು ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು. ಇವರಿಗೆ ವಿಶಿಷ್ಟ ಸಾಂಸ್ಕೃತಿಕ ಹಿನ್ನೆಲೆಯಿದೆ.
ಸಂತಾಲ್ ಎಂದರೆ ಅಕ್ಷರಶಃ ಶಾಂತ, ಶಾಂತಿಯುತ ಎಂದರ್ಥ. ಸಂತ ಎಂದರೆ ಶಾಂತ ಮತ್ತು ಅಲಾ ಎಂದರೆ ಮನುಷ್ಯ. ಸಂತಾಲ್ ಬುಡಕಟ್ಟಿನ ಮಂದಿ ಬಳಸುವ ಭಾಷೆ ಸಂತಾಲಿ. ಸಂತಾಲರು ಭಾರತದಲ್ಲಿ ಭಾರತದಲ್ಲಿ ಮೂರನೇ ಅತಿ ದೊಡ್ಡ ಪರಿಶಿಷ್ಟ ಬುಡಕಟ್ಟು ಸಮುದಾಯ. ಮೊದಲಿನ ಎರಡು ಸಮುದಾಯಗಳು ಕ್ರಮವಾಗಿ ಗೊಂಡರು ಹಾಗೂ ಭಿಲ್ಲರು. ಸಂತಾಲರ ಸಮುದಾಯ ಹೆಚ್ಚಾಗಿ ಒಡಿಶಾ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಹಂಚಿಹೋಗಿವೆ.
ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ತವರು ಜಿಲ್ಲೆ ಮಯೂರ್‌ಭಂಜ್, ಸಂತಾಲರು ಹೆಚ್ಚು ದಟ್ಟವಾಗಿರುವ ಜಿಲ್ಲೆಗಳಲ್ಲಿ ಒಂದು. ಸಂತಾಲರು ಮೂಲತಃ ಅಲೆಮಾರಿ ಜನಾಂಗ. ಮುಂದೆ ಛೋಟಾನಾಗ್ಪುರ ಪ್ರಸ್ತಭೂಮಿಯಲ್ಲಿ ನೆಲೆನಿಂತರು. 18ನೇ ಶತಮಾನದ ಬಳಿಕ ಬಿಹಾರ, ಒಡಿಶಾ, ಪ.ಬಂಗಾಳಗಳಿಗೆ ಹಬ್ಬಿದರು.
ಈಶಾನ್ಯ ಭಾರತದ ಬುಡಕಟ್ಟು ಸಮುದಾಯಗಳಲ್ಲಿ ಸಾಕ್ಷರತೆಯ ಪ್ರಮಾಣ ತುಂಬಾ ಕಡಿಮೆ. ಆದರೆ ಸಂತಾಲರು ಹೆಚ್ಚಿನ ಸಾಕ್ಷರತೆ ಹೊಂದಿದ್ದಾರೆ. 1960ರಿಂದ ನಡೆಯುತ್ತಿರುವ ಶಿಕ್ಷಣ ಜಾಗೃತಿಯ ಕಾರಣದಿಂದ ಸಮುದಾಯದ ಅನೇಕರು ಶಿಕ್ಷಣ ಪಡೆದು ಭಾರತೀಯ ಸಮಾಜದ ಕೆನೆಪದರ ಪ್ರವೇಶಿಸಿದ್ದಾರೆ. ಉದಾಹರಣೆಗೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಸಂತಾಲರು. ಪ್ರಸ್ತುತ ಮಹಾಲೇಖಪಾಲ (ಕಂಟ್ರೋಲರ್ ಮತ್ತು ಆಡಿಟರ್ ಜನರಲ್) ಆಗಿರುವ ಗಿರ್ಶ್ ಚಂದ್ರ ಮುರ್ಮು ಅವರು ಸಂತಾಲ್. ಪ್ರಸ್ತುತ ಕೇಂದ್ರ ಜಲಶಕ್ತಿ ಸಚಿವ ಬಿಸೇಶ್ವರ ತುಡು ಅವರು ಕೂಡ ಇದೇ ಸಮುದಾಯ ಹಾಗೂ ಮಯೂರ್‌ಭಂಜ್ ಜಿಲ್ಲೆಯವರು. ಈ ಹಿನ್ನೆಲೆಯಲ್ಲಿ ಕೆಲವು ಸುದ್ದಿ ವರದಿಗಳು ಪ್ರಸ್ತುತ ಕಾಲವನ್ನು “ಸಂತಾಲ್ ಸಮುದಾಯದ ಸುವರ್ಣ ಯುಗʼ ಎಂದು ಕರೆದಿವೆ.
