Site icon Vistara News

No Confidence Motion: ಪ್ರತಿಪಕ್ಷಗಳ ಅಭಿಪ್ರಾಯ ಕೇಳದೆ ಕಾಂಗ್ರೆಸ್‌ ಅವಿಶ್ವಾಸ ನಿರ್ಣಯ? ‘ಇಂಡಿಯಾ’ದಲ್ಲಿ ಬಿಕ್ಕಟ್ಟು

Mallikarjun Kharge

Why only Congress signed no confidence motion? What INDIA Ally Say?

ನವದೆಹಲಿ: 2024ರ ಲೋಕಸಭೆ ಚುನಾವಣೆಯಲ್ಲಿ ಶತಾಯ ಗತಾಯ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಉರುಳಿಸಲು ಕಾಂಗ್ರೆಸ್‌ ಸೇರಿ ಹಲವು ಪಕ್ಷಗಳು ಒಗ್ಗೂಡಿವೆ. ಅದರಲ್ಲೂ, ‘ಇಂಡಿಯಾ’ ಮೈತ್ರಿಕೂಟ ರಚಿಸಿ ಒಗ್ಗಟ್ಟು ಹಾಗೂ ಶಕ್ತಿ ಪ್ರದರ್ಶನ ಮಾಡುತ್ತಿವೆ. ಇದರ ಬೆನ್ನಲ್ಲೇ ಪ್ರತಿಪಕ್ಷಗಳ ಒಕ್ಕೂಟದಲ್ಲಿ ಬಿರುಕು ಮೂಡಿತೇ ಎಂಬ ಪ್ರಶ್ನೆ ಉದ್ಭವಿಸಿದೆ. ಅದರಲ್ಲೂ, ಇಂಡಿಯಾ ಒಕ್ಕೂಟದ ಎಲ್ಲ ಪಕ್ಷಗಳನ್ನು ಕೇಳದೆಯೇ ತರಾತುರಿಯಲ್ಲಿ ಕಾಂಗ್ರೆಸ್‌ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ (No Confidence Motion) ಮಂಡಿಸಲು ಮುಂದಾಯಿತೆ ಎಂಬ ಪ್ರಶ್ನೆ, ಗೊಂದಲಗಳು ಮೂಡಿವೆ.

“ಇಂಡಿಯಾ ಒಕ್ಕೂಟದ ಎಲ್ಲ ಪಕ್ಷಗಳನ್ನು ಪರಿಗಣನೆಗೆ ತೆಗೆದುಕೊಂಡು ಅವಿಶ್ವಾಸ ನಿರ್ಣಯ ಮಂಡಿಸಿದ್ದರೆ ಇನ್ನೂ ಪರಿಣಾಮಕಾರಿ ಆಗುತ್ತಿತ್ತು. ಸಿಪಿಐ ಮಾತ್ರವಲ್ಲ ಹಲವು ಪಕ್ಷಗಳು ಈ ಕುರಿತು ಸರಿಯಾದ ಮಾರ್ಗದಲ್ಲಿ ಆಕ್ಷೇಪ ವ್ಯಕ್ತಪಡಿಸಿವೆ. ಅವಸರದಲ್ಲಿಯೇ ಅವಿಶ್ವಾಸ ನಿರ್ಣಯ ಮಂಡಿಸಲು ತೀರ್ಮಾನಿಸಲಾಗಿದೆ ಎಂಬುದಾಗಿ ಕಾಂಗ್ರೆಸ್‌ ಕೂಡ ಸ್ಪಷ್ಟಪಡಿಸಿದೆ” ಎಂದು ಸಿಪಿಐ ಸಂಸದ ವಿನಯ್‌ ವಿಶ್ವಂ ಸ್ಪಷ್ಟನೆ ನೀಡಿದ್ದಾರೆ.

ಸಿಪಿಐ ಸಂಸದ ಪ್ರತಿಕ್ರಿಯೆ

“ನಾವು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರಿಸಿದ್ದೇವೆ ಎಂಬುದಾಗಿ ಕಾಂಗ್ರೆಸ್‌ ತಿಳಿಸಿದೆ. ಅವಿಶ್ವಾಸ ಗೊತ್ತುವಳಿ ಕುರಿತು ಕಾಂಗ್ರೆಸ್‌ ತೆಗೆದುಕೊಂಡ ನಿರ್ಧಾರ ಈಗ ಮುಗಿದ ಅಧ್ಯಾಯ. ಆದರೆ, ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ನಡೆಯಲಿದೆ ಹಾಗೂ ನಿರ್ಣಯ ಮಂಡಿಸಲು ಬೇಕಾದಷ್ಟು ಸದಸ್ಯರು ಸಹಿ ಹಾಕಿದ್ದಾರೆ ಎಂಬುದಷ್ಟೇ ಈಗ ಮುಖ್ಯ” ಎಂದು ವಿನಯ್‌ ವಿಶ್ವಂ ಹೇಳಿದ್ದಾರೆ. ಇದರಿಂದಾಗಿ ಕಾಂಗ್ರೆಸ್‌ ಒಂದೇ ಅವಸರದಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಿದೆ ಹಾಗೂ ಇದರಿಂದ ಇಂಡಿಯಾ ಒಕ್ಕೂಟದಲ್ಲಿ ಸಣ್ಣದೊಂದು ಬಿಕ್ಕಟ್ಟಿದೆ ಎಂಬುದು ಸಾಬೀತಾದಂತಾಗಿದೆ.

ಇದನ್ನೂ ಓದಿ: What Is No-Confidence Motion?: ಏನಿದು ಅವಿಶ್ವಾಸ ನಿರ್ಣಯ?

ಕಾಂಗ್ರೆಸ್‌ ಕಾಲೆಳೆದ ಬಿಜೆಪಿ

ಕಾಂಗ್ರೆಸ್‌ ತರಾತುರಿಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದ ಎಂಬ ಕುರಿತು ಬಿಜೆಪಿ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್‌ ಕಾಲೆಳೆದಿದೆ. “ಕಾಂಗ್ರೆಸ್‌ ಎಂದಿನಂತೆ ಪ್ರತಿಪಕ್ಷಗಳ ಅಭಿಪ್ರಾಯ ಕೇಳದೆ ಅವಿಶ್ವಾಸ ನಿರ್ಣಯ ಮಂಡಿಸಿದೆ. ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವುದು ಬಿಡಿ, ಮೊದಲು ಪ್ರತಿಪಕ್ಷಗಳಲ್ಲಿಯೇ ವಿಶ್ವಾಸ ಮೂಡಬೇಕು. ಆಮೇಲೆ ಅವರು ನರೇಂದ್ರ ಮೋದಿ ಅವರ ಮೇಲೆ ಜನ ಎಷ್ಟು ವಿಶ್ವಾಸ ಇಟ್ಟಿದ್ದಾರೆ ಎಂಬುದರ ಕುರಿತು ಮಾತನಾಡಬೇಕು. ಕಪ್ಪು ಬಟ್ಟೆ ಧರಿಸುವುದರಿಂದ ಯಾವ ಉಪಯೋಗವೂ ಆಗುವುದಿಲ್ಲ” ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ತಿರುಗೇಟು ನೀಡಿದರು.

Exit mobile version