ನವ ದೆಹಲಿ: ಪ್ರವಾದಿ ಮಹಮ್ಮದರ ಕುರಿತು ಟೀಕೆ ಮಾಡಿ ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದಲೇ ಹೊರಗೆ ಹಾಕಿಸಿಕೊಂಡಿರುವ ನೂಪುರ್ ಶರ್ಮಾ, ವೃತ್ತಿಯಲ್ಲಿ ವಕೀಲರಾಗಿದ್ದವರು. ಅವರು ಜೂ.5 ರವರೆಗೆ ಬಿಜೆಪಿಯ ರಾಷ್ಟ್ರೀಯ ವಕ್ತಾರರಾಗಿದ್ದರು. ದೆಹಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜಿನಲ್ಲಿ ಅರ್ಥಶಾಸ್ತ್ರ ಪದವೀಧರರಾದ ಅವರು ನಂತರ ಕಾನೂನು ಪದವಿ ಮಾಡಿದರು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಹೆಚ್ಚಿನ ಅಧ್ಯಯನ ಮಾಡಿದರು.
ತಮ್ಮ ಕಾಲೇಜು ದಿನಗಳಿಂದ ನೂಪುರ್ ಶರ್ಮಾ ವಿದ್ಯಾರ್ಥಿ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂಗಸಂಸ್ಥೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಭಾಗವಾಗಿದ್ದರು. ಈ ಸಮಯದಲ್ಲಿ ಅವರು ರಾಷ್ಟ್ರೀಯ ನಾಯಕತ್ವಕ್ಕೆ ಹತ್ತಿರವಾದರು.
ಇದನ್ನೂ ಓದಿ: ಪ್ರವಾದಿ ಮೊಹಮ್ಮದ್ ಬಗ್ಗೆ ಮಾತನಾಡಿ ವಿವಾದ ಸೃಷ್ಟಿಸಿದ್ದ ವಕ್ತಾರೆ ನೂಪುರ್ ಶರ್ಮಾ ಬಿಜೆಪಿಯಿಂದ ಅಮಾನತು
ಈ ಹಿಂದೆ, ಪಶ್ಚಿಮ ಬಂಗಾಳ ಸರ್ಕಾರ ಶರ್ಮಾ ವಿರುದ್ಧ ಕೆಲವು ಪ್ರಕರಣಗಳನ್ನು ದಾಖಲಿಸಿತ್ತು. ಅವರು ಚುನಾವಣೆ ಸಂದರ್ಭ ಬಂಗಾಳದಲ್ಲಿ ನಡೆಯುತ್ತಿದ್ದ ಹಿಂಸಾಚಾರದ ಚಿತ್ರಗಳನ್ನು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಪೋಸ್ಟ್ ಮಾಡಿದ ಚಿತ್ರಗಳ ಸತ್ಯಾಸತ್ಯತೆಯನ್ನು ಹಲವರು ಪ್ರಶ್ನಿಸಿದ್ದರು. ದೂರಿನಂತೆ ಪಶ್ಚಿಮ ಬಂಗಾಳದ ಪೊಲೀಸರು ಶರ್ಮಾ ಅವರನ್ನು ಬಂಧಿಸಲು ಮುಂದಾಗಿದ್ದರು. ಆದರೆ ನ್ಯಾಯಾಲಯದಿಂದ ತಡೆ ತಂದು ಶರ್ಮಾ ಬಚಾವಾಗಿದ್ದರು.
ನವೀನ್ ಕುಮಾರ್ ಜಿಂದಾಲ್ ಯಾರು?
ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಅಪರಾಧ ಮತ್ತು ರಾಜಕೀಯ ವರದಿ ಮಾಡಿರುವ ನವೀನ್ ಕುಮಾರ್, ಮೀರತ್ ಮೂಲದವರು. 1982ರಲ್ಲಿ BJYMನಲ್ಲಿ ಕೆಲಸ ಮಾಡಿದ್ದರು. 1989ರಲ್ಲಿ ಪಂಜಾಬ್ ಕೇಸರಿಯಲ್ಲಿ ಅವರ ಮೊದಲ ಕೆಲಸ. ಇದರ ನಂತರ ದೈನಿಕ್ ಜಾಗರಣ್, ರಾಷ್ಟ್ರೀಯ ಸಹಾರಾ ಮತ್ತು ಝೀ ನ್ಯೂಸ್‌ನಲ್ಲಿ ಉದ್ಯೋಗಿಯಾಗಿದ್ದರು.
ಈ ಹಿಂದೆಯೂ ಅವರು ಹಲವಾರು ಜೀವಬೆದರಿಕೆ ಎದುರಿಸಿದ್ದರು. “ನಾನು ಸಂಸತ್ ದಾಳಿ ಮತ್ತು ಅಕ್ಷರಧಾಮ ದಾಳಿಯ ಬಗ್ಗೆಯೂ ಡಾಕ್ಯುಮೆಂಟರಿ ಮಾಡಿದ್ದೇನೆ. 1990ರ ದಶಕದಲ್ಲಿ ಪಂಜಾಬ್‌ನಲ್ಲಿ ಭಯೋತ್ಪಾದನೆಯ ಸುದ್ದಿ ವರದಿ ಮಾಡುತ್ತಿದ್ದಾಗ ನನ್ನ ಮೇಲೆ ಗುಂಡು ಹಾರಿಸಲಾಯಿತು. 2002ರಲ್ಲಿ ನನ್ನ ಮನೆಯ ಮೇಲೆ ದಾಳಿ ನಡೆಸಲಾಯಿತುʼʼ ಎಂದು ಅವರು ಹೇಳಿಕೊಂಡಿದ್ದಾರೆ.
ಅವರು ವಿವಾದಿತ ವ್ಯಕ್ತಿಗಳಾದ ಘಾಜಿ ಬಾಬಾ ಮತ್ತು ಅಫ್ಜಲ್ ಗುರುವನ್ನು ಸಂದರ್ಶಿಸಿದ್ದರು. 2003ರಲ್ಲಿ ಗೀತಾ ಕಾಲೋನಿ ಕ್ಷೇತ್ರದಿಂದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಇದೇ ವೇಳೆ ಅವರು ‘ಇಸ್ಲಾಮಿಕ್ ಮದರಸೇ ಬೆನಖಾಬ್’ ಎಂಬ ಪುಸ್ತಕ ಬರೆದು ಮದರಸಾಗಳ ಕೆಂಗಣ್ಣಿಗೆ ಗುರಿಯಾದರು. 2013ರಲ್ಲಿ ಬಿಜೆಪಿ ವಕ್ತಾರರಾಗಿ ಸೇರಿಕೊಂಡರು. ನಂತರ ದೆಹಲಿ ಘಟಕದ ಮಾಧ್ಯಮ ಉಸ್ತುವಾರಿಯಾದರು.
ಇದನ್ನೂ ಓದಿ: ನೂಪುರ್ ಶರ್ಮಾ ಅಮಾನತಿಗೆ ಬಿಜೆಪಿ ಬಳಸಿದ್ದು ನಿಯಮ 10 ಎ, ಹಾಗಿದ್ದರೆ ಏನಿದೆ ಅದರಲ್ಲಿ?