Site icon Vistara News

ವಿಸ್ತಾರ Explainer | ಲೂಸ್ ಸಿಗರೇಟ್‌ ಮಾರಾಟ ನಿಷೇಧಕ್ಕೆ ಚಿಂತನೆ ಏಕೆ? ಇದರ ಹಿಂದಿನ ಉದ್ದೇಶ ಏನು?

loose cigarettes sale ban in india

ಗೂಡಂಗಡಿಗಳು, ಕಾಂಡಿಮೆಂಟ್ಸ್‌ಗಳು, ಪಾನ್‌ಶಾಪ್‌ಗಳಲ್ಲಿ ಮೆಲ್ಲಗೆ ಒಂದು ಸಿಗರೇಟ್‌ ಖರೀದಿಸಿ, ಯಾರಿಗೂ ಕಾಣದ ಹಾಗೆ ಪಫ್‌ ಎಳೆದು, ಕೊನೆಗೆ ಬಾಯಿಗೊಂದು ಮಿಂಟ್‌ ಹಾಕಿಕೊಂಡು ಹೋಗುವ ಚಾಳಿ ಇದ್ದವರಿಗೆ ಕೇಂದ್ರ ಸರ್ಕಾರ ಶೀಘ್ರವೇ ಲಗಾಮು ಹಾಕಲಿದೆ. ಹೌದು, ದೇಶಾದ್ಯಂತ ಸಿಗರೇಟ್‌ಗಳ ಚಿಲ್ಲರೆ ಮಾರಾಟ (Loose Cigarettes Sale Ban In India) ನಿಷೇಧಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ಶೀಘ್ರವೇ ಹೊಸ ನಿಯಮ ಜಾರಿಗೆ ಬರುವ ಸಾಧ್ಯತೆ ಇದೆ. ಹಾಗಾಗಿ, ಸಿಗರೇಟ್‌ ಸೇದುವವರು ಇನ್ನು ಒಂದು ಪ್ಯಾಕ್‌ ಖರೀದಿಸುವುದು ಅನಿವಾರ್ಯವಾಗಲಿದೆ. ಹಾಗಾದರೆ, ಕೇಂದ್ರ ಸರ್ಕಾರವು ಏಕೆ ಬಿಡಿ ಸಿಗರೇಟ್‌ಗಳ ಮಾರಾಟ ನಿಷೇಧ ಮಾಡಲು ಮುಂದಿದೆ? ಇದರ ಹಿಂದಿರುವ ಘನ ಉದ್ದೇಶವೇನು ಎಂಬುದರ ಸಂಕ್ಷಿಪ್ತ ಮಾಹಿತಿ (ವಿಸ್ತಾರ Explainer) ಇಂತಿದೆ.

ನಿಷೇಧಗೊಳಿಸುವ ಚಿಂತನೆ ಏಕೆ?
ದೇಶದಲ್ಲಿ ಬಿಡಿ ಸಿಗರೇಟ್‌ಗಳ ಮಾರಾಟವನ್ನು ನಿಷೇಧಿಸಬೇಕು ಎಂದು ಸಂಸದೀಯ ಸ್ಥಾಯಿ ಸಮಿತಿಯು ಶಿಫಾರಸು ಮಾಡಿದೆ. ಅತಿಯಾದ ಧೂಮಪಾನ, ತಂಬಾಕು ಬಳಕೆಯನ್ನು ನಿಯಂತ್ರಿಸುವ ದಿಸೆಯಲ್ಲಿ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ. ಇನ್ನು, ಬಿಡಿ ಸಿಗರೇಟ್‌ಗಳ ಮಾರಾಟವು ಕೇಂದ್ರ ಸರ್ಕಾರ ಕೈಗೊಳ್ಳುವ ‘ತಂಬಾಕು ನಿಗ್ರಹ ಅಭಿಯಾನ’ಕ್ಕೆ ಅಡ್ಡಿಯಾಗುತ್ತಿದೆ. ಅಭಿಯಾನದಿಂದ ಸಕಾರಾತ್ಮಕ ಪರಿಣಾಮ ಬೀರುತ್ತಿಲ್ಲ ಎಂದು ತಿಳಿದುಬಂದಿದೆ. ಭಾರತದಲ್ಲಿ ಸಿಗರೇಟ್‌ಗಳ ಮೇಲಿನ ಜಿಎಸ್‌ಟಿಯನ್ನು ಏರಿಕೆ ಮಾಡಿದರೂ ಧೂಮಪಾನ ಮಾಡುವವರ ಪ್ರಮಾಣ ಕಡಿಮೆ ಆಗಿಲ್ಲ. ಇದೇ ಕಾರಣದಿಂದಾಗಿ ಕೇಂದ್ರ ಸರ್ಕಾರ ಸಿಂಗಲ್‌ ಸಿಗರೇಟ್‌ ಮಾರಾಟ ನಿಷೇಧಕ್ಕೆ ಚಿಂತನೆ ನಡೆಸಿದೆ.

ನಿಷೇಧ ಜಾರಿಗೆ ಬರುವುದು ಯಾವಾಗ?
ಸಂಸದೀಯ ಸ್ಥಾಯಿ ಸಮಿತಿಯ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಪರಿಗಣನೆಗೆ ತೆಗೆದುಕೊಂಡಿದ್ದು, ಮುಂಬರುವ ಬಜೆಟ್‌ನಲ್ಲಿ ನಿಷೇಧದ ಕುರಿತು ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ೨೦೨೩ರ ಫೆಬ್ರವರಿ ೧ರಂದು ಮುಂಗಡಪತ್ರ ಮಂಡಿಸಲಿದ್ದು, ಇದೇ ವೇಳೆ ಸಿಂಗ್‌ ಸಿಗರೇಟ್‌ ನಿಷೇಧವನ್ನು ಘೋಷಿಸುತ್ತಾರೆ ಎನ್ನಲಾಗಿದೆ. ಇದೇ ರೀತಿ ಕೇಂದ್ರ ಸರ್ಕಾರ ಈಗಾಗಲೇ ಇ-ಸಿಗರೇಟ್‌ಗಳ ಮಾರಾಟ ಹಾಗೂ ಬಳಕೆಯನ್ನು ನಿಷೇಧಗೊಳಿಸಿದೆ.

ಏರ್‌ಪೋರ್ಟ್‌ಗಳಲ್ಲಿ ಸ್ಮೋಕಿಂಗ್‌ ಜೋನ್‌ ತೆರವು
ವಿಮಾನ ನಿಲ್ದಾಣಗಳಲ್ಲಿರುವ ಸ್ಮೋಕಿಂಗ್‌ ಜೋನ್‌ಗಳನ್ನು ಕೂಡ ತೆರವುಗೊಳಿಸಬೇಕು ಎಂದು ಕೂಡ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ. ದೇಶಾದ್ಯಂತ ತಂಬಾಕು ಬಳಕೆ ಹಾಗೂ ಮಾರಾಟವನ್ನು ಎಷ್ಟು ಸಾಧ್ಯವೋ, ಅಷ್ಟು ನಿಯಂತ್ರಿಸಬೇಕು ಎಂಬ ದಿಸೆಯಲ್ಲಿ ಸ್ಮೋಕಿಂಗ್‌ ಜೋನ್‌ಗಳ ತೆರವಿಗೆ ಶಿಫಾರಸು ಮಾಡಲಾಗಿದೆ ಎಂದು ತಿಳಿದುಬಂದಿದೆ. ಹಾಗಾಗಿ, ಕೇಂದ್ರ ಸರ್ಕಾರವು ವಿಮಾನ ನಿಲ್ದಾಣಗಳಲ್ಲಿ ಶೀಘ್ರವೇ ‘ಧೂಮಪಾನ ವಲಯ’ಗಳನ್ನು ರದ್ದುಗೊಳಿಸುವ ಸಾಧ್ಯತೆ ಇದೆ ತಿಳಿದುಬಂದಿದೆ. ತಂಬಾಕು ಬಳಕೆ ನಿಯಂತ್ರಿಸುವ ದಿಸೆಯಲ್ಲಿ ತಂಬಾಕು ಹಾಗೂ ಸಿಗರೇಟ್‌ಗಳ ಮೇಲೆ ಶೇ.೭೫ರಷ್ಟು ಜಿಎಸ್‌ಟಿ ವಿಧಿಸಬೇಕು ಎಂದು ಈಗಾಗಲೇ ಜಗತ್ತಿನ ಹಲವು ರಾಷ್ಟ್ರಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶನ ನೀಡಿದೆ. ಆದರೆ, ಇದಿನ್ನೂ ಜಾರಿಗೆ ಬಂದಿಲ್ಲ.

ತಂಬಾಕು ಉತ್ಪನ್ನಗಳ ಬಳಕೆ ಕುರಿತು ನಮಗೂ ಜಾಗೃತಿ ಇರಲಿ

ಸಿಗರೇಟ್‌ ಸೇರಿ ಯಾವುದೇ ತಂಬಾಕು ಉತ್ಪನ್ನಗಳ ಬಳಕೆ ಕುರಿತು ಸರ್ಕಾರಗಳು ಎಷ್ಟೇ ಕ್ರಮ ತೆಗೆದುಕೊಂಡರೂ, ಜಾಗೃತಿ ಮೂಡಿಸಿದರೂ ಧೂಮಪಾನ, ತಂಬಾಕು ಬಳಕೆ ಸಂಪೂರ್ಣವಾಗಿ ನಿಲ್ಲುವುದಿಲ್ಲ. ಹಾಗಾಗಿ, ಸಾರ್ವಜನಿಕರು ಕೂಡ ತಂಬಾಕು ಬಳಕೆ, ಅದರಿಂದಾಗುವ ಅನಾರೋಗ್ಯ, ಕುಟುಂಬಸ್ಥರಿಗೆ ಆಗುವ ತೊಂದರೆ, ಹಣಕಾಸು ಬಿಕ್ಕಟ್ಟಿನ ಕುರಿತು ಅರಿತುಕೊಳ್ಳಬೇಕು. ಜಗತ್ತಿನಲ್ಲಿ ಪ್ರತಿ ವರ್ಷ ತಂಬಾಕು ಸೇವನೆ ಸಂಬಂಧಿತ ಕಾಯಿಲೆಗಳಿಂದ ೧೨ ಲಕ್ಷ ಜನ ಸಾವಿಗೀಡಾಗುತ್ತಾರೆ. ಭಾರತದಲ್ಲಿ ೨೭ ಕೋಟಿಗೂ ಅಧಿಕ ಜನ ತಂಬಾಕು ವ್ಯಸನಿಗಳಿದ್ದಾರೆ. ಇವರಲ್ಲಿ ಶೇ.೩೪ರಷ್ಟು ಜನ ವಯಸ್ಕರೇ ಆಗಿದ್ದಾರೆ. ಕ್ಯಾನ್ಸರ್‌, ಹೃದಯಾಘಾತ ಸೇರಿ ಹಲವು ಅಪಾಯಗಳನ್ನು ತಂದೊಡ್ಡುವ ತಂಬಾಕು ಸೇವನೆಯನ್ನು ಸ್ವಯಂ ನಿರ್ಧಾರ ತೆಗೆದುಕೊಂಡೂ ಬಿಡಬಹುದಾಗಿದೆ. ಈ ಕುರಿತು ಯುವಕರು ಇನ್ನಷ್ಟು ಜಾಗೃತರಾಗುವುದು ಅತ್ಯವಶ್ಯಕವಾಗಿದೆ.

ಇದನ್ನೂ ಓದಿ | School Bag | ಬೆಂಗಳೂರು ಹೈಸ್ಕೂಲ್ ಮಕ್ಕಳ ಬ್ಯಾಗ್‌ಗಳಲ್ಲಿ ಕಾಂಡೋಮ್ಸ್, ಸಿಗರೇಟ್ಸ್, ಗರ್ಭನಿರೋಧಕ ಮಾತ್ರೆ!

Exit mobile version