Site icon Vistara News

Gehlot VS Pilot | ಪೈಲಟ್‌ ಸಿಎಂ ಆದರೆ 70% ಶಾಸಕರ ರಾಜೀನಾಮೆ? ರಾಜಸ್ಥಾನದಲ್ಲಿ ನಾಟಕೀಯ ಬೆಳವಣಿಗೆ

Gehlot VS Pilot

ಜೈಪುರ: “ಒಬ್ಬರಿಗೆ ಒಂದೇ ಹುದ್ದೆ” ಎಂದು ರಾಹುಲ್‌ ಗಾಂಧಿ ಹೇಳುತ್ತಲೇ ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಬಣವು ಬಂಡಾಯದ ಬಾವುಟ ಹಾರಿಸುವ ಲಕ್ಷಣಗಳು ಕಾಣಿಸುತ್ತಿವೆ. ಗೆಹ್ಲೋಟ್‌ ಅವರು ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದು ಬಹುತೇಕ ಖಚಿತವಾದ ಕಾರಣ ಹಾಗೂ ಸಚಿನ್‌ ಪೈಲಟ್‌ (Gehlot VS Pilot) ಅವರೇ ಮುಂದಿನ ಮುಖ್ಯಮಂತ್ರಿಯಾಗಲು ಅನುವು ಮಾಡಿಕೊಡುವ ಕಾರಣಕ್ಕಾಗಿ ಸಿಎಂ ಸ್ಥಾನಕ್ಕೆ ಗೆಹ್ಲೋಟ್‌ ರಾಜೀನಾಮೆ ನೀಡುತ್ತಾರೆ ಎನ್ನಲಾಗಿದೆ. ಆದರೆ, ಗೆಹ್ಲೋಟ್‌ ಅವರನ್ನು ಬಿಟ್ಟುಕೊಟ್ಟದ ಅವರ ಬಣದ ಶಾಸಕರು, ಗೆಹ್ಲೋಟ್‌ ರಾಜೀನಾಮೆ ನೀಡಿದರೆ ನಾವೂ ರಾಜೀನಾಮೆ ನೀಡುತ್ತವೆ ಎಂಬ ಬೆದರಿಕೆ ಹಾಕುತ್ತಿದ್ದಾರೆ. ಹಾಗಾಗಿ, ಬಂಡಾಯದ ಲಕ್ಷಣಗಳು ಗೋಚರವಾಗಿವೆ.

ಸುಮಾರು ೯೨ ಶಾಸಕರಿಗೆ ಅಸಮಾಧಾನವಿದೆ. ಗೆಹ್ಲೋಟ್‌ ಅವರು ಶಾಸಕರನ್ನು ಸಂಪರ್ಕಿಸದೆಯೇ ಹೇಗೆ ರಾಜೀನಾಮೆ ನೀಡುವ ನಿರ್ಧಾರ ತೆಗೆದುಕೊಳ್ಳುತ್ತಾರೆ. ಹಾಗಾಗಿ, ಶೀಘ್ರದಲ್ಲಿಯೇ ಶಾಸಕರು ರಾಜೀನಾಮೆ ನೀಡಲಿದ್ದಾರೆ” ಎಂದು ಪಕ್ಷದ ನಾಯಕ ಪ್ರತಾಪ್‌ ಸಿಂಗ್‌ ಖಚಾರಿಯಾವಾಸ್‌ ತಿಳಿಸಿದ್ದಾರೆ. ಈಗಾಗಲೇ ಗೆಹ್ಲೋಟ್‌ ಬಣದ ಶಾಸಕರು ರಾಜೀನಾಮೆ ನೀಡದಂತೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದಾರೆ. ಆದರೂ, ಗೆಹ್ಲೋಟ್‌ ಅವರು ರಾಜೀನಾಮೆ ನೀಡಲು ಮುಂದಾಗಿರುವುದು ಅವರ ಬಣದ ಶಾಸಕರು ರಾಜೀನಾಮೆಯ ನಿರ್ಧಾರ ತೆಗೆದುಕೊಳ್ಳುವಂತಾಗಿದೆ.

ಒಬ್ಬರಿಗೆ ಒಂದೇ ಹುದ್ದೆ ಹೇಳಿಕೆ ತಂದ ಇಕ್ಕಟ್ಟು

ಅಶೋಕ್‌ ಗೆಹ್ಲೋಟ್‌ ಅವರಿಗೆ ರಾಜಸ್ಥಾನ ಮುಖ್ಯಮಂತ್ರಿ ಗಾದಿಯನ್ನು ಬಿಡುವ ಮನಸ್ಸಿರಲಿಲ್ಲ. ಹಾಗಾಗಿಯೇ, ಅವರು ತಮ್ಮ ಆಪ್ತ ಶಾಸಕರ ಸಭೆ ನಡೆಸಿ ಬಲ ಪ್ರದರ್ಶಿಸಿದ್ದರು. ರಾಜಸ್ಥಾನ ಸಿಎಂ ಗಾದಿಯನ್ನು ಉಳಿಸಿಕೊಂಡೇ ಕಾಂಗ್ರೆಸ್‌ ಅಧ್ಯಕ್ಷರಾಗಲು ಬಯಸಿದ್ದರು. ಆದರೆ, ರಾಹುಲ್‌ ಗಾಂಧಿಯವರು ಯಾವಾಗ “ಒಬ್ಬರಿಗೆ ಒಂದೇ ಹುದ್ದೆ” ಎಂಬ ನಿರ್ಣಯಕ್ಕೆ ನಾವು ಬದ್ಧರಾಗಿದ್ದೆವೆ ಎಂದು ಹೇಳಿದರೋ, ಆಗ ಗೆಹ್ಲೋಟ್‌ ಕನಸು ಕಮರಿತು. ಆದರೆ, ರಾಹುಲ್‌ ಗಾಂಧಿಯವರ ಹೇಳಿಕೆಯೇ ಭಿನ್ನಮತಕ್ಕೆ ಕಾರಣವಾಗುವ ಲಕ್ಷಣಗಳು ಹೆಚ್ಚಾಗಿವೆ.

ಒಟ್ಟಿನಲ್ಲಿ, ಶಾಸಕಾಂಗ ಪಕ್ಷದ ಸಭೆ, ಗೆಹ್ಲೋಟ್-ಪೈಲಟ್‌ ಭೇಟಿ, ಶಾಸಕರ ಒತ್ತಾಯ, ಪೈಲಟ್‌ ಅವರ ಕಾರ್ಯತಂತ್ರಗಳು ರಾಜಸ್ಥಾನ ರಾಜಕೀಯವನ್ನು ಕುತೂಹಲ ಘಟಕ್ಕೆ ತೆಗೆದುಕೊಂಡು ಹೋಗಿವೆ. ಇದು ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ | Gehlot VS Pilot | ಗೆಹ್ಲೋಟ್‌ ಸೋನಿಯಾ ಜತೆ, ಪೈಲಟ್‌ ರಾಹುಲ್‌ ಜತೆ, ಏನಿದರ ಮರ್ಮ?

Exit mobile version