Site icon Vistara News

Winter Tourism: ಜೀವನದಲ್ಲೊಮ್ಮೆ ಹಿಮ ನೋಡುವ ಕನಸೇ? ಈ ಚಳಿಗಾಲದಲ್ಲಿ ಇಲ್ಲಿಗೆ ಪ್ರವಾಸ ಮಾಡಿ!

Winter Tourism

ಮಧ್ಯಮವರ್ಗದ ದಕ್ಷಿಣ ಭಾರತೀಯರಲ್ಲಿ ಬಹಳಷ್ಟು ಮಂದಿಗೆ ಜೀವನದಲ್ಲಿ ಒಮ್ಮೆಯಾದರೂ ಹಿಮವನ್ನು ನೋಡಬೇಕು (Winter Tourism) ಎಂಬ ಬಯಕೆ ಇರುತ್ತದೆ. ಆದರೆ, ಹಿಮ ನೋಡಲು ಸ್ವಿಟ್ಜರ್‌ಲ್ಯಾಂಡಿಗೋ, ಐಸ್‌ಲ್ಯಾಂಡಿಗೋ, ಜಪಾನಿಗೋ ಹೋಗುವಷ್ಟು ಕನಸು ಕಾಣಲು ಇವರಿಗೆ ಸಾಧ್ಯವಿಲ್ಲ. ದುಡಿದ ದುಡ್ಡಿನಲ್ಲಿ ಮನೆಯ ಖರ್ಚು, ತಮ್ಮನ್ನೇ ನಂಬಿದವರ ಖರ್ಚು ವೆಚ್ಚಗಳು, ಹಿರಿಯರ ವೈದ್ಯಕೀಯ ವೆಚ್ಚಗಳು, ಮಕ್ಕಳ ಶಾಲೆ ಫೀಸು ಇತ್ಯಾದಿ ಇತ್ಯಾದಿ ಹೊಂದಿಸುವಷ್ಟರಲ್ಲಿ ವರ್ಷಗಳು ಒಂದೊಂದಾಗಿ ಉರುಳುತ್ತ ಹೋಗುತ್ತದೆ. ಇವೆಲ್ಲ ಖರ್ಚುಗಳನ್ನು ಕಳೆದು ಒಂದೇ ಒಂದು ಫ್ಯಾಮಿಲಿ ಟ್ರಿಪ್ಪು ಮಾಡಿ ಬರೋಣ (Winter Tourism) ಎಂದುಕೊಂಡರೂ ಬಹುತೇಕರಿಗೆ ಅಂಥದ್ದು ಕನಸಿನ ಮಾತೇ ಆಗಿಬಿಡುತ್ತದೆ. ಫಾರಿನ್‌ ಟ್ರಿಪ್ಪು ಎಂಬುದು ಕೈಗೆಟಕುವಂಥದ್ದಲ್ಲ ಅನಿಸಿದರೂ, ಒಮ್ಮೆಯಾದರೂ ಹಿಮವನ್ನು ನೋಡಬೇಕು ಎಂಬ ಕನಸಿಗೆ ಎಳ್ಳುನೀರು ಬಿಡಲು ಸಾಧ್ಯವಾಗುವುದಿಲ್ಲ. ಇಂಥ ಮಂದಿಗೆ ನಮ್ಮ ದೇಶದಲ್ಲೇ ಎಂತೆಂಥ ಅದ್ಭುತ ತಾಣಗಳಿವೆ ಎಂದರೆ, ಫಾರಿನ್‌ ಕನಸೂ ಕಾಣಬೇಕಿಲ್ಲ. ವಿದೇಶದ ಜಾಗಗಳನ್ನು ನಿವಾಳಿಸಿ ಎಸೆಯಬಹುದಾದಂಥ ಸುಂದರ ತಾಣಗಳು ನಮ್ಮಲ್ಲೇ ಇರುವಾಗ ಯಾಕೆ ಕನಸನ್ನು ಕೈಬಿಡಬೇಕು ಹೇಳಿ! ಹಾಗಾದರೆ, ಚಳಿಗಾಲದ ಕೆಲವು ತಾಣಗಳಿಗೆ ಹೋಗಿ ಹಿಮಕವಿದ ಎತ್ತರೆತ್ತರ ಪರ್ವತಗಳನ್ನು ನೋಡಿ ಕಣ್ತುಂಬಿಕೊಳ್ಳಬಹುದು. ಸುರಿವ ಹಿಮದಲ್ಲಿ ಕನಸಿನಂಥಾ ಲೋಕದಲ್ಲಿ ಮಿಂದೇಳಬಹುದು. ಜೀವನದ ಅದ್ಭುತ ಅನುಭವ ನಿಮ್ಮದಾಗಿಸಿಕೊಳ್ಳಬಹುದು. ಬನ್ನಿ, ಈ ಚಳಿಗಾಲದಲ್ಲಿ ಹಿಮದಲ್ಲಿ ಕುಣಿದಾಡುವ ಕನಸು ಕಾಣುವ ಮಂದಿ ಈ ಎಲ್ಲ ತಾಣಗಳಿಗೆ ಈ ಡಿಸೆಂಬರ್‌ ಜನವರಿ ತಿಂಗಳಲ್ಲಿ ಭೇಟಿ ಕೊಡಬಹುದು.

