ನವದೆಹಲಿ: ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ವಿರುದ್ಧ ಅಸ್ಸಾಮ್ ಸಿಎಂ (Assam CM) ಹಿಮಂತ್ ಬಿಸ್ವ ಶರ್ಮಾ ಅವರು ಹರಿಹಾಯ್ದಿದ್ದು, ”ಮುಸ್ಲಿಮ್ ಪುರುಷರು ಮೂರು- ನಾಲ್ಕು ವಿವಾಹವಾಗುತ್ತಾರೆ. ಮುಸ್ಲಿಮ್ ಮಹಿಳೆಯರಿಗೆ ನ್ಯಾಯ ಒದಗಿಸುವುದಕ್ಕಾಗಿ ಈ ವ್ಯವಸ್ಥೆಯನ್ನು ಬದಲಿಸಬೇಕಾದ ಅಗತ್ಯವಿದೆ. ಅಲ್ಲದೇ, ಮುಸ್ಲಿಮ್ ಹುಡುಗಿಯರಿಗೆ ಹಿಜಾಬ್ ಧರಿಸಿ ಎಂದು ಹೇಳುವವರು, ಹುಡುಗರಿಗೂ ಧರಿಸಲು ಏಕೆ ಹೇಳುವುದಿಲ್ಲ” ಎಂದು ಅವರು ಪ್ರಶ್ನಿಸಿದ್ದಾರೆ.
ಸ್ವತಂತ್ರ ಭಾರತದಲ್ಲಿ ವಾಸಿಸುವ ಪುರುಷನಿಗೆ ಮೂರು-ನಾಲ್ಕು ಮಹಿಳೆಯರನ್ನು (ವಿವಾಹ ವಿಚ್ಛೇದನ ನೀಡದೆ) ಮದುವೆಯಾಗಲು ಯಾವುದೇ ಹಕ್ಕಿಲ್ಲ. ಆದರೂ ಮುಸ್ಲಿಮ್ ಪುರುಷರು ಆಗುತ್ತಾರೆ. ಹಾಗಾಗಿ, ಮುಸ್ಲಿಮ್ ಮಹಿಳೆಯರಿಗೆ ನ್ಯಾಯ ಒದಗಿಸಲು ನಾವು ಈ ವ್ಯವಸ್ಥೆಯನ್ನು ಬದಲಿಸಬೇಕಾಗಿದೆ. ಮುಸ್ಲಿಮ್ ಹುಡುಗಿಯರಿಗೆ ಹಿಜಾಬ್ ಧರಿಸಲು ಹೇಳುವ ಅವರು, ಹುಡುಗರಿಗೂ ಧರಿಸುವಂತೆ ಯಾಕೆ ಹೇಳುವುದಿಲ್ಲ? ಶಾಲೆಗಳಲ್ಲಿ ಮುಸ್ಲಿಮ್ ಹುಡುಗಿಯರಿಗೆ ಓದಲು ಅವಕಾಶ ನೀಡುವುದಿಲ್ಲ. ಆದರೆ, ಮುಸ್ಲಿಮ್ ಪುರುಷರು ಮಾತ್ರ ಎರಡ್ಮೂರು ಮದುವೆಯಾಗಬಹುದಂತೆ. ನಾವು ಈ ವ್ಯವಸ್ಥೆಯ ವಿರುದ್ಧ ಇದ್ದೇವೆ. ಎಲ್ಲರೊಂದಿಗೆ ಎಲ್ಲರ ಅಭಿವೃದ್ಧಿ ಕೈಗೊಳ್ಳುವುದು ನಮ್ಮ ನೀತಿಯಾಗಿದೆ ಎಂದು ಅಸ್ಸಾಮ್‌ನ ಮೋರಿಗಾಂವ್‌ನಲ್ಲಿ ಸಭೆಯನ್ನು ಉದ್ದೇಶಿಸಿ ಸಿಎಂ ಹಿಮಂತ್ ಬಿಸ್ವ ಶರ್ಮಾ ಹೇಳಿದರು.
ಇತ್ತೀಚೆಗಷ್ಟೇ ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಅವರು ಮಹಿಳೆಯರ ವಿರುದ್ಧ ಹೇಳಿಕೆ ನೀಡಿದ್ದರು. ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ಆಗ್ರಹಿಸಿದ್ದರು. ಅವರ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅಸ್ಸಾಮ್ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ ಅವರು ಅಜ್ಮಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ | Love Jihad | ಹಿಂದುಗಳೂ ಲವ್ ಜಿಹಾದ್ ಮಾಡಲಿ, ಮುಸ್ಲಿಂ ಹೆಣ್ಣುಮಕ್ಕಳ ಹೊತ್ತೊಯ್ಯಲಿ, ಮೌಲಾನಾ ಅಜ್ಮಲ್ ಹೇಳಿಕೆ