ಪಬ್ಜಿ ಆಟದ ಮೂಲಕ ಭಾರತದ ಯುವಕನೊಂದಿಗೆ ನಂಟು ಬೆಳೆದು, ಅವನಿಲ್ಲದೆ ಬದುಕಲಾರೆ ಎನ್ನುತ್ತ ಪಾಕಿಸ್ತಾನದಿಂದ ತನ್ನ 4 ಮಕ್ಕಳನ್ನು ಕರೆದುಕೊಂಡು ಇಲ್ಲಿಗೆ ಬಂದ ಸೀಮಾ ಹೈದರ್ (Pakistani woman Seema Haider) ಸದ್ಯ ತನಿಖಾ ದಳಗಳ ಕೈಗೆ ಸಿಲುಕಿದ್ದಾಳೆ. ಈ ಕೇಸ್ನ ವಿಚಾರಣೆ ಚುರುಕಾಗಿ ನಡೆಯುತ್ತಿರುವ ಹೊತ್ತಲ್ಲೇ ಇನ್ನೊಂದು ಇಂಥದ್ದೇ ಕೇಸ್ ಬೆಳಕಿಗೆ ಬಂದಿದೆ. ಬಾಂಗ್ಲಾದೇಶದಿಂದ ಜ್ಯೂಲಿ ಎಂಬ ಯುವತಿ (Bangladeshi woman) ಉತ್ತರ ಪ್ರದೇಶದ ಮೊರಾದಾಬಾದ್ಗೆ ಬಂದಿದ್ದಳು. ಫೇಸ್ಬುಕ್ನಲ್ಲಿ ಪರಿಚಯನಾದ ಅಜಯ್ ಎಂಬುವನನ್ನು ಹುಡುಕಿಕೊಂಡು ಬಂದ ಜ್ಯೂಲಿ, ಬಳಿಕ ಅವನನ್ನೂ ಕರೆದುಕೊಂಡೇ ವಾಪಸ್ ಬಾಂಗ್ಲಾದೇಶಕ್ಕೆ ಹೋಗಿದ್ದಾಳೆ.
ಬಾಂಗ್ಲಾದೇಶದ ಜ್ಯೂಲಿಗೂ, ಉತ್ತರ ಪ್ರದೇಶದ ಮೊರಾದಾಬಾದ್ನ ಅಜಯ್ಗೂ ಫೇಸ್ಬುಕ್ನಲ್ಲಿ ಪರಿಚಯವಾಗಿ ಸ್ನೇಹ ಏರ್ಪಟ್ಟಿತ್ತು. ಇಬ್ಬರೂ ಪ್ರೀತಿಯನ್ನು ಹಂಚಿಕೊಂಡರು. ಆಕೆ ಇವನಿಗಾಗಿ ಅಲ್ಲಿಂದ ಭಾರತಕ್ಕೆ ಬಂದು, ಹೋಗುವಾಗ ಅಜಯ್ನನ್ನೂ ಕರೆದುಕೊಂಡೇ ಹೋದಳು. ಆದರೆ ಹೋದ ಮೇಲೆ ಅಜಯ್ನ ಕೆಲವು ಫೋಟೋಗಳನ್ನು ಅವನ ಅಮ್ಮಂಗೆ ಕಳಿಸಿದ್ದಾಳೆ. ಅವೆಲ್ಲವೂ ಹೆದರಿಕೆ ಹುಟ್ಟಿಸುವಂತೆಯೇ ಇದೆ. ಅಜಯ್ ರಕ್ತದಲ್ಲಿ ಮಡುವಲ್ಲಿ ಇರುವ ಫೋಟೋಗಳೂ ಇವೆ. ಹೀಗಾಗಿ ಮೊರಾದಾಬಾದ್ನಲ್ಲಿರುವ ಅವನ ಅಮ್ಮ ಭಯಭೀತರಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನನ್ನ ಮಗನ ಸುರಕ್ಷತೆಯನ್ನು ಖಾತ್ರಿಪಡಿಸಿಕೊಡಿ, ಅವನನ್ನು ಹೇಗಾದರೂ ವಾಪಸ್ ಕರೆಸಿಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಸದ್ಯ ಮೊರಾದಾಬಾದ್ ಪೊಲೀಸರು ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ. ಈ ಕೇಸ್ ಸಂಕೀರ್ಣ ಎನ್ನಿಸಿದೆ.
ಇದನ್ನೂ ಓದಿ: ಸೋದರ, ಚಿಕ್ಕಪ್ಪ ಇರುವುದು ಪಾಕ್ ಸೇನೆಯಲ್ಲಿ; ಸೀಮಾ ಹೈದರ್ ಬಂದಿದ್ದು ಪ್ರೀತಿಗಾಗೋ, ಗೂಢಚಾರಿಣಿಯೋ?
ಸೀಮಾ ಹೈದರ್ ಕೂಡ ಹೀಗೆ ಪ್ರಿಯತಮನನ್ನು ಹುಡುಕಿಕೊಂಡೇ ಬಂದಿದ್ದಾಳೆ. ಪಬ್ಜಿ ಆಟದ ಮೂಲಕ ಸೀಮಾ ಮತ್ತು ಗ್ರೇಟರ್ ನೊಯ್ಡಾದ ಸಚಿನ್ ಮೀನಾ ನಡುವೆ ಸಂಪರ್ಕ ಏರ್ಪಟ್ಟು, ಪ್ರೀತಿಯಾಗಿ ಮಾರ್ಪಾಡಾಗಿತ್ತು. ಅವನಿಗಾಗಿ ತನ್ನ ದೇಶ ಪಾಕಿಸ್ತಾನವನ್ನು ಬಿಟ್ಟು, ನಾಲ್ಕು ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದಾಳೆ. ಸೀಮಾ ಹೈದರ್, ಅವಳ ಮಕ್ಕಳು, ಸಚಿನ್ ಮೀನಾ ಮತ್ತು ಈತನ ತಂದೆಯನ್ನು ಜುಲೈ 4ರಂದು ಪೊಲೀಸರು ಬಂಧಿಸಿದ್ದು. ಅವರೀಗ ಬಿಡುಗಡೆಗೊಂಡಿದ್ದರೂ, ಉತ್ತರ ಪ್ರದೇಶ ಭಯೋತ್ಪಾದಕ ನಿಗ್ರಹ ದಳದಿಂದ ವಿಚಾರಣೆಗೆ ಒಳಪಡುತ್ತಿದ್ದಾರೆ. ಆಕೆ ತಾನು ಬಂದಿದ್ದು ಕೇವಲ ಪ್ರೀತಿಗಾಗಿ ಎಂದು ಹೇಳುತ್ತಿದ್ದರೂ, ಗೂಢಚಾರಿಣಿ ಇದ್ದರೂ ಇರಬಹುದು ಎಂಬ ಅನುಮಾನದಲ್ಲಿ ಸಮಗ್ರ ತನಿಖೆ ನಡೆಸಲಾಗುತ್ತಿದೆ.