Site icon Vistara News

Cyrus Mistry Death | ಸೈರಸ್ ಮಿಸ್ತ್ರಿ: ಉದ್ಯಮ ಜಗತ್ತನ್ನು ಬಿಟ್ಟು ನಡೆದ ದಿಗ್ಗಜ

Cyrus Mistry Family

ಬೆಂಗಳೂರು: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಿಧನರಾದ 54 ವರ್ಷದ ಸೈರಸ್ ಮಿಸ್ತ್ರಿ (Cyrus Mistry Death) ಅವರಿಗೆ ಬಿಸಿನೆಸ್ ಕುಟುಂಬದ ಹಿನ್ನೆಲೆ ಇದೆ. ಅವರು 2013ರಲ್ಲಿ ಟಾಟಾ ಸನ್ಸ್ ಚೇರ್ಮನ್‌ ಆಗಿ ಅಧಿಕಾರ ವಹಿಸಿಕೊಂಡ ಮೇಲೆ, ಬಿಸಿನೆಸ್ ವರ್ಲ್ಡ್ ಹೊರತಾಗಿಯೂ ಚಿರಪರಿಚಿತರಾದರು. ಟಾಟಾ ಕಂಪನಿಯ ಚೇರ್ಮನ್ ಆಗುವುದು ಮತ್ತು ಅಲ್ಲಿಂದ ಹೊರ ಬೀಳುವುದು ಎರಡೂ ಸೈರಸ್ ಮಿಸ್ತ್ರಿ ವೃತ್ತಿ ಬದುಕಿನಲ್ಲಿ ದಕ್ಕಿದ ಸಿಹಿ-ಕಹಿ ಅನುಭವಗಳು.

ಸೈರಸ್ ಮಿಸ್ತ್ರಿ ಅವರ ಪೂರ್ತಿ ಸೈರಸ್ ಪಲ್ಲೊಂಜಿ ಮಿಸ್ತ್ರಿ. ಇವರು ಭಾರತೀಯ ಮೂಲದ ಐರಿಷ್ ವ್ಯಾಪಾರೋದ್ಯಮಿ. 1968ರ ಜುಲೈ 4ರಂದು ಮುಂಬೈನಲ್ಲಿ ಸೈರಸ್ ಮಿಸ್ತ್ರಿ ಜನಿಸಿದರು. ಇವರದ್ದು ಪಾರ್ಸಿ ಫ್ಯಾಮಿಲಿ. ತಂದೆ ಕೋಟ್ಯಧೀಶ ಮತ್ತು ಕಟ್ಟಡ ನಿರ್ಮಾಣ ಕ್ಷೇತ್ರದ ದೈತ್ಯ ಉದ್ಯಮಿ ಪಲ್ಲೋಂಜಿ ಮಿಸ್ತ್ರಿ. ತಾಯಿ ಪರಿನ್ ದುಬಾಶ್.

ತಾಯಿ ಐರ್ಲೆಂಡ್‌ನವರು
ಸೈರಸ್ ಮಿಸ್ತ್ರಿ ಅವರ ತಾಯಿ ಪೆರಿನ್ ದುಬಾಶ್ ಐರ್ಲೆಂಡ್‌ನವರು. ತಂದೆ ತಾಯಿ ಇಬ್ಬರು ಝೋರಾಸ್ಟ್ರಿಯನ್ ನಂಬಿಕೆಯುಳ್ಳವರು. ತಂದೆ ಐರಿಷ್ ನಾಗರಿಕತ್ವವನ್ನು ಪಡೆದುಕೊಂಡಿದ್ದಾರೆ. ಸೈರಸ್ ಮಿಸ್ತ್ರಿ ಹಿರಿಯ ಸಹೋದರ ಶಾಪೂರ್ ಮಿಸ್ತ್ರಿ. ಇವರೂ ಐರಿಷ್ ಕೂಡ ಪ್ರಜೆಯಾಗಿದ್ದಾರೆ. ಪಾರ್ಸಿ ಲಾಯರ್ ರೂಸಿ ಸೆಥ್ನಾ ಅವರ ಪುತ್ರಿ ಬೆಹ್ರೋಜ್ ಸೇತ್ನಾ ಅವರನ್ನು ಮದುವೆಯಾಗಿದ್ದಾರೆ. ಲೈಲಾ ಮತ್ತು ಆಲೂ ಎಂಬ ಇಬ್ಬರು ಸಹೋದರಿಯರಿದ್ದಾರೆ.

