Site icon Vistara News

Hemangi Sakhi: ಮೋದಿ ವಿರುದ್ಧ ಚುನಾವಣೆ ಕಣಕ್ಕಿಳಿದ ಮಂಗಳಮುಖಿ ಹೇಮಾಂಗಿ; ಯಾರಿವರು?

Hemangi Sakhi

Who is Transgender Mahamandaleshwar Hemangi Sakhi up against PM Narendra Modi in Varanasi?

ವಾರಾಣಸಿ: ಲೋಕಸಭೆ ಚುನಾವಣೆಗೆ (Lok Sabha Election 2024) ರಣಾಂಗಣ ಸಿದ್ಧವಾಗುತ್ತಿದೆ. ಈಗಾಗಲೇ ಬಹುತೇಕ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದ್ದು, ಅಭ್ಯರ್ಥಿಗಳು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಇದರ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ವಾರಾಣಸಿಯಲ್ಲಿ ವಿಶೇಷ ಸ್ಪರ್ಧಿಯೊಬ್ಬರು ಎದುರಾಗಿದ್ದಾರೆ. ಹೌದು, ಮಂಗಳಮುಖಿ ಮಹಾಮಂಡಲೇಶ್ವರ್‌ ಹೇಮಾಂಗಿ ಸಖಿ (Mahamandaleshwar Hemangi Sakhi) ಅವರು ವಾರಾಣಸಿಯಲ್ಲಿ (Varanasi) ನರೇಂದ್ರ ಮೋದಿ ವಿರುದ್ಧ ಕಣಕ್ಕಿಳಿದಿದ್ದಾರೆ.

ಅಖಿಲ ಭಾರತ ಹಿಂದು ಮಹಾಸಭಾ (ABHM) ಪಕ್ಷದಿಂದ ಕಿನ್ನಾರ್‌ ಮಹಾಮಂಡಲೇಶ್ವರ್‌ ಹೇಮಾಂಗಿ ಸಖಿ ಅವರು ಚುನಾವಣೆ ಕಣಕ್ಕೆ ಇಳಿದಿದ್ದಾರೆ. ಇವರು ನರೇಂದ್ರ ಮೋದಿ ಅವರ ವಿರುದ್ಧ ಸ್ಪರ್ಧಿಸುತ್ತಿದ್ದಾರೆ ಎಂಬುದಾಗಿ ಪಕ್ಷದ ಮುಖ್ಯಸ್ಥ ಸ್ವಾಮಿ ಚಕ್ರಪಾಣಿ ಅವರು ಮಾಹಿತಿ ನೀಡಿದ್ದಾರೆ. ಮಹಾರಾಷ್ಟ್ರ ಮೂಲದವರಾದ ಕಿನ್ನಾರ್‌ ಮಹಾಮಂಡಲೇಶ್ವರ್‌ ಹೇಮಾಂಗಿ ಸಖಿ ಅವರು ಮೋದಿ ಅವರ ವಿರುದ್ಧ ಸ್ಪರ್ಧಿಸುತ್ತಿರುವುದು ಭಾರಿ ಗಮನ ಸೆಳೆದಿದೆ. ಮೋದಿ ಅವರು ಮೂರನೇ ಬಾರಿಗೆ ವಾರಾಣಸಿಯಿಂದ ಸ್ಪರ್ಧೆಗೆ ಇಳಿದಿದ್ದಾರೆ.

ಯಾರಿವರು ಹಿಮಾಂಗಿ ಸಖಿ?

ಮಹಾಮಂಡಲೇಶ್ವರ್‌ ಹೇಮಾಂಗಿ ಸಖಿ ಅವರ ಫೇಸ್‌ಬುಕ್‌ ಪೇಜ್‌ ಪ್ರಕಾರ, ಅವರು ವಿಶ್ವದ ಮೊದಲ ಮಂಗಳಮುಖಿ ಭಾಗವತ ಕಥಾ ವಾಚಕಿ ಎನಿಸಿದ್ದಾರೆ. ಅಲ್ಲದೆ, ಇವರು ವಿಶ್ವದ ಹಲವೆಡೆ ಭಾಗವತ ಕಥಾ, ರಾಮಕಥಾ, ದೇವಿ ಭಾಗವತ ಕಥಾ ವಾಚನದ ಮೂಲಕ ಗಮನ ಸೆಳೆದಿದ್ದಾರೆ. ಇವರು ಮುಂಬೈನಲ್ಲಿದ್ದಾಗ ಮನೆಯ ಪಕ್ಕದಲ್ಲಿದ್ದ ಇಸ್ಕಾನ್‌ ದೇವಾಲಯದಿಂದ ಪ್ರೇರೇಪಣೆಗೊಂಡು ಕೃಷ್ಣನ ಭಕ್ತೆಯಾಗಿ ಬದಲಾಗಿದ್ದಾರೆ.

ಮಂಗಳಮುಖಿಯರ ಹಕ್ಕುಗಳ ಪರವಾಗಿ ಹೋರಾಟ ನಡೆಸುವುದು, ಅವರಿಗೆ ಲೋಕಸಭೆಯಲ್ಲಿ ಮೀಸಲಾತಿ ಕಲ್ಪಿಸುವುದು, ಅವರಿಗೂ ಸಮಾಜದಲ್ಲಿ ಸರಿಯಾದ ಸ್ಥಾನಮಾನ ಸಿಗಬೇಕು ಎಂಬುದು ಮಹಾಮಂಡಲೇಶ್ವರ್‌ ಹೇಮಾಂಗಿ ಸಖಿ ಅವರ ಕನಸಾಗಿದೆ. ಈ ಕನಸು ಸಾಕಾರಗೊಳಿಸಲು ಅವರು ಚುನಾವಣೆ ಸ್ಪರ್ಧೆಗೆ ಇಳಿದಿದ್ದಾರೆ ಎಂದು ಹೇಳಲಾಗುತ್ತಿದೆ. ಚುನಾವಣೆ ಆಯೋಗದ ಮಾಹಿತಿ ಪ್ರಕಾರ, 2024ರಲ್ಲಿ 48,044 ಮಂಗಳಮುಖಿಯರು ಮತದಾನ ಮಾಡಲಿದ್ದಾರೆ. 2019ರ ಲೋಕಸಭೆ ಚುನಾವಣೆ ವೇಳೆ 39,683 ಮಂಗಳಮುಖಿಯರು ನೋಂದಣಿ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.

ನರೇಂದ್ರ ಮೋದಿ ಅವರು 2014ರಿಂದಲೂ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇವರ ವಿರುದ್ಧ ಈ ಬಾರಿ ಕಾಂಗ್ರೆಸ್‌ ಅಜಯ್‌ ರಾಯ್‌ ಅವರನ್ನು ಕಣಕ್ಕಿಳಿಸಿದೆ. ಕ್ಷೇತ್ರದಲ್ಲಿ ಜೂನ್‌ 1ರಂದು ಮತದಾನ ನಡೆಯಲಿದೆ. ವಾರಾಣಸಿ ಲೋಕಸಭೆ ಕ್ಷೇತ್ರದಲ್ಲಿ 19.62 ಲಕ್ಷ ಮತದಾರರಿದ್ದಾರೆ. ಇವರಲ್ಲಿ 10.65 ಲಕ್ಷ ಪುರುಷರಿದ್ದರೆ, 8.97 ಲಕ್ಷ ಮಹಿಳೆಯರಿದ್ದಾರೆ. 135 ಮಂಗಳಮುಖಿಯರೂ ಮತದಾನ ಮಾಡಲಿದ್ದಾರೆ.

ಇದನ್ನೂ ಓದಿ: Raj Thackeray : ಮೋದಿಗೆ ಬೇಷರತ್​ ಬೆಂಬಲ ಸೂಚಿಸಿದ ಎಮ್​ಎನ್​ಎಸ್​ ಮುಖ್ಯಸ್ಥ ರಾಜ್​ ಠಾಕ್ರೆ

Exit mobile version