Site icon Vistara News

ವಿಸ್ತಾರ Explainer| ʼಅಗ್ನಿಪಥʼದಲ್ಲೇನು ತೊಡಕುಗಳು?; ಎಲ್ಲ ಅನುಮಾನಗಳಿಗೆ ಕೇಂದ್ರ ಕೊಟ್ಟ ಉತ್ತರ ಇಲ್ಲಿದೆ

Agnipath Explainer

ನವದೆಹಲಿ: ಸೇನಾ ನೇಮಕಾತಿಗಾಗಿ ಅಗ್ನಿಪಥ್‌ ಎಂಬ ಐತಿಹಾಸಿಕ ಯೋಜನೆಯನ್ನೇನೋ ಕೇಂದ್ರ ಸರ್ಕಾರ ಘೋಷಿಸಿತು. ಅಧಿಕೃತವಾಗಿ ಜಾರಿಗೂ ತಂದಾಯಿತು. ಆದರೆ ಅದರ ಪರಿಣಾಮ ಮಾತ್ರ ಯಾರೂ ಊಹಿಸಿರಲಿಲ್ಲ. ಅನೇಕ ವಿದ್ಯಾರ್ಥಿಗಳು, ಯುವಜನರು ಅಗ್ನಿಪಥ್‌ ವಿರುದ್ಧ ತಿರುಗಿಬಿದ್ದಿದ್ದಾರೆ. ಈ ಯೋಜನೆಯಲ್ಲಿ ಉದ್ಯೋಗ ಭದ್ರತೆ ಇಲ್ಲ ಎಂದು ಆರೋಪಿಸಿ ಹಿಂಸಾತ್ಮಕ ಪ್ರತಿಭಟನೆ ನಡೆಸುತ್ತಿದ್ದಾರೆ. ಅಗ್ನಿಪಥದ ವಿರುದ್ಧ ʼಬೆಂಕಿʼ ಪ್ರತಿಭಟನೆಯನ್ನೇ ನಡೆಸುತ್ತಿದ್ದು, ಇವರ ಆಕ್ರೋಶಕ್ಕೆ ರೈಲುಗಳೆಲ್ಲ‌ ಸುಟ್ಟುಬೂದಿಯಾಗುತ್ತಿವೆ.

ಅಗ್ನಿಪಥ್‌ ಬಗ್ಗೆ ಇಷ್ಟೆಲ್ಲ ಅಸಮಾಧಾನವೇಕೆ?
ಅಗ್ನಿಪಥ್‌ ಯೋಜನೆಯಡಿ 17.5 ರಿಂದ 23 ವರ್ಷದವರೆಗಿನ ಯುವಜನರು (ಯುವಕರು/ಯುವತಿಯರು) ಸೇನೆ ಸೇರಬಹುದು. ಇವರನ್ನು ಅಗ್ನಿವೀರರು ಎಂದು ಕರೆಯಲಾಗುತ್ತದೆ. ಆದರೆ ಇವರ ಸೇವೆ ಅವಧಿ ಕೇವಲ ನಾಲ್ಕು ವರ್ಷ. ಇಷ್ಟಾದ ಬಳಿಕ ಶೇ.25 ಅಗ್ನಿವೀರರು ಮಾತ್ರ ಸೇನೆಯಲ್ಲಿ ಶಾಶ್ವತ ಸೇವೆಗೆ ಆಯ್ಕೆಯಾಗುತ್ತಾರೆ. ಉಳಿದವರು ಸೇವಾನಿವೃತ್ತಿಯಾಗುತ್ತಾರೆ. ಅಗ್ನಿವೀರರಿಗೆ 30 ಸಾವಿರದಿಂದ 40ಸಾವಿರ ರೂ.ವರೆಗೆ ವೇತನ ನೀಡಲಾಗುತ್ತದೆ. ಸೇವಾ ಅವಧಿಯಲ್ಲಿ ಅವರು ಎಲ್ಲ ರೀತಿಯ ಭತ್ಯೆಗೂ ಅರ್ಹರಾಗಿರುತ್ತಾರೆ. ಕೊನೆಯಲ್ಲಿ ನಾಲ್ಕು ವರ್ಷಗಳ ನಂತರ ನಿವೃತ್ತರಾಗುವ ವೇಳೆ ಸೇವಾ ನಿಧಿಗೂ ಭಾಜನರಾಗಿರುತ್ತಾರೆ. ಇಷ್ಟೆಲ್ಲ ಆದರೂ ಇದು ಭರವಸೆಯ ಉದ್ಯೋಗವಲ್ಲ ಎಂಬುದು ಒಂದಷ್ಟು ರಾಜಕಾರಣಿಗಳು, ವಿದ್ಯಾರ್ಥಿಗಳು ಮತ್ತು ಯುವಜನತೆಯ ಅಸಮಾಧಾನ.