ಅವರ ಸಾಮಾಜಿಕ ಉನ್ನತಿಯ ಹೊರತಾಗಿಯೂ, ಸಂತಾಲರು ಸಾಮಾನ್ಯವಾಗಿ ತಮ್ಮ ಸಾಂಸ್ಕೃತಿಕ ಬೇರುಗಳೊಂದಿಗೆ ನಂಟು ಹೊಂದಿದ್ದಾರೆ. ಇವರು ಪ್ರಕೃತಿ ಆರಾಧಕರು. ಜಹೆರ್ ಎಂದು ಕರೆಯಲಾಗುವ ಪವಿತ್ರ ತೋಪುಗಳಲ್ಲಿ ನಮನ ಸಲ್ಲಿಸುವುದನ್ನು ಕಾಣಬಹುದು. ಅವರ ಸಾಂಪ್ರದಾಯಿಕ ಉಡುಗೆಯೆಂದರೆ ಪುರುಷರಿಗೆ ಧೋತಿ ಮತ್ತು ಗಮುಚ್ಚ. ಮಹಿಳೆಯರಿಗೆ ಸಾಮಾನ್ಯವಾಗಿ ನೀಲಿ ಮತ್ತು ಹಸಿರು ಸೀರೆ. ಇವರು ಸಾಮಾನ್ಯವಾಗಿ ಹಚ್ಚೆಗಳನ್ನು ಹಾಕುತ್ತಾರೆ. ಓಡಿಹೋಗುವುದೂ ಸೇರಿದಂತೆ ಮದುವೆಯ ಹಲವು ಸ್ವರೂಪಗಳು ಇವರಲ್ಲಿ ಸ್ವೀಕೃತವಾಗಿವೆ. ವಿಧವೆಯ ಮರುಮದುವೆ, ಬಲವಂತದ ಮದುವೆ, ಗರ್ಭ ಉಂಟುಮಾಡಿದ ಹೆಣ್ಣಿನೊಂದಿಗೆ ಗಂಡಿಗೆ ಮದುವೆ, ಗತಿಸಿದ ಸಹೋದರ ಮಡದಿಯ ಜತೆ ಮದುವೆ ಇವೆಲ್ಲವೂ ಸ್ವೀಕೃತ.
ಸಂತಾಲ್ ಸಮಾಜದಲ್ಲಿ ವಿಚ್ಛೇದನ ನಿಷೇಧವಲ್ಲ. ದಂಪತಿಯಲ್ಲಿ ಯಾರು ಬೇಕಾದರೂ ವಿಚ್ಛೇದನ ಕೇಳಬಹುದು. ಹೆಂಡತಿ ಮಾಟಗಾತಿಯಾಗಿದ್ದರೆ, ಪದೇ ಪದೆ ತವರುಮನೆಗೆ ಹೋಗುತ್ತಿದ್ದರೆ, ಮಾತು ಕೇಳದಿದ್ದರೆ ಗಂಡ ವಿಚ್ಛೇದನ ಕೇಳಬಹುದು. ಹೆಂಡತಿ ತನ್ನನ್ನು ಗಂಡ ಸಾಕುವುದಿಲ್ಲ ಎನಿಸಿದರೆ, ಬೇರೊಬ್ಬನನ್ನು ಮದುವೆಯಾಗಬೇಕು ಎನಿಸಿದರೆ ವಿಚ್ಛೇದನ ಕೇಳಬಹುದು. ಅಂಥ ಸಂದರ್ಭದಲ್ಲಿ ಆಕೆಯನ್ನು ಮದುವೆಯಾಗುವ ಪುರುಷ ಹಳೆಯ ಗಂಡನಿಗೆ ಪರಿಹಾರ ಕೊಡಬೇಕಾಗುತ್ತದೆ.