ಸೈರಸ್ ಶೈಕ್ಷಣಿಕ ಹಿನ್ನೆಲೆ ಏನು?
ಸೈರಸ್ ಮಿಸ್ತ್ರಿ ಅವರು ದಕ್ಷಿಣ ಮುಂಬೈನ ಪ್ರಖ್ಯಾತ ಕ್ಯಾಥೆಡ್ರಲ್ ಮತ್ತು ಜಾನ್ ಕಾನನ್ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪಡೆದುಕೊಂಡರು. ಆ ಬಳಿಕ ಸೈರಸ್ ಅವರು, ಲಂಡನ್‌ಗೆ ತೆರಳಿ ಇಂಪೀರಿಯಲ್ ಕಾಲೇಜ್‌ನಲ್ಲಿ ಓದಿದರು. 1990ರಲ್ಲಿ ಲಂಡನ್ ವಿಶ್ವವಿದ್ಯಾಲಯದಿಂದ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದುಕೊಂಡರು. ಸೈರಸ್ ಮಿಸ್ತ್ರಿ ಅವರು ಲಂಡನ್ ಬ್ಯೂಸಿನೆಸ್ ಸ್ಕೂಲ್‌ನಲ್ಲೂ ಓದಿದ್ದಾರೆ. 1996ರಲ್ಲಿ ಲಂಡನ್ ವಿವಿಯಿಂದ ಇಂಟರ್‌ನ್ಯಾಷನಲ್ ಎಕ್ಸಿಕ್ಯೂಟಿವ್ ಮಾಸ್ಟರ್ಸ್ ಪದವಿ ಪಡೆದುಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಜತೆ ಮಿಸ್ತ್ರಿ ಮತ್ತು ರತನ್ ಟಾಟಾ

ತಮ್ಮ ತಂದೆಯ ಕಟ್ಟಡ ನಿರ್ಮಾಣ ಕಂಪನಿಯಾದ ಶಪೂರ್ಜಿ ಪಲ್ಲೊಂಜಿ ಆ್ಯಂಡ್ ಕಂಪನಿಯಿಂದಲೇ ಸೈರಸ್ ಮಿಸ್ತ್ರಿ ಅವರು ತಮ್ಮ ವೃತ್ತಿಯನ್ನು 1991ರಲ್ಲಿ ಆರಂಭಿಸಿದರು. ಶಪೂರ್ಜಿ ಪಲ್ಲೊಂಜಿ ಗ್ರೂಪ್‌ನ ಅಂಗಸಂಸ್ಥೆಯಾದ ಶಪೂರ್ಜಿ ಪಲ್ಲೊಂಜಿ ಆ್ಯಂಡ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದರು. ಮುಂದೆ 2012ರಲ್ಲ ಟಾಟಾ ಸನ್ಸ್ ಕಂಪನಿಯ ಚೇರ್ಮನ್ನರಾದರು. ವಿಶೇಷ ಏನೆಂದರೆ, ಟಾಟಾ ಕಂಪನಿಯ ಇತಿಹಾಸದಲ್ಲೇ ಟಾಟಾ ಅಡ್ಡ ಹೆಸರು ಇರದ ಚೇರ್ಮನ್ ಆದ ಎರಡನೇ ವ್ಯಕ್ತಿ ಇವರು.

