Site icon Vistara News

Sita Temple: ಬಿಜೆಪಿಯಿಂದ ಶೀಘ್ರವೇ ಸೀತೆಗಾಗಿ ಮಂದಿರ ನಿರ್ಮಾಣ; ಅಮಿತ್‌ ಶಾ ಮಹತ್ವದ ಘೋಷಣೆ

Amit Shah

Amit Shah directs to implement area domination, zero terror plans in Jammu Kashmir after terrorist attacks

ಪಟನಾ: ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ರಾಮಮಂದಿರ (Ram Mandir) ನಿರ್ಮಾಣ ಮಾಡಲಾಗಿದ್ದು, ಕಳೆದ ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಲೋಕಾರ್ಪಣೆ ಮಾಡಿದ್ದಾರೆ. ಕೋಟ್ಯಂತರ ಜನ ರಾಮಮಂದಿರಕ್ಕೆ ತೆರಳಿ ಶ್ರೀರಾಮನ ದರ್ಶನ ಪಡೆದಿದ್ದಾರೆ. ಇದರ ಬೆನ್ನಲ್ಲೇ, “ಬಿಹಾರದ ಸೀತಾಮಡಿಯಲ್ಲಿ (Sitamarhi) ಬಿಜೆಪಿಯು ಸೀತೆಗಾಗಿ ಮಂದಿರ (Sita Temple) ನಿರ್ಮಿಸಲಾಗುವುದು” ಎಂದು ಕೇಂದ್ರ ಸಚಿವ ಅಮಿತ್‌ ಶಾ (Amit Shah) ಘೋಷಣೆ ಮಾಡಿದ್ದಾರೆ.

“ವೋಟ್‌ ಬ್ಯಾಂಕ್‌ ರಾಜಕೀಯಕ್ಕೆ ಬಿಜೆಪಿಯು ಹೆದರುವುದಿಲ್ಲ. ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ರಾಮಲಲ್ಲಾನಿಗಾಗಿ ರಾಮಮಂದಿರ ನಿರ್ಮಾಣ ಮಾಡಿದ್ದಾರೆ. ರಾಮನ ಜನ್ಮಭೂಮಿಯಲ್ಲಿ ಮಂದಿರ ನಿರ್ಮಿಸಲಾಗಿದೆ. ಇನ್ನು, ಸೀತೆಯ ಜನ್ಮಸ್ಥಳದಲ್ಲಿ ಸೀತೆಗಾಗಿ ಮಂದಿರ ನಿರ್ಮಾಣ ಮಾಡುವ ಅವಶ್ಯಕತೆ ಇದೆ. ರಾಮಮಂದಿರ ನಿರ್ಮಾಣ ಮಾಡಲು ಅಧಿಕಾರದಲ್ಲಿದ್ದವರು ದೂರದಲ್ಲೇ ಉಳಿದರು. ಆದರೆ, ಮೋದಿ ಅವರ ಕಾಲದಲ್ಲಿ ರಾಮಮಂದಿರ ನಿರ್ಮಾಣ ಮಾಡಲಾಯಿತು. ಈಗ ಸೀತೆಗಾಗಿ ಯಾರಾದರೂ ರಾಮಮಂದಿರ ನಿರ್ಮಾಣ ಮಾಡಿದರೆ, ಅದು ನರೇಂದ್ರ ಮೋದಿ ಅವರು ಮಾತ್ರ” ಎಂದು ಬಿಹಾರದ ಸೀತಾಮಡಿಯಲ್ಲಿ ನಡೆದ ಚುನಾವಣೆ ರ‍್ಯಾಲಿಯಲ್ಲಿ ಅಮಿತ್ ಶಾ ಹೇಳಿದ್ದಾರೆ.

