ಮುಂಬೈ: ಅದು 2022ರ ಮೇ 21. ಈಗಿನ್ನೂ ಆರು ತಿಂಗಳು ತುಂಬಿ ಏಳನೇ ತಿಂಗಳ ಗರ್ಭಿಣಿಯಾಗಿದ್ದ ಉಜ್ವಲ ಹೆರಿಗೆ ನೋವಿನಿಂದಾಗಿ ಆಸ್ಪತ್ರೆ ಸೇರಿದ್ದರು. ಮಹಾರಾಷ್ಟ್ರದ ಮುಂಬಯಿ ಚಿಂಚವಾಡದ ಆಸ್ಪತ್ರೆಯಲ್ಲಿ ಉಜ್ವಲಗೆ ಹೆರಿಗೆಯಾಗಿ ಹೆಣ್ಣು ಮಗುವಿನ (Wonder Kid) ಜನನವಾಯಿತು. ಆದರೆ ಆಗ ಆ ಮಗು ಇದ್ದದ್ದು ಕೇವಲ 400ಗ್ರಾಂ!
ಇದನ್ನೂ ಓದಿ: Rishab Shetty: ಹರಿಯುವ ನೀರು, ಮಗುವಿನ ನಗುವಿನ ಧ್ವನಿ, ಬೇಕಾದವರೊಂದಿಗೆ ಕಳೆಯುವ ಕ್ಷಣಗಳು… ಫೋಟೊ ಹಂಚಿಕೊಂಡ ರಕ್ಷಿತ್
ಪಾದದಷ್ಟು ದೊಡ್ಡದಿದ್ದ ಮಗು ಅಂದರೆ ಕೇವಲ 30 ಸೆಂ.ಮೀ. ಉದ್ದವಿರುವ ಅತ್ಯಂತ ಕಡಿಮೆ ತೂಕದ ಮಗು ಉಜ್ವಲಗೆ ಜನಿಸಿತ್ತು. ಈ ಮಗುವನ್ನು ತಮ್ಮ ಆಸ್ಪತ್ರೆಯಲ್ಲಿ ಬದುಕಿಸಿಕೊಳ್ಳುವುದು ಕಷ್ಟವೆಂದು ನಿರ್ಧರಿಸಿದ ಆಸ್ಪತ್ರೆಯ ವೈದ್ಯರು ತಾಯಿ-ಮಗುವನ್ನು ಪುಣೆಯ ಸುಪ್ರಸಿದ್ಧ ಸೂರ್ಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಅಲ್ಲಿ ಬರೋಬ್ಬರಿ ಮೂರು ತಿಂಗಳ ಚಿಕಿತ್ಸೆ ಪಡೆದ ನಂತರ ಮಗು 2.13ಕೆ.ಜಿ ತೂಕವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆ ಸೇರಿದೆ. ಈಗ ಅದೇ ಮಗು ʼಶಿವನ್ಯʼ ಹೆಸರಿನೊಂದಿಗೆ ತಂದೆ ತಾಯಿಯೊಂದಿಗೆ ಸಂತೋಷದಿಂದ ಬದುಕುತ್ತಿದ್ದಾಳೆ.
ದೊಡ್ಡ ಹೋರಾಟ:
ಅವಧಿಗೆ ಮೊದಲೇ ಹುಟ್ಟುವ ಅದರಲ್ಲೂ ಅತ್ಯಂತ ಕಡಿಮೆ ತೂಕದೊಂದಿಗೆ ಹುಟ್ಟುವ ಮಕ್ಕಳನ್ನು ಬದುಕಿಸುವುದು ಎರಡೆರೆಡು ಸಾಹಸ ಮಾಡಿದಂತೆ. ಶಿವನ್ಯಳ ದೇಹ ಅತ್ಯಂತ ಚಿಕ್ಕದ್ದಾಗಿದ್ದರಿಂದ ಆಕೆಗೆ ಸರಿಹೊಂದುವ ವೈದ್ಯಕೀಯ ಸಾಮಗ್ರಿಗಳನ್ನು ಹೊಂದಿಸುಕೊಳ್ಳುವುದೇ ವೈದ್ಯರಿಗೆ ದೊಡ್ಡ ಸವಾಲಾಗಿತ್ತು. ಆಕ್ಸಿಜನ್ ಮಾಸ್ಕ್‌ನಿಂದ ಹಿಡಿದು, ಐವಿ ಪೈಪ್ ಸೇರಿ ಪ್ರತಿಯೊಂದು ಸಾಮಾಗ್ರಿಯನ್ನೂ ಈ ಮಗುವಿಗಾಗಿಯೇ ವಿಶೇಷವಾಗಿ ಮಾಡಿಸಬೇಕಾಯಿತು.
ಶಿವನ್ಯಳ ದೇಹದ ಜತೆ ಆಕೆಯ ದೇಹದಲ್ಲಿದ್ದ ಎಲ್ಲ ಅಂಗಾಂಗಗಳೂ ಇನ್ನೂ ಬೆಳವಣಿಗೆ ಆಗಬೇಕಿತ್ತು. ಅದಕ್ಕೆಂದು ತಾಯಿಯ ಗರ್ಭದಷ್ಟೆಯೇ ಸೂಕ್ಷ್ಮ ಹಾಗೂ ಸುರಕ್ಷಿತ ಸ್ಥಳವನ್ನು ವೈದ್ಯರು ಅವಳಿಗೆ ಮಾಡಿಕೊಡಬೇಕಿತ್ತು. 88 ದಿನಗಳ ಕಾಲ ಶಿವನ್ಯ ಕೃತಕ ಆಕ್ಸಿಜನ್ ಸಹಾಯದಿಂದಲೇ ಉಸಿರಾಟ ಮಾಡಿದ್ದಾಳೆ. ಅದಾದ ನಂತರವೇ ಅವಳಿಗೆ ಸಾಮಾನ್ಯ ಗಾಳಿಯನ್ನು ಉಸಿರಾಡುವುದಕ್ಕೆ ಸಾಧ್ಯವಾಗಿದೆ ಎನ್ನುತ್ತಾರೆ ಆಕೆಗೆ ಚಿಕಿತ್ಸೆ ನೀಡಿರುವ ವೈದ್ಯರಾದ ಡಾ.ಸಚಿನ್ ಶಾ.
ಶಿವನ್ಯಳಿಗೆ ಆಹಾರ ನೀಡುವುದು ಕೂಡ ದೊಡ್ಡ ಸವಾಲಾಗಿತ್ತು. ಆಕೆಯ ಬಾಯಿಯಿಂದ ಹೊಟ್ಟೆಯವರೆಗೆ ಪೈಪ್ ಅಳವಡಿಸಿ ಅದರ ಮೂಲಕವೇ ಆಹಾರ ಹಾಗೂ ಔಷಧಿಗಳನ್ನು ಕೊಡಲಾಯಿತು. ಶಿವನ್ಯಗೆ 51 ದಿನಗಳಾದಾಗ ಆಕೆಯ ತೂಕ ಒಂದು ಕೆ.ಜಿ.ಗೆ ಏರಿತು. 76 ದಿನಗಳ ನಂತರ ಅವಳಿಗೆ ಬಾಯಿಯ ಮೂಲಕ ಆಹಾರ ಕೊಡಲಾರಂಭಿಸಲಾಯಿತು ಎಂದಿದ್ದಾರೆ ವೈದ್ಯರು. ಹಾಗೆಯೇ ಚರ್ಮಕ್ಕೂ ಕೂಡ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳುವುದಕ್ಕಾಗಿ ವಿಶೇಷ ಇನ್ಕ್ಯುಬೇಟರ್‌ನಲ್ಲಿ ಶಿವನ್ಯಳನ್ನು ಇಡಲಾಗಿತ್ತು.
ಇದನ್ನೂ ಓದಿ: ಕಾರ್ಮಿಕ ಮಕ್ಕಳ ಶಿಶುಪಾಲನಾ ಕೇಂದ್ರಗಳಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನಕ್ಕೆ ಅನುದಾನ: ಸಚಿವ ಶಿವರಾಮ್ ಹೆಬ್ಬಾರ್
ಸಿನಿಮಾಗಳೇ ಧೈರ್ಯ:
ಶಿವನ್ಯಳ ತಂದೆ ಹಾಗೂ ತಾಯಿ ಇಬ್ಬರೂ ಐಟಿ ಕ್ಷೇತ್ರದಲ್ಲಿರುವವರೇ. ತಾಯಿ ಉಜ್ವಲ, ಶಿವನ್ಯಳನ್ನು ಗರ್ಭದಲ್ಲಿ ಹೊತ್ತಿದ್ದಾಗ ಮಣಿಕರ್ಣಿಕಾ, ಭಗತ್‌ಸಿಂಗ್‌ರಂತಹ ಸಾಹಸಮಯ ಸಿನಿಮಾಗಳನ್ನು ವೀಕ್ಷಿಸಿದ್ದರಂತೆ. ನನ್ನ ಮಗಳು ಅಷ್ಟೊಂದು ಸಮಸ್ಯೆಗಳಿಂದ ಬಳಲಿದರೂ ನಾನು ನೋಡಿದ ಸಿನಿಮಾಗಳ ವೀರರಂತೆಯೇ ಅವಳು ಬದುಕಿನೊಂದಿಗೆ ಹೋರಾಡಿ ಗೆದ್ದಿದ್ದಾಳೆ ಎನ್ನುತ್ತಾರೆ ಉಜ್ವಲ.
ಲಕ್ಷ ಲಕ್ಷ ಖರ್ಚು:
ಮೂರು ತಿಂಗಳ ಕಾಲ ಮಗಳನ್ನು ಆಸ್ಪತ್ರೆಯಲ್ಲಿಟ್ಟುಕೊಂಡಿದ್ದ ದಂಪತಿ ಒಟ್ಟಾರೆಯಾಗಿ 21 ಲಕ್ಷ ರೂ. ಅನ್ನು ಆಸ್ಪತ್ರೆಗೆ ಕಟ್ಟಿದ್ದಾರೆ. ನಾವು ಕೆಲಸ ಮಾಡುವ ಸಂಸ್ಥೆ ಹಾಗೂ ಸಾರ್ವಜನಿಕರು ನಮಗೆ ಹಣ ಸಹಾಯ ಮಾಡಿದ್ದಾರೆ. ಅಷ್ಟೊಂದು ಹಣ ಹಾಕಿದ್ದೇವಾದರೂ ಇಂದು ಅದೆಲ್ಲಕ್ಕಿಂತ ಹೆಚ್ಚಿನ ಮೌಲ್ಯದ ಮಗಳು ನಮ್ಮೊಂದಿಗಿದ್ದಾಳೆ ಎನ್ನುವ ನೆಮ್ಮದಿಯಿದೆ ಎನ್ನುತ್ತಾರೆ ದಂಪತಿ.
ದೇಶಕ್ಕೇ ಮೊದಲು:
ಇಷ್ಟು ಕಡಿಮೆ ತೂಕದ ಶಿಶು ಜನನವಾಗಿ, ಬದುಕುಳಿದಿರುವುದು ದೇಶದಲ್ಲಿ ಇದೇ ಮೊದಲು. ಈ ಹಿಂದೆ 2019ರಲ್ಲಿ ಅಹಮದಾಬಾದ್‌ನಲ್ಲಿ 492 ಗ್ರಾಂ ತೂಕದ ಮಗು ಜನನವಾಗಿ, ಬದುಕಿತ್ತು. ಸಾಮಾನ್ಯವಾಗಿ ಅತ್ಯಂತ ಕಡಿಮೆ ತೂಕದೊಂದಿಗೆ ಅವಧಿಗೂ ಮೊದಲು ಜನಿಸುವ ಶಿಶುಗಳು ಬದುಕುವುದು ಕಷ್ಟ ಎಂದು ಮಾಹಿತಿ ನೀಡಿದ್ದಾರೆ ವೈದ್ಯರು.