ಇದನ್ನೂ ಓದಿ: ಯಾರಿವರು ದ್ರೌಪದಿ ಮುರ್ಮು? ಗೆದ್ದರೆ ದೇಶದ ಮೊದಲ ಬುಡಕಟ್ಟು ಮಹಿಳಾ ರಾಷ್ಟ್ರಪತಿ
ಸಂತಾಲರಲ್ಲಿ ಕೆಲವು ವಿಶಿಷ್ಟ ನಿಯಮಗಳಿವೆ. ಹೆಂಡತಿ ಗರ್ಭಿಣಿಯಾಗಿದ್ದಾಗ ಗಂಡ ಯಾವುದೇ ಪ್ರಾಣಿಯನ್ನು ಕೊಲ್ಲುವುದಿಲ್ಲ ಹಾಗೂ ಯಾರದೇ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ. ಗರ್ಭಿಣಿ ಜೊತೆಗೆ ಯಾರೂ ಇಲ್ಲದೆ ಕಾಡಿಗೆ ಹೋಗುವಂತಿಲ್ಲ, ಯಾರದೇ ಸಾವಿಗೆ ಶೋಕಿಸುವಂತಿಲ್ಲ, ಅಳುವಂತಿಲ್ಲ.
ಸಂತಾಲರು ತಮ್ಮ ಜಾನಪದ ಹಾಡು ಮತ್ತು ನೃತ್ಯವನ್ನು ಇಷ್ಟಪಡುತ್ತಾರೆ. ಎಲ್ಲಾ ಸಮುದಾಯ ಕಾರ್ಯಕ್ರಮಗಳಲ್ಲಿ ಈ ಆಚರಣೆಗಳಿರುತ್ತವೆ. ಕಾಮಕ್, ಧೋಲ್, ಸಾರಂಗಿ ಮತ್ತು ಕೊಳಲುಗಳಂತಹ ಸಂಗೀತ ವಾದ್ಯಗಳನ್ನು ನುಡಿಸುತ್ತಾರೆ. ಈಗ ಹೆಚ್ಚಿನ ಸಂತಾಲ್‌ಗಳು ಕೃಷಿಕರು. ಅವರ ಬದುಕಿನ ಆಧಾರ ಕೃಷಿಭೂಮಿ ಅಥವಾ ಕಾಡು. ಓಲಾಹ್ ಎಂಬುದು ಅವರ ಮನೆಗಳ ಮಾದರಿ. ಮನೆಯ ಹೊರಗಿನ ಗೋಡೆಗಳ ಮೇಲೆ ನಿರ್ದಿಷ್ಟವಾಗಿ ಮೂರು ಬಣ್ಣಗಳಿರುತ್ತವೆ. ಕೆಳಗಿನ ಭಾಗ ಕಪ್ಪು ಮಣ್ಣಿನಿಂದ, ಮಧ್ಯದಲ್ಲಿ ಬಿಳಿ ಮತ್ತು ಮೇಲ್ಭಾಗ ಕೆಂಪು ಬಣ್ಣದಿಂದ ಕೂಡಿರುತ್ತದೆ.
ಇವರ ಧಾರ್ಮಿಕ ಜೀವನ ಚಕ್ರದಲ್ಲಿ ದಾಮೋದರ ನದಿಗೆ ವಿಶೇಷ ಸ್ಥಾನ. ಸಂತಾಲ್ ಸತ್ತಾಗ, ಅವನ ಅಥವಾ ಅವಳ ಚಿತಾಭಸ್ಮ ಮತ್ತು ಮೂಳೆಗಳನ್ನು ಸದ್ಗತಿಗಾಗಿ ದಾಮೋದರದಲ್ಲಿ ಮುಳುಗಿಸುತ್ತಾರೆ. ಇವರ ಬುಡಕಟ್ಟು ಭಾಷೆ ಸಂತಾಲಿಯನ್ನು ಬರೆಯುವ ಓಲ್ ಚಿಕಿ ಎಂಬ ಲಿಪಿಯನ್ನು ಸಂತಾಲ್ ವಿದ್ವಾಂಸ ರಘುನಾಥ್ ಮುರ್ಮು ಎಂಬವರು ಅಭಿವೃದ್ಧಿಪಡಿಸಿದ್ದಾರೆ. ಸಂತಾಲಿ ಭಾಷೆಯನ್ನು ಸಂವಿಧಾನದ ಎಂಟನೇ ಶೆಡ್ಯೂಲ್‌ನಲ್ಲಿಯೂ ಸೇರಿಸಲಾಗಿದೆ.
ಇದನ್ನೂ ಓದಿ: President Election | ದ್ರೌಪದಿ ಮುರ್ಮು ಆಯ್ಕೆ ಮಾಸ್ಟರ್ ಸ್ಟ್ರೋಕ್ ಎಂಬುದಕ್ಕೆ ಇಲ್ಲಿವೆ 7 ಕಾರಣಗಳು