ಶಿಮ್ಲಾ

ಹಿಮಾಚಲ ಪ್ರದೇಶದ ಶಿಮ್ಲಾ ಎಂಬ ಪುಟ್ಟ ಪಟ್ಟಣ ಚಳಿಗಾಲದಲ್ಲಿ ಅದ್ಭುತವಾಗಿ ಕಾಣುತ್ತದೆ. ದೆಹಲಿಯಿಂದ ಸುಮಾರು 340ಕಿಮೀ ದೂರದಲ್ಲಿರುವ ಶಿಮ್ಲಾದಲ್ಲಿ ಸಾಮಾನ್ಯವಾಗಿ ಡಿಸೆಂಬರ್‌ ಅಂತ್ಯದ ವೇಳೆಗೆ ಹಿಮ ಬೀಳಲು ಆರಂಭವಾಗುತ್ತದೆ. ಹಾಗಾಗಿ ನವೆಂಬರ್‌ನಲ್ಲಿಯೇ ಶಿಮ್ಲಾಕ್ಕೆ ಹೋಗಿ ಹಿಮ ನೋಡಲಿಲ್ಲ ಎಂದು ನಿರಾಸೆಗೊಳ್ಳಬೇಡಿ. ಸರಿಯಾಗಿ ಯೋಚಿಸಿ, ಯೋಜಿಸಿ, ಡಿಸೆಂಬರ್‌ ಅಂತ್ಯ, ಜನವರಿ ಆರಂಭದ ವೇಳೆಗೆ ಹೋಗುವುದು ಒಳಿತು. ಮಧುಚಂದ್ರಕ್ಕೂ ಹೇಳಿ ಮಾಡಿದ ಈ ಊರಿನ ಸುತ್ತಮುತ್ತ ಚೈಲ್‌, ನಾರ್ಕಂಡಾ ಮತ್ತಿತರ ಇನ್ನೂ ಕೆಲವು ಪುಟ್ಟ ಪುಟ್ಟ ಪ್ರವಾಸೀ ತಾಣಗಳು ಹಿಮಕ್ಕೆ ಪ್ರಸಿದ್ಧ.

ಮನಾಲಿ

ದೆಹಲಿಯಿಂದ ಸುಮಾರು 500 ಕಿಮೀ ದೂರದಲ್ಲಿರುವ ಹಿಮಾಚಲ ಪ್ರದೇಶದ ಇನ್ನೊಂದು ಪ್ರಸಿದ್ಧ ಪ್ರವಾಸೀ ತಾಣ ಮನಾಲಿ. ಕುಲು ಹಾಗೂ ಮನಾಲಿ ಎಂಬ ಜೋಡಿ ಪಟ್ಟಣಗಳು ಪ್ರವಾಸಿಗರ ಹೃದಯದಲ್ಲಿ ಸದಾ ಅಮರವಾಗಿರುವ ತಾಣಗಳು. ಪ್ರೇಮಿಗಳ ಪಾಲಿನ ಸ್ವರ್ಗವೂ ಇದೇ. ನವದಂಪತಿಗಳಿಗೆ ಇಲ್ಲಿನ ಹಿಮವೇ ಹಾಸಿಗೆ, ಹೊದಿಕೆ. ಮನಾಲಿಯ ಸುತ್ತಮುತ್ತ ಸಾಮಾನ್ಯವಾಗಿ ಬಹುಬೇಗನೆ ಹಿಮ ಬೀಳಲು ಆರಂಭವಾಗುತ್ತದೆ. ಈ ಬಾರಿ ಈಗಾಗಲೇ ಮನಾಲಿಯಿಂದ ಎತ್ತರದ ಪ್ರದೇಶಗಳಾದ ರೋಹ್ತಂಗ್‌ ಪಾಸ್‌ ಮತ್ತಿತರ ಜಾಗಗಳಲ್ಲೆಲ್ಲ ಹಿಮ ಸುರಿದಿದ್ದು, ಈಗಾಗಲೇ ಮನಾಲಿ ಸುತ್ತಮುತ್ತ ಜಾಗಗಳು ಹಿಮಾವೃತವಾಗಿ ಬೆಳ್ಳೆ ಹೊಳೆಯುತ್ತಿವೆ. ಹಾಗಾಗಿ ಮನಾಲಿಗೆ ಹೋಗುವುದಾದರೆ, ನವೆಂಬರ್‌ ತಿಂಗಳಿಂದಲೇ ಸಾಮಾನ್ಯವಾಗಿ ಹಿಮದರ್ಶನ ಮಾಡಬಹುದು. ಮಾರ್ಚ್‌- ಏಪ್ರಿಲ್‌ವರೆಗೂ ಇಲ್ಲಿ ಹಿಮವನ್ನು ಕಾಣಬಹುದು.

ಗುಲ್ಮಾರ್ಗ್‌

ಕಾಶ್ಮೀರದ ಗುಲ್ಮಾರ್ಗ್‌, ಸೋನ್‌ಮಾರ್ಗ್‌, ಪೆಹೆಲ್‌ಗಾಂನಂತಹ ಊರುಗಳೂ ಕೂಡಾ ಪ್ರೇಮಿಗಳ ಪಾಲಿನ ಸ್ವರ್ಗ. ಅದಕ್ಕಾಗಿಯೇ ಕವಿಗಳು ಕಾಶ್ಮೀರವನ್ನು ಪ್ರೇಮ ಕಾಶ್ಮೀರ ಎಂದಿರುವುದು. ಈಗಾಗಲೇ ಗುಲ್ಮಾರ್ಗ್ ಸೇರಿದಂತೆ ಕಾಶ್ಮೀರದ ಎತ್ತರೆತ್ತರದ ಪ್ರದೇಶಗಳಲ್ಲಿ ಹಿಮ ಬಿದ್ದಿದ್ದು, ಬೆಳ್ಳನೆ ಬೆಳಕಿನಂತೆ ಮಿನುಗುತ್ತಿವೆ. ಶ್ರೀನಗರಕ್ಕೆ ವಿಮಾನದ ಮೂಲಕ ಹೋಗಿ ಅಲ್ಲಿಂದ ಈ ಊರುಗಳಿಗೆ ಪ್ರಯಾಣ ಬೆಳೆಸಿ ಹಿಮವನ್ನು ಕಣ್ತುಂಬಿಕೊಳ್ಳಬಹುದು. ಇಲ್ಲಿನ ಗೊಂಡೋಲಾ ರೈಡ್‌, ಸ್ಲೆಡ್ಜ್‌ ರೈಡ್‌ ಮತ್ತಿತರ ಸೌಲಭ್ಯಗಳನ್ನು ಆನಂದಿಸಿ ಹಿಮದ ಖುಷಿಯನ್ನು ಅನುಭವಿಸಬಹುದು. ಇಲ್ಲಿಯೂ ಅಷ್ಟೇ, ನವೆಂಬರ್‌ನಿಂದ ಮಾರ್ಚ್‌-ಏಪ್ರಿಲ್‌ವರೆಗೂ ಹಿಮ ಕಾಣಬಹುದು.

ಔಲಿ

ಔಲಿ ಎಂಬ ಉತ್ತರಾಖಂಡದ ಪ್ರವಾಸೀ ತಾಣ ಚಳಿಗಾಲದಲ್ಲಿ ಅದ್ಭುತವಾಗಿ ಕಾಣುತ್ತದೆ. ಸ್ಕೀಯಿಂಗ್‌ ಮತ್ತಿತರ ಹಿಮಕ್ರೀಡೆಗಳಿಗೆ ಇದು ನಂಬರ್‌ ವನ್‌ ತಾಣ. ಇಲ್ಲಿಂದ ನಂದಾದೇವಿ ಪರ್ವತವನ್ನು ಅದ್ಭುತವಾಗಿ ಕಣ್ತುಂಬಿಕೊಳ್ಳಬಹುದು. ಇಲ್ಲೂ ಸಾಮಾನ್ಯವಾಗಿ ನವೆಂಬರ್‌ ಅಂತ್ಯದಿಂದ ಫೆಬ್ರವರಿಯೊಳಗೆ ಹಿಮ ನೋಡಬಹುದು.

ಯಮತಂಗ್‌ ಕಣಿವೆ

ಸಿಕ್ಕಿಂನ ಯಮತಂಗ್‌ ಕಣಿವೆಯೂ ಕೂಡಾ ಹಿಮಾಲಯವನ್ನು ಬೆಳ್ಳಗೆ ನೋಡಬಹುದಾದ ಜಾಗ. ಸಿಕ್ಕಿಂನ ಕಡಿದಾದ ಹಾದಿಗಳಲ್ಲಿ ಹಿಮಾಲಯದ ಸೌಂದರ್ಯವನ್ನು ನೋಡುವುದೇ ಕಣ್ಣಿಗೆ ಹಬ್ಬ.

ಕೇವಲ ಇಷ್ಟೇ ಅಲ್ಲ, ಡಿಸಂಬರ್‌ ಜನವರಿ ತಿಂಗಳಲ್ಲಿ ಹಿಮಾಚಲ, ಉತ್ತರಾಖಂಡದ ಬಹುತೇಕ ಭಾಗಗಳು ಹಿಮದಿಂದ ಆವೃತವಾಗುತ್ತದೆ. ಹಿಮ ಮುಚ್ಚಿದ ದಾರಿಗಳಿಂದ ಪ್ರಯಾಣ ಪ್ರಯಾಸವಾಗುತ್ತದೆ. ಹಲವು ದಾರಿಗಳು ದಿನಗಟ್ಟಲೆ ಮುಚ್ಚಿಹೋಗುತ್ತವೆ. ಹಾಗಾಗಿ ಪ್ರವಾಸವನ್ನು ಮೊದಲೇ ಯೋಜಿಸಿ, ಹೊರಡುವ ಮೊದಲು, ಹಿಮಪಾತದಿಂದ ತೊಂದರೆಗಳಿವೆ ಎಂಬಿತ್ಯಾದಿ ಸೂಚನೆಗಳನ್ನೂ ನೋಡಿಕೊಂಡು, ಚಳಿಗೆ ಸಾಕಷ್ಟು ತಯಾರಿಗಳನ್ನು ಮಾಡಿಕೊಂಡು ಹೋಗುವುದು ಉತ್ತಮ. ಜೀವನದಲ್ಲಿ ಒಮ್ಮೆ ಹೋಗುವ ಪ್ರವಾಸದಲ್ಲಿ ಖುಷಿಯನ್ನು ಹೊತ್ತು ತರಬೇಕೆಂದರೆ, ಸಾಕಷ್ಟು ತಯಾರಿಯೂ ಮುಖ್ಯ ಅಲ್ಲವೇ!

ಇದನ್ನೂ ಓದಿ: Wildlife Tourism: ವನ್ಯಜೀವಿ ಪ್ರಿಯರೇ, ಪೆಂಚ್‌ ಹುಲಿಧಾಮದ ಕಾಡೊಳಗೆ ಸೈಕಲ್‌ ಸಫಾರಿ ಮಾಡಿ!

Exit mobile version