ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ (Republic Day) ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ದೇಶದ ಹಲವು ರಾಜ್ಯಗಳಿಂದ ತೆರಳುವ ಸ್ತಬ್ಧಚಿತ್ರಗಳ ಮೆರವಣಿಗೆ, ಭಾರತೀಯ ಸೇನೆಯ (Indian Army) ಶಕ್ತಿ ಪ್ರದರ್ಶನಕ್ಕೂ ಸಿದ್ಧತೆ ಮಾಡಲಾಗುತ್ತಿದೆ. ಇದರ ಬೆನ್ನಲ್ಲೇ, ಇದೇ ಮೊದಲ ಬಾರಿಗೆ ಭಾರತದ ಮಹಿಳಾ ಅಗ್ನಿವೀರರು (Women Agniveers) ಕೂಡ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಭಾರತೀಯ ವಾಯುಪಡೆಯ ಅಗ್ನಿವೀರ ವಾಯು ಸೈನಿಕರು ರಿಪಬ್ಲಿಕ್ ಡೇ ಪರೇಡ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ವಾಯುಪಡೆಯ ತಂಡದಲ್ಲಿ ಮಹಿಳಾ ಅಗ್ನಿವೀರರು ಕೂಡ ಇದೇ ಮೊದಲ ಬಾರಿಗೆ ಭಾಗವಹಿಸಲಿದ್ದಾರೆ. ಕೇಂದ್ರ ಸರ್ಕಾರವು ಯುವಕರು ನಾಲ್ಕು ವರ್ಷಗಳವರೆಗೆ ಸೇನೆಯಲ್ಲಿ ಕಾರ್ಯನಿರ್ವಹಿಸಲು ಅಗ್ನಿವೀರ ಯೋಜನೆಯನ್ನು ಪರಿಚಯಿಸಿದೆ. 2022ರ ಸೆಪ್ಟೆಂಬರ್‌ನಲ್ಲಿ ಯೋಜನೆಯನ್ನು ಜಾರಿಗೆ ತಂದಿದೆ. ಸೇನೆಯ ಮೂರೂ ಪಡೆಗಳಿಗೆ ಯುವಕ-ಯುವತಿಯರನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
Women Agniveer Vayu soldiers would be part of the Indian Air Force contingent for the Republic Day parade this year: IAF pic.twitter.com/nVq5NbGKr0
— ANI (@ANI) January 8, 2024
ಫ್ರಾನ್ಸ್ ಅಧ್ಯಕ್ಷ ಮುಖ್ಯ ಅತಿಥಿ
ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಈ ಬಾರಿಯ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಇದರೊಂದಿಗೆ ಭಾರತದ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡ ಫ್ರಾನ್ಸ್‌ನ ಆರನೇ ನಾಯಕ ಎನಿಸಲಿದ್ದಾರೆ. ಭಾರತದ ಆಹ್ವಾನದ ಕುರಿತು ಪ್ರತಿಕ್ರಿಯಿಸಿದ್ದ ಇಮ್ಯಾನುಯೆಲ್ ಮ್ಯಾಕ್ರನ್, “ನರೇಂದ್ರ ಮೋದಿ ಅವರೇ, ನನಗೆ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಸಂಭ್ರಮದಲ್ಲಿ ನಾನೂ ಪಾಲ್ಗೊಳ್ಳುವೆ” ಎಂದು ಹೇಳಿದ್ದರು.
ಇದನ್ನೂ ಓದಿ: ದೆಹಲಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮಿಂಚಲಿದೆ ʼನೃತ್ಯ ಕುಟೀರʼ ಭರತನಾಟ್ಯ ತಂಡ
ಹಾಗೆ ನೋಡಿದರೆ, ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಬೇಕಿತ್ತು. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ದೆಹಲಿಯಲ್ಲಿ ಜಿ20 ಶೃಂಗ ಸಭೆ ನಡೆಯಿತು. ಈ ಶೃಂಗದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಗಣರಾಜ್ಯೋತ್ಸವದಲ್ಲಿ ಅತಿಥಿಯಾಗಿ ಪಾಲ್ಗೊಳ್ಳಲು ಆಹ್ವಾನ ನೀಡಿದ್ದರು. ಶೃಂಗಸಭೆಯ ಸಂದರ್ಭದಲ್ಲಿ ಭಾರತ ಮತ್ತು ಅಮೆರಿಕ ನಡುವೆ ದ್ವೀಪಕ್ಷೀಯ ಮಾತುಕತೆಗಳು ನಡೆದಿದ್ದವು. ಆದರೆ, ಇದಾದ ಬಳಿಕ ಜೋ ಬೈಡೆನ್ ಅವರು ಆಗಮಿಸುವುದಿಲ್ಲ ಎಂಬುದು ದೃಢವಾಗಿತ್ತು. ಇದಕ್ಕೆ ಕಾರಣ ಮಾತ್ರ ತಿಳಿದುಬಂದಿಲ್ಲ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