ಯೋಜನೆಯಡಿ ಸೇವಾ ಅವಧಿಯನ್ನು 4 ವರ್ಷಕ್ಕೆ ಸೀಮಿತಗೊಳಿಸಿದ್ದಕ್ಕೆ ಬಲವಾದ ವಿರೋಧ ವ್ಯಕ್ತವಾಗುತ್ತಿದೆ. ಹೀಗೆ ಮಾಡುವುದರಿಂದ ಉದ್ಯೋಗಾಕಾಂಕ್ಷಿಗಳಿಗಾಗಲೀ, ಈ ದೇಶಕ್ಕಾಗಲಿ ಯಾವುದೇ ಪ್ರಯೋಜನವಿಲ್ಲ. ಯಾಕೆಂದರೆ 4ವರ್ಷ ಕಳೆಯುತ್ತಿದ್ದಂತೆ ಶೇ.75ರಷ್ಟು ಜನರು ಅಗ್ನಿವೀರ ಹುದ್ದೆ ಕಳೆದುಕೊಂಡು ಸೇನೆಯಿಂದ ಹೊರಬರುತ್ತಾರೆ. ಅವರೆಲ್ಲ ಮತ್ತೆ ಉದ್ಯೋಗ ಹುಡುಕಬೇಕಾದ ಪರಿಸ್ಥಿತಿ ಬರುತ್ತದೆ ಎಂಬುದೇ ಅಸಮಾಧಾನಕ್ಕೆ ಕಾರಣ.

ʼ17.5ರಿಂದ 23ವರ್ಷದವರು ಮಾತ್ರ ಈ ಯೋಜನೆಯಡಿ ಸೇನೆ ಸೇರಲು ಅರ್ಹರಾಗಿರುತ್ತಾರೆ. ಸೇನೆ ಸೇರಲು ಒಬ್ಬ ಯುವಕ/ಯುವತಿ 17 ವರ್ಷಕ್ಕೆ ವಿದ್ಯಾಭ್ಯಾಸ ಬಿಟ್ಟು, ಯಾವುದೇ ಪದವಿ ಪಡೆಯದೆ ಹೋಗಿರುತ್ತಾರೆ. ನಾಲ್ಕು ವರ್ಷ ಅವಧಿ ಮುಗಿದು ಹೊರಬರುವಷ್ಟರಲ್ಲಿ ವಯಸ್ಸು 22 ಆಗಿರುತ್ತದೆ. ಕೈಯಲ್ಲಿ ಯಾವುದೇ ಪದವಿ ಇರುವುದಿಲ್ಲ. ಹೀಗಾಗಿ ಉದ್ಯೋಗ ಸಿಗುವುದು ಕಷ್ಟವಾಗುತ್ತದೆ. ಸಿಕ್ಕರೂ ದೊಡ್ಡದೊಡ್ಡ ಕಂಪನಿಗಳಲ್ಲಿ, ಉತ್ತಮ ಸಂಬಳದ ಕೆಲಸ ಸಿಗುವುದಿಲ್ಲ. ಹಾಗಾಗಿ ಎರಡನೇ ದರ್ಜೆಯ ಉದ್ಯೋಗ ಮಾಡುವುದು ಅನಿವಾರ್ಯವಾಗುತ್ತದೆ. ಅತ್ತ ಸೇನೆಯಲ್ಲೂ ಮುಂದುವರಿಯಲಾಗದೆ, ಇತ್ತ ಒಂದೊಳ್ಳೆ ಉದ್ಯೋಗವೂ ದೊರೆಯದೆ ಕಷ್ಟಪಡುವ ಪರಿಸ್ಥಿತಿ ನಮ್ಮದಾಗುತ್ತದೆʼ ಎಂಬುದು ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿಯೊಬ್ಬನ ಅನಿಸಿಕೆ.

ಇದೇ ಯೋಜನೆ ಬಗ್ಗೆ ಜೆಹನಾಬಾದ್‌ ಶಾಸಕ ಕುಮಾರ್‌ ಕೃಷ್ಣಮೋಹನ್‌ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೇನೆ ಸೇರಿ, ಶಾಶ್ವತವಾಗಿ ದೇಶ ಸೇವೆ ಮಾಡಬೇಕು ಎಂದು ಮಹದಾಸೆ ಇಟ್ಟುಕೊಂಡ ವಿದ್ಯಾರ್ಥಿಗಳಿಗೆ ಈ ಅಗ್ನಿಪಥ್‌ ಯೋಜನೆ ಉರುಳು ಇದ್ದ ಹಾಗೆ. ಸೇನಾ ನೇಮಕಾತಿ ನಿಯಮವನ್ನು ಕೇಂದ್ರ ಸರ್ಕಾರ ಬದಲಿಸುವ ಮೂಲಕ ಯುವಜನರಿಗೆ ವಂಚನೆ ಮಾಡಿದೆ. ಕೂಡಲೇ ಇದನ್ನು ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಕೇಂದ್ರ ಸರ್ಕಾರ ಹೇಳೋದೇನು?
ಅಗ್ನಿಪಥ್‌ ಸೇನಾ ನೇಮಕಾತಿ ಯೋಜನೆಯಲ್ಲಿ ಉದ್ಯೋಗ ನಿಶ್ಚಿತತೆ ಇಲ್ಲ. ಇದರಿಂದ ಯುವಜನರಿಗೆ ಆಗುವ ಉಪಯೋಗಕ್ಕಿಂತ ಅನನುಕೂಲವೇ ಹೆಚ್ಚು ಎಂದು ಆರೋಪಿಸಿ ದೇಶದ ಹಲವೆಡೆ, ಅದರಲ್ಲೂ ಮುಖ್ಯವಾಗಿ ಬಿಹಾರ, ರಾಜಸ್ಥಾನ, ಉತ್ತರಪ್ರದೇಶ, ಮಧ್ಯಪ್ರದೇಶ, ಹರ್ಯಾಣಗಳಲ್ಲಿ ಕಳೆದ ಮೂರು ದಿನಗಳಿಂದ ಅತಿರೇಕದ ಪ್ರತಿಭಟನೆ ನಡೆಯುತ್ತಿದೆ. ಹೋರಾಟದ ನೆಪದಲ್ಲಿ ರೈಲುಗಳಿಗೆ ಬೆಂಕಿ ಇಡಲಾಗುತ್ತಿದೆ. ಈ ಮಧ್ಯೆ ಅಗ್ನಿಪಥ್‌ ಯೋಜನೆ ಬಗ್ಗೆ ಎದ್ದಿರುವ ಹಲವು ಮಿಥ್ಯೆ, ತಪ್ಪುಕಲ್ಪನೆಗಳನ್ನು ಹೋಗಲಾಡಿಸಲು ಕೇಂದ್ರ ಸರ್ಕಾರ ಪ್ರಯತ್ನ ಮಾಡಿದ್ದು, ಒಂದಷ್ಟು ಸ್ಪಷ್ಟನೆಯನ್ನೂ ಕೊಟ್ಟಿದೆ. ಅಂದಹಾಗೇ, ಅಗ್ನಿಪಥ್‌ ಸ್ಕೀಮ್‌ ಬಗೆಗೆ ಎದ್ದಿರುವ ತಪ್ಪುಕಲ್ಪನೆಗಳು ಯಾವವು ಮತ್ತು ಅದಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರ ಕೊಟ್ಟಿರುವ ಸ್ಪಷ್ಟನೆ ಏನು?-ಇಲ್ಲಿದೆ ನೋಡಿ ವಿವರ..

ಮಿಥ್ಯೆ: ಅಗ್ನಿವೀರರ ಭವಿಷ್ಯ ಅನಿಶ್ಚಿತ
ಸತ್ಯವೇನು?
1. ಅಗ್ನಿವೀರರಾಗಿ ಸೇವೆ ಸಲ್ಲಿಸಿ, ನಿವೃತ್ತರಾದವರು ಯಾರಾದರೂ ಸ್ವ ಉದ್ಯೋಗ ಮಾಡಲು ಬಯಸಿದರೆ ಅಂಥವರಿಗಾಗಿ ವಿಶೇಷ ಹಣಕಾಸು ಪ್ಯಾಕೇಜ್‌ ಇದೆ ಮತ್ತು ಬ್ಯಾಂಕ್‌ ಸಾಲದ ಯೋಜನೆಯೂ ಇದೆ.
2. ನಿವೃತ್ತಿ ಬಳಿಕ ವಿದ್ಯಾಭ್ಯಾಸ ಮುಂದುವರಿಸಲು ಇಚ್ಛಿಸುವವರಿಗೆ 12 ತರಗತಿಗೆ ಸಮಾನವಾದ ಪ್ರಮಾಣ ಪತ್ರ ಒದಗಿಸಲಾಗುವುದು ಮತ್ತು ಅಂಥವರಿಗಾಗಿ ಬ್ರಿಡ್ಜಿಂಗ್‌ ಕೋರ್ಸ್‌ ಸೌಲಭ್ಯ ಇರುತ್ತದೆ.
3. CAPFs (ಕೇಂದ್ರ ಸಶಸ್ತ್ರ ಪೊಲೀಸ್ ಪಡೆ) ಮತ್ತು ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಆದ್ಯತೆ ಮೇರೆಗೆ ಕೆಲಸ ನೀಡಲಾಗುವುದು.
4 ಇತರ ಪ್ರಮುಖ ಕ್ಷೇತ್ರಗಳಲ್ಲೂ ಮಾಜಿ ಅಗ್ನಿವೀರರಿಗಾಗಿಯೇ ಹಲವು ಉದ್ಯೋಗಾವಕಾಶ ಕಲ್ಪಿಸಲಾಗುತ್ತದೆ.

ಮಿಥ್ಯೆ: ಅಗ್ನಿಪಥ್‌ದಿಂದ ಯುವಕರಿಗೆ ಅವಕಾಶಗಳು ಕಡಿಮೆಯಾಗುತ್ತದೆ
ಸತ್ಯ: ಇಲ್ಲ, ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಯುವಕರಿಗೆ ಅವಕಾಶ ಹೆಚ್ಚಾಗಲಿದೆ. ಯಾಕೆಂದರೆ ಮುಂಬರುವ ದಿನಗಳಲ್ಲಿ ಅಗ್ನಿವೀರರ ನೇಮಕಾತಿಯನ್ನು ಮೂರುಪಟ್ಟು ಹೆಚ್ಚಿಸಲಾಗುವುದು.

ಮಿಥ್ಯೆ: ರೆಜಿಮೆಂಟಲ್‌ ವ್ಯವಸ್ಥೆ ಹಾಳಾಗುತ್ತದೆ
ಸತ್ಯ: ಹಾಗೇನೂ ಆಗುವುದಿಲ್ಲ, ಅಗ್ನಿಪಥ್‌ದಿಂದ ಸೇನಾ ರೆಜಿಮೆಂಟಲ್‌ ವ್ಯವಸ್ಥೆ ಯಾವ ಕಾರಣಕ್ಕೂ ಅಸ್ತವ್ಯಸ್ತಗೊಳ್ಳುವುದಿಲ್ಲ. ನಿಜ ಹೇಳಬೇಕೆಂದರೆ, ಸಮರ್ಥ ಅಗ್ನಿವೀರರ ಆಯ್ಕೆಯಿಂದ ರೆಜಿಮೆಂಟಲ್‌ ವ್ಯವಸ್ಥೆ ಇನ್ನಷ್ಟು ಸದೃಢಗೊಳ್ಳುತ್ತದೆ. ಘಟಕಗಳು ಮತ್ತಷ್ಟು ಗಟ್ಟಿಯಾಗುತ್ತವೆ.

ತಪ್ಪುಕಲ್ಪನೆ: ಅಲ್ಪಾವಧಿಯ ಈ ಯೋಜನೆ ಒಟ್ಟಾರೆ ಸಶಸ್ತ್ರ ಪಡೆಗಳ ಸಾಮರ್ಥ್ಯ ಕುಗ್ಗಿಸುತ್ತದೆ
ವಾಸ್ತವ: 1. ಇಂಥ ಅಲ್ಪ ಅವಧಿ ಸೇನಾ ನೇಮಕಾತಿ ಪ್ರಕ್ರಿಯೆ ಈಗಾಗಲೇ ಹಲವು ದೇಶಗಳಲ್ಲಿ ಅಸ್ತಿತ್ವದಲ್ಲಿದೆ. ಹೀಗಾಗಿ ಇದರ ಕುರಿತು ಅಧ್ಯಯನಗಳೂ ಆಗಿವೆ. ಅದರ ಪ್ರಕಾರ, ಸೇನೆಗೆ ಶಾರ್ಟ್‌ ಟರ್ಮ್‌ಗೆ ನೇಮಕ ಮಾಡಿಕೊಳ್ಳುವುದು ಅತ್ಯಂತ ಒಳ್ಳೆಯದು ಎಂದೇ ಹೇಳಲಾಗಿದೆ. ಯುವ ವಯಸ್ಸಿನವರ ಸಂಖ್ಯೆ ಹೆಚ್ಚುವುದರಿಂದ ಆರ್ಮಿ ಸಹಜವಾಗಿಯೇ ಇನ್ನಷ್ಟು ಸದೃಢಗೊಳ್ಳುತ್ತದೆ.
2. ಅಗ್ನಿಪಥ್‌ ಯೋಜನೆಯಡಿ ಒಮ್ಮೆಲೇ ಹೆಚ್ಚಿನ ಸಂಖ್ಯೆಯಲ್ಲಿ ನೇಮಕಾತಿ ಮಾಡಿಕೊಳ್ಳುವುದಿಲ್ಲ. ಮೊದಲ ವರ್ಷ ಮೂರೂ ಸಶಸ್ತ್ರ ಪಡೆಗಳಿಗೆ ಸೇರಿ ಶೇ.3ರಷ್ಟು ಮಾತ್ರ ಅಗ್ನಿವೀರರ ನೇಮಕಾತಿ ನಡೆಯುತ್ತದೆ. ಹಂತಹಂತವಾಗಿ ಹೆಚ್ಚಿಸಲಾಗುತ್ತದೆ.
3.ನಾಲ್ಕು ವರ್ಷಗಳ ನಂತರ ಸೇನೆಯ ಶಾಶ್ವತ ಸೇವೆಗೆ ಅಗ್ನಿವೀರರನ್ನು ಆಯ್ಕೆ ಮಾಡುವಾಗ ಅವರನ್ನು ಎಲ್ಲ ವಿಧದ ಪರೀಕ್ಷೆಗೂ ಒಳಪಡಿಸಲಾಗುತ್ತದೆ. ದಕ್ಷತೆಯಿದ್ದವರು ಮಾತ್ರ ಮುಂದಿನ ಹಂತ ತಲುಪುತ್ತಾರೆ. ಹೀಗಾಗಿ ಸಶಸ್ತ್ರ ಪಡೆಗಳ ಕಾರ್ಯಕ್ಷಮತೆ ಕುಂದುವುದಿಲ್ಲ.

ಮಿಥ್ಯೆ: 21 ವರ್ಷದವರು ಇನ್ನೂ ಪ್ರಬುದ್ಧರಾಗಿರುವುದಿಲ್ಲ ಮತ್ತು ಕೆಲಸ ಮಾಡುತ್ತಾರೆಂಬ ವಿಶ್ವಾಸವೂ ಇರುವುದಿಲ್ಲ
ಸತ್ಯ: 1. ವಾಸ್ತವದಲ್ಲಿ ಬಹುತೇಕ ದೇಶಗಳ ಸೇನೆಯಲ್ಲಿ ಈ ವಯಸ್ಸಿನ ಯುವಕರೇ ತುಂಬಿದ್ದಾರೆ ಮತ್ತು ಸಮರ್ಥವಾಗಿ ಹೋರಾಡುತ್ತಿದ್ದಾರೆ.
2. ಅಗ್ನಿಪಥ್‌ ಯೋಜನೆಯಿಂದಾಗಿ ಸಶಸ್ತ್ರ ಪಡೆಗಳಲ್ಲಿ ಅನುಭವಿ ಯೋಧರಿಗಿಂತ ಈ ಹೊಸದಾಗಿ ಸೇರುವ ಅಗ್ನಿವೀರರೇ ಹೆಚ್ಚಿರುತ್ತಾರೆ ಎಂಬ ಸ್ಥಿತಿ ಉಂಟಾಗುವುದಿಲ್ಲ. ಬದಲಿಗೆ ಶೇ.50ರಷ್ಟು ಯುವಜನರಿದ್ದರೆ, ಉಳಿದ ಶೇ.50ರಷ್ಟು ಅನುಭವಿ ಸೈನಿಕರು, ವಿವಿಧ ಶ್ರೇಣಿಯ ಅಧಿಕಾರಿಗಳು ಇರುತ್ತಾರೆ.

ವಿರೋಧಿಗಳ ಆರೋಪ: ಉದ್ಯೋಗ ಸಿಗದ ಮಾಜಿ ಅಗ್ನಿವೀರರು ಸಮಾಜಕ್ಕೆ ಮಾರಕವಾಗಬಹುದು ಅಥವಾ ಉಗ್ರಸಂಘಟನೆಗಳನ್ನು ಸೇರಬಹುದು
ಕೇಂದ್ರದ ಪ್ರತಿಕ್ರಿಯೆ: 1. ಇದೊಂದು ಹುರುಳಿಲ್ಲದ ಅಭಿಪ್ರಾಯ. ಭಾರತ ದೇಶದ ಸಶಸ್ತ್ರ ಪಡೆಯ ಮೌಲ್ಯ ಮತ್ತು ನೈತಿಕ ನಿಯಮಗಳಿಗೆ ಮಾಡುವ ಅವಮಾನ. ಒಂದು ಬಾರಿ ಯುವಕರು ದೇಶದ ಸೇನಾ ಸಮವಸ್ತ್ರ ಧರಿಸಿದರೆ, ಅವರು ಜೀವನ ಪರ್ಯಂತ ದೇಶದ ಸುರಕ್ಷತೆಗೆ ಬದ್ಧರಾಗಿರುತ್ತಾರೆ.
2. ಈಗಲೂ ದೇಶದಲ್ಲಿ ಸಾವಿರಾರು ಮಂದಿ ನಿವೃತ್ತ ಯೋಧರು ಇದ್ದಾರೆ. ಅಂಥವರು ಯಾರೂ ದೇಶ ವಿರೋಧಿ ಕೆಲಸ ಮಾಡಿದ, ಉಗ್ರ ಸಂಘಟನೆ ಸೇರಿದ ಉದಾಹರಣೆ ಇಲ್ಲ.

ಆರೋಪ: ಅಗ್ನಿಪಥ್‌ ಯೋಜನೆ ಜಾರಿ ಮಾಡುವ ವೇಳೆ ಸಶಸ್ತ್ರ ಪಡೆಗಳ ಮಾಜಿ ಅಧಿಕಾರಿಗಳೊಂದಿಗೆ ಸಮಾಲೋಚಿಸಿಲ್ಲ
ಕೇಂದ್ರದ ಸ್ಪಷ್ಟನೆ: 1. ಇಲ್ಲ, ಇದು ತಪ್ಪು ತಿಳಿವಳಿಕೆ. ಅಗ್ನಿಪಥ್‌ ಸ್ಕೀಮ್‌ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಸೇವೆಯಲ್ಲಿರುವ ಸೇನಾ ತಜ್ಞರು, ಹಿರಿಯ ಅಧಿಕಾರಿಗಳೊಂದಿಗೆ ಕಳೆದ ಎರಡು ವರ್ಷಗಳಿಂದಲೂ ಆಳವಾಗಿ ಸಮಾಲೋಚನೆ ನಡೆಸಿ, ಸಾಧಕ-ಬಾಧಕ ಪರಿಗಣಿಸಲಾಗಿದೆ.
2. ಯೋಜನೆಯ ಪ್ರಸ್ತಾವನೆ ರೂಪುಗೊಂಡಿದ್ದು ಮಿಲಿಟರಿ ಅಧಿಕಾರಿಗಳು, ಸಿಬ್ಬಂದಿಯನ್ನೊಳಗೊಂಡ ಡಿಪಾರ್ಟ್‌ಮೆಂಟ್‌ನಿಂದ. ಸೇನೆಯ ಮೂರು ವಿಭಾಗಗಳಲ್ಲಿರುವ ಉನ್ನತ ಶ್ರೇಣಿಯ ಅಧಿಕಾರಿಗಳು ಅಗ್ನಿಪಥ್‌ ಯೋಜನೆಯ ಅನುಕೂಲಗಳನ್ನು ಪಟ್ಟಿಮಾಡಿದ್ದಾರೆ ಮತ್ತು ಇದನ್ನು ಸ್ವಾಗತಿಸಿದ್ದಾರೆ.

ಇದನ್ನೂ ಓದಿ: Agnipath : ಸೇನೆ ಸೇರಲು ಯುವಕರಿಗೆ ಸುವರ್ಣ ಅವಕಾಶ; ಅಗ್ನಿಪಥ್‌ ಯೋಜನೆಗೆ ಕೇಂದ್ರದ ಅನುಮೋದನೆ

Exit mobile version