Site icon Vistara News

ಚೀನಾಗೆ ಪೆಟ್ಟು ಕೊಟ್ಟ ತೈವಾನ್‌ನ ಯಂಗ್‌ ಲಿಯುಗೆ ಪದ್ಮಭೂಷಣ; ಭಾರತಕ್ಕೆ ಇವರ ಕೊಡುಗೆ?

Young Liu With Narendra Modi

Why Foxconn CEO Young Liu Has Been Honoured With Padma Bhushan

ನವದೆಹಲಿ: ತೈವಾನ್‌ನ ತಂತ್ರಜ್ಞಾನ ದೈತ್ಯ ಕಂಪನಿಯಾದ ಫಾಕ್ಸ್‌ಕಾನ್‌ ಸಿಇಒ ಯಂಗ್‌ ಲಿಯು (Foxconn CEO Young Liu) ಅವರಿಗೆ ಕೇಂದ್ರ ಸರ್ಕಾರವು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಭೂಷಣ (Padma Bhushan) ಘೋಷಿಸಿದೆ. ಕಳೆದ ನಾಲ್ಕು ದಶಕಗಳಿಂದ ಉದ್ಯಮ ಕ್ಷೇತ್ರದಲ್ಲಿ ತೊಡಗಿರುವ ಯಂಗ್‌ ಲಿಯು ಅವರು ಮೂರು ಕಂಪನಿಗಳನ್ನು ಸ್ಥಾಪಿಸಿ ಯಶಸ್ವಿಯಾಗಿದ್ದಾರೆ. ಹಾಗಾದರೆ, ಯಂಗ್‌ ಲಿಯು ಅವರಿಗೆ ಪದ್ಮಭೂಷಣ ಪ್ರಶಸ್ತಿ ಕೊಡಲು ಕಾರಣವೇನು? ಅವರು ಭಾರತಕ್ಕೆ ನೀಡಿದ ಕೊಡುಗೆ ಏನು ಎಂಬುದರ ಮಾಹಿತಿ ಇಲ್ಲಿದೆ.

ತೈವಾನ್‌ನವರಾದ ಯಂಗ್‌ ಲಿಯು ಅವರು 1998ರಲ್ಲಿ ಯಂಗ್‌ ಮೈಕ್ರೋ ಸಿಸ್ಟಮ್ಸ್‌ ಎಂಬ ಮದರ್‌ಬೋರ್ಡ್‌ ಕಂಪನಿ, 1995ರಲ್ಲಿ ಐಸಿ ಡಿಸೈನ್‌ ಹಾಗೂ 1997ರಲ್ಲಿ ಐಟಿಇ ಟೆಕ್‌ ಕಂಪನಿ ಸ್ಥಾಪಿಸಿ ಜಗತ್ತಿನಾದ್ಯಂತ ಹೆಸರಾಗಿದ್ದಾರೆ. ಇವರೀಗ ಫಾಕ್ಸ್‌ಕಾನ್‌ ಕಂಪನಿಯ ಸಿಇಒ ಹಾಗೂ ಚೇರ್ಮನ್‌ ಆಗಿದ್ದಾರೆ. ಜಗತ್ತಿನಲ್ಲೇ ಬೃಹತ್‌ ಕಾಂಟ್ರಾಕ್ಟ್‌ ಉತ್ಪಾದಕ ಸಂಸ್ಥೆಯಾಗಿ ಫಾಕ್ಸ್‌ಕಾನ್‌ ಹೊರಹೊಮ್ಮಿದ್ದು, ಶೇ.70ರಷ್ಟು ಐಫೋನ್‌ಗಳನ್ನು ಜೋಡಿಸುತ್ತದೆ.

ಐಫೋನ್‌ ಉತ್ಪಾದನೆಗೂ ಇದು ಹೆಸರುವಾಸಿಯಾಗಿದೆ. ಇದರ ಹಿಂದೆ ಯಂಗ್‌ ಲಿಯು ಕೊಡುಗೆ ಅಪಾರವಾಗಿದೆ. ಇದೆಲ್ಲ ಕಾರಣಗಳಿಂದಾಗಿ ಯಂಗ್‌ ಲಿಯು ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಿಸಲಾಗಿದೆ ಎಂದು ತಿಳಿದುಬಂದಿದೆ. ಪ್ರತಿ ವರ್ಷ ಮಾರ್ಚ್‌ ಅಥವಾ ಏಪ್ರಿಲ್‌ನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.

ಭಾರತಕ್ಕೆ ಯಂಗ್‌ ಲಿಯು ಕೊಡುಗೆ ಏನು?

ಭಾರತದಲ್ಲಿ ಐಫೋನ್‌ ಉತ್ಪಾದನೆ, ಉದ್ಯೋಗ ಸೃಷ್ಟಿ ಸೇರಿ ಹಲವು ರೀತಿಯಲ್ಲಿ ಯಂಗ್‌ ಲಿಯು ಕೊಡುಗೆ ನೀಡಿದ್ದಾರೆ. ಈಗಾಗಲೇ ಫಾಕ್ಸ್‌ಕಾನ್‌ ಕಂಪನಿಯು ಭಾರತದಲ್ಲಿ ಐಫೋನ್‌ಗಳನ್ನು ಉತ್ಪಾದಿಸುತ್ತಿದೆ. ತಮಿಳುನಾಡಿನಲ್ಲಿ ಫಾಕ್ಸ್‌ಕಾನ್‌ ಕಂಪನಿಯು ಐಫೋನ್‌ಗಳನ್ನು ಉತ್ಪಾದಿಸುತ್ತಿದ್ದು, ಸುಮಾರು 40 ಸಾವಿರ ಜನರಿಗೆ ಉದ್ಯೋಗ ನೀಡಿದೆ. ಮುಂದಿನದ ದಿನಗಳಲ್ಲಿ ಭಾರತದಲ್ಲಿ ಸೆಮಿಕಂಡಕ್ಟರ್‌ ಉತ್ಪಾದನೆ ಘಟಕ ಸ್ಥಾಪಿಸುವುದು ಕೂಡ ಯಂಗ್‌ ಲಿಯು ಉದ್ದೇಶವಾಗಿದೆ. ಕೊರೊನಾ ಬಿಕ್ಕಟ್ಟಿನ ಬಳಿಕ ಚೀನಾದಲ್ಲಿ ಹೆಚ್ಚು ಘಟಕಗಳನ್ನು ಸ್ಥಾಪಿಸಲು ಯಂಗ್‌ ಲಿಯು ಮನಸ್ಸು ಮಾಡುತ್ತಿಲ್ಲ. ಅಷ್ಟೇ ಅಲ್ಲ, ಹೆಚ್ಚಿನ ಘಟಕಗಳ ಸ್ಥಾಪನೆ, ಹೂಡಿಕೆಗೆ ಯಂಗ್‌ ಲಿಯು ಭಾರತವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Padma Awards 2024: ದಿವ್ಯಾಂಗರಾದರೂ ಸಮಾಜಕ್ಕೆ ಮಿಡಿದ ಗುರ್ವಿಂದರ್‌ಗೆ ಪದ್ಮಶ್ರೀ ಗರಿ!

ದಕ್ಷಿಣ ಭಾರತದ ಖ್ಯಾತ ನಟ ಚಿರಂಜೀವಿ, ಕಲಾವಿದೆ ವೈಜಯಂತಿಮಾಲಾ ಬಾಲಿ, ಮಾಜಿ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರಿಗೆ ಪದ್ಮ ವಿಭೂಷಣ, ಕರ್ನಾಟಕದ ಉದ್ಯಮಿ ಸೀತಾರಾಮ ಜಿಂದಾಲ್ ಹಾಗೂ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಒಟ್ಟು ಐವರಿಗೆ ಪದ್ಮವಿಭೂಷಣ ಹಾಗೂ 17 ಮಂದಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಹಾಗೆಯೇ 110 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಗೌರವ ಅರಸಿ ಬಂದಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version