ಕಟ್ಟಡ ನಿರ್ಮಾಣ ಕಂಪನಿ
ಮಿಸ್ತ್ರಿಯವರ ಮುತ್ತಾತ ಸಣ್ಣ ನಿರ್ಮಾಣ ಕಂಪನಿ ಸ್ಥಾಪಿಸಿದ್ದರು. ಅವರ ಬಳಿಕ, ಪಲ್ಲೊಂಜಿ ಅವರು ತಮ್ಮದೇ ಶಾಪೋರ್ಜಿ ಪಲ್ಲೊಂಜಿ ಕಂಪನಿಯನ್ನು ಆರಂಭಿಸಿದರು. ಈ ಕಂಪನಿಯು ಆರಂಭದಲ್ಲಿ ಮಿಲಿಟರಿ ಮತ್ತು ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳನ್ನು ಮಾತ್ರ ಕೈಗೆತ್ತಿಕೊಳ್ಳುತ್ತಿತ್ತು. ಆ ಬಳಿಕ ತನ್ನ ನಿರ್ಮಾಣ ಕಾರ್ಯವನ್ನು ಬೇರೆ ಕ್ಷೇತ್ರಗಳಿಗೂ ವಿಸ್ತರಿಸಿತು. ಮುಂಬೈನ ಬಹುತೇಕ ಐಕಾನಿಕ್ ಕಟ್ಟಡಗಳ ನಿರ್ಮಾಣ ಹಿಂದೆ ಸೈರಸ್ ಮಿಸ್ತ್ರಿ ಅವರ ತಂದೆ ಸ್ಥಾಪಿಸಿದ ಪಲ್ಲೊಂಜಿ ಗ್ರೂಪ್ ಕಂಪನಿಯ ಚಾಕಚಕ್ಯತೆ ಇದೆ. ಮುಂಬೈನ ಸೆಂಟ್ರಲ್ ರೈಲ್ವೆ ಸ್ಟೇಷನ್, ಎಸ್‌ಬಿಐ ಪ್ರಧಾನ ಕಚೇರಿ, ಆರ್‌ಬಿಐ, ಬ್ಯಾಂಕ್ ಆಫ್ ಇಂಡಿಯಾ, ಎಚ್‌ಎಸ್‌ಬಿಸಿ ಸೇರಿದಂತೆ ಅನೇಕ ಕಟ್ಟಡಗಳನ್ನು ಈ ಕಂಪನಿಯೇ ನಿರ್ಮಾಣ ಮಾಡಿದೆ.

ವಿವಾಹ ಸಂಬಂಧ
ಸೈರಸ್ ಮಿಸ್ತ್ರಿ ಅವರ ಸಹೋದರಿ ಆಲೂ ಅವರನ್ನು ನೋಯೆಲ್ ಟಾಟಾ ಅವರು ಮದುವೆಯಾಗಿದ್ದಾರೆ. ಈ ನೋಯೆಲ್ ಯಾರು ಅಂದರೆ, ರತನ್ ಟಾಟಾ ಅವರ ಮಲಸಹೋದರ. ಟಾಟಾ ಸನ್ಸ್ ಕಂಪನಿಯಲ್ಲಿ ಶೇ.18ರಷ್ಟು ಷೇರು ಶಾಪೂರ್ಜಿ ಪಲ್ಲೊಂಜಿ ಗ್ರೂಪ್ ಹೊಂದಿದೆ. ಟಾಟಾ ಸನ್ಸ್ ಕಂಪನಿಯಲ್ಲಿ ಟಾಟಾ ಕುಟುಂಬದ ನಂತರ ಅತಿ ಹೆಚ್ಚುಷೇರು ಇರುವುದು ಸೈರಸ್ ಮಿಸ್ತ್ರಿ ಅವರ ಕಂಪನಿಯದ್ದೇ.

