Site icon Vistara News

PM Narendra Modi: ಪ್ರಧಾನಿಗೆ ಪ್ರತಿದಿನ ಪತ್ರ ಬರೆಯುವ ಮಹಿಳೆ! ಇದುವರೆಗಿನ ಪತ್ರಗಳ ಸಂಖ್ಯೆ 264 ! ಏನಿರುತ್ತೆ ಅದ್ರಲ್ಲಿ?

narendra modi reading

ಹೊಸದಿಲ್ಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರ ಕಚೇರಿಗೆ ದಿನವೂ ಸಾವಿರಾರು ಪತ್ರಗಳು (letters) ಬರುತ್ತವೆ. ಹೆಚ್ಚಿನವು ವೈಯಕ್ತಿಕ ಸಮಸ್ಯೆಗಳ ಕುರಿತಾಗಿರುತ್ತವೆ. ಪ್ರಧಾನಿ ಕಚೇರಿ (Prime Ministers Office) ಅವೆಲ್ಲವುಗಳಿಗೂ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತದೆ. ಆದರೆ ತಮಿಳುನಾಡಿನ ಕೊಯಮತ್ತೂರಿನ ಮಹಿಳೆಯೊಬ್ಬರು ಕಳೆದ 264 ದಿನಗಳಿಂದ ಪ್ರಧಾನಿ ಕಚೇರಿಗೆ ಪತ್ರ ಬರೆಯುತ್ತಲೇ ಇದ್ದಾರೆ! ಮತ್ತು ಪ್ರಧಾನಿ ಕಚೇರಿಯೂ ಅದಕ್ಕೆ ಸೂಕ್ತವಾಗಿ ಸ್ಪಂದಿಸುತ್ತಿದೆ!

ಅಂದಹಾಗೆ ಈ ಮಹಿಳೆ ಇದೀಗ ಗರ್ಭಿಣಿ. ಮತ್ತು ಅವರು ಬರೆಯುತ್ತಿರುವುದು ವೈಯಕ್ತಿಕ ಸಮಸ್ಯೆ ಪರಿಹಾರದ ಕುರಿತಲ್ಲ. ಸಾರ್ವಜನಿಕ ಸಮಸ್ಯೆ ಹಾಗೂ ಸುವ್ಯವಸ್ಥೆಗೆ ಸಂಬಂಧಿಸಿದಂತೆ. 2018ರ ಮಾರ್ಚ್ 8 ಮಹಿಳಾ ದಿನಾಚರಣೆಯಿಂದ ಇಲ್ಲಿಯವರೆಗೆ ಪ್ರತಿದಿನವೂ ಯಾವುದಾದರೊಂದು ಸಾರ್ವಜನಿಕ ವಿಷಯದ ಕುರಿತು ಅವರು ಮನವಿ ಪತ್ರ ಬರೆಯುತ್ತಿದ್ದಾರೆ. ಪ್ರತಿ ಬಾರಿಯೂ ಮೋದಿಯವರಿಂದ ಸೂಕ್ತ ಉತ್ತರವನ್ನೂ ಪಡೆಯುತ್ತಿದ್ದಾರೆ.

ಈ ಮಹಿಳೆಯ ಹೆಸರು ಕೃತಿಕಾ. ಮೂಲತಃ ಕೊಯಮತ್ತೂರಿನ ಗಾಂಧಿನಗರದವರು. ಇವರ ಪತಿ ಪಳನಿಸ್ವಾಮಿ ಸರ್ಕಾರಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ. ಕೃತಿಕಾ ಈಗ ಗರ್ಭಿಣಿ. ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ಪದವೀಧರೆ. ಅವರು ಕಳೆದ ಮಾರ್ಚ್ 8ರಂದು ಮಹಿಳಾ ದಿನಾಚರಣೆಯಂದು ಪ್ರಧಾನಿ ಮೋದಿಗೆ ಮೊದಲ ಪತ್ರ ಬರೆದಿದ್ದರು. ಅಡುಗೆ ಅನಿಲದ ಬೆಲೆ ಹೆಚ್ಚಾಗಿದ್ದು, ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದ್ದರು.

ಕೃತಿಕಾ ತಮ್ಮ ಮಾತೃಭಾಷೆ ತಮಿಳಿನಲ್ಲೇ ಈ ಪತ್ರಗಳನ್ನು ಬರೆದಿದ್ದು, ಅದಕ್ಕೆ ಪ್ರಧಾನಿ ಕಚೇರಿಯಿಂದ ಉತ್ತರವನ್ನೂ ಪಡೆದಿದ್ದಾರೆ. ಕೆಲವೊಮ್ಮೆ ಪ್ರಧಾನಿ ಕಚೇರಿಯಿಂದ ಫೋನ್ ಕರೆಗಳು ಬಂದಿದ್ದು, ಸಮಸ್ಯೆಗಳ ಬಗ್ಗೆ ವಿವರ ಪಡೆದುಕೊಂಡಿದ್ದಾರೆ. ಅಲ್ಲದೆ ದೂರಿಗೆ ಸ್ವೀಕೃತಿ ಪತ್ರಗಳನ್ನೂ ಪಡೆದುಕೊಂಡಿದ್ದಾಗಿ ತಿಳಿಸಿದ್ದಾರೆ.

ಗೃಹಿಣಿಯಾಗಿರುವುದು ಸರ್ಕಾರವನ್ನು ತಲುಪಲು ಮತ್ತು ನನ್ನ ಕುಂದುಕೊರತೆಗಳನ್ನು ವ್ಯಕ್ತಪಡಿಸಲು ಅಡ್ಡಿಯಾಗುವುದಿಲ್ಲ. ಪೆಟ್ರೋಲ್, ಎಲ್ಪಿಜಿ ಬೆಲೆಯನ್ನು ಕಡಿಮೆ ಮಾಡುವುದು ಅಥವಾ ದೇಶಾದ್ಯಂತ ಕೆಲವು ಬದಲಾವಣೆಗಳನ್ನು ಜಾರಿಗೆ ತರುವ ವಿಚಾರದ ಬಗ್ಗೆ ಕೇಂದ್ರ ಸರ್ಕಾರದಿಂದ ಆಗಬಹುದಾದ ಕೆಲಸಗಳ ಬಗ್ಗೆ ನಾನು ಪತ್ರ ಬರೆದಿದ್ದೇನೆ. ಅದಕ್ಕಾಗಿಯೇ ನಾನು ಪ್ರಧಾನ ಮಂತ್ರಿಯವರಿಗೆ ನೇರವಾಗಿ ಸಮಸ್ಯೆಗಳನ್ನು ತಲುಪಿಸುತ್ತಿದ್ದೇನೆ. ಎಲ್ಲಾ ಗೃಹಿಣಿಯರೂ ಆಡಳಿತಗಾರರನ್ನು ತಲುಪಬಹುದು ಎಂದು ಪ್ರೇರೇಪಿಸಲು ಬಯಸುತ್ತೇನೆ ಎಂದಿದ್ದಾರೆ ಕೃತಿಕಾ.

ಮಹಿಳೆಯರಿಗೆ ಶೇಕಡ 33 ಮೀಸಲಾತಿಗೆ ಒತ್ತಾಯ, ಆನ್ಲೈನ್ ರಮ್ಮಿ ನಿಷೇಧ, ನಿರ್ಭಯಾ ವ್ಯವಸ್ಥೆಯಲ್ಲಿ ತಮಿಳುನಾಡಿಗೆ ಹೆಚ್ಚಿನ ಮಹತ್ವ ನೀಡುವುದು, ಬಿಎಸ್ಎನ್ಎಲ್ 5 ಜಿ ಸೇವೆಯನ್ನು ಒದಗಿಸುವುದು, ಪ್ರಸ್ತುತ ಇಸ್ರೇಲ್- ಗಾಜಾ ಯುದ್ಧವನ್ನು ನಿಲ್ಲಿಸುವುದು, ಚುನಾವಣೆಯಲ್ಲಿ ಮತಪತ್ರ ವ್ಯವಸ್ಥೆಯನ್ನು ಮರು ಪರಿಚಯಿಸುವುದು ಸೇರಿ ಹಲವು ಸಾಮಾಜಿಕ ಸಮಸ್ಯೆಗಳ ಬಗ್ಗೆ ಕೃತಿಕಾ ಪತ್ರ ಬರೆದಿದ್ದಾರೆ.

ಕಳೆದ ಮಾರ್ಚ್ 8ರಿಂದ ಇಲ್ಲಿಯವರೆಗೆ 264 ಮನವಿ ಪತ್ರಗಳನ್ನು ಬರೆದು ಪ್ರಧಾನಿಗೆ ಕಳುಹಿಸಿದ್ದಾರೆ. ಇತ್ತೀಚೆಗೆ ಬರೆದ ತಮ್ಮ 264ನೇ ಪತ್ರದಲ್ಲಿ, ಭಾರತದ ಪ್ರತಿಯೊಬ್ಬ ಪ್ರಜೆಗೂ ಮೂಲಭೂತ ಕರ್ತವ್ಯಗಳ ಬಗ್ಗೆ ಅರಿವು ಮೂಡಿಸಿ ಜಾಗೃತಿ ಮೂಡಿಸಬೇಕು ಎಂದು ಪ್ರಧಾನಿಗೆ ಪತ್ರ ಬರೆದಿದ್ದಾರೆ.

ಪತ್ರಗಳಿಗೆ ಪ್ರಧಾನಿ ಮೋದಿಯವರ ಕಚೇರಿ ಮನ್ನಣೆ ನೀಡುತ್ತಿದೆ. ಪ್ರತಿದಿನ ಬೆಳಗ್ಗೆ 10 ಗಂಟೆಗೆ ಪ್ರಧಾನಿ ಕಚೇರಿಯಿಂದ ದೂರವಾಣಿ ಕರೆ ಮಾಡಿ ಅವರ ಮನವಿ ಕುರಿತು ಚರ್ಚಿಸುತ್ತಾರೆ. ನನ್ನ ಕುಟುಂಬದ ಎಲ್ಲ ಸದಸ್ಯರು ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಬೇಡಿಕೆ ಈಡೇರಿದಾಗ ಅದರಲ್ಲಿ ನನ್ನ ಪಾಲೂ ಇದೆ ಎಂದು ಸಂತೃಪ್ತಿಯಾಗುತ್ತದೆ. ಪೆರಿಯಾರ್, ಅಂಬೇಡ್ಕರ್, ಮಾರ್ಕ್ಸ್‌ ಅವರಂತಹ ನಾಯಕರ ವಿಚಾರಧಾರೆಗಳನ್ನು ಅರ್ಥಮಾಡಿಕೊಂಡಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಈ ಪತ್ರ ವ್ಯವಹಾರ ಮುಂದುವರಿಸುತ್ತೇನೆ ಎಂದು ಕೃತಿಕಾ ಹೇಳುತ್ತಾರೆ.

ಇದನ್ನೂ ಓದಿ: PM Narendra Modi: “ನೀವೆಲ್ಲಾದರೂ ಬಿದ್ದರೆ…” ಟವರ್‌ ಏರಿದವರಿಗೆ ಪ್ರಧಾನಿ ಮೋದಿ ಮನವಿ ಮಾಡಿದ್ದು ಹೀಗೆ

Exit mobile version