ಮುಂಬೈ: ಮನೆಯಲ್ಲಿ ಸಾಕಿದ ನಾಯಿಗಳನ್ನು ಕೂಡ ಮಕ್ಕಳಂತೆಯೇ ನೋಡಿಕೊಳ್ಳುವವರ ಸಂಖ್ಯೆ ಜಾಸ್ತಿಯಾಗಿದೆ. ಮನೆಯಲ್ಲಿ ನಾಯಿಗೆ (Pet Dog) ಸಕಲ ವ್ಯವಸ್ಥೆ ಮಾಡಿರುತ್ತಾರೆ. ಒಳ್ಳೆಯ ಆಹಾರ ಕೊಡುತ್ತಾರೆ. ಇನ್ನೂ ಕೆಲವರು ಶ್ವಾನಗಳಿಗಾಗಿಯೂ ಬಟ್ಟೆಗಳನ್ನು ಹೊಲಿಸಿ, ಅವುಗಳಿಗೆ ತೊಡಿಸುತ್ತಾರೆ. ಎಲ್ಲಿಗೇ ಹೋದರು ಅವುಗಳನ್ನು ಕರೆದುಕೊಂಡು ಹೋಗುತ್ತಾರೆ. ಮಹಾರಾಷ್ಟ್ರ (Maharashtra) ಮುಂಬೈನಲ್ಲಿ (Mumbai) ಮಹಿಳೆಯೊಬ್ಬರು ತಮ್ಮ ಮುದ್ದಿನ ನಾಯಿಗೆ 2.5 ಲಕ್ಷ ರೂ. ಮೌಲ್ಯದ 35 ಗ್ರಾಂ ಚಿನ್ನದ ಸರವನ್ನು ಕೊಡಿಸುವ ಮೂಲಕ ಶ್ವಾನ ಪ್ರೇಮ ಮೆರೆದಿದ್ದಾರೆ. ಈ ವಿಡಿಯೊ ಈಗ ವೈರಲ್ (Viral Video) ಆಗಿದೆ.
ಹೌದು, ಸರಿತಾ ಸುಧಾನ ಎಂಬ ಮಹಿಳೆಯೊಬ್ಬರು ಶ್ವಾನವನ್ನು ಚೆಂಬುರ್‌ನಲ್ಲಿರುವ ಅನಿಲ್ ಜ್ಯುವೆಲ್ಲರ್ಸ್ ಎಂಬ ಚಿನ್ನದ ಮಳಿಗೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ, ಶ್ವಾನಕ್ಕೆ 35 ಗ್ರಾಂನ ಚಿನ್ನದ ಸರವನ್ನು ಖರೀದಿಸಿ ಶ್ವಾನದ ಕೊರಳಿಗೆ ಹಾಕಿದ್ದಾರೆ. ಇದರಿಂದಾಗಿ ಶ್ವಾನವೂ ಖುಷಿಯಿಂದ ಬಾಲ ಅಲ್ಲಾಡಿಸಿದರೆ, ಮುದ್ದಿನ ನಾಯಿಗೆ ಬಂಗಾರದ ಸರ ಕೊಡಿಸಿದ ಖುಷಿಯು ಸರಿತಾ ಸುಧಾನ ಅವರದ್ದಾಗಿದೆ. ಈ ವಿಡಿಯೊವನ್ನು ಅನಿಲ್ ಜ್ಯುವೆಲ್ಲರ್ಸ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
“ಮನುಷ್ಯರು ಮತ್ತು ಪ್ರಾಣಿಗಳ ನಡುವೆ ಉತ್ತಮ ಬಾಂಧವ್ಯ ಇದೆ, ಭಾವನೆಗಳ ಏರಿಳಿತ ಇದೆ ಎಂಬುದಕ್ಕೆ ಈ ವಿಡಿಯೊ ಸಾಕ್ಷಿಯಾಗಿದೆ” ಎಂಬುದಾಗಿ ಅನಿಲ್ ಜ್ಯುವೆಲ್ಲರ್ಸ್ ಒಕ್ಕಣೆ ಬರೆದುಕೊಂಡಿದೆ. ಮಹಿಳೆಯು ಶ್ವಾನಕ್ಕೆ ಚಿನ್ನದ ಸರ ಕೊಡಿಸಿದ ವಿಡಿಯೊವನ್ನು ಸಾವಿರಾರು ಮಂದಿ ವೀಕ್ಷಿಸಿದ್ದು, ನೂರಾರು ಜನ ಪ್ರತಿಕ್ರಿಯಿಸಿದ್ದಾರೆ.
“ಸಾಕಿದ ನಾಯಿಗೆ ಚಿನ್ನ ಕೊಡಿಸಿದ ನಿಮ್ಮ ಮನಸ್ಸು ಕೂಡ ಬಂಗಾರದಷ್ಟೇ ಮೌಲ್ಯಯುತವಾಗಿದೆ” ಎಂದು ಒಬ್ಬರು ಬರೆದಿದ್ದಾರೆ. “ಈ ವಿಡಿಯೊವನ್ನು ನೋಡುವುದೇ ಖುಷಿ. ನಿಮಗೆ ಹಾಗೂ ನಾಯಿಗೆ ಒಳ್ಳೆಯದಾಗಲಿ” ಎಂದು ಮತ್ತೊಬ್ಬ ಶ್ವಾನ ಪ್ರೇಮಿ ಕಮೆಂಟ್ ಮಾಡಿದ್ದಾರೆ.
“ಜಗತ್ತಿನಲ್ಲಿ ಶ್ವಾನಗಳದ್ದೇ ಒಂದು ಸುಂದರ ಪ್ರಪಂಚವಿದೆ. ನಾಯಿಗಳು ನಮ್ಮ ಮನಸ್ಸಿಗೆ, ಹೃದಯಕ್ಕೆ ಆಪ್ತವಾಗುತ್ತವೆ. ಅವು ಕೂಡ ನಮ್ಮ ಸಂಗಾತಿಗಳಾಗಿ ಇರುತ್ತವೆ” ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ. ಹೀಗೆ ಹಲವು ಮಂದಿ ವಿಡಿಯೊಗೆ ಕಮೆಂಟ್ ಮಾಡುವ ಮೂಲಕ ತಮಗೆ ಶ್ವಾನಗಳ ಮೇಲೆ ಇರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Rohit Sharma: ಮರಾಠಿಯಲ್ಲೇ ಮಾತನಾಡಿದ ರೋಹಿತ್, ಸೂರ್ಯಕುಮಾರ್; ವಿಡಿಯೊ ವೈರಲ್