ನವದೆಹಲಿ: ಹಿಜಾಬ್ (Hijab Row) ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶನ ಕೋರಿ ಕೆಲವು ಮುಸ್ಲಿಮ್ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್‌ಗೆ (Supreme Court) ಬುಧವಾರ ಮೊರೆ ಹೋಗಿದ್ದಾರೆ. ಅಕ್ಟೋಬರ್‌ನಲ್ಲಿ ಹಿಜಾಬ್ ನಿಷೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಪೀಠವು ಭಿನ್ನ ತೀರ್ಪು ನೀಡಿತ್ತು. ಅಲ್ಲದೇ, ಈ ಪ್ರಕರಣವನ್ನು ಉನ್ನತ ಪೀಠಕ್ಕೆ ಶಿಫಾರಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಈ ಪ್ರಕರಣ ಕುರಿತು ನಿರ್ಧಾರ ಕೈಗೊಳ್ಳಲು ಶೀಘ್ರವೇ ತ್ರಿಸದಸ್ಯ ಪೀಠ ರಚನೆ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದ್ದಾರೆ.
ಕರ್ನಾಟಕದಲ್ಲಿ ಮಾರ್ಚ್ 9ರಿಂದ ಪರೀಕ್ಷೆಗಳು ಆರಂಭವಾಗುತ್ತಿವೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳು ಹಿಜಾಬ್ ಧರಿಸಿದ ವಿದ್ಯಾರ್ಥಿಗಳ ಪ್ರವೇಶವನ್ನು ನಿರಾಕರಿಸುತ್ತಿವೆ. ಹಿಜಾಬ್ ಮೇಲಿನ ನಿಷೇಧ ಕುರಿತಾದ ಸಂಗತಿಯನ್ನು ವಕೀಲ ಶದನ್ ಫರಾಸತ್ ಅವರು ಮುಖ್ಯನ್ಯಾಯಮೂರ್ತಿ ಅವರ ಗಮನಕ್ಕೆ ತಂದರು.
ಇದನ್ನೂ ಓದಿ:ಹಿಜಾಬ್ ವಿವಾದ ಬಳಿಕ ಉಡುಪಿಯಲ್ಲಿ ಹೆಚ್ಚಾಯ್ತು ಮುಸ್ಲಿಂ ಕಾಲೇಜುಗಳಿಗೆ ಬೇಡಿಕೆ
ಹಿಜಾಬ್ ನಿಷೇಧ ಹಿನ್ನೆಲೆಯಲ್ಲಿ ಅನೇಕರು ಈಗಾಗಲೇ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮೊರೆ ಹೋಗಿದ್ದಾರೆ. ಆದರೂ, ಪರೀಕ್ಷೆಗಳನ್ನು ಸರ್ಕಾರಿ ಕಾಲೇಜುಗಳಲ್ಲಿ ನಡೆಸಲಾಗುತ್ತದೆ. ಹಿಜಾಬ್ ನಿಷೇಧದಿಂದಾಗಿ ಈಗಾಗಲೇ ಅನೇಕರು ಒಂದು ವರ್ಷವನ್ನು ಹಾಳು ಮಾಡಿಕೊಂಡಿದ್ದಾರೆ. ಅವರೆಲ್ಲರೂ ಹಿಜಾಬ್ ಧರಿಸಿ ಪರೀಕ್ಷೆಯನ್ನು ಬರೆಯಲು ಅವಕಾಶ ಕೋರುತ್ತಿದ್ದಾರೆಂದು ವಕೀಲರು ತಿಳಿಸಿದರು.