ಮಹಾಗಂಜ್: ಇಲ್ಲಿರುವ ಚಿತ್ರ ನೋಡಿ, ಶೀರ್ಷಿಕೆ ನೋಡಿ ಮಹಿಳೆಯರು ಯಾಕೆ ಶಾಸಕನಿಗೆ ಈ ರೀತಿ ಕೆಸರಿನಿಂದ ಜಳಕ ಮಾಡಿಸುತ್ತಿದ್ದಾರೆ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಿರಬಹುದು. ಇವರೇನೋ ಅಪರಾತಪರಾ ಮಾಡಿರಬಹುದಾ? ಜನಪರವಾಗಿ ಕೆಲಸವೇ ಮಾಡಿಲ್ವಾ? ಏನಾದರೂ ಲಂಚ ಹೊಡೆದಿರಬಹುದಾ? ಮಾಡಬಾರದ್ದು ಮಾಡಿ ಸಿಕ್ಕಿ ಹಾಕಿಕೊಂಡಿರಬಹುದಾ? ಅಂತೆಲ್ಲ ಯೋಚನೆ ಮಾಡ್ತಾ ಇದೀರಾ? ಅದ್ಯಾವುದೂ ಇದಕ್ಕೆ ಕಾರಣವಲ್ಲ. ಇಷ್ಟೆಲ್ಲ ಮಾಡುತ್ತಿರುವುದು ಮಳೆರಾಯನನ್ನು ಮೆಚ್ಚಿಸಲು!
ಹೀಗೆ ಜಳಕ ಮಾಡಿಸುತ್ತಿರುವವರು ಉತ್ತರ ಪ್ರದೇಶದ ಮಹಾರಾಜ್‌ಗಂಜ್‌ನ ನಿವಾಸಿಗಳು. ತಮ್ಮೂರಿನಲ್ಲಿನ ಅತಿಯಾದ ಬಿಸಿಲು, ಸೆಕೆಯ ಬೇಗೆಯಿಂದ ತತ್ತರಿಸಿ ಕೊನೆಗೆ ಮಳೆ ದೇವರನ್ನು ಮೆಚ್ಚಿಸಲು ಈ ಮಾರ್ಗ ಕಂಡುಕೊಂಡಿದ್ದಾರೆ. ಇಂದ್ರನನ್ನು ಒಲಿಸಿಕೊಳ್ಳಲು ಮಾಡುವ ಆಚರಣೆ ಅಂತೆ ಇದು. ಈ ವಿಶೇಷ ಆಚರಣೆಯ ಭಾಗವಾಗಿ ಮಂಗಳವಾರ ರಾತ್ರಿ ಬಿಜೆಪಿ ಶಾಸಕ ಜೈ ಮಂಗಲ್ ಕನೋಜಿಯಾ ಮತ್ತು ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷ ಕೃಷ್ಣ ಗೋಪಾಲ್ ಜೈಸ್ವಾಲ್ ಅವರಿಗೆ ಮಹಿಳೆಯರು ಕೆಸರಿನ ಸ್ನಾನ ಮಾಡಿಸಿದ್ದಾರೆ. ಈ ರೀತಿಯಾಗಿ ಮಣ್ಣಿನಲ್ಲಿ ವ್ಯಕ್ತಿಯನ್ನು ಸ್ನಾನ ಮಾಡಿಸುವುದರಿಂದ ಮಳೆಯ ದೇವರಾದ ಇಂದ್ರನನ್ನು ಮೆಚ್ಚಿಸಬಹುದು ಎಂದು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿನ ನಂಬಿಕೆ.
ಕೆಸರ ಮಜ್ಜನಕ್ಕೆ ಒಳಗಾದ ಶಾಸಕ ಜೈ ಮಂಗಲ್ ಕನೋಜಿಯಾ ಏನು ಹೇಳಿದ್ದಾರೆ ಓದಿ: ಬಿಸಿಲಿನ ತಾಪದಿಂದ ಜನರು ತೊಂದರೆಗೀಡಾಗಿದ್ದಾರೆ. ಅವರ ನೆಮ್ಮದಿಯೇ ನನಗೆ ಮುಖ್ಯ. ಹೀಗಾಗಿ ಈ ಆಚರಣೆಯಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ನೀಡಿದೆ, ಇಲ್ಲಿ ಬೆಳೆಗಳು ಒಣಗುತ್ತಿವೆ. ಕುಡಿಯುವ ನೀರಿಗೂ ಬರ ಬಂದಿದೆ. ಹೀಗಾಗಿ ಈ ಆಚರಣೆಯಿಂದ ಒಳ್ಳೆಯದಾಗುವುದಾದರೆ ಆಗಲಿ ಎಂದು ಒಪ್ಪಿಕೊಂಡಿದ್ದೇನೆ.
ಇದನ್ನೂ ಓದಿ: Chaturmas 2022 | ಯಾವ ಯತಿವರ್ಯರ ಚಾತುರ್ಮಾಸ್ಯ ವ್ರತಾಚರಣೆ ಎಲ್ಲಿ?