ಭೋಪಾಲ್: ಕೇವಲ 45 ದಿನದಲ್ಲಿ 2.5 ಲಕ್ಷ ರೂಪಾಯಿಗಿಂತಲೂ ಅಧಿಕ ಹಣವನ್ನು ಭಿಕ್ಷೆ ಬೇಡಿ ಸಂಪಾದಿಸಿದ ಮಹಿಳೆಯನ್ನು ಮಧ್ಯ ಪ್ರದೇಶದ (Madhya Pradesh) ಇಂದೋರ್‌ನಲ್ಲಿ (Indore) ಪೊಲೀಸರು ಅರೆಸ್ಟ್ ಮಾಡಿದ್ದಾರೆ(Woman Beggar Arrested). ಭಿಕ್ಷಾಟನೆಯಿಂದ ಆದಾಯವಿದೆ ಎಂದು ಗೊತ್ತಾಗುತ್ತಿದ್ದಂತೆ ಬಂಧಿತ ಮಹಿಳೆ ತನ್ನ ಸ್ವಂತ ಮಕ್ಕಳನ್ನೂ ಭಿಕ್ಷೆಗೆ ಬಳಸುತ್ತಿದ್ದಳು! ಇನ್ನೂ ದಂಗುಬಡಿಸುವ ವಿಚಾರ ಎಂದರೆ, ಆಕೆಗೆ ಸ್ವಂತ ಮನೆ, ಜಮೀನು ಕೂಡ ಇದೆ. ಇಷ್ಟೆಲ್ಲ ಇದ್ದೂ ಆಕೆ ಭಿಕ್ಷಾಟನೆಯಲ್ಲಿ ತೊಡಗಿದ್ದಳು ಮತ್ತು ಈಗ ಕಂಬಿ ಹಿಂದೆ ಇದ್ದಾಳೆ(Viral News).
ಬಂಧಿತ ಮಹಿಳೆಯನ್ನು ಇಂದಿರಾ ಬಾಯಿ ಎಂದು ಗುರುತಿಸಲಾಗಿದ್ದು, ಫೆಬ್ರವರಿ 12 ರಂದು ಇಂದೋರ್ ನಗರದ ಲವ್ ಕುಶ್ ಚೌಕ್‌ನಲ್ಲಿ ಬಂಧಿಸಲಾಯಿತು. ಬಂಧನದ ವೇಳೆ ಮಹಿಳೆ ತನ್ನ 8 ವರ್ಷದ ಮಗುವಿನೊಂದಿಗೆ ಭಿಕ್ಷೆ ಬೇಡುತ್ತಿದ್ದಳು ಎಂದು ತಿಳಿದು ಬಂದಿದೆ. ಸರ್ಕಾರೇತರ ಸಂಸ್ಥೆಯೊಂದು ಇಂದೋರ್‌ಗೆ ಭೇಟಿ ನೀಡಿದಾಗ ಈ ಮಹಿಳೆಯನ್ನು ಗುರುತಿಸಿದ್ದಾರೆ. ಆಗ ಇಡೀ ಪ್ರಕರಣವು ಬಯಲಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸರ್ಕಾರೇತರ ಸಂಸ್ಥೆಯ ಸದಸ್ಯರು ಪ್ರಶ್ನಿಸಿದಾಗ, ಮಹಿಳೆ ತನ್ನ ಇತರ ಇಬ್ಬರು ಮಕ್ಕಳು ರಾಜಸ್ಥಾನದ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾಳೆ. ಆದರೆ, ವಾಸ್ತವದಲ್ಲಿ ಆಕೆ ತನ್ನ ಮೂವರು ಮಕ್ಕಳು ಮತ್ತು ತನ್ನ ಕುಟುಂಬದ ಇತರ ಸದಸ್ಯರೊಂದಿಗೆ ಇಂದೋರ್‌ನ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದಳು. ಭಿಕ್ಷೆ ಬೇಡುತ್ತಿದ್ದ ಮಹಿಳೆ ಅದೇ ಪ್ರದೇಶದಲ್ಲಿ ಆಶ್ರಯಕ್ಕಾಗಿ ಮನೆ ಮಾಡಿಕೊಂಡಿದ್ದಳು. ಸಂಸ್ಥೆಯ ಅಲ್ಲಿಗೆ ಹೋಗುತ್ತಿದ್ದಂತೆ ಆಕೆಯ ಕುಟುಂಬಸ್ಥರು ಪರಾರಿಯಾಗಿದ್ದರು.
ಭಿಕ್ಷೆ ಬೇಡುವ ಮೂಲಕ ವಾರದಲ್ಲಿ 19,000 ರೂಪಾಯಿ ಸಂಪಾದಿಸಿರುವುದಾಗಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾಳೆ. ತನಗೆ ಒಂದು ಕಾಂಕ್ರೀಟ್ ಮನೆ, ಒಂದು ಹಳ್ಳಿಯಲ್ಲಿ ಇನ್ನೊಂದು ಜಮೀನು ಮತ್ತು ಬೈಕ್ ಇದೆ ಮತ್ತು ಭಿಕ್ಷಾಟನೆಯ ಮೂಲಕ ತನ್ನ ದಿನದ ಆದಾಯವು ಸುಮಾರು 3,000 ರೂಪಾಯಿ ಎಂದು ಮಹಿಳೆ ಹೇಳಿದ್ದಾಳೆ.
45 ದಿನದಲ್ಲಿ 2.5 ಲಕ್ಷಕ್ಕೂ ಅಧಿಕ ಹಣವನ್ನು ಸಂಪಾದಿಸಿದ್ದು, ಈ ಪೈಕಿ 1 ಲಕ್ಷ ರೂಪಾಯಿಯನ್ನು ತನ್ನ ಅತ್ತೆ-ಮಾವನಿಗೆ ಕಳುಹಿಸಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾಳೆ. ಅಲ್ಲದೇ, ಬ್ಯಾಂಕಿನಲ್ಲಿ 50 ಸಾವಿರ ಠೇವಣಿ ಇಡುವುದರ ಜತೆಗೆ ಮಗುವಿನ ಹೆಸರಿನಲ್ಲಿ 50 ಸಾವಿರ ಹೂಡಿಕೆ ಮಾಡಿದ್ದಾಳೆ.
ಈ ಸುದ್ದಿಯನ್ನೂ ಓದಿ: Viral Video: ರಣರಂಗವಾದ ಆರತಕ್ಷತೆ; ವಧು-ವರರ ಕಡೆಯವರ ಹೊಡೆದಾಟದ ಕತೆ!