ಟಾಟಾ ಕಂಪನಿಗೆ 6ನೇ ಚೇರ್ಮನ್
154 ವರ್ಷಗಳ ಇತಿಹಾಸ ಹೊಂದಿರುವ ಟಾಟಾ ಸನ್ಸ್ ಕಂಪನಿಗೆ ಈವರೆಗೆ ಬೆರಳೆಣಿಕೆಯಷ್ಟು ಜನರು ಚೇರ್ಮನ್ನರಾಗಿದ್ದಾರೆ. ಈಗ ರಸ್ತೆ ಅಪಘಾತದಲ್ಲಿ ನಿಧನರಾಗಿರುವ ಸೈರಸ್ ಮಿಸ್ತ್ರಿ ಅವರು ಟಾಟಾ ಕಂಪನಿಗೆ ಆರನೇ ಅಧ್ಯಕ್ಷರಾಗಿದ್ದರು. ಅವರಿಗಿಂತ ಮುಂಚೆ, ರತನ್ ಟಾಟಾ, ಜೆಆರ್‌ಡಿ ಟಾಟಾ, ಸರ್ ನವರೋಜಿ ಸಕಲಟ್ ವಾಲಾ, ಸರ್ ದೊರಾಬ್ ಟಾಟಾ ಮತ್ತು ಜೇಮ್‌ಶೇಡಜೀ ಟಾಟಾ ಅಧ್ಯಕ್ಷರಾಗಿದ್ದರು. ಸದ್ಯ ನಟರಾಜನ್ ಚಂದ್ರಶೇಖನರ್ ಅವರು ಹಾಲಿ ಚೇರ್ಮನ್ನರಾಗಿದ್ದಾರೆ. 2006ರಲ್ಲಿ ಸೈರಸ್ ಮಿಸ್ತ್ರಿ ಅವರು ಟಾಟಾ ಸನ್ಸ್ ಬೋರ್ಡ್ ಸೇರಿದರು. ಇದಕ್ಕೂ ಒಂದು ವರ್ಷ ಮೊದಲು ಸೈರಸ್ ಅವರ ತಂದೆ ಟಾಟಾ ಸನ್ಸ್ ಬೋರ್ಡ್‌ನಿಂದ ನಿವೃತ್ತರಾಗಿದ್ದರು. 1990ರಿಂದ 2009ರವರೆಗೆ ಟಾಟಾ ಟೆಕ್ಸ್‌ಟೈಲ್ ಲಿ.ನ ನಿರ್ದೇಶಕರಾಗಿದ್ದರು. ಇದಕ್ಕೂ ಮೊದಲು 2006ರವರೆಗೆ ಅವರು ಟಾಟಾ ಪವರ್ ಕಂಪನಿಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ರತನ್ ಟಾಟಾ ಜತೆ

2013ರಲ್ಲಿ ಟಾಟಾ ಆಡಳಿತ ಮಂಡಳಿಯು ಸೈರಸ್ ಮಿಸ್ತ್ರಿ ಅವರನ್ನು ಟಾಟಾ ಸನ್ಸ್ ಚೇರ್ಮನ್ನರಾಗಿ ಆಯ್ಕೆ ಮಾಡಿತು. 2012ರಲ್ಲಿ ರತನ್ ಟಾಟಾ ನಿವೃತ್ತಿಯಾಗಿದ್ದರು. ಟಾಟಾ ಸನ್ಸ್ ಕಂಪನಿಯ ಚೇರ್ಮನ್ ಮಾತ್ರವಲ್ಲದೇ ಸೈರಸ್ ಅವರಿಗೆ ಟಾಟಾ ಇಂಡಸ್ಟ್ರೀಸ್, ಟಾಟಾ ಸ್ಟೀಲ್, ಟಾಟಾ ಮೋಟರ್ಸ್, ಟಾಟಾ ಕನ್ಸಲ್ಟನ್ಸಿ ಸರ್ವೀಸಸ್, ಟಾಟಾ ಪವರ್, ಟಾಟಾ ಟೆಲಿಸರ್ವೀಸ್, ಇಂಡಿಯನ್ ಹೋಟೆಲ್ಸ್, ಟಾಟಾ ಗ್ಲೋಬಲ್ ಬೆವರೇಜ್ ಮತ್ತು ಟಾಟಾ ಕೆಮಿಕಲ್ಸ್ ಸೇರಿದಂತೆ ಟಾಟಾ ಗ್ರೂಪ್‌ನ ಎಲ್ಲ ಕಂಪನಿಗಳ ಜವಾಬ್ದಾರಿಯನ್ನು ಸೈರಸ್ ಮಿಸ್ತ್ರಿ ಅವರಿಗೆ ವಹಿಸಲಾಗಿತ್ತು..

ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಜತೆಗೆ ಸೈರಸ್ ಮಿಸ್ತ್ರಿ

ಟಾಟಾ ಕಂಪನಿ ಅಧ್ಯಕ್ಷರಾಗಿದ್ದು ಹೇಗೆ?
ಭಾರತದ ಪ್ರತಿಷ್ಠಿತ ಕಂಪನಿಯಾಗಿರುವ ಟಾಟಾ ಸನ್ಸ್‌ ಜವಾಬ್ದಾರಿಯಿಂದ ರತನ್ ಟಾಟಾ ಅವರು ನಿವೃತ್ತರಾಗಲು ಬಯಸಿದ್ದರು. ಹಾಗಾಗಿ, ತಮ್ಮ ಉತ್ತರಾಧಿಕಾರಿಯ ಹುಡುಕಾಟಕ್ಕೆ ಅವರು 2010ರಲ್ಲಿ ಐವರು ಸದಸ್ಯರ ಸಮಿತಿಯನ್ನು ರಚಿಸಿದರು. ಈ ಸಮಿತಿಯು ಹೆಚ್ಚು ಕಡಿಮೆ ಒಂದೂವರೆ ವರ್ಷಗಳ ಕಾಲ ಹಲವು ವ್ಯಕ್ತಿಗಳನ್ನು ಪಟ್ಟಿ ಮಾಡಿ, ಅವರ ಆಯ್ಕೆಯ ಲಾಭ ಮತ್ತು ನಷ್ಟಗಳೆನ್ನಲ್ಲ ಪರಿಶೀಲಿಸಿತು. ಆಗ ರತನ್ ಟಾಟಾ ಅವರ ಮಲಸಹೋದರ ನೋಯೆಲ್ ಟಾಟಾ, ಪೆಪ್ಸಿಕೋ ಮುಖ್ಯಸ್ಥೆಯಾಗಿದ್ದ ಇಂದಿರಾ ನೋಯಿ, ಸಿಟಿ ಗ್ರೂಪ್‌ನ ಅಂದಿನ ಚೇರ್ಮನ್ ವಿಕ್ರಮ್ ಪಂಡಿತ್ ಸೇರಿದಂತೆ ಅನೇಕರ ಹೆಸರು ಟಾಟಾ ಸನ್ಸ್ ಕಂಪನಿ ಚೇರ್ಮನ್ ಹುದ್ದೆಗೆ ಕೇಳಿ ಬಂದಿತ್ತು. ಆದರೆ, ಅಂತಿಮವಾಗಿ ಆಯ್ಕೆಯಾಗಿದ್ದು ಸೈರಸ್ ಮಿಸ್ತ್ರಿ ಅವರು.

