ಕೋಲ್ಕೊತಾ: ಭಾರತದ ಗಡಿಯಲ್ಲಿ ಪುರುಷರು ಮಾತ್ರವಲ್ಲ ಮಹಿಳಾ ಯೋಧರು ಕೂಡ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಾರೆ. ಉಗ್ರರು, ಅಕ್ರಮ ಒಳನುಸುಳುಕೋರರನ್ನು ನಿಗ್ರಹಿಸುವ ಜತೆಗೆ ಗಡಿಯಲ್ಲಿ ಅಕ್ರಮ ಚಟುವಟಿಕೆಗಳನ್ನೂ ದಕ್ಷತೆಯಿಂದ ತಡೆಯುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಬಿಎಸ್‌ಎಫ್ ಮಹಿಳಾ ಪೇದೆಯೊಬ್ಬರು (BSF Woman Constable) ಚಾಣಾಕ್ಷತನದಿಂದ ಗೋವುಗಳ ಅಕ್ರಮ ಸಾಗಣೆಯನ್ನು (Cattle Smuggling) ತಡೆಯುವ ಮೂಲಕ ಶೌರ್ಯ ಮೆರೆದಿದ್ದಾರೆ.
ಹೌದು, ಪಶ್ಚಿಮ ಬಂಗಾಳದ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಗೋವುಗಳ ಅಕ್ರಮ ಸಾಗಣೆಯನ್ನು ಮಹಿಳಾ ಪೇದೆಯು ತಡೆದಿದ್ದಾರೆ. ಮಾಲ್ಡಾ ಜಿಲ್ಲೆಯ ಕೇದಾರಿಪರ ಬಳಿಯ ಗಡಿಯಲ್ಲಿ ಸುಮಾರು ಆರೇಳು ಅಕ್ರಮ ಸಾಗಣೆದಾರರನ್ನು ಬಿಎಸ್‌ಎಫ್ ಮಹಿಳಾ ಪೇದೆಯು ತಡೆದಿದ್ದಾರೆ. ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ಮಹಿಳಾ ಪೇದೆಯು ಕಾರ್ಯಾಚರಣೆ ಕೈಗೊಳ್ಳುವ ಜತೆಗೆ ಅಪಾಯದ ಮುನ್ನೆಚ್ಚರಿಕೆ ಅರಿತು ಸಿಬ್ಬಂದಿಗೆ ಸಂದೇಶ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಬಿಎಸ್‌ಎಫ್ ಮಹಿಳಾ ಪೇದೆಯು ಗೋವುಗಳ ಸಾಗಣೆದಾರರನ್ನು ತಡೆದ ಬಳಿಕ ದುಷ್ಕರ್ಮಿಗಳು ಮಹಿಳಾ ಪೇದೆ ಮೇಲೆ ದಾಳಿ ಆರಂಭಿಸಿದ್ದಾರೆ. ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಆಗಲೂ ಜಗ್ಗದ ಪೇದೆಯು ಅವರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಇದರಿಂದ ಬೆಚ್ಚಿದ ದುಷ್ಕರ್ಮಿಗಲೂ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಗೋವುಗಳನ್ನು ಅಲ್ಲಿಯೇ ಬಿಟ್ಟು ಅವರು ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದಾದ ಬಳಿಕ ಬಿಎಸ್‌ಎಫ್ ಯೋಧರ ತಂಡವು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿದೆ. ಕತ್ತಲಿದ್ದ ಕಾರಣ ಸ್ವಯಂ ರಕ್ಷಣೆಗಾಗಿ ಮಹಿಳಾ ಪೇದೆಯು ಗುಂಡಿನ ದಾಳಿ ನಡೆಸಿದ್ದಾರೆ. ಕತ್ತಲಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಬಳಿಕ ಬಿಎಸ್‌ಎಫ್ ಯೋಧರು ಆರು ಎಮ್ಮೆಗಳು ಹಾಗೂ ಗೋವುಗಳನ್ನು ರಕ್ಷಣೆ ಮಾಡಿದ್ದಾರೆ ಎಂದು ಬಿಎಸ್‌ಎಫ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: BSF Chief: ಬಿಎಸ್‌ಎಫ್ ನೂತನ ಮುಖ್ಯಸ್ಥರಾಗಿ ದಲ್ಜಿತ್ ಸಿಂಗ್ ಚೌಧರಿ ನೇಮಕ