Site icon Vistara News

Rahul Gandhi: ರಾಹುಲ್‌ ಗಾಂಧಿಯನ್ನು ಹೊಗಳಿದ ಪಾಕ್‌ ಮಾಜಿ ಸಚಿವ; ತಿರುಗೇಟು ಕೊಟ್ಟ ಬಿಜೆಪಿ

Rahul Gandhi

Why Pak leader praising Rahul Gandhi: BJP questions Fawad Chaudhry's X post

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಪ್ರತಿಯೊಂದು ವಿಷಯವೂ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರ ಮಧ್ಯೆ ವಾಗ್ಯುದ್ಧ, ವಾಗ್ದಾಳಿ, ಮಾತಿನ ಚಕಮಕಿ, ಆಕ್ರೋಶ, ಆರೋಪಗಳಿಗೆ ಕಾರಣವಾಗುತ್ತಿದೆ. ಇದರ ಬೆನ್ನಲ್ಲೇ, ರಾಹುಲ್‌ ಗಾಂಧಿ ಭಾಷಣವನ್ನು ಪಾಕಿಸ್ತಾನದ (Pakistan) ಮಾಜಿ ಸಚಿವ ಫವಾದ್‌ ಹುಸೇನ್‌ (Ch Fawad Hussain) ಮೆಚ್ಚಿಕೊಂಡಿದ್ದು, ಇದಕ್ಕೆ ಬಿಜೆಪಿ ಟಾಂಗ್‌ ಕೊಟ್ಟಿದೆ. “ಪಾಕಿಸ್ತಾನ ಹಾಗೂ ಕಾಂಗ್ರೆಸ್‌ ಮಧ್ಯೆ ಎಷ್ಟೊಂದು ಸ್ನೇಹ ಸಂಬಂಧ ಇದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ” ಎಂದು ಬಿಜೆಪಿ (BJP) ತಿರುಗೇಟು ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ, ಅವರ ಸರ್ಕಾರದ ನೀತಿಗಳ ಬಗ್ಗೆ, ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಗಣ್ಯರು ಮಾತ್ರ ಪಾಲ್ಗೊಂಡಿದ್ದರ ಬಗ್ಗೆ ರಾಹುಲ್‌ ಗಾಂಧಿ ಅವರು ಆಕ್ರೋಶಭರಿತರಾಗಿ ಮಾತನಾಡಿದ ವಿಡಿಯೊ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನು ಶೇರ್‌ ಮಾಡಿದ ಪಾಕ್‌ ಮಾಜಿ ಸಚಿವ ಫವಾದ್‌ ಹುಸೇನ್‌, “ರಾಹುಲ್‌ ಗಾಂಧಿ ಬೆಂಕಿಯುಂಡೆಯ ಕಾವಿನಂತೆ ಮಾತನಾಡುತ್ತಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನು ಬಿಜೆಪಿ ನಾಯಕರು ತರಾಟೆಗೆ ತೆಗೆದುಕೊಂಡಿದ್ದಾರೆ.

ಪಾಕ್‌ ಮಾಜಿ ಸಚಿವನ ಪ್ರತಿಕ್ರಿಯೆಗೆ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್‌ ಪೂನಾವಾಲ ತಿರುಗೇಟು ನೀಡಿದ್ದಾರೆ. “ಪಾಕಿಸ್ತಾನದ ಫವಾದ್‌ ಹುಸೇನ್‌ ರಾಹುಲ್‌ ಗಾಂಧಿ ಅವರನ್ನು ಹೊಗಳುತ್ತಿದ್ದಾರೆ ಎಂದರೆ, ಅವರ ಸಂಬಂಧ ಹೇಗಿದೆ ಎಂಬುದಕ್ಕೆ ಕೈಗನ್ನಡಿಯಾಗಿದೆ. ಕಾಂಗ್ರೆಸ್‌ನ ಕೈ ಪಾಕಿಸ್ತಾನದ ಹೆಗಲ ಮೇಲಿದೆ ಎಂಬುದಕ್ಕೆ ಇದಕ್ಕಿಂತ ಒಳ್ಳೆಯ ನಿದರ್ಶನ ಬೇಕಾಗಿಲ್ಲ. ಕಾಂಗ್ರೆಸ್‌ ಪ್ರಣಾಳಿಕೆಯು ಮುಸ್ಲಿಂ ಲೀಗ್‌ನಂತೆಯೇ ಇದೆ” ಎಂದು ಎಕ್ಸ್‌ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

“ಇದಕ್ಕೂ ಮೊದಲು ನನಗೆ ಕಾಂಗ್ರೆಸ್‌ ಪಕ್ಷ ಫೇವರಿಟ್‌ ಎಂದು ಉಗ್ರ ಹಫೀಜ್‌ ಸಯೀದ್‌ ಹೇಳಿದ್ದ. ಮಣಿಶಂಕರ್‌ ಅಯ್ಯರ್‌ ಅವರು ನರೇಂದ್ರ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಪಾಕಿಸ್ತಾನಕ್ಕೆ ಹೋಗಿದ್ದರು. ಕಾಂಗ್ರೆಸ್‌ ನಾಯಕರಿಂದಲೇ ಪಾಕಿಸ್ತಾನ ಜಿಂದಾಬಾದ್‌ ಎಂಬ ಘೋಷಣೆ ಕೇಳಿಬಂದಿದ್ದವು. ಬಿ.ಕೆ. ಹರಿಪ್ರಸಾದ್‌ ಅವರು ಬಹಿರಂಗವಾಗಿಯೇ ಪಾಕ್‌ ಪರ ಮಾತನಾಡಿದ್ದಾರೆ. ಪಾಕಿಸ್ತಾನದ ಉಗ್ರರನ್ನೂ ಕಾಂಗ್ರೆಸ್‌ ನಾಯಕರು ಬೆಂಬಲಿಸಿದ್ದರು. ಈಗ ಸಂಬಂಧ ಹೇಗಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ” ಎಂದು ಕುಟುಕಿದ್ದಾರೆ.

ಇದನ್ನೂ ಓದಿ: Shyam Rangeela: ಮೋದಿಯನ್ನು ಮಿಮಿಕ್ರಿ ಮಾಡಿ ಖ್ಯಾತಿಯಾದ ಕಲಾವಿದ ಈಗ ಪ್ರಧಾನಿ ವಿರುದ್ಧವೇ ಕಣಕ್ಕೆ!

Exit mobile version