ಪುಣೆ: ನ್ಯಾಯದಾನದ ಮಹತ್ತರ ಜವಾಬ್ದಾರಿಯನ್ನು ಹೊತ್ತಿರುವ ಕೋರ್ಟ್‌ಗಳು ಕೆಲವೊಮ್ಮೆ ವಿಚಿತ್ರ ಆದೇಶಗಳನ್ನು ಮಾಡುವ ಮೂಲಕ ಸುದ್ದಿಯಲ್ಲಿರುತ್ತವೆ. ಪುಣೆಯ ಜಿಲ್ಲಾ ನ್ಯಾಯಾಲಯ(Pune Court)ವು ಅಂಥ ವಿಚಿತ್ರ ಆದೇಶದ ಮೂಲಕ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮಹಿಳಾ ನ್ಯಾಯವಾದಿಗಳು ಕೋರ್ಟ್‌ನಲ್ಲಿ ತಮ್ಮ ತಲೆಗೂದಲನ್ನು ಸರಿಪಡಿಸಿಕೊಳ್ಳುವಂತಿಲ್ಲ ಎಂಬ ವಿಚಿತ್ರ ಸೂಚನೆ ನೀಡಿದೆ.
ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ ಅವರು ಪುಣೆ ಕೋರ್ಟ್ ನೀಡಿರುವ ಆದೇಶವನ್ನು ಟ್ವಿಟರ್‌ನಲ್ಲಿ ಷೇರ್ ಮಾಡಿಕೊಂಡ ಬಳಿಕ, ಈ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆಗೆ ಒಳಗಾಗುತ್ತಿದೆ. ಅಕ್ಟೋಬರ್ 20ರಂದು ಈ ಸೂಚನೆಯನ್ನು ಕೋರ್ಟ್‌ನ ನೋಟಿಸ್ ಬೋರ್ಡ್‌ನಲ್ಲಿ ಅಂಟಿಸಲಾಗಿದೆ.
ಓಪನ್ ಕೋರ್ಟ್‌ನಲ್ಲಿ ಮಹಿಳಾ ನ್ಯಾಯವಾದಿಗಳು ತಮ್ಮ ಕೂದಲನ್ನು ಸರಿಪಡಿಸಿಕೊಳ್ಳುತ್ತಿರುವುದನ್ನು ಗಮನಿಸಲಾಗಿದೆ. ಅವರ ಈ ಕ್ರಿಯೆಯು ಕೋಟ್ ಕಾರ್ಯನಿರ್ವಹಣೆಗೆ ಅಡಚಣೆಯನ್ನುಂಟು ಮಾಡುತ್ತಿದೆ. ಆದ್ದರಿಂದ ಇಂಥ ಕ್ರಿಯೆಯಿಂದ ದೂರ ಉಳಿಯಬೇಕೆಂದು ಮಹಿಳಾ ನ್ಯಾಯವಾದಿಗಳಿಗೆ ಸೂಚಿಸಲಾಗುತ್ತಿದೆ ಎಂದು ನೋಟಿಸ್ ಬೋರ್ಡ್‌ನಲ್ಲಿ ಅಂಟಿಸಲಾದ ಸೂಚನೆಯಲ್ಲಿ ತಿಳಿಸಲಾಗಿದೆ.
ಈ ವಿಚಿತ್ರ ನೋಟಿಸ್ ಬಗ್ಗೆ ನೇಟಿಜನ್ಸ್ ಸಿಕ್ಕಾಪಟ್ಟೆ ಟೀಕೆ ಮಾಡಿದ್ದಾರೆ. ಇದೊಂದು ಸಂಪೂರ್ಣವಾಗಿ ಅಸಂಬದ್ಧ ನೋಟಿಸ್. ಇದು ಅತಿಯಾದ ಪುರುಷ ಪ್ರಾಧಾನ್ಯತೆಯ ಪ್ರತೀಕ ಎಂದು ಹಿರಿಯ ಅಂಕಣಗಾರ್ತಿ ರಂಜೋನಾ ಬ್ಯಾನರ್ಜಿ ಅವರು ಪ್ರತಿಕ್ರಿಯಿಸಿದ್ದಾರೆ. ಪುಣೆ ಕೋರ್ಟ್‌ನ ಈ ವಿಚಿತ್ರ ನೋಟಿಸ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಂತೂ ವ್ಯಾಪಕ ಚರ್ಚೆಗೆ ಒಳಗಾಗುತ್ತಿದೆ.
ಇದನ್ನು ಓದಿ | ಮಹಿಳಾ ನ್ಯಾಯವಾದಿ ಬಂಧನಕ್ಕೆ ವಿರೋಧ; ವಿಜಯಪುರ ಕೋರ್ಟ್ ಬಳಿ ವಕೀಲರ ಉಗ್ರ ಪ್ರತಿಭಟನೆ