Site icon Vistara News

Wagah Border: ಕಾಂಗ್ರೆಸ್‌ ಗೆದ್ದರೆ ಭಾರತ-ಪಾಕ್ ಗಡಿ ಓಪನ್‌ ಎಂದ ಪಂಜಾಬ್‌ ಮಾಜಿ ಸಿಎಂ ಚನ್ನಿ; Video ವೈರಲ್

Wagah Border

Will Open India-Pak Border if Congress Comes to Power, Says Congress Leader Charanjit Channi

ಚಂಡೀಗಢ: ಲೋಕಸಭೆ ಚುನಾವಣೆಯ (Lok Sabha Election 2024) 6ನೇ ಹಂತದ ಮತದಾನ ಮುಗಿದು, ಚುನಾವಣೆ ಕೊನೆಯ ಹಂತಕ್ಕೆ ಬಂದರೂ ರಾಜಕೀಯ ನಾಯಕರ ಹೇಳಿಕೆಗಳು ಮಾತ್ರ ತಣ್ಣಗಾಗಿಲ್ಲ. ಜಾತಿ, ಧರ್ಮ, ಪಾಕಿಸ್ತಾನ ಸೇರಿ ಹಲವು ವಿಷಯಗಳ ಕುರಿತು ರಾಜಕೀಯ ನಾಯಕರು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ. ಇದರ ಬೆನ್ನಲ್ಲೇ, ಪಂಜಾಬ್‌ ಮಾಜಿ ಮುಖ್ಯಮಂತ್ರಿ, ಜಲಂಧರ್‌ ಕಾಂಗ್ರೆಸ್‌ ಅಭ್ಯರ್ಥಿ ಚರಣ್‌ಜೀತ್‌ ಸಿಂಗ್‌ ಚನ್ನಿ (Charanjit Singh Channi) ಅವರು ಪಾಕಿಸ್ತಾನದ ಕುರಿತು ನೀಡಿದ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. “ದೇಶದಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬಂದರೆ ಭಾರತ-ಪಾಕಿಸ್ತಾನ ನಡುವಿನ ವಾಘಾ ಗಡಿಯನ್ನು (Wagah Border) ಸಂಚಾರಕ್ಕೆ ಮುಕ್ತಗೊಳಿಸಲಾಗುವುದು” ಎಂಬುದಾಗಿ ಅವರು ಹೇಳಿದ್ದಾರೆ.

ಪಂಜಾಬ್‌ನ ಜಲಂಧರ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಚರಣ್‌ಜೀತ್‌ ಸಿಂಗ್‌ ಚನ್ನಿ ಮಾತನಾಡಿದರು. “ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ರಚನೆಯಾದರೆ, ವಾಘಾ ಗಡಿಯನ್ನು ಓಪನ್‌ ಮಾಡುತ್ತೇವೆ. ಇದರಿಂದ ಪಾಕಿಸ್ತಾನದ ನಾಗರಿಕರು ಪಂಜಾಬ್‌ಗೆ ಬಂದು ವೈದ್ಯಕೀಯ ಚಿಕಿತ್ಸೆ ಪಡೆದುಕೊಂಡು ಹೋಗಬಹುದಾಗಿದೆ. ಇದರಿಂದ ಜಲಂಧರ್‌ ಮೆಡಿಕಲ್‌ ಟೂರಿಸಂ ತಾಣವನ್ನಾಗಿ ಬದಲಾಯಿಸಲು ಸಾಧ್ಯವಾಗುತ್ತದೆ” ಎಂಬುದಾಗಿ ಹೇಳಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಚರಣ್‌ಜೀತ್‌ ಸಿಂಗ್‌ ಚನ್ನಿ ಅವರು ಪಾಕಿಸ್ತಾನ ಗಡಿ ಕುರಿತು ಮಾತನಾಡುವ ಒಂದು ದಿನ ಮೊದಲು ಪಂಜಾಬ್‌ನಲ್ಲಿ ನರೇಂದ್ರ ಮೋದಿ ರ‍್ಯಾಲಿ ನಡೆಸಿದ್ದರು. “ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಉಗ್ರವಾದವನ್ನು ಪೋಷಣೆ ಮಾಡುವ, ಭಾರತದ ಮೇಲೆ ದಾಳಿ ನಡೆಸುವ ಪಾಕಿಸ್ತಾನಕ್ಕೆ ಸ್ನೇಹದ ಸಂದೇಶಗಳನ್ನು ರವಾನಿಸುತ್ತದೆ. ಆದರೆ, ನಾವು ಮಾತ್ರ ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ನೀಡಿದ್ದೇವೆ. ಆ ಮೂಲಕ ದೇಶದಲ್ಲಿ ಭಯೋತ್ಪಾದನೆಯನ್ನು ನಿಗ್ರಹಿಸಿದೇವೆ” ಎಂಬುದಾಗಿ ಮೋದಿ ಹೇಳಿದ್ದರು.

ಕೆಲ ದಿನಗಳ ಹಿಂದಷ್ಟೇ ಜಮ್ಮು-ಕಾಶ್ಮೀರದಲ್ಲಿ ಉಗ್ರರು ನಡೆಸಿದ ದಾಳಿಯ ಕುರಿತು ಪ್ರತಿಕ್ರಿಯಿಸಿದ್ದ ಅವರು, “ಇದು ಬಿಜೆಪಿಯ ಚುನಾವಣಾ ಸ್ಟಂಟ್”‌ ಎಂದು ಆರೋಪಿಸಿದ್ದರು. ಮೇ 4ರಂದು ಪೂಂಚ್‌ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ವಾಯುಪಡೆಯ ಒಬ್ಬ ಯೋಧ ಹುತಾತ್ಮರಾಗಿದ್ದರು. “ಚುನಾವಣೆ ಸಮೀಪಿಸುತ್ತಲೇ ಬಿಜೆಪಿಯು ಜನರ ಜೀವನದ ಜತೆ ಆಟವಾಡುತ್ತದೆ. ಉಗ್ರರ ದಾಳಿ ಪ್ರಕರಣಗಳು ಬಿಜೆಪಿಯ ಕುತಂತ್ರದ ಭಾಗವಾಗಿವೆ” ಎಂದಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಚರಣ್‌ಜೀತ್‌ ಸಿಂಗ್‌ ಚನ್ನಿ ಅವರಿಗೆ ಚುನಾವಣೆ ಆಯೋಗವೂ ಖಡಕ್‌ ಎಚ್ಚರಿಕೆ ನೀಡಿತ್ತು.

ಇದನ್ನೂ ಓದಿ: Parliament Flashback: 1996ರ ಬಳಿಕ ರಾಜ್ಯದ ಲೋಕಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ

Exit mobile version