ವಿಶ್ವದ ಮಾನವ ಸಂಪನ್ಮೂಲಗಳ ಖಜಾನೆ ಎನಿಸಿರುವ ನಮ್ಮ ದೇಶದಲ್ಲಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಸಂಖ್ಯೆ ಅಗಾಧ. ಅವರಲ್ಲಿ ವಿವೇಕಾನಂದರ (National Youth Day) ವಿಚಾರಧಾರೆಗಳಿಂದ ಸ್ಫೂರ್ತಿ ತುಂಬಿ, ನಾಯಕತ್ವದ ಮತ್ತು ಹೊಣೆಗಾರಿಕೆಯ ಗುಣಗಳನ್ನು ಪ್ರೋತ್ಸಾಹಿಸಿದಲ್ಲಿ ಪ್ರಗತಿಪರ, ಸಾಮಾಜಿಕ ಬದ್ಧತೆಯುಳ್ಳ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಭಾರತಕ್ಕೆ ಸಾಧ್ಯವಿದೆ.
ಭಾರತೀಯ ಯುವಜನತೆಯ ಇಚ್ಛಾಶಕ್ತಿ ಮತ್ತು ಸಾಮರ್ಥ್ಯದ ಪ್ರತೀಕ ಎನಿಸಿರುವ ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ʻರಾಷ್ಟ್ರೀಯ ಯುವ ದಿನʼ (National Youth Day) ಎಂದು ಪ್ರತಿ ವರ್ಷ ಜನವರಿ 12ರಂದು ಆಚರಿಸಲಾಗುತ್ತದೆ. ಭಾರತದ ಸ್ವಾತಂತ್ರ್ಯ ಚಳುವಳಿ ಮತ್ತು ರಾಷ್ಟ್ರೀಯತೆ ಭಾವನೆಗಳ ಪುನರುತ್ಥಾನಕ್ಕೆ ಮಹತ್ವದ ಕೊಡುಗೆಯನ್ನು ನೀಡಿದ್ದ ವಿವೇಕಾನಂದರು, ಜಡ್ಡು ಗಟ್ಟಿದ್ದ ಸಮಾಜಕ್ಕೆ ಪ್ರಖರವಾದ ವೈಚಾರಿಕೆ ಬುನಾದಿಯನ್ನು ಹಾಕಲು ಉದ್ದೇಶಿಸಿದ್ದರು. ಈ ನಿಟ್ಟಿನಲ್ಲಿ ಅವರ ತತ್ವಗಳು ಮತ್ತು ಆದರ್ಶಗಳನ್ನು ಇಂದಿನ ಮತ್ತು ಭವಿಷ್ಯದ ಪೀಳಿಗೆಗಳು ಅರಿಯಬೇಕು ಎಂಬ ಉದ್ದೇಶದಿಂದ ಅವರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನ ಎಂದು ಆಚರಿಸಲಾಗುತ್ತಿದೆ.
ಕುತೂಹಲಿಯಾದ ಬಾಲಕನೊಬ್ಬ ವಿಶ್ವದ ಆಧ್ಯಾತ್ಮದ ಪ್ರಭೆಯಾಗಿ ಹೊರಹೊಮ್ಮಿದ್ದು ಈಗ ಇತಿಹಾಸ. ಧರ್ಮವನ್ನು ಸಂಕುಚಿತ ಸಂಕೋಲೆಗಳಿಂದ ಹೊರತಂದು, ಅದಕ್ಕೆ ಬೇಕಿದ್ದ ಮಾನವೀಯತೆಯ ಲೇಪ ನೀಡಿ, ಬದುಕಿನಲ್ಲಿ ಆಧುನಿಕತೆಯ ಅಗತ್ಯವನ್ನು ಎತ್ತಿಹಿಡಿದು, ದೇಶಪ್ರೇಮದ, ಸ್ವಾತಂತ್ರ್ಯದ ಕಿಡಿಯನ್ನು ಹಚ್ಚಿದವರು ವಿವೇಕಾನಂದರು. 19ನೇ ಶತಮಾನದ ಅವರ ವಿಚಾರಗಳು ಮತ್ತು ಪ್ರಖರ ಚಿಂತನೆಗಳು ಇಂದಿಗೂ ಸಮಕಾಲೀನ ಎನ್ನುವಂತಿವೆ. ಈ ಹಿನ್ನೆಲೆಯಲ್ಲಿ, ವಿವೇಕಾನಂದರ ಜನ್ಮದಿನವನ್ನು ʻರಾಷ್ಟ್ರೀಯ ಯುವ ದಿನʼ (National Youth Day) ಎಂದು 1984ರಲ್ಲಿ ಘೋಷಿಸಲಾಯಿತು. ಈ ಮೂಲಕ ದೇಶದ ಯುವ ಶಕ್ತಿಯನ್ನು ಸ್ಫೂರ್ತಗೊಳಿಸಿ, ದೇಶದ ಪ್ರಗತಿಗೆ ಭದ್ರ ಬುನಾದಿಯನ್ನು ಹಾಕುವ ಉದ್ದೇಶ ಭಾರತ ಸರಕಾರದ್ದು.
ಇದರ ಉದ್ದೇಶವೇನು?
ಯುವಶಕ್ತಿ ದಿನವನ್ನು (National Youth Day) ಏಕೆ ಆಚರಿಸಬೇಕು? ಅದಕ್ಕೆ ಅಷ್ಟೆಲ್ಲಾ ಮಹತ್ವ ಕೊಡುವ ಅಗತ್ಯವಿದೆಯೇ ಎಂಬುದನ್ನೂ ತಿಳಿಯಬೇಕಿದೆ. ದೇಶವೊಂದು ಉನ್ನತಿಯನ್ನು ಸಾಧಿಸಬೇಕೆಂದಾದರೆ, ಅದರ ಯುವಶಕ್ತಿಯಲ್ಲಿ ನಾಯಕತ್ವ ಮತ್ತು ಹೊಣೆಗಾರಿಕೆಯನ್ನು ಮೈಗೂಡಿಸಿಕೊಳ್ಳುವ ಗುಣಗಳಿರಬೇಕು. ಆಗಲೇ ಪ್ರಗತಿ, ಬದಲಾವಣೆ, ಹೊಸತನಗಳನ್ನು ಸಾಧಿಸಲು ದೇಶಕ್ಕೆ ಸಾಧ್ಯ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಯುವ ದಿನದಲ್ಲಿ (National Youth Day), ವಿವೇಕಾನಂದರ ಸಂದೇಶಗಳನ್ನು ಮತ್ತು ಯುವಶಕ್ತಿಯ ಮಹತ್ವ ಸಾರುವುದು ಮಾತ್ರವಲ್ಲ, ಯುವಕರ ಇಚ್ಛಾಶಕ್ತಿಯಿಂದ ಭಾರತದ ಮುನ್ನಡೆಯಬಹುದಾದ ಹಾದಿಗಳ ಮುನ್ನೋಟವನ್ನು ನೀಡುವುದೂ ಉದ್ದೇಶವಾಗಿದೆ. ವಿಶ್ವದ ಮಾನವ ಸಂಪನ್ಮೂಲಗಳ ಖಜಾನೆ ಎನಿಸಿರುವ ನಮ್ಮ ದೇಶದಲ್ಲಿ ೪೦ ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಸಂಖ್ಯೆ ಅಗಾಧ. ಇಂಥ ಸನ್ನಿವೇಶದಲ್ಲಿ ಅವರಲ್ಲಿ ವಿವೇಕಾನಂದರ ವಿಚಾರಧಾರೆಗಳಿಂದ ಸ್ಫೂರ್ತಿ ತುಂಬಿ, ನಾಯಕತ್ವದ ಮತ್ತು ಹೊಣೆಗಾರಿಕೆಯ ಗುಣಗಳನ್ನು ಪ್ರೋತ್ಸಾಹಿಸಿದಲ್ಲಿ ಪ್ರಗತಿಪರ, ಸಾಮಾಜಿಕ ಬದ್ಧತೆಯುಳ್ಳ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಭಾರತಕ್ಕೆ ಸಾಧ್ಯವಿದೆ.
ಪ್ರಧಾನಿಯಿಂದ ಚಾಲನೆ
ಜನವರಿ 12ರಂದು ಆರಂಭವಾಗಲಿರುವ ರಾಷ್ಟ್ರೀಯ ಯುವಜನೋತ್ಸವಕ್ಕೆ (National Youth Day) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ನಾಸಿಕ್‌ನಲ್ಲಿ ಚಾಲನೆ ನೀಡಲಿದ್ದಾರೆ. ಕಳೆದ 27 ವರ್ಷಗಳಿಂದ ರಾಷ್ಟ್ರೀಯ ಯುವಜನೋತ್ಸವ ನಡೆಯುತ್ತಿದೆ. ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವಾಲಯ ಇದನ್ನು ನಿವರ್ಹಿಸುತ್ತಿದ್ದು, ಎಲ್ಲಾ ರಾಜ್ಯಗಳಲ್ಲಿ ಈ ಕುರಿತಾಗಿ ಹಲವು ರೀತಿಯ ಕಾರ್ಯಕ್ರಮಗಳು ನಡೆಯುತ್ತವೆ. ಕಳೆದ ಸಾಲಿನಲ್ಲಿ ಹುಬ್ಬಳ್ಳಿಯಲ್ಲಿನ ಆರಂಭವಾಗಿದ್ದ ಯುವಜನೋತ್ಸವಕ್ಕೆ ಪ್ರಧಾನಿಯವರು ಚಾಲನೆ ನೀಡಿದ್ದರು.
ಇದನ್ನೂ ಓದಿ: National Youth Day: ವಿಸ್ತಾರ ನ್ಯೂಸ್‌ನಿಂದ ಪಾವಗಡದಲ್ಲಿ ಜ.12ರಂದು ಸ್ವಾಮಿ ವಿವೇಕಾನಂದ ಜನ್ಮೋತ್ಸವ