Site icon Vistara News

Azad Party | ಆಜಾದ್ ಪಕ್ಷದಿಂದ ಯಾರಿಗೆ ಲಾಭ, ನಷ್ಟ? ಕಾಂಗ್ರೆಸ್ ಸೋಲಿಸಿದ ತೃಪ್ತಿ ಗುಲಾಂ ಸಾಬ್‌ಗೆ!

Gulam Nabi Azad

ಮಲ್ಲಿಕಾರ್ಜನ ತಿಪ್ಪಾರ, ಬೆಂಗಳೂರು
ಕಾಂಗ್ರೆಸ್ ತೊರೆದಿರುವ ಗುಲಾಂ ನಬಿ ಆಜಾದ್ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮದೇ ಹೊಸ ಪಕ್ಷ(Azad Party)ವನ್ನು ಸ್ಥಾಪಿಸುವುದು ಖಚಿತವಾಗಿದೆ. ಕಾಂಗ್ರೆಸ್‌ನಲ್ಲಿ ಸುಮಾರು ಐದು ದಶಕಗಳ ಕಾಲ ರಾಜಕಾರಣ ಮಾಡಿದ್ದ ಆಜಾದ್ ಅವರೀಗ, ನಾಯಕತ್ವ ವಿರುದ್ಧ ಆರೋಪಿಸಿ ಪಕ್ಷದಿಂದ ಹೊರ ಬಂದಿದ್ದಾರೆ. ಮುಂದಿನ ವರ್ಷ ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಆಜಾದ್ ಅವರ ರಾಜಕೀಯ ನಡೆಗಳ ಮೇಲೆ ಎಲ್ಲರ ಗಮನ ಸೆಳೆದಿದೆ.

ರಾಜ್ಯಸಭೆಗೆ ಮತ್ತೆ ಸ್ಪರ್ಧಿಸಲು ಅವಕಾಶ ನಿರಾಕರಿಸಿದಾಗಲೇ ಕಾಂಗ್ರೆಸ್ ವಿರುದ್ಧ ಬುಸುಗುಡುತ್ತಿದ್ದ ಗುಲಾಂ ನಬಿ ಆಜಾದ್ ಅವರಿಗೆ, ಕಾಂಗ್ರೆಸ್ ಅಧ್ಯಕ್ಷ ಸ್ಥಾನವೂ ಸಿಗುವುದಿಲ್ಲ ಎಂಬುದು ಖಚಿತವಾಗುತ್ತಿದ್ದಂತೆ ರಾಜೀನಾಮೆ ಬಿಸಾಕಿ ಹೊರ ಬಂದಿದ್ದಾರೆ. ಈ ಸಂಗತಿಗಳೇನೂ ಗುಟ್ಟಾಗಿ ಉಳಿದಿಲ್ಲ. ಪ್ರಧಾನಿ ಹುದ್ದೆಯೊಂದನ್ನು ಬಿಟ್ಟು ಬಹುತೇಕ ಎಲ್ಲ ಹುದ್ದೆಗಳನ್ನು, ಅಧಿಕಾರಗಳನ್ನು ಅನುಭವಿಸಿರುವ ಆಜಾದ್ ಅವರಿಂದ ಪಕ್ಷಕ್ಕೂ ಅಷ್ಟೇ ಉಪಯೋಗವಾಗಿದೆ. ಇದರಲ್ಲೇನೂ ವಿವಾದವಿಲ್ಲ. ಆದರೆ, ಪಕ್ಷವು ಸಂಕಟದ ಸ್ಥಿತಿಯಲ್ಲಿರುವಾಗ ಆಜಾದ್‌ರಂಥ ನಾಯಕರು ಹೊರ ಬಂದಿರುವ ಬಗ್ಗೆ ಹಲವರಿಗೆ ತಕರಾರುಗಳಿವೆ.

ಅದೇನೇ ಇರಲಿ, ಆಜಾದ್ ಅವರ ಹೊಸ ಪಕ್ಷವು ಜಮ್ಮು ಮತ್ತು ಕಾಶ್ಮೀರದಲ್ಲಿ ಏನೆಲ್ಲ ರಾಜಕೀಯ ಸ್ಥಿತ್ಯಂತರಗಳಿಗೆ, ಪಲ್ಲಟಗಳಿಗೆ ಕಾರಣವಾಗಲಿದೆ ಎಂಬ ಚರ್ಚೆಗಳು ಜೋರಾಗಿವೆ. ಮುಂಬರುವ ವಿಧಾನಸಭೆ ಎಲೆಕ್ಷನ್‌ನಲ್ಲಿ ಆಜಾದ್ ಅವರ ಪಕ್ಷವು ಏಕಾಂಗಿಯಾಗಿ ಗೆದ್ದು ಅಧಿಕಾರ ಹಿಡಿಯುವುದು ಕಷ್ಟ. ಇದಕ್ಕೇನೂ ತಜ್ಞತೆ ಬೇಕಿಲ್ಲ. ಆದರೆ, ಕಾಂಗ್ರೆಸ್, ಭಾರತೀಯ ಜನತಾ ಪಾರ್ಟಿ(ಬಿಜೆಪಿ), ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ), ನ್ಯಾಷನಲ್ ಕಾನ್ಫರೆನ್ಸ್(ಎನ್‌ಸಿ)ಗಳಿಗೆ ಆಜಾದ್ ಅವರ ಪಕ್ಷದಿಂದ ಏನು ನಷ್ಟಗಳಾಗಲಿವೆ, ಲಾಭಗಳಾಗಲಿವೆ ಎಂಬುದು ಈಗ ನಡೆಯುತ್ತಿರುವ ಲೆಕ್ಕಾಚಾರಗಳು. ಮೇಲ್ನೋಟಕ್ಕೆ ಬಿಜೆಪಿಯೊಂದನ್ನು ಹೊರತುಪಡಿಸಿ ಉಳಿದೆಲ್ಲ ಪಕ್ಷಗಳಿಗೆ ಆಜಾದ್ ಅವರ ಪಕ್ಷವು ಮಗ್ಗಲು ಮುಳ್ಳಾಗಲಿದೆ.

ಜಮ್ಮು ಮತ್ತು ಕಾಶ್ಮೀರ ಇಬ್ಭಾಗದ ಮುಂಚೆ ಮುಸ್ಲಿಮ್ ಕೇಂದ್ರೀತ ರಾಜಕಾರಣವು ಪ್ರಾಮುಖ್ಯತೆಯನ್ನು ಪಡೆದುಕೊಂಡಿತ್ತು. ಆದರೆ, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಕಲ್ಪಿಸುವ 370 ಆರ್ಟಿಕಲ್ ರದ್ದುಪಡಿಸಿ, ಕಣಿವೆ ರಾಜ್ಯವನ್ನು ಇಬ್ಭಾಗ ಮಾಡಲಾಯಿತು. ವಿಧಾನಸಭೆ ಕ್ಷೇತ್ರಗಳ ಪುನರ್ವಿಂಗಡನೆ ಬಳಿಕ, ಇಡೀ ರಾಜಕಾರಣದ ಚಹರೆ ಬದಲಾಗಿದೆ. ಕಡಿಮೆ ಕ್ಷೇತ್ರಗಳಿದ್ದ ಜಮ್ಮು ಪ್ರದೇಶದಲ್ಲೂಈಗ ಸೀಟು ಹೆಚ್ಚಾಗಿವೆ. ಹಿಂದೂ ಮತದಾರರೇ ಹೆಚ್ಚಿರುವ ಈ ಪ್ರದೇಶವೂ ಕಣಿವೆ ರಾಜ್ಯದಲ್ಲಿ ಈಗ ಪ್ರಮುಖ ಪಾತ್ರವನ್ನು ನಿರ್ವಹಿಸಲಿದೆ. ಇದೆಲ್ಲವೂ ಬಿಜೆಪಿಯ ಬಹುದಿನದಿಂದಲೂ ನಡೆದುಕೊಂಡ ನೀತಿಯಂತೆ ಆದ ಬದಲಾವಣೆಗಳು.

ಕಾಂಗ್ರೆಸ್‌ಗೆ ಹೊಡೆತ
ಕೆಲವು ರಾಜಕೀಯ ವಿಶ್ಲೇಷಕರ ಪ್ರಕಾರ, ಆಜಾದ್ ಅವರ ಪಕ್ಷವು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಹೊಡೆತ ನೀಡಲಿದೆ. ಹಾಗಂತ, ಕಾಶ್ಮೀರ ಕಣಿವೆಯಲ್ಲಿ ಗಹನವಾದ ಪರಿಣಾಮ ಬೀರಲಿದೆ ಎನ್ನಲಾಗದು. ಆಜಾದ್ ಬೆನ್ನಲ್ಲೇ ಅವರಿಗೆ ನಿಷ್ಠೆ ತೋರಿಸಿ, ಕಣಿವೆ ಕಾಂಗ್ರೆಸ್‌‌ನಿಂದ ಬಹಳಷ್ಟು ನಾಯಕರು ತೊರೆದಿದ್ದಾರೆ. ಹಾಗಾಗಿ, ಕಾಂಗ್ರೆಸ್‌ಗೆ ಮುಂದಿನ ಎಲೆಕ್ಷನ್‌ನಲ್ಲಿ ಬಹುದೊಡ್ಡ ಹೊಡೆತ ಬೀಳಲಿದೆ ಮತ್ತು ಇದುವೇ ಆಜಾದ್ ಅವರ ಸಾಧನೆಯಾಗಲಿದೆ!

ಬಿಜೆಪಿಗೇ ಹೆಚ್ಚು ಲಾಭ
ಹೇಗೆ ನೋಡಿದರೂ ಆಜಾದ್ ಸ್ಥಾಪಿಸುವ ಹೊಸ ಪಕ್ಷದಿಂದ ಯಾರಿಗಾದರೂ ಲಾಭವಾಗುವುದಿದ್ದರೆ ಅದು ಬಿಜೆಪಿಗೆ. ಬಿಜೆಪಿ ವಿರೋಧಿ ಮತಗಳನ್ನು ವಿಭಜಿಸುವ ಕೆಲಸವನ್ನು ಆಜಾದರ ಪಕ್ಷವು ಮಾಡಲಿದೆ. ಇದರಲ್ಲೇನೂ ಅನುಮಾನವೇ ಇಲ್ಲ. ವಿಶೇಷವಾಗಿ ಜಮ್ಮು ಪ್ರದೇಶದಲ್ಲಿ ಬಿಜೆಪಿಯ ವಿರೋಧಿ ಮತಗಳ ಕ್ರೋಡೀಕರಣವನ್ನು ಛಿದ್ರ ಮಾಡಬಹುದು. ಪುನರ್ವಿಂಗಡಣೆ ಬಳಿಕ ಜಮ್ಮು ಭಾಗದಲ್ಲಿ 9 ಕ್ಷೇತ್ರಗಳಲ್ಲಿ ಮುಸ್ಲಿಮ್ ಮತದಾರರು ನಿರ್ಣಾಯಕರು. ಪುನರ್ವಿಂಗಡಣೆ ಮೊದಲು 13 ಕ್ಷೇತ್ರಗಳಲ್ಲಿ ಅವು ನಿರ್ಣಾಯಕರಾಗಿದ್ದರು. ಈ 9 ಕ್ಷೇತ್ರಗಳಲ್ಲಿ ಪಿಡಿಪಿ, ಎನ್‌ಸಿ, ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಪೈಪೋಟಿ ಸಹಜ. ಈಗ ಆಜಾದರ ಪಕ್ಷವೂ ಕಣಕ್ಕಿಳಿಯಲಿರುವುದರಿಂದ ಅದರ ಲಾಭ ನೇರವಾಗಿ ಬಿಜೆಪಿ ಆಗಲಿದೆ. ಸ್ವಂತ ಬಲದ ಮೇಲೆಯೇ 30 ಸೀಟು ಗೆಲ್ಲುವ ಲೆಕ್ಕಾಚಾರವಿರುವ ಬಿಜೆಪಿ, ಆಜಾದರಿಂದಾಗಿ ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದು. ಒಂದು ವೇಳೆ ಹಾಗೇನಾದರೂ ಆದರೆ ಕಾಶ್ಮೀರದಲ್ಲಿ ಬಿಜೆಪಿಯ ಸಿಎಂ ಪ್ರತಿಷ್ಠಾಪಿತವಾಗುವುದನ್ನು ಯಾರೂ ತಡೆಯಲಾರರು!

ಗುಪಕರ್ ಕೂಟದ ಕತೆ ಏನು?
ಪಿಡಿಪಿ, ಎನ್‌ಸಿ ನೇತೃತ್ವದ ಗುಪಕರ್ ಕೂಟ ಯಾವ ತಂತ್ರ ಹೆಣೆಯಲಿದೆ ಎಂಬುದರ ಮೇಲೆ ಕಾಶ್ಮೀರ ಕಣಿವೆಯ ಎಲೆಕ್ಷನ್ ಫಲಿತಾಂಶ ಕೂಡ ನಿರ್ಧಾರವಾಗಲಿದೆ. ವಿಶೇಷ ಸ್ಥಾನಮಾನ ಕಲ್ಪಿಸುವ 370ನೇ ವಿಧಿ ರದ್ದಾದ ಹಿನ್ನೆಲೆಯಲ್ಲಿ ಗುಪಕರ್ ಘೋಷಣೆಯಡಿ ಈ ಪಕ್ಷಗಳು ಒಂದೇ ವೇದಿಕೆಯಡಿ ಬಂದಿವೆ. 2020ರಲ್ಲಿ ನಡೆದ ಡಿಡಿಸಿ(ಡಿಸ್ಟ್ರಿಕ್ಟ್ ಡೆವಲಪ್‌ಮೆಂಟ್ ಕೌನ್ಸಿಲ್) ಎಲೆಕ್ಷನ್‌ನಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದಿವೆ. ಇನ್‌ಫ್ಯಾಕ್ಟ್, ಹಿಂದೂಗಳೇ ಹೆಚ್ಚಿರುವ ಜಮ್ಮು ಪ್ರದೇಶದಲ್ಲೂ ಗುಪಕರ್ ಕೂಟ ನಿರೀಕ್ಷೆಗಿಂತಲೂ ಹೆಚ್ಚಿನ ಸ್ಥಾನಗಳನ್ನು ಬಾಚಿಕೊಳ್ಳಲು ಯಶಸ್ವಿಯಾಗಿವೆ. ಈ ನೆಲೆಯಲ್ಲಿ ಹೇಳುವುದಾದರೆ, ಜಮ್ಮುವಿನಲ್ಲಿರುವ ಹಿಂದೂಗಳಿದ್ದು ತನಗೆ ಹೆಚ್ಚು ಸ್ಥಾನಗಳು ಬರಲಿವೆ ಎಂದು ಬಿಜೆಪಿ ನಿರಾಳವಾಗಿರುವಂತೆಯೇ ಇಲ್ಲ. ಹಾಗಾಗಿ, ಗುಪಕರ್ ಕೂಟವೇನೂ ವಿಧಾನಸಭೆಯಲ್ಲೂ ಡಿಡಿಸಿ ಎಲೆಕ್ಷನ್ ತಂತ್ರವನ್ನು ಅನುಸರಿಸಿದರೆ, ಸಖತ್ ಫೈಟ್ ಸಿಗಲಿದೆ. ಆಗ ಆಜಾದ್ ಪಕ್ಷವು ವೋಟ್ ಕಟರ್ ಕೆಲಸ ಮಾಡಬಹುದು. ಕಾಶ್ಮೀರ ಭಾಗದಲ್ಲಿ ಆಜಾದ್ ಜನಪ್ರಿಯರಾಗಿದ್ದರೂ ಅವರು ಜಮ್ಮುವಿನ ದೋಡಾ ಜಿಲ್ಲೆಯವರು ಎಂಬುದನ್ನು ಮರೆಯಬಾರದು. ಒಂದು ವೇಳೆ, ಆಜಾದ್ ಫ್ಯಾಕ್ಟರ್ ಏನಾದರೂ ವರ್ಕ್ ಆದರೆ, ಡಿಡಿಸಿ ತಂತ್ರವೇನೂ ಗುಪಕರ್ ಕೂಟಕ್ಕೆ ಫಲ ಕೊಡುವುದಿಲ್ಲ. ಬದಲಿಗೆ ಅದರ ಸಂಪೂರ್ಣ ಲಾಭ ಬಿಜೆಪಿಗೇ ಆಗಲಿದೆ!

ಆಜಾದ್ ಪಕ್ಷಕ್ಕೇನು ಸಿಗಲಿದೆ?
ಖಂಡಿತವಾಗಿಯೂ ಕಾಂಗ್ರೆಸ್‌ ಅನ್ನು ಸೋಲಿಸಿದ ತೃಪ್ತಿ ಗುಲಾಂ ನಬಿ ಆಜಾದ್ ಅವರಿಗೆ ಸಿಗಲಿದೆ. ಒಂದಿಷ್ಟು ಸೀಟುಗಳು ಸಿಗಬಹುದು. ಮತದಾರ ಏನಾದರೂ, ಆಜಾದ್ ಅವರಿಗೆ ಅನ್ಯಾಯವಾಗಿದೆ ಎಂದು ಸಂಪೂರ್ಣವಾಗಿ ಬೆಂಬಲವನ್ನು ನೀಡಿದರೆ, ಕಿಂಗ್ ಮೇಕರ್ ಆಗಬಹುದು. ಆದರೆ, ಅಂಥ ಸ್ಥಿತಿ ಬರುವುದು ಅನುಮಾನ. ಬೆರಳೆಣಿಕೆಯಷ್ಟು ಸೀಟುಗಳನ್ನು ಪಡೆದುಕೊಂಡು, ಬಿಜೆಪಿ ವಿರೋಧಿ ಮತಗಳನ್ನು ಚೆಲ್ಲಾಪಿಲ್ಲಿ ಮಾಡುವ ಕೆಲಸವನ್ನು ಧಾರಾಳವಾಗಿ ನಿರೀಕ್ಷಿಸಬಹುದಾಗಿದೆ.

ಯಾರು ಜತೆ ಹೋಗ್ತಾರೆ ಆಜಾದ್?
ಆಜಾದ್ ಅವರು ಯಾರ ಜತೆ ಹೋಗುತ್ತಾರೆ, ಅವರು ಮುಂದಿನ ನಡೆ ಏನಾಗಿರುತ್ತದೆ ಎಂಬುದು ಅವರು ಚುನಾವಣೆಯಲ್ಲಿ ಎಷ್ಟು ಸೀಟುಗಳನ್ನು ಗೆಲ್ಲುತ್ತಾರೆಂಬುದರ ಮೇಲೆ ನಿರ್ಧಾರವಾಗಬಹುದು. ಇಲ್ಲಿ ಮೂರು ಸಾಧ್ಯತೆಗಳಿಗೆ ಅವಕಾಶವಿದೆ.

  1. ಬಿಜೆಪಿ ಜತೆ ಸಖ್ಯೆ ಬೆಳೆಸುವುದು. ಈ ಹಿಂದೆ ಆಜಾದ್ ಅವರು, ”ಕಾಶ್ಮೀರದಲ್ಲಿ ಯಾವಾಗ ಕಪ್ಪ ಬಣ್ಣದ ಹಿಮ ಸೃಷ್ಟಿಯಾಗುತ್ತದೆಯೋ ಆಗ ನಾನು ಬಿಜೆಪಿ ಸೇರುತ್ತೇನೆ,” ಎಂದು ಬಹಿರಂಗವಾಗಿ ಹೇಳಿದ್ದಾರೆ. ಈ ಹೇಳಿಕೆಯ ಆಧಾರದ ಮೇಲೆ ಅವರು ಬಿಜೆಪಿ ಸಖ್ಯ ಬೆಳೆಸಲಾರರು ಎಂದಿಟ್ಟುಕೊಳ್ಳೋಣ. ಆದರೆ, ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರು, ಶತ್ರುಗಳೆಂದೇನೂ ಇಲ್ಲ. ಎಲ್ಲವೂ ಆ ಕ್ಷಣದ ಲಾಭ ನಷ್ಟಗಳನ್ನಾಧರಿಸಿ ಶತ್ರು ಮತ್ತು ಮಿತ್ರರ ಪಾತ್ರಗಳು ಅದಲು-ಬದಲಾಗುತ್ತವೆ. ಹಾಗಾಗಿ, ಬಿಜೆಪಿಯ ಜತೆ ಆಜಾದ್ ಸಖ್ಯವನ್ನು ತಳ್ಳಿ ಹಾಕುವಂತಿಲ್ಲ. ಇದು ಚುನಾವಣಾ ಫಲಿತಾಂಶದ ಮೇಲೆ ನಿರ್ಧಾರವಾಗಲಿದೆ.
  2. ಕಾಂಗ್ರೆಸ್ ಜತೆ ಹೊಂದಾಣಿಕೆ. ಈ ಅವಕಾಶವನ್ನೂ ನಿರಾಕರಿಸುವಂತಿಲ್ಲ. ಚುನಾವಣಾ ಪೂರ್ವ ಅಥವಾ ಚುನಾವಣೆ ನಂತರ ಕಾಂಗ್ರೆಸ್ ಜತೆ ಮೈತ್ರಿ ಸಾಧ್ಯತೆಯಿದೆ. ಕಾಂಗ್ರೆಸ್ ಪಕ್ಷವನ್ನು ತೊರೆದು ಎಷ್ಟು ನಾಯಕರು ಮತ್ತು ಕಾರ್ಯಕರ್ತರು ಹೊಸ ಪಕ್ಷವನ್ನು ಸೇರುತ್ತಾರೆ ಎಂಬುದರ ಮೇಲೆ ನಿರ್ಧಾರವಾಗಲಿದೆ. ಜತೆಗೆ, ಕಾಂಗ್ರೆಸ್ ಅಧ್ಯಕ್ಷ ಯಾರಾಗುತ್ತಾರೆಂಬ ಅಂಶವೂ ಇದಕ್ಕೆ ಪೂರಕವಾಗಲಿದೆ. ಗಾಂಧಿಯೇತರ ವ್ಯಕ್ತಿ ಕಾಂಗ್ರೆಸ್ ಅಧ್ಯಕ್ಷರಾದರೆ ಹೊಂದಾಣಿಕೆಯ ಅವಕಾಶದ ಸಾಧ್ಯತೆ ಹೆಚ್ಚಾಗಿರುತ್ತದೆ.
  3. ಕಾಂಗ್ರೆಸ್, ಬಿಜೆಪಿ ಅಥವಾ ಗುಪಕರ್ ಕೂಟ ಜತೆ ಹೆಜ್ಜೆ ಹಾಕದೇ ತಮ್ಮದೇ ಆದ ಸ್ವಂತ ನಡೆಯನ್ನು ಮುಂದುವರಿಸಬಹುದು. ಚುನಾವಣೆಯಲ್ಲಿ ಸೋಲು ಅಥವಾ ಗೆಲುವಿನ ಬಗ್ಗೆ ತಲೆಕೆಡಿಸಿಕೊಳ್ಳದೇ, ಭವಿಷ್ಯದ ದೃಷ್ಟಿಯಿಂದ ಈ ನೀತಿಯನ್ನು ತಮ್ಮದಾಗಿಸಿಕೊಳ್ಳಬಹುದು. ಆದರೆ, ಈ ಸಾಧ್ಯತೆಗೆ ಅಂಥ ಬಲವಿಲ್ಲ. ಮಹತ್ವಾಕಾಂಕ್ಷಿಯಾಗಿರುವ ಆಜಾದ್ ಅವರು ಯಾವಾಗಲೂ ಕೇಂದ್ರಬಿಂದುವಾಗಿರುವಂತೆ ನೋಡಿಕೊಳ್ಳುತ್ತಾರೆ ಮತ್ತು ಅದು ಅವರಿಗೆ ಇಷ್ಟ ಕೂಡ.

ಪುನರ್ವಿಂಗಡನೆ ಬಳಿಕ
ಪುನರ್ವಿಂಗಡನೆ ಬಳಿಕ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಬಲಾಬಲ 90ಕ್ಕೇರಿದೆ. ಈ ಪೈಕಿ ಜಮ್ಮು ಪ್ರದೇಶದಲ್ಲಿ 43 ಕ್ಷೇತ್ರಗಳಿದ್ದರೆ, ಕಾಶ್ಮೀರ ಪ್ರದೇಶದಲ್ಲಿ 47 ಕ್ಷೇತ್ರಗಳಿವೆ.

ಪುನರ್ವಿಂಗಡನೆ ಮೊದಲು
ಜಮ್ಮು ಪ್ರದೇಶದ 37 ಸೀಟುಗಳ ಪೈಕಿ, 13 ಮುಸ್ಲಿಮ್ ಬಾಹುಳ್ಯ ಸೀಟುಗಳಿದ್ದವು. ಪುನರ್ವಿಂಗಡಣೆ ಬಳಿಕ 34 ಸೀಟುಗಳು ಹಿಂದೂ ಬಾಹುಳ್ಯ ಸೀಟುಗಳಾಗಿದ್ದರೆ, 9 ಕ್ಷೇತ್ರಗಳಲ್ಲಿ ಮುಸ್ಲಿಮ್ ಮತದಾರರು ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.

ಬಿಜೆಪಿ ಎಷ್ಟು ಸೀಟು ಗೆಲ್ಲಬಹುದು?
ಈಗಿರುವ ಲೆಕ್ಕಾಚಾರ ಪ್ರಕಾರಗಳ ಪೈಕಿ, ಜಮ್ಮು ಪ್ರದೇಶದಲ್ಲಿರುವ ಒಟ್ಟು43 ಕ್ಷೇತ್ರಗಳ ಪೈಕಿ 30 ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಬಹುದು. ಹಾಪ್ ವೇ ಮಾರ್ಕ್‌ಗೆ 45 ಸೀಟುಗಳು ಬೇಕಾಗಬಹುದು. ಹಾಗಾದರೆ ಉಳಿದ 15 ಸೀಟುಗಳು ಬಿಜೆಪಿಗೆ ಎಲ್ಲಿಂದ ಬರಬೇಕು? ನಿಶ್ಚಿತವಾಗಿಯೂ ಆಜಾದ್ ಅವರ ಹೊಸ ಪಕ್ಷ ಹಾಗೂ ಪಕ್ಷೇತರರು ಈ ನೆರವಿಗೆ ಬರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಇದು ಕೇವಲ ಸಾಧ್ಯತೆ ಮಾತ್ರ.

ಒಂದು ವೇಳೆ, ಬಿಜೆಪಿಯೇ ಏಕಾಂಗಿಯಾಗಿ ಕಾಶ್ಮೀರ ಮತ್ತು ಜಮ್ಮು ಎರಡೂ ಪ್ರದೇಶದಲ್ಲಿ 30ರಿಂದ 40 ಸೀಟುಗಳನ್ನು ಗೆಲ್ಲಲು ಸಾಧ್ಯವಾದರೆ ಖಂಡಿತವಾಗಿಯೂ ಅದು ತನ್ನದೇ ಮುಖ್ಯಮಂತ್ರಿಯನ್ನು ಪ್ರತಿಷ್ಠಾಪಿಸಲಿದೆ. ಅದು ಹಿಂದೂ ವ್ಯಕ್ತಿಯೇ ಆಗಿರಬಹುದು ಇಲ್ಲವೇ, ಮುಸ್ಲಿಮ್ ವ್ಯಕ್ತಿಯಾಗಿರಬಹುದು. ಈ ಸಿಎಂ ಕೇಂದ್ರದ ಅಣತಿಯಂತೆ ನಡೆಯುವಂತಿರಬೇಕಷ್ಟೇ!

ಇದನ್ನೂ ಓದಿ | Ghulam Nabi Azad | ಸ್ವಾಭಿಮಾನವಿದ್ದವರು ಕಾಂಗ್ರೆಸ್ ಬಿಟ್ಟು ಬರಲಿ, ಗುಲಾಂ ನಬಿ ಆಜಾದ್ ಕರೆ

Exit mobile version