Site icon Vistara News

ಫೇಸ್‌ಬುಕ್‌ ಲೈವ್‌ನಲ್ಲೇ ಶಿವಸೇನೆ ನಾಯಕ ಅಭಿಷೇಕ್‌ ಹತ್ಯೆ; ಯಾರಿವರು? ಕೊಲೆ Video ಇದೆ

Abhishek Ghosalkar

Who was Uddhav Sena's Abhishek Ghosalkar? Why was he killed by Mauris Noronha?

ಮುಂಬೈ: ಉದ್ಧವ್‌ ಠಾಕ್ರೆ ಬಣದ ಶಿವಸೇನೆಯ (Shiv Sena UBT) ಯುವ ಮುಖಂಡ ಅಭಿಷೇಕ್‌ ಘೋಸಲ್ಕರ್‌ (Abhishek Ghosalkar) ಅವರನ್ನು ಫೇಸ್‌ಬುಕ್‌ ಲೈವ್‌ನಲ್ಲೇ (Facebook Live) ಹತ್ಯೆ ಮಾಡಲಾಗಿದೆ. ಮಾರಿಸ್‌ ನರೋನ್ಹಾ (Mauris Noronha) ಎಂಬ ವ್ಯಕ್ತಿಯು ಅಭಿಷೇಕ್‌ ಘೋಸಲ್ಕರ್‌ ಅವರನ್ನು ಹತ್ಯೆ ಮಾಡಿದ್ದಾರೆ. ಗುರುವಾರ (ಫೆಬ್ರವರಿ 8) ಸಂಜೆ ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡುವಾಗಲೇ ಮಾರಿಸ್‌ ನರೋನ್ಹಾ ಗುಂಡಿನ ದಾಳಿ ಮೂಲಕ ಹತ್ಯೆ ಮಾಡಿದ್ದಾನೆ. ನಾಲ್ಕು ಬಾರಿ ಗುಂಡು ಹಾರಿಸಿದ ಮಾರಿಸ್‌ ನರೋನ್ಹಾ, ಬಳಿಕ ತಾನೂ ಒಂದು ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ. ಯಾರಿವರು ಅಭಿಷೇಕ್‌ ಘೋಸಲ್ಕರ್?‌ ಇವರ ಹತ್ಯೆಗೆ ಕಾರಣವೇನು? ಆರೋಪಿ ಮಾರಿಸ್‌ ನರೋನ್ಹಾ ಹಿನ್ನೆಲೆ ಏನು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಯಾರಿವರು ಅಭಿಷೇಕ್‌ ಘೋಸಲ್ಕರ್?‌

ಅಭಿಷೇಕ್‌ ಘೋಸಲ್ಕರ್‌ ಅವರು ಮಾಜಿ ಶಾಸಕ, ಉದ್ಧವ್‌ ಠಾಕ್ರೆ ಆಪ್ತ ವಿನೋದ್‌ ಘೋಸಲ್ಕರ್‌ ಅವರ ಪುತ್ರರಾಗಿದ್ದಾರೆ. ಅಭಿಷೇಕ್‌ ಘೋಸಲ್ಕರ್‌ ಅವರು ಮುಂಬೈ ನಗರ ಪಾಲಿಕೆ ಸದಸ್ಯರೂ ಆಗಿದ್ದರು. ಮುಂಬೈ ಜಿಲ್ಲಾ ಕೇಂದ್ರೀಯ ಸಹಕಾರ ಬ್ಯಾಂಕ್‌ನ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಕಾರ್ಪೊರೇಟರ್‌ ಆಗಿದ್ದಾಗ ಇವರು ಜನರ ಸಮಸ್ಯೆಗಳ ಪರವಾಗಿ ಹೋರಾಡುವ ಮೂಲಕ ಗಮನ ಸೆಳೆದಿದ್ದರು. ಶಿವಸೇನೆ ಯುವ ನಾಯಕ ಉದ್ಧವ್‌ ಠಾಕ್ರೆ ಅವರ ಆಪ್ತರೂ ಆಗಿದ್ದಾರೆ. 2013ರಲ್ಲಿ ಇವರು ತೇಜಸ್ವಿ ದಾರೆಕರ್‌ ಎಂಬುವರನ್ನು ಮದುವೆಯಾಗಿದ್ದಾರೆ. ಶಿವಸೇನೆ ಯುವ ನಾಯಕರಾಗಿ ಇವರು ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು ಎಂದು ತಿಳಿದುಬಂದಿದೆ.

ಹತ್ಯೆ ಮಾಡಲು ಕಾರಣವೇನು?

ಅಭಿಷೇಕ್‌ ಘೋಸಲ್ಕರ್‌ ಹಾಗೂ ಮಾರಿಸ್‌ ನರೋನ್ಹಾ ಅವರು ಆಪ್ತರಾಗಿದ್ದು, ಇಬ್ಬರ ಮಧ್ಯೆ ಇತ್ತೀಚೆಗೆ ಭಿನ್ನಾಭಿಪ್ರಾಯ ಮೂಡಿತ್ತು. ಆದರೆ, ಇಬ್ಬರೂ ಮಾತುಕತೆ ಮೂಲಕ ಭಿನ್ನಾಭಿಪ್ರಾಯ ಬಗೆಹರಿಸಿಕೊಂಡಿದ್ದರು. ಇದರ ಕುರಿತು ಸ್ಪಷ್ಟನೆ ನೀಡಬೇಕು ಎಂದೇ ನರೋನ್ಹಾ ಕಚೇರಿಯಲ್ಲಿ ಫೇಸ್‌ಬುಕ್‌ ಲೈವ್‌ ಬಂದಿದ್ದರು. ಆದರೆ, ಲೈವ್‌ ವೇಳೆಯೇ ನರೋನ್ಹಾ ಹತ್ಯೆಗೈದಿದ್ದಾನೆ. ಅಭಿಷೇಕ್‌ ಘೋಸಲ್ಕರ್‌ ಹತ್ಯೆಗೆ ದ್ವೇಷವೇ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಮಾರಿಸ್‌ ನರೋನ್ಹಾ ವಿರುದ್ಧ ಇತ್ತೀಚೆಗೆ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಇದರಿಂದಾಗಿ ಮಾರಿಸ್‌ ನರೋನ್ಹಾ ಬಂಧನಕ್ಕೀಡಾಗಿದ್ದ. ಅತ್ಯಾಚಾರ ಪ್ರಕರಣ ದಾಖಲಾಗಿದ್ದರ ಹಿಂದೆ ಅಭಿಷೇಕ್‌ ಘೋಸಲ್ಕರ್‌ ಕೈವಾಡ ಇದೆ ಎಂದು ತಿಳಿದ ಮಾರಿಸ್‌ ನರೋನ್ಹಾ, ಅವರ ಮೇಲೆ ಸೇಡು ತೀರಿಸಿಕೊಳ್ಳಲು ತೀರ್ಮಾನಿಸಿದ್ದ. ಭಿನ್ನಾಭಿಪ್ರಾಯ ಬಿಟ್ಟು, ಮತ್ತೆ ಸ್ನೇಹಿತರಾಗಿರೋಣ ಎಂದು ನಾಟಕವಾಡಿ, ಫೇಸ್‌ಬುಕ್‌ ಲೈವ್‌ ಬಂದು, ಕೊನೆಗೆ ಗುಂಡು ಹಾರಿಸುವ ಮೂಲಕ ಸೇಡು ತೀರಿಸಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Facebook Live: ಫೇಸ್‌ಬುಕ್‌ ಲೈವ್‌ನಲ್ಲಿದ್ದಾಗಲೇ ಉದ್ದವ್ ಠಾಕ್ರೆ ಬಣದ ಸೇನಾ ನಾಯಕನ ಪುತ್ರನಿಗೆ ಗುಂಡಿಟ್ಟು ಹತ್ಯೆ!

ಮಾರಿಸ್‌ ನರೋನ್ಹಾ ಹಿನ್ನೆಲೆ ಏನು?

ಮೂಲತಃ ಉದ್ಯಮಿಯಾಗಿರುವ ಮಾರಿಸ್‌ ನರೋನ್ಹಾ, ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಸಾವಿರಾರು ಜನರಿಗೆ ಉಚಿತವಾಗಿ ಊಟ, ಅಗತ್ಯ ವಸ್ತುಗಳನ್ನು ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದ. ಸಮಾಜ ಸೇವಕ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ಈತ ಮಾರಿಸ್‌ ಭಾಯ್‌ ಎಂದೇ ಖ್ಯಾತಿಯಾಗಿದ್ದ. 2022ರಲ್ಲಿ ಈತನ ವಿರುದ್ಧ ಅತ್ಯಾಚಾರ, ವಂಚನೆ, ಧಮ್ಕಿ ಹಾಕಿದ ಪ್ರಕರಣಗಳು ದಾಖಲಾಗಿದ್ದವು. ಅತ್ಯಾಚಾರ ಪ್ರಕರಣದಲ್ಲಿ ಈತ ಜೈಲಿಗೂ ಹೋಗಿಬಂದಿದ್ದಾನೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version