Site icon Vistara News

Sachin Pilot: ಭ್ರಷ್ಟಾಚಾರ ವಿರುದ್ಧ ಸತ್ಯಾಗ್ರಹಕ್ಕೆ ಪೈಲಟ್ ಸಿದ್ಧತೆ; ರಾಜಸ್ಥಾನದಲ್ಲಿ ಮತ್ತೆ ಗೆಹ್ಲೋಟ್-ಸಚಿನ್ ಜಟಾಪಟಿ

Will Fast Against Corruption, Says Sachin Pilot

ಜೈಪುರ, ರಾಜಸ್ಥಾನ: ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಮತ್ತು ಕಾಂಗ್ರೆಸ್‌ನ ಯುವ ನಾಯಕ ಸಚಿನ್ ಪೈಲಟ್ (Sachin Pilot) ನಡುವಿನ ಮುಸುಕಿನ ಗುದ್ದಾಟ ನಿಲ್ಲುವಂತಿಲ್ಲ ಕಾಣುತ್ತಿಲ್ಲ. ಈ ಇಬ್ಬರೂ ನಾಯಕರು ಪರಸ್ಪರ ಆಗಾಗ ವಾಗ್ವಾದಲ್ಲಿ ತೊಡಗಿಕೊಳ್ಳುತ್ತಾರೆ. ಈಗ ಸಚಿನ್ ಪೈಲಟ್ ಅವರು, ಭ್ರಷ್ಟಾಚಾರದ ವಿರುದ್ದ ಸತ್ಯಾಗ್ರಹ ನಡೆಸುವುದಾಗಿ ಹೇಳುವ ಮೂಲಕ ಸಿಎಂ ಗೆಹ್ಲೋಟ್ ವಿರುದ್ಧ ತೊಡೆ ತೊಟ್ಟಿದ್ದಾರೆ. ಮಂಗಳವಾರ ಅವರು ಒಂದು ದಿನ ಸತ್ಯಾಗ್ರಹ ನಡೆಸಲಿದ್ದಾರೆ. ಈ ಹಿಂದಿನ ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸರ್ಕಾರ ನಡೆಸಿರುವ ಭ್ರಷ್ಟಾಚಾರ ಪ್ರಕರಣಗಳ ತನಿಖೆಯನ್ನು ಗೆಹ್ಲೋಟ್ ಸರ್ಕಾರ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

2018ರ ವಿಧಾನಸಭಾ ಚುನಾವಣೆಗೆ ಮೊದಲು ನೀಡಿದ ಹೇಳಿಕೆಗಳು ಮತ್ತು ಭರವಸೆಗಳ ಮೇಲೆ ಕಾಂಗ್ರೆಸ್ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಜನರಿಗೆ ಭರವಸೆ ನೀಡುವುದು ಅಗತ್ಯ. ಅಬಕಾರಿ ಮಾಫಿಯಾ, ಅಕ್ರಮ ಗಣಿಗಾರಿಕೆ, ಭೂ ಒತ್ತುವರಿ ಹಾಗೂ ಲಲಿತ್ ಮೋದಿ ಅಫಿಡವಿಟ್ ಪ್ರಕರಣದ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಸಚಿನ್ ಪೈಲಟ್ ಹೇಳಿದ್ದಾರೆ.

ವಸುಂಧರಾ ರಾಜೇ ಅವರ ವಿರುದ್ಧ ಹಾಲಿ ಸಿಎಂ ಗೆಹ್ಲೋಟ್ ಅವರು ಭ್ರಷ್ಟಾಚಾರ ಮತ್ತು ದುರಾಡಳಿತದ ಆರೋಪ ಮಾಡಿರುವ ವಿಡಿಯೋಗಳನ್ನು ಪೈಲಟ್ ಅವರು ಪ್ಲೇ ಮಾಡಿ, ಈ ಹಗರಣಗಳ ಕುರಿತು ಅವರು(ಗೆಹ್ಲೋಟ್) ಏಕೆ ಯಾವುದೇ ತನಿಖೆ ಅಥವಾ ವಿಚಾರಣೆಯನ್ನು ಪ್ರಾರಂಭಿಸಲಿಲ್ಲ. ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಸರ್ಕಾರದ ಬಳಿ ಸಾಕ್ಷ್ಯಾಧಾರಗಳಿವೆ. ಆದರೆ ಅದರ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಸಚಿನ್ ಆರೋಪಿಸಿದರು.

ಈ ಎಲ್ಲ ಭರವಸೆಗಳನ್ನು ಈಡೇರಿಸದೇ ನಾವು ಚುನಾವಣೆಗೆ ಹೋಗುವುದು ಹೇಗೆ, ನಮ್ಮ ಬಳಿ ಸಾಕ್ಷ್ಯಾಧಾರಗಳಿವೆ, ನಾವು ಕ್ರಮೈ ಕೈಗೊಳ್ಳಬೇಕು. ತನಿಖೆಯನ್ನು ನಡೆಸಲೇಬೇಕು. ಶೀಘ್ರವೇ ಚುನಾವಣೆ ಬರಲಿ. ಮಾದರಿ ಸಂಹಿತೆ ಜಾರಿಯಾಗಲಿದೆ. ಹಾಗಾಗಿ, ಜನರಿಗೆ ನಾವು ಉತ್ತರಿಸಲೇಬೇಕಾಗುತ್ತದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ‘ಸಚಿನ್​ ಪೈಲಟ್​​ರಂಥ ಸಿಎಂ ಬೇಕು’; ಭಾರತ್​ ಜೋಡೋ ಯಾತ್ರೆಯಲ್ಲಿ ರಾಹುಲ್​ ಗಾಂಧಿ ಎದುರೇ ಮೊಳಗಿತು ಯುವಕರ ಘೋಷಣೆ

ರಾಜಸ್ಥಾನದಲ್ಲಿ ರಾಜಕೀಯ ಸ್ಥಿತಿಗತಿ ಬಗ್ಗೆ ಪಕ್ಷದ ನಾಯಕತ್ವಕ್ಕೆ ಹಲವು ಸಲಹೆಗಳನ್ನು ನೀಡಲಾಗಿದೆ. ಈ ಪೈಕಿ ಭ್ರಷ್ಟಾಚಾರ ಪ್ರಕರಣಗಳ ಕುರಿತು ತನಿಖೆ ನಡೆಸುವುದು ಒಂದಾಗಿದೆ. ಇದು ನಮ್ಮ ಸರ್ಕಾರ, ನಾವು ಕಾರ್ಯನಿರ್ವಹಿಸಬೇಕಾಗಿದೆ. ಹಾಗೆ ಮಾಡಿದಾಗ ಮಾತ್ರ ಜನರು ನಮ್ಮಲ್ಲಿ ವಿಶ್ವಾಸವನ್ನು ಮುಂದುವರಿಸುತ್ತಾರೆ ಎಂದು ಪೈಲಟ್ ಹೇಳಿದ್ದಾರೆ.

Exit mobile version