ಕಿರಿಯ ವಯಸ್ಸಿನಲ್ಲೇ ಹಿರಿಯ ಜವಾಬ್ದಾರಿ
ಸೈರಸ್ ಮಿಸ್ತ್ರಿಯತ್ತ ಒಲವು ತೋರಿಸಲು ರತನ್ ಟಾಟಾ ಅವರಿಗೆ ಕಾರಣವಿತ್ತು. ಸೈರಸ್ ತಮ್ಮ ಪಲ್ಲೊಂಜಿ ಗ್ರೂಪ್ ಅನ್ನು ಲಾಭದಾಯಕವಾಗಿ ಬೆಳೆಸಿದ್ದರು. ಕಿರಿಯ ವಯಸ್ಸಿನಲ್ಲಿ ಅವರು ನಾಯಕತ್ವದ ಗುಣಗಳನ್ನು ಪ್ರದರ್ಶಿಸಿದ್ದರು. ಅದೇ ಕಾರಣಕ್ಕಾಗಿ ಟಾಟಾ ಸನ್ಸ್‌ನ ತಮ್ಮ ಉತ್ತರಾಧಿಕಾರಿಯಾಗಿ ಸೈರಸ್ ಮಿಸ್ತ್ರಿ ಅವರನ್ನು ಆಯ್ಕೆ ಮಾಡಿಕೊಂಡಿದ್ದರು. ಹಾಗಾಗಿ ಅತಿ ಕಿರಿಯ ವಯಸ್ಸಿನಲ್ಲೇ ಸೈರಸ್ ಮಿಸ್ತ್ರಿ ಜಗತ್ತಿನ ಬಹುದೊಡ್ಡ ಕಂಪನಿಯ ಜವಾಬ್ದಾರಿ ಹೆಗಲೇರಿತ್ತು.

ನ್ಯಾನೋ ಕಾರು ತಂದ ಭಿನ್ನಾಭಿಪ್ರಾಯ
ರತನ್ ಟಾಟಾ ಅವರ ಕನಸಿನ ಕಾರು ನ್ಯಾನೋ. ಭಾರತದ ಬಡವ ಕೂಡ ಕಾರಿನಲ್ಲಿ ಓಡಾಡಬೇಕು ಎಂಬ ಗುರಿಯೊಂದಿಗೆ ಒಂದು ಲಕ್ಷ ರೂ.ನಲ್ಲಿ ಕಾರು ಮಾರಾಟ ಮಾಡಲು ಮುಂದಾದರು ಮತ್ತದು ಮಾರುಕಟ್ಟೆಗೆ ಬಿಡುಗಡೆಯಾಯಿತು. ಆದರೆ, ನಿರೀಕ್ಷೆಯಂತೆ ನ್ಯಾನೋ ಕಾರು ಸಕ್ಸೆಸ್ ಆಗಲಿಲ್ಲ. ಬದಲಿಗೆ ಕಂಪನಿಗೆ ನಷ್ಟ ಉಂಟಾಯಿತು. ಈ ವಿಷಯವೇ ರತನ್ ಟಾಟಾ ಮತ್ತು ಸೈರಸ್ ಮಿಸ್ತ್ರಿ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣವಾಯಿತು. ಭಾರೀ ನಷ್ಟದಲ್ಲಿರುವ ನ್ಯಾನೋ ಕಾರ್ ಉತ್ಪಾದನೆಯನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಮುಂದಾಗಿದ್ದ ಅಂದಿನ ಚೇರ್ಮನ್ ಸೈರಸ್ ಅವರಿಗೆ ರತನ್ ಟಾಟಾ ಒಪ್ಪಿಗೆ ನೀಡಲಿಲ್ಲ. ಮಂಡಳಿಯಿಂದ ಬೆಂಬಲ ಸಿಗಲಿಲ್ಲ. ಅಂತಿಮವಾಗಿ ಅವರು ಚೇರ್ಮನ್ ಹುದ್ದೆ ಜವಾಬ್ದಾರಿಯಿಂದ ಹೊರಬರಬೇಕಾಯಿತು

ಇದನ್ನೂ ಓದಿ | Cyrus Mistry | ಟಾಟಾ ಸಂಸ್ಥೆ ಮಾಜಿ ಚೇರ್ಮನ್‌ ಸೈರಸ್‌ ಮಿಸ್ತ್ರಿ ರಸ್ತೆ ಅಪಘಾತದಲ್ಲಿ ವಿಧಿವಶ, ಮೋದಿ ಸಂತಾಪ

Exit mobile version