ಸಮಾವೇಶದಲ್ಲಿ ಕಾಂಗ್ರೆಸ್‌ ಹಾಗೂ ಆರ್‌ಜೆಡಿ ವಿರುದ್ಧ ಅಮಿತ್‌ ಶಾ ವಾಗ್ದಾಳಿ ನಡೆಸಿದರು. “ಲಾಲು ಪ್ರಸಾದ್ ಯಾದವ್‌ ಅವರು ಪವರ್‌ ಪಾಲಿಟಿಕ್ಸ್‌ನಿಂದಾಗಿ ಕಾಂಗ್ರೆಸ್‌ ಜತೆ ಸಂಖ್ಯ ಬೆಳೆಸಿದರು. ಲಾಲು ಪ್ರಸಾದ್‌ ಯಾದವ್‌ ಅವರು ತಮ್ಮ ಪುತ್ರನನ್ನು ಸಿಎಂ ಮಾಡಬೇಕು ಎಂಬ ಏಕಮಾತ್ರ ಉದ್ದೇಶದಿಂದ ಅವರು ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಂಡರು” ಎಂದು ಟೀಕಿಸಿದರು.

ಹಿಂದು ಗ್ರಂಥಗಳ ಪ್ರಕಾರ, ರಾಜ ಜನಕನು ಸೀತಾಮಡಿಯ ಜಮೀನೊಂದರಲ್ಲಿ ಉಳುಮೆ ಮಾಡುವಾಗ ಮಡಿಕೆಯೊಂದರಿಂದ ಭಗವಾನ್‌ ರಾಮನ ಪತ್ನಿ ಸೀತೆ ಉದ್ಭವಿಸಿದರು ಎಂದು ಹೇಳಲಾಗುತ್ತಿದೆ. ಹಾಗಾಗಿ, ಸೀತಾಮಡಿಯನ್ನು ಪವಿತ್ರ ಸ್ಥಾನ ಎಂದೇ ಹೇಳಲಾಗುತ್ತಿದೆ. ಸೀತಾಮಡಿಯು ಲೋಕಸಭೆ ಕ್ಷೇತ್ರವೂ ಆಗಿದೆ.

ಕೆಲ ದಿನಗಳ ಹಿಂದಷ್ಟೇ ರಾಮಮಂದಿರ ಕುರಿತು ನರೇಂದ್ರ ಮೋದಿ ಮಾತನಾಡಿದ್ದರು. “ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 400 ಕ್ಷೇತ್ರಗಳಲ್ಲಿ ಗೆಲ್ಲಿಸಿ ಎಂಬುದಾಗಿ ನಾನು ನಿಮ್ಮಲ್ಲಿ ಮನವಿ ಮಾಡಲು ಹಲವು ಕಾರಣಗಳಿವೆ. ನೀವು ಬಹುಮತ ನೀಡಿದ ಕಾರಣಕ್ಕಾಗಿಯೇ ನಾವು 370ನೇ ವಿಧಿಯನ್ನು ರದ್ದುಗೊಳಿಸಿದೆವು. ಹಾಗಾಗಿ, ಕಾಂಗ್ರೆಸ್‌ 370ನೇ ವಿಧಿಯನ್ನು ಮತ್ತೆ ಜಾರಿಗೆ ತರಬಾರದು, ಅಯೋಧ್ಯೆಯ ರಾಮಮಂದಿರಕ್ಕೆ ಬಾಬ್ರಿ ಮಸೀದಿ ಬೀಗ ಜಡಿಯಬಾರದು, ನಮ್ಮ ದೇಶದ ದ್ವೀಪಗಳನ್ನು ಬೇರೆ ದೇಶಗಳಿಗೆ ನೀಡಬಾರದು, ಒಬಿಸಿ ಮೀಸಲಾತಿಯನ್ನು ಕಿತ್ತು ಧರ್ಮದ ಆಧಾರದ ಮೇಲೆ ಅಲ್ಪಸಂಖ್ಯಾತರಿಗೆ ನೀಡಬಾರದು ಎಂಬ ಕಾರಣಕ್ಕಾಗಿ ಬಿಜೆಪಿಗೆ ಬಹುಮತ ನೀಡಿ” ಎಂಬುದಾಗಿ ಮನವಿ ಮಾಡಿದ್ದರು.

ಇದನ್ನೂ ಓದಿ: PM Modi: ರಾಮಮಂದಿರಕ್ಕೆ ಕಾಂಗ್ರೆಸ್‌ ಬೀಗ ಹಾಕಬಾರದು ಎಂದರೆ ನಮಗೆ 400 ಸೀಟು ಕೊಡಿ ಎಂದ ಮೋದಿ

Exit mobile version