ಕೋಲ್ಕೊತಾ: ಕೌಟುಂಬಿಕ ಹಿಂಸೆ ಎಂದರೆ ಪುರುಷ ಮಾತ್ರ ತನ್ನ ಹೆಂಡತಿ ಮೇಲೆ ದೌರ್ಜನ್ಯ, ಹಿಂಸೆ ಮಾಡುವುದಲ್ಲ. ಪುರುಷರು ಕೂಡ ಪತ್ನಿಯರಿಂದ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ ಎಂಬ ಮಾತುಗಳು ಆಗಾಗ ಕೇಳಿಬರುತ್ತವೆ. ಇದಕ್ಕೆ ನಿದರ್ಶನ ಎಂಬಂತೆ, ಪತ್ನಿಯು ತನ್ನ ಗಂಡನಿಗೆ ಹೇಡಿ ಎನ್ನುವುದು, ಕೆಲಸ ಮಾಡದೆ ಮನೆಯಲ್ಲಿ ಇದ್ದಿದ್ದಕ್ಕೆ ನಿರುದ್ಯೋಗಿ ಎಂದು ಹೀಯಾಳಿಸುವುದು, ನಿನ್ನ ತಂದೆ-ತಾಯಿಯನ್ನು ಬಿಟ್ಟು ಬಾ ಎಂದು ಒತ್ತಾಯಿಸುವುದು ಕೂಡ ಕ್ರೌರ್ಯ ಎಂದು ಕೋಲ್ಕೊತಾ ಹೈಕೋರ್ಟ್ ಇತ್ತೀಚೆಗೆ ಹೇಳಿದೆ. ಅಲ್ಲದೆ, ಪತ್ನಿಯು ಹೀಗೆ ವರ್ತಿಸುತ್ತಿದ್ದರೆ ಪತಿ ವಿಚ್ಛೇದಹ ಪಡೆಯಲು ಅರ್ಹ ಎಂದೂ ತಿಳಿಸಿದೆ.
ತಂದೆ-ತಾಯಿಯನ್ನು ಬಿಟ್ಟು ಬಾ ಎಂದು ಒತ್ತಾಯಿಸಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ವಿಚ್ಛೇದನ ನೀಡಿದ್ದರು. ಪಾಶಿಮ್ ಮಿಡ್ನಾಪುರದ ಕೌಟುಂಬಿಕ ನ್ಯಾಯಾಲಯವು ಕ್ರೌರ್ಯದ ಆಧಾರದ ಮೇಲೆ ವಿಚ್ಛೇದನ ಪಡೆಯಲು ಅನುಮತಿ ನೀಡಿತ್ತು. ಇದನ್ನು ಪ್ರಶ್ನಿಸಿ ಮಹಿಳೆಯು ಹೈಕೋರ್ಟ್ ಮೊರೆ ಹೋಗಿದ್ದರು. ಮಹಿಳೆಯ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೌಮೆನ್ ಸೇನ್ ಹಾಗೂ ಉದಯ್ ಕುಮಾರ್ ಅವರಿದ್ದ ಪೀಠವು, ಕ್ರೌರ್ಯದ ಆಧಾರದ ಮೇಲೆ ಪತಿಗೆ ವಿಚ್ಛೇದನ ಪಡೆಯಲು ಅವಕಾಶ ನೀಡಿತು.
“ಮದುವೆಯಾದ ಬಳಿಕವೂ ಮಗನಾದವನು ತಂದೆ-ತಾಯಿ ಜತೆ ಇರುವುದು ಭಾರತೀಯ ಕುಟುಂಬದ ಪದ್ಧತಿಯಾಗಿದೆ. ಹಾಗಾಗಿ, ಪತ್ನಿಯು ಪತಿಗೆ ಪೋಷಕರನ್ನು ತೊರೆದು ಬಾ ಎಂದು ಒತ್ತಾಯಿಸುವುದು ಸರಿಯಲ್ಲ. ಸರಿಯಾದ ಕಾರಣವಿಲ್ಲದೆ ಹೀಗೆ ಒತ್ತಾಯಿಸುವುದು, ಗಂಡನನ್ನು ಹೇಡಿ, ನಿರುದ್ಯೋಗಿ ಎಂದು ಕರೆಯುವುದು ಕೂಡ ಕ್ರೌರ್ಯಕ್ಕೆ ಸಮವಾಗಿದೆ. ಇಂತಹ ಪ್ರಕರಣಗಳಲ್ಲಿ ಪತಿಯು ವಿಚ್ಛೇದನ ಪಡೆಯಲು ಅರ್ಹ” ಎಂದು ಸ್ಪಷ್ಟಪಡಿಸಿತು.
ಇತ್ತೀಚೆಗೆ ಪತ್ನಿಯರು ಕೂಡ ಗಂಡಂದಿರಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ಜಾಸ್ತಿ ವರದಿಯಾಗುತ್ತಿವೆ. ಇದೇ ಕಾರಣಕ್ಕೆ, ಪತ್ನಿಯಿಂದ ಪತಿಗೆ ರಕ್ಷಣೆ ಸಿಗಬೇಕು ಎಂಬ ಕಾರಣಕ್ಕಾಗಿ ಪುರುಷರಿಗೂ ಒಂದು ಆಯೋಗ ರಚಿಸಬೇಕು ಎಂದು ವಕೀಲ ಮಹೇಶ್ ಕುಮಾರ್ ತಿವಾರಿ ಅವರು ಕೆಲವು ವಾರಗಳ ಹಿಂದೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (NCRB) ವರದಿಯ ಅಂಕಿ-ಅಂಶಗಳನ್ನು ಉಲ್ಲೇಖಿಸಿ ಮಹೇಶ್ ಕುಮಾರ್ ಅವರು ಅರ್ಜಿ ಸಲ್ಲಿಸಿದ್ದಾರೆ. ಪುರುಷರು ಕೂಡ ಪತ್ನಿಯರಿಂದ ರಕ್ಷಣೆ ಪಡೆಯಲು ರಾಷ್ಟ್ರೀಯ ಪುರುಷರ ಆಯೋಗ ರಚಿಸಬೇಕು ಎಂಬುದಾಗಿ ಅವರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
“2021ರಲ್ಲಿ 1,64,033 ಜನ ದೇಶಾದ್ಯಂತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಲ್ಲಿ 81,063 ಪುರುಷರಿದ್ದರೆ, 28,680 ಮಹಿಳೆಯರು ಇದ್ದಾರೆ. ಪುರುಷರಲ್ಲಿ ಶೇ.33.2ರಷ್ಟು ಜನ ಕೌಟುಂಬಿಕ ಸಮಸ್ಯಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಶೇ.4.8ರಷ್ಟು ಮಂದಿ ಮದುವೆ ಸಂಬಂಧಿತ ಕಾರಣಗಳಿಂದಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿ ಹೇಳುತ್ತದೆ. ಹಾಗಾಗಿ, ಪುರುಷರಿಗೂ ಆಯೋಗ ರಚಿಸಲು ಮಾನವ ಹಕ್ಕುಗಳ ಆಯೋಗಕ್ಕೆ ಸೂಚಿಸಬೇಕು” ಎಂಬುದಾಗಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಎಂಬಿಎ ಓದಿದ್ದರೂ ಪತಿಯಿಂದ 50 ಸಾವಿರ ರೂ. ಜೀವನಾಂಶ ಕೇಳಿದ ಮಹಿಳೆ; ದುಡಿದು ತಿನ್ನಿ ಎಂದ ಕೋರ್ಟ್