Site icon Vistara News

Mamata Banerjee: 15 ದಿನಗಳಲ್ಲೇ ಮೋದಿ ಸರ್ಕಾರ ಪತನ; ಸ್ಫೋಟಕ ಭವಿಷ್ಯ ನುಡಿದ ಮಮತಾ ಬ್ಯಾನರ್ಜಿ!

Mamata Banerjee

Who knows if this government will last even 15 days; Says Mamata Banerjee

ಕೋಲ್ಕೊತಾ: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 294 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ನರೇಂದ್ರ ಮೋದಿ (Narendra Modi) ಅವರು ಭಾನುವಾರ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದರ ಬೆನ್ನಲ್ಲೇ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ವರಿಷ್ಠ ನಾಯಕಿ ಮಮತಾ ಬ್ಯಾನರ್ಜಿ (Mamata Banerjee) ಅವರು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. “ಯಾವುದೇ ಸರ್ಕಾರವು 15 ದಿನಗಳಲ್ಲಿ ಬೇಕಾದರೂ ಪತನವಾಗಬಹುದು” ಎಂಬುದಾಗಿ ಹೇಳಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ತೃಣಮೂಲ ಕಾಂಗ್ರೆಸ್‌ ಸಂಸದೀಯ ಪಕ್ಷದ ಸಭೆಯ ಬಳಿಕ ಮಮತಾ ಬ್ಯಾನರ್ಜಿ ಮಾತನಾಡಿದರು. “ಯಾರು (ಬಿಜೆಪಿ) 400 ಸೀಟುಗಳ ಬಗ್ಗೆ ಮಾತನಾಡಿದ್ದರೋ, ಅವರಿಗೇ ಈಗ ಬಹುಮತ ಸಿಗದಷ್ಟು ಸ್ಥಾನಗಳು ಲಭಿಸಿವೆ. ಇಂಡಿಯಾ ಒಕ್ಕೂಟವು ಸರ್ಕಾರ ರಚನೆಗೆ ಹಕ್ಕು ಮಂಡಿಸಿಲ್ಲ ಎಂದ ಮಾತ್ರಕ್ಕೆ ಏನೂ ಆಗುವುದಿಲ್ಲ ಎಂಬುದಾಗಿ ಭಾವಿಸದಿರಿ. ಸಮಯ ಬದಲಾಗುತ್ತದೆ, ಮನಸ್ಥಿತಿಗಳು ಬದಲಾಗುತ್ತವೆ. ಇದರ ಮೇಲೆ ಇಂಡಿಯಾ ಒಕ್ಕೂಟವು ಹೆಚ್ಚು ಗಮನ ಹರಿಸುತ್ತಿದೆ” ಎಂದು ಹೇಳಿದರು.

ಇಂಡಿಯಾ ಒಕ್ಕೂಟದ್ದೇ ಸರ್ಕಾರ

ಕೇಂದ್ರದಲ್ಲಿ ಇಂಡಿಯಾ ಒಕ್ಕೂಟವೇ ಸರ್ಕಾರ ರಚಿಸಲಿದೆ ಎಂಬುದಾಗಿ ಮಮತಾ ಬ್ಯಾನರ್ಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ಕೊನೆಗೆ ಒಂದು ದಿನ ಇಂಡಿಯಾ ಒಕ್ಕೂಟವು ಸರ್ಕಾರ ರಚಿಸುತ್ತದೆ. ಕೆಲವು ದಿನಗಳವರೆಗೆ ಅವರು ಅಧಿಕಾರದಲ್ಲಿ ಇರಲಿ. ಆದರೆ, ಒಂದು ನೆನಪಿರಲಿ, ಒಂದೇ ದಿನದಲ್ಲಿ ಬೇಕಾದರೂ ಸರ್ಕಾರ ಬೀಳಬಹುದು. ಏನು ಬೇಕಾದರೂ ಆಗಬಹುದು. ಯಾರಿಗೆ ಗೊತ್ತು, 15 ದಿನಗಳಲ್ಲಿ ಬೇಕಾದರೂ ಸರ್ಕಾರ ಪತನವಾಗಬಹುದು” ಎಂಬುದಾಗಿ ಎನ್‌ಡಿಎ ಸರ್ಕಾರದ ಪತನದ ಕುರಿತು ಮಮತಾ ಬ್ಯಾನರ್ಜಿ ಮಹತ್ವದ ಹೇಳಿಕೆ ನೀಡಿದ್ದಾರೆ.

ಪ್ರಮಾಣವಚನ ಕಾರ್ಯಕ್ರಮಕ್ಕೆ ಗೈರು

ನರೇಂದ್ರ ಮೋದಿ ಅವರು ಭಾನುವಾರ ಪ್ರಮಾಣ ವಚನ ಸ್ವೀಕರಿಸಲಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ಟಿಎಂಸಿ ನಿರ್ಧರಿಸಿದೆ ಎಂಬುದಾಗಿ ಮಮತಾ ಬ್ಯಾನರ್ಜಿ ಹೇಳಿದರು. “ಕಾನೂನುಬಾಹಿರ ಹಾಗೂ ಪ್ರಜಾಸತ್ತಾತ್ಮಕವಲ್ಲದ ಮಾರ್ಗದ ಮೂಲಕ ಎನ್‌ಡಿಎ ಸರ್ಕಾರ ರಚಿಸುತ್ತಿದೆ. ಹಾಗಾಗಿ, ಪ್ರಮಾಣವಚನ ಕಾರ್ಯಕ್ರಮದಲ್ಲಿ ಟಿಎಂಸಿ ಭಾಗವಹಿಸಲ್ಲ” ಎಂದಿದ್ದಾರೆ.

ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾರತದ ಏಳು ನೆರೆಯ ರಾಷ್ಟ್ರಗಳ ನಾಯಕರು ಭಾಗಿಯಾಗಲಿದ್ದಾರೆ. ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು, ಸೆಶೆಲ್ಸ್‌ನ ಉಪಾಧ್ಯಕ್ಷ ಅಹ್ಮದ್ ಅಫೀಫ್; ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ; ಮಾರಿಷಸ್‌ನ ಪ್ರಧಾನ ಮಂತ್ರಿ, ಪ್ರವಿಂದ್ ಕುಮಾರ್ ಜುಗ್ನೌತ್; ನೇಪಾಳದ ಪ್ರಧಾನಿ, ಪುಷ್ಪ ಕಮಲ್ ದಹಲ್ ‘ಪ್ರಚಂಡ’ ಮತ್ತು ಭೂತಾನ್ ಪ್ರಧಾನಿ, ತ್ಶೆರಿಂಗ್ ಟೊಬ್ಗೇ ಉಪಸ್ಥಿತರಿರಲಿದ್ದಾರೆ.

ಇದನ್ನೂ ಓದಿ: Sonia Gandhi: ಮತ್ತೆ ಸೋನಿಯಾ ಗಾಂಧಿಗೆ ಮಣೆ; ಕಾಂಗ್ರೆಸ್‌ ಸಂಸದೀಯ ಪಕ್ಷದ ಅಧ್ಯಕ್ಷೆಯಾಗಿ ಮರು ಆಯ್ಕೆ!

Exit mobile version