ತಿರುವನಂತಪುರಂ: ಅತ್ಯಾಚಾರಕ್ಕೆ, ಲೈಂಗಿಕ ದೌರ್ಜನ್ಯಕ್ಕೆ ಹೆಣ್ಣುಮಕ್ಕಳು ಧರಿಸುವ ತುಂಡುಡುಗೆಯೇ ಕಾರಣ ಎಂಬ ವಾದ ಮೊದಲಿನಿಂದಲೂ ಕೇಳಿಬರುತ್ತಿದೆ. ಆದರೆ, “ಮಹಿಳೆಯರು ತುಂಡುಡುಗೆ ಧರಿಸಿದ ಮಾತ್ರಕ್ಕೆ, ಅದು ಪುರುಷರು ಆಕೆಯ ಘನತೆ ಮೇಲೆ ಸವಾರಿ ಮಾಡಲು ನೀಡಿದ ಪರವಾನಗಿ ಅಲ್ಲ” ಎಂದು ಕೇರಳ ಹೈಕೋರ್ಟ್ ಹೇಳಿದೆ. ಮಹಿಳೆಯು ಪ್ರಚೋದನಾತ್ಮಕವಾಗಿ ಬಟ್ಟೆ ಧರಿಸಿದ ಕಾರಣ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಹಾಗಾಗಿ ಇದು ಲೈಂಗಿಕ ದೌರ್ಜನ್ಯ ಆಗುವುದಿಲ್ಲ ಎಂದು ಪ್ರಕರಣದ ಆರೋಪಿಗೆ ಅಧೀನ ನ್ಯಾಯಾಲಯ ನೀಡಿದ ಜಾಮೀನಿಗೆ ಹೈಕೋರ್ಟ್ ತಡೆಯಾಜ್ಞೆ ನೀಡುವ ವೇಳೆ ಸ್ಪಷ್ಟಪಡಿಸಿದೆ.
“ಪ್ರತಿಯೊಬ್ಬರೂ ತಮಗೆ ಇಷ್ಟವಾದ ಬಟ್ಟೆ ಧರಿಸುವ ಹಕ್ಕನ್ನು ಸಂವಿಧಾನ ನೀಡಿದೆ. ಒಬ್ಬ ಮಹಿಳೆಯು ಪ್ರಚೋದನಾತ್ಮಕ ಬಟ್ಟೆ ಧರಿಸಿದರೂ, ಅದು ಪುರುಷನಿಗೆ ಆಕೆಯ ಘನತೆಗೆ ಧಕ್ಕೆ ತರುವ ಪರವಾನಗಿ ನೀಡಿದಂತೆ ಅಲ್ಲ. ಪುರುಷರ ಗಮನ ಸೆಳೆಯಬೇಕು ಎಂಬ ಒಂದೇ ಕಾರಣಕ್ಕೆ ಹೆಣ್ಣುಮಕ್ಕಳು ತುಂಡುಡುಗೆ ಧರಿಸುತ್ತಾರೆ ಎಂಬ ವಾದವೇ ಸಮಂಜಸವಲ್ಲ. ಹೆಣ್ಣುಮಕ್ಕಳು ಅವರಿಗೆ ಬೇಕಾದ ಬಟ್ಟೆ ಧರಿಸುವ ಹಕ್ಕಿದೆ” ಎಂದು ನ್ಯಾ.ಕೌಸರ್ ಎಡಪ್ಪಗತ್ ಹೇಳಿದರು.
ಸಾಮಾಜಿಕ ಹೋರಾಟಗಾರರೊಬ್ಬರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಮಹಿಳೆಯು ಪ್ರಚೋದನಾತ್ಮಕ ಬಟ್ಟೆ ಧರಿಸಿದ ಕಾರಣದಿಂದಲೇ ದೌರ್ಜನ್ಯ ನಡೆದಿದೆ ಎಂದು ಅರ್ಜಿದಾರರ ಪರ ವಕೀಲರು ಸೆಷನ್ಸ್ ಕೋರ್ಟ್‌ಗೆ ಮಹಿಳೆಯ ಫೋಟೊ ಸಲ್ಲಿಸಿದ್ದರು. ಇದನ್ನು ಪರಿಗಣಿಸಿ ಕಲ್ಲಿಕೋಟೆ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಆದರೆ, ಇದನ್ನು ಕೇರಳ ಹೈಕೋರ್ಟ್ ರದ್ದುಗೊಳಿಸಿದೆ.
ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಎರಡನೇ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಟ್ವಿಸ್ಟ್; ಇನ್ನಿಬ್ಬರು ಪೋಷಕರ ಉಲ್ಟಾ ಹೇಳಿಕೆ?