ನವದೆಹಲಿ: ದೇಶದಲ್ಲಿ ರಾಜಕಾರಣಿಗಳಿಗೆ, ಕ್ರೀಡಾಪಟುಗಳಿಗೆ, ಸಿನಿಮಾ ನಟ-ನಟಿಯರಿಗೆ ಅಭಿಮಾನಿಗಳು ಇರುತ್ತಾರೆ. ಒಬ್ಬೊಬ್ಬ ಸೆಲೆಬ್ರಿಟಿಗೂ ಅಭಿಮಾನಿಗಳು ಇರುತ್ತಾರೆ. ಆದರೆ, ದೇಶದ ಪ್ರತಿಯೊಬ್ಬರೂ ಯೋಧರನ್ನು ಗೌರವಿಸುತ್ತಾರೆ. ನಮ್ಮ ದೇಶವನ್ನು, ನಮ್ಮನ್ನು ಕಾಯುವವರು ಎಂದು ಯಾವುದೇ ಜಾತಿ, ಧರ್ಮದ ಭೇದವಿಲ್ಲದೆ ಯೋಧರ ಮೇಲೆ ಗೌರವ ಹೊಂದಿರುತ್ತಾರೆ. ಆದರೆ, ಕಳೆದ ವರ್ಷ ಗಡಿಯಲ್ಲಿ ಹುತಾತ್ಮರಾದ ಯೋಧ, ಕ್ಯಾಪ್ಟನ್ ಅನ್ಶುಮಾನ್ ಸಿಂಗ್ (Captain Anshuman Singh) ಎಂಬುವರ ಪತ್ನಿ ಸ್ಮೃತಿ ಸಿಂಗ್ (Smriti Singh) ಬಗ್ಗೆ ಅಹ್ಮದ್ ಕೆ. ಎಂಬಾತನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಕಮೆಂಟ್ ಮಾಡಿದ್ದು, ಈತನ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.
ಕಳೆದ ವರ್ಷದ ಜುಲೈನಲ್ಲಿ ಸಿಯಾಚಿನ್‌ನಲ್ಲಿ ಹುತಾತ್ಮನಾದ ಕ್ಯಾಪ್ಟನ್ ಅನ್ಶುಮಾನ್ ಸಿಂಗ್ ಅವರಿಗೆ ಕೆಲ ದಿನಗಳ ಹಿಂದಷ್ಟೇ ಮರಣೋತ್ತರವಾಗಿ ದೇಶದ ಎರಡನೇ ಗ್ಯಾಲಂಟ್ರಿ ಪ್ರಶಸ್ತಿಯಾದ ಕೀರ್ತಿ ಚಕ್ರ ಪ್ರಶಸ್ತಿ (Kirti Chakra Award) ಘೋಷಿಸಲಾಗಿದ್ದು, ಪತಿಯ ಪರವಾಗಿ ಅವರ ಪತ್ನಿ ಸ್ಮೃತಿ ಸಿಂಗ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಸ್ಮೃತಿ ಸಿಂಗ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೀರ್ತಿ ಚಕ್ರ ಪ್ರಶಸ್ತಿ ನೀಡಿದ್ದಾರೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾಧ್ಯಮದವರೊಂದಿಗೆ ಸ್ಮೃತಿ ಸಿಂಗ್ ಮಾತನಾಡಿದ್ದು, ಪತಿಯ ಜತೆ ಕಳೆದ ದಿನಗಳನ್ನು ನೆನೆದು ಕಣ್ಣೀರು ಹಾಕಿದ್ದರು. ಈ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ, ಅಹ್ಮದ್ ಕೆ ಎಂಬಾತನು ಸ್ಮೃತಿ ಸಿಂಗ್ ಬಗ್ಗೆ ಅವಹೇಳನಕಾರಿಯಾಗಿ ಕಮೆಂಟ್ ಮಾಡಿದ್ದಾನೆ. ಈತನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿ ಜನ ಆಗ್ರಹಿಸುತ್ತಿದ್ದಾರೆ.
National Commission for Women (NCW) has identified a lewd and derogatory comment made by Ahmad K. from Delhi on a photo of a Kirt Chakra Captain Anshuman Singh's widow. This act violates Section 79 of the Bharatiya Nyaya Sanhita, 2023, and Section 67 of the Information Technology… pic.twitter.com/h2zvqfKGgy
— NCW (@NCWIndia) July 8, 2024
ಬಂಧಿಸುವಂತೆ ಮಹಿಳಾ ಆಯೋಗ ಆಗ್ರಹ
ಸ್ಮೃತಿ ಸಿಂಗ್ ಅವರಿಗೆ ಅವಹೇಳನಕಾರಿಯಾಗಿ ಕಮೆಂಟ್ ಮಾಡಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ. “ಸ್ಮೃತಿ ಸಿಂಗ್ ಅವರಿಗೆ ಅವಹೇಳನಕಾರಿಯಾಗಿ ಕಮೆಂಟ್ ಮಾಡಿದವನನ್ನು ದೆಹಲಿಯ ಅಹ್ಮದ್ ಕೆ. ಎಂಬುದಾಗಿ ಗುರುತಿಸಲಾಗಿದೆ. ಈತನ ವಿರುದ್ಧ ಪೊಲೀಸರು ಕೂಡಲೇ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಆರೋಪಿಯನ್ನು ಬಂಧಿಸಬೇಕು. ಈ ಕುರಿತು ಮೂರು ದಿನಗಳಲ್ಲಿ ವರದಿ ನೀಡಬೇಕು” ಎಂಬುದಾಗಿ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ದೆಹಲಿ ಪೊಲೀಸರಿಗೆ ನೋಟಿಸ್ ನೀಡಿದ್ದಾರೆ.
ಪತಿಯ ಬಗ್ಗೆ ಸ್ಮೃತಿ ಸಿಂಗ್ ಏನು ಹೇಳಿದ್ದರು?
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದ ಸ್ಮೃತಿ ಸಿಂಗ್, ಪತಿಯ ಬಗ್ಗೆ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದರು. “ನಾವಿಬ್ಬರು ಪ್ರೀತಿಸುತ್ತಿದ್ದೆವು. 2023ರ ಫೆಬ್ರವರಿಯಲ್ಲಿ ನಮ್ಮ ಮದುವೆಯಾಗಿತ್ತು. ಇದಾದ ಬಳಿಕ ಅನ್ಶುಮಾನ್ ಸಿಂಗ್ ಸೇನೆಯ ಕರ್ತವ್ಯಕ್ಕಾಗಿ ಗಡಿಗೆ ತೆರಳಿದ್ದರು. ನಾನು ಮತ್ತು ಅನ್ಶುಮಾನ್ ಸಿಂಗ್ 2023ರ ಜುಲೈ 18ರಂದು ದೂರವಾಣಿ ಮೂಲಕ ಮಾತನಾಡಿದ್ದೆವು. ಅವರು ನಮ್ಮ ಬಗ್ಗೆ ನೂರು ಕನಸು ಕಂಡಿದ್ದರು. ಮನೆ ಕಟ್ಟಿಸುವುದು, ಮಗು, ಇಬ್ಬರೂ 50 ವರ್ಷ ಜತೆಯಾಗಿ ಇರೋಣ ಎಂದೆಲ್ಲ ಅವರು ಹೇಳಿದ್ದರು. ಆದರೆ, ಜುಲೈ 19ರಂದು ಬೆಳಗ್ಗೆ ನಮಗೆ ಕರೆ ಬಂತು. ಅನ್ಶುಮಾನ್ ಸಿಂಗ್ ಇನ್ನಿಲ್ಲ ಎಂಬ ಸುದ್ದಿ ತಿಳಿದು ಆಘಾತವಾಯಿತು” ಎಂಬುದಾಗಿ ಸ್ಮೃತಿ ಸಿಂಗ್ ಸ್ಮರಿಸಿದ್ದರು. ಈ ವಿಡಿಯೊ ಭಾರಿ ವೈರಲ್ ಆಗಿತು.
ಕಳೆದ ವರ್ಷ ಏನಾಗಿತ್ತು?
2023ರ ಜುಲೈ 19ರಂದು ಸಿಯಾಚಿನ್‌ನಲ್ಲಿ ಅಗ್ನಿ ದುರಂತ ಸಂಭವಿಸಿತ್ತು. ಬೆಳಗಿನ ಜಾವ ಭಾರತೀಯ ಸೇನೆಯ ಶಸ್ತ್ರಾಸ್ತ್ರಗಳನ್ನು ಇರಿಸುವ ನೆಲೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿತ್ತು. ಫೈಬರ್ ಗ್ಲಾಸ್‌ನ ಕೋಣೆಯಲ್ಲಿ ಸಿಲುಕಿದ್ದ ಹಲವು ಸೈನಿಕರನ್ನು ಕ್ಯಾಪ್ಟನ್ ಅನ್ಶುಮಾನ್ ಸಿಂಗ್ ಅವರು ರಕ್ಷಣೆ ಮಾಡಿದ್ದರು. ಆದರೆ, ರಕ್ಷಣೆ ಮಾಡಿದ ಬಳಿಕ ಅವರೇ ಅಗ್ನಿಯ ಕೆನ್ನಾಲಗೆಗೆ ಸಿಲುಕಿ ಹುತಾತ್ಮರಾಗಿದ್ದರು.
ಇದನ್ನೂ ಓದಿ: Viral Video : ಕೀರ್ತಿ ಚಕ್ರ ಸ್ವೀಕರಿಸಿದ ಹುತಾತ್ಮ ಯೋಧನ ಪತ್ನಿ; ಭಾವುಕರಾದ ದ್ರೌಪದಿ ಮುರ್ಮು,ರಾಜನಾಥ್ ಸಿಂಗ್!