ಪ್ರಸಕ್ತ ಸಾಲಿನ ನೊಬೆಲ್ (Nobel Prize 2023) ವಿಜೇತರ ಹೆಸರಗಳನ್ನು ಘೋಷಣೆ ಮಾಡಲಾಗುತ್ತಿದೆ. ಪ್ರತಿ ಬಾರಿ ನೊಬೆಲ್ ಪುರಸ್ಕಾರ ಘೋಷಣೆಯಾದಾಗ ಮಹಾತ್ಮ ಗಾಂಧಿ ಅವರಿಗೇಕೆ ಈ ಪ್ರಶಸ್ತಿ ದೊರೆಯಲಿಲ್ಲ (Nobel Peace Prize) ಎಂಬ ಪ್ರಶ್ನೆ ಭಾರತೀಯರು ಮಾತ್ರವಲ್ಲ ಇಡೀ ಜಗತ್ತಿಗೆ ಕಾಡುತ್ತದೆ. ಯಾಕೆಂದರೆ, ಮಹಾತ್ಮ ಗಾಂಧಿ (Mahatma Gandhi) ಅವರು ಶಾಂತಿ ಪ್ರಿಯರು. ಸತ್ಯಾಗ್ರಹ(Satyagraha), ಅಹಿಂಸೆ (non-violent) ಅವರು ಅನುಸರಿಸಿದ ಮಾರ್ಗಗಳಾಗಿದ್ದವು. ಮಹಾತ್ಮ ಗಾಂಧಿ ಅವರ ನೇತೃತ್ವದಲ್ಲಿ ಭಾರತವು (Indian Independent Movement)ಇದೇ ಸತ್ಯಾಗ್ರಹ ಮತ್ತು ಅಹಿಂಸೆಗಳಿಂದಲೇ ಸ್ವಾತಂತ್ರವನ್ನು ಪಡೆಯಿತು. ಅವರು ಅನುಸರಿಸಿದ ಮಾರ್ಗಗಳು ಜಗತ್ತಿನಾದ್ಯಂತ ಅನೇಕರ ಇಂದಿಗೂ ಪ್ರೇರಣೆಯಾಗುತ್ತಿವೆ; ದಾರಿದೀಪವಾಗಿವೆ. ಹಾಗಿರುವಾಗ ಅವರಿಗೇಕೆ ಶಾಂತಿ ನೊಬೆಲ ಪ್ರಶಸ್ತಿ ದೊರೆಯಲಿಲ್ಲ ಎಂಬ ಮಿಲಿಯನ್ ಡಾಲರ್ ಪ್ರಶ್ನೆ ಎಲ್ಲರೂ ಕಾಡುತ್ತಿದೆ.
20ನೇ ಶತಮಾನದ ಅಹಿಂಸೆಗೆ ಪ್ರತೀಕವಾಗಿರುವ ಮಹಾತ್ಮ ಗಾಂಧಿ ಅವರಿಗೆ ಏಕೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಿಲ್ಲ ಎಂಬ ಸಂಗತಿಯನ್ನು ನೊಬೆಲ್ ಪ್ರಶಸ್ತಿ ಆಯ್ಕೆ ಸಮಿತಿಯೇ ಉತ್ತರ ನೀಡಿದೆ.
ನೊಬೆಲ್ ಶಾಂತಿ ಪ್ರಶಸ್ತಿಗಾಗಿ 1937, 1938, 1947 ಮತ್ತು 1948 ಜನವರಿಯಲ್ಲಿ ಹತ್ಯೆಯಾಗುವ ಕೆಲವು ದಿನಗಳ ಮುಂಚೆ ಮಹಾತ್ಮ ಗಾಂಧಿ ಅವರನ್ನು ನಾಮನಿರ್ದೇಶನ ಮಾಡಲಾಗಿತ್ತು. 1948ರಲ್ಲಿ ಅವರು ಸಾಯುವ ಮೊದಲು ಮಹಾತ್ಮ ಗಾಂಧಿ ಅವರಿಗೆ ಬಹುಮಾನವನ್ನು ನೀಡದಿರುವುದು ತಪ್ಪು ಎಂದು ಹಲವರು ಈಗಲೂ ಭಾವಿಸುತ್ತಾರೆ.
1937ರಲ್ಲೇ ನಾಮನಿರ್ದೇಶನ
1937ರಲ್ಲಿ ನಾರ್ವೇಜಿಯನ್ ಸಂಸತ್ತಿನ ಸದಸ್ಯ ಓಲೆ ಕೊಲ್ಬ್ಜೋರ್ನ್ಸೆನ್ ಅವರು ಮಹಾತ್ಮ ಗಾಂಧಿ ಅವರನ್ನು ನಾಮನಿರ್ದೇಶನ ಮಾಡಿದ್ದರು. ಅಲ್ಲದೇ, ನೊಬೆಲ್ ಶಾಂತಿ ಪುರಸ್ಕಾರಕ್ಕಾಗಿ 13 ಅಭ್ಯರ್ಥಿಗಳ ಪೈಕಿ ಗಾಂಧಿ ಕೂಡ ಒಬ್ಬರಾಗಿದ್ದರು. ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಇರುವವರ ಕೆಲವರು, ಗಾಂಧಿ ಅವರು ನಿರಂತರ ಶಾಂತಿಪ್ರಿಯರಲ್ಲ. ಬ್ರಿಟಿಷರ ವಿರುದ್ಧ ಅವರು ಕರೆ ನೀಡುವ ಅಹಿಂಸಾ ಚಳವಳಿಗಳು ಹಿಂಸಾಚಾರ ಮತ್ತು ಭಯೋತ್ಪಾದನೆಗೆ ಕಾರಣವಾಗುತ್ತಿವೆ ಎಂದು ಪ್ರಶಸ್ತಿ ನೀಡುವುದನ್ನು ವಿರೋಧಿಸಿದ್ದದರು. ಇದಕ್ಕಾಗಿ ಅವರು ಅವರು 1920-21ರಲ್ಲಿ ಗಾಂಧಿ ಕರೆ ನೀಡಿದ್ದ ಮೊದಲ ಅಸಹಕಾರ ಚಳವಳಿಯನ್ನು ಅವರು ಉದಾಹರಣೆಯಾಗಿ ನೀಡಿದ್ದರು. ಈ ಚಳವಳಿ ವೇಳೆ ಜನರು ಪೊಲೀಸರನ್ನು ಕೊಲೆ ಮಾಡಿದರು. ಗೋರಖ್‌ಪುರ ಜಿಲ್ಲೆಯ ಚೌರಿಚೌರಾದಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲಾಗಿತ್ತು ಎಂಬುದು ಅವರ ವಾದಕ್ಕೆ ಕಾರಣವಾಗಿತ್ತು.
ಸಮಿತಿಯಲ್ಲಿರುವ ಇನ್ನು ಕೆಲವರು, ಗಾಂಧಿ ಅನುಸರಿಸುತ್ತಿರುವ ವಿಚಾರಧಾರೆಗಳು ಭಾರತಕ್ಕೆ ಮಾತ್ರವೇ ಅನ್ವಯವಾಗುತ್ತಿವೆ ಹೊರತು ವಿಶ್ವಕ್ಕಲ್ಲ. ನೊಬೆಲ್ ಸಮಿತಿಯ ಸಲಹೆಗಾರ ಜಾಕೋಬ್ ಎಸ್ ವರ್ಮ್-ಮುಲ್ಲರ್, “ದಕ್ಷಿಣ ಆಫ್ರಿಕಾದಲ್ಲಿ ಅವರ ಸುಪ್ರಸಿದ್ಧ ಹೋರಾಟವು ಭಾರತೀಯರ ಪರವಾಗಿ ಮಾತ್ರವೇ ಆಗಿತ್ತು ಎಂದು ಹೇಳಬಹುದು. ನಿಕೃಷ್ಟವಾಗಿ ಬದುಕುತ್ತಿದ್ದ ಕರಿಯರ ಪರವಾಗಿರಲಿಲ್ಲ” ಎಂದು ಅಭಿಪ್ರಾಯಪಟ್ಟಿದ್ದರು.
1938, 1939ರಲ್ಲಿ ಮತ್ತೆ ನಾಮನಿರ್ದೇಶನ
1937ರಲ್ಲಿ ಚೆಲ್ವುಡ್ ಲಾರ್ಡ್ ಸೆಸಿಲ್ ಅವರು ನೊಬೆಲ್ ಶಾಂತಿ ಪುರಸ್ಕಾರಕ್ಕೆ ಭಾಜನರಾದರು. ಕೊಲ್ಬ್‌ಜೋರ್ನ್‌ಸೆನ್ ಅವರು ಮತ್ತೆ ಮಹಾತ್ಮಾ ಗಾಂಧಿ ಅವರನ್ನು ಶಾಂತಿ ಪುರಸ್ಕಾರಕ್ಕಾಗಿ 1938 ಮತ್ತು 1939ರಲ್ಲಿ ನಾಮನಿರ್ದೇಶನ ಮಾಡಿದರು. ಆದರೆ, ಅವರನ್ನು ಪ್ರಶಸ್ತಿಗೆ ಪರಿಗಣಿಸಲಿಲ್ಲ. ಗಾಂಧಿ ಅವರು ಹೆಸರು ಶಾರ್ಟ್ ಲಿಸ್ಟ್ ಆಗುವ ಹೊತ್ತಿಗೆ 10 ವರ್ಷಗಳೇ ಕಳೆದು ಹೋಗಿದ್ದವು. ಅಂದರೆ, 1947 ಸಾಲಿನ ಶಾಂತಿ ನೊಬೆಲ್ ಪುರಸ್ಕಾರಕ್ಕೆ ಆಯ್ಕೆಯಾದ ಅಂತಿಮ 6 ಜನರ ಪೈಕಿ ಗಾಂಧಿ ಕೂಡ ಇದ್ದರು. ಆಗಲೂ ಐವರು ಆಯ್ಕೆ ಸಮಿತಿಯ ಸದಸ್ಯರ ಪೈಕಿ ಮೂವರು, ಭಾರತ ಮತ್ತು ಪಾಕಿಸ್ತಾನಗಳು ಸಂಘರ್ಷ ನಡೆಸುತ್ತಿರುವ ಸಂದರ್ಭದಲ್ಲಿ ಗಾಂಧಿ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ನೀಡುವುದಕ್ಕೆ ಹಿಂದೇಟು ಹಾಕಿದರು. ಆ ವರ್ಷ, ಕ್ವೇಕರ್ಸ್‌ಗೆ ಪ್ರಶಸ್ತಿಯನ್ನು ನೀಡಲಾಯಿತು.
ಹತ್ಯೆ ಆಗುವ ಕೆಲ ದಿನ ಮುಂಚೆ ಪರಿಗಣನೆ
1948ರ ಜನವರಿ 30ರಂದು ಮಹಾತ್ಮ ಗಾಂಧಿ ಅವರು ನಾಥೂರಾಮ್ ಗೋಡ್ಸೆ ಗುಂಡಿಗೆ ಬಲಿಯಾದರು. ಇದಕ್ಕೂ ಎರಡು ದಿನಗಳ ಮುಂಚೆ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಮಹಾತ್ಮ ಗಾಂಧಿ ಅವರನ್ನು ಪ್ರಶಸ್ತಿಗೆ ಪರಿಗಣಿಸಿತ್ತು. ಸಮಿತಿಯ ಮುಂದೆ ಗಾಂಧಿ ಸೇರಿದಂತೆ ಒಟ್ಟು ಆರು ಹೆಸರುಗಳಿದ್ದವು. ಈ ಆಯ್ಕೆ ಸಮಿತಿಯಲ್ಲಿ ಕೆಲವು ನೊಬೆಲ್ ಪುರಸ್ಕೃತರೂ ಇದ್ದರು.
ಪ್ರಶಸ್ತಿ ಆಯ್ಕೆ ನಿಯಮದಂತೆ ಮರಣೋತ್ತರವಾಗಿ ಯಾರಿಗೂ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗಿಲ್ಲ. ಆ ಸಮಯದಲ್ಲಿ ಜಾರಿಯಲ್ಲಿರುವ ನೊಬೆಲ್ ಫೌಂಡೇಶನ್‌ನ ನಿಯಮಗಳ ಪ್ರಕಾರ, ಕೆಲವೇ ಕೆಲವು ವಿಶೇಷ ಸಂದರ್ಭದಲ್ಲಿ ಮಾತ್ರವೇ ಮರಣೋತ್ತರವಾಗಿ ಪ್ರಶಸ್ತಿ ನೀಡಲು ಅವಕಾಶವಿತ್ತು. ಹಾಗಾಗಿ ಅಂದಿನ ನಾರ್ವೇಜಿಯನ್ ನೊಬೆಲ್ ಸಂಸ್ಥೆಯ ನಿರ್ದೇಶಕರಾದ ಆಗಸ್ಟ್ ಸ್ಚೌ ಅವರು ಸ್ವೀಡಿಷ್ ಪ್ರಶಸ್ತಿ ಪ್ರದಾನ ಸಂಸ್ಥೆಗಳ ಅಭಿಪ್ರಾಯವನ್ನು ಕೇಳಿದರು. ಸಮಿತಿಯ ಆಯ್ಕೆ ಮಾಡಿದ ಬಳಿಕ ಪ್ರಶಸ್ತಿ ವಿಜೇತರ ನಿಧನರಾಗಿದ್ದರೆ ಮಾತ್ರವೇ ಮರಣೋತ್ತರವಾಗಿ ನೀಡಲು ಅವಕಾಶವಿದೆ ಎಂಬ ಅಭಿಪ್ರಾಯ ಕೇಳಿ ಬಂತು.
1948ರಲ್ಲಿ ಯಾರಿಗೂ ಪ್ರಶಸ್ತಿ ನೀಡಲಿಲ್ಲ!
ಮರಣೋತ್ತರವಾಗಿ ಶಾಂತಿ ಪುರಸ್ಕಾರ ನೀಡಲು ಅವಕಾಶ ನೀಡಲು ಸಾಧ್ಯವಾಗದ್ದರಿಂದ ನೊಬೆಲ್ ಪ್ರಶಸ್ತಿ ಸಮಿತಿಯು ಆ ವರ್ಷ ಅಂದರೆ 1948ರಲ್ಲಿ ಯಾರಿಗೂ ಶಾಂತಿ ಪುರಸ್ಕಾರವನ್ನು ನೀಡಲಿಲ್ಲ. ಸೂಕ್ತ ವ್ಯಕ್ತಿಗಳು ಇಲ್ಲದಿರುವ ಕಾರಣಕ್ಕೆ ಪ್ರಶಸ್ತಿ ನೀಡುತ್ತಿಲ್ಲ ಎಂದು ಸಮಿತಿ ಹೇಳಿತು. 1948ರಲ್ಲಿ ಗಾಂಧಿ ಅವರಿಗೆ ಪ್ರಶಸ್ತಿ ನೀಡಬೇಕು ಎಂಬುದು ಬಹುತೇಕ ಆಯ್ಕೆ ಸಮಿತಿಯ ಸದಸ್ಯರ ಅಭಿಪ್ರಾಯವಾಗಿತ್ತು. ಆದರೆ, ಅಷ್ಟೋತ್ತಿಗೆ ಕಾಲ ಮಿಂಚಿ ಹೋಗಿತ್ತು.
ಈ ಸುದ್ದಿಯನ್ನೂ ಓದಿ: Nobel Prize 2023: ಕೋವಿಡ್ ಲಸಿಕೆ ಅಭಿವೃದ್ಧಿಗೆ ಕಾರಣರಾದ ಇಬ್ಬರಿಗೆ ವೈದ್ಯಕೀಯ ನೊಬೆಲ್ ಅವಾರ್ಡ್!
1960 ಬಳಿಕ ಹಲವರಿಗೆ ಮರಣೋತ್ತರವಾಗಿ ಪ್ರಶಸ್ತಿ
ಮರಣೋತ್ತರವಾಗಿ ಶಾಂತಿ ಪುರಸ್ಕಾರ ನೀಡಲು ಸಾಧ್ಯವಿಲ್ಲ ಎಂದಿದ್ದ ನೊಬೆಲ್ ಪ್ರಶಸ್ತಿ ಸಮಿತಿಯು 1960ರ ಬಳಿಕ ಯುರೋಪ್ ಹಾಗೂ ಅಮೆರಿಕದ ಹಲವರಿಗೆ ಮರಣೋತ್ತರವಾಗಿ ಪ್ರಶಸ್ತಿಯನ್ನು ನೀಡಿದೆ. ಆದರೆ, ಗಾಂಧಿ ಅವರಿಗೇಕೆ ನೀಡಲಿಲ್ಲ ಎಂಬ ಪ್ರಶ್ನೆಗೆ ಸಮಿತಿ ಹೊಸ ವ್ಯಾಖ್ಯಾನವನ್ನು ನೀಡಿತು.
ಹಿಂದಿನ ಪ್ರಶಸ್ತಿ ಪುರಸ್ಕೃತರಿಗಿಂತ ಗಾಂಧಿ ತುಂಬಾ ಭಿನ್ನವಾಗಿದ್ದರು. ಗಾಂಧಿ ಅವರು ನಿಜವಾದ ರಾಜಕಾರಣಿಯಾಗಿರಲಿಲ್ಲ ಅಥವಾ ಅಂತಾರಾಷ್ಟ್ರೀಯ ಕಾನೂನಿನ ಪ್ರತಿಪಾದಕರಾಗಿರಲಿಲ್ಲ. ಪ್ರಾಥಮಿಕವಾಗಿ ಮಾನವೀಯ ಪರಿಹಾರ ಕಾರ್ಯಕರ್ತರಲ್ಲ ಮತ್ತು ಅಂತಾರಾಷ್ಟ್ರೀಯ ಶಾಂತಿ ಸಂಘಟನೆಗಳ ಸಂಘಟಕರಾಗಿರಲಿಲ್ಲ. ಈ ಪ್ರಶಸ್ತಿಗೆ ಅವರ ಅರ್ಹತೆಯು ಬೇರೆಯದ್ದೇ ಆಗಿತ್ತು. ಅವರು ವಿಭಿನ್ನವಾದ ಅರ್ಹತೆಯನ್ನು ಹೊಂದಿದವರು ಎಂದು ಸಮಿತಿ ತನ್ನ ನಿರ್ಧಾರವನ್ನುಸಮರ್ಥಿಸಿ ಕೊಂಡಿತು.
ನೊಬೆಲ್‌ಗಿಂತ ಮಿಗಿಲಾದವರು ಗಾಂಧಿ
ಜಗತ್ತಿನ ಶ್ರೇಷ್ಠ ಪ್ರಶಸ್ತಿ ಎನಿಸಿರುವ ನೊಬೆಲ್ ಶಾಂತಿ ಪುರಸ್ಕಾರ ಗಾಂಧಿ ಅವರಿಗೆ ನೀಡದ್ದಕ್ಕೆ ಅವರ ಅನುಯಾಯಿಗಳಲ್ಲಿ ಬೇಸರವಿಲ್ಲ. ಯಾಕೆಂದರೆ, ಮಹಾತ್ಮ ಗಾಂಧಿ ಅವರು ಈ ಎಲ್ಲ ಪ್ರಶಸ್ತಿಗಿಂತ ಮಿಗಿಲಾದವರು. ಈ ಪ್ರಶಸ್ತಿ ವ್ಯಾಪ್ತಿಗೆ ಮೀರಿದ ವ್ಯಕ್ತಿತ್ವ ಅವರದ್ದಾಗಿತ್ತು. 20ನೇ ಶತಮಾನದ ಶಾಂತಿದೂತರಾಗಿದ್ದ ಗಾಂಧಿಜಿ ಅವರಿಗೆ ಯಾವ ಪ್ರಶಸ್ತಿಗಳು ಸಮನಲ್ಲ. ಹಾಗಾಗಿ, ನೊಬೆಲ್ ಮಾತ್ರವಲ್ಲ, ಅದಕ್ಕಿಂತ ಹಿರಿದಾದ ಪ್ರಶಸ್ತಿ ಕೂಡ ಗಾಂಧಿ ಮುಂದೆ ಕುಬ್ಜವಾಗುತ್ತಿತ್ತು ಎಂಬ ವಾದವೂ